ಬಜೆಟ್ ಅಂದ್ರೆ ಪತ್ರಕರ್ತರ ಪಾಲಿಗೆ ಹಬ್ಬ. ಅದೊಂದು ಈವೆಂಟ್. ಸವಾಲನ್ನು ಒಡ್ಡುವ ಖುಷಿಯ ಅಸೈನ್‌ಮೆಂಟು. ಹೆಚ್ಚು ಕಡಿಮೆ ನೂರು ಪುಟದ ಪುಸ್ತಕವನ್ನು ಓದಿ, ಅದರಲ್ಲಿ ಎಷ್ಟನ್ನು ಹೇಗೆ ಓದುಗರ ಮುಂದಿಡಬೇಕು ಎಂಬುದು ಅಕ್ಷರಶಃ ಸವಾಲಿನ ಕೆಲಸವೇ. ಪತ್ರಕರ್ತರು ಅಂದೆವಲ್ಲ, ಎಲ್ಲ ಪತ್ರಕರ್ತರಿಗೂ ಹೀಗೇ ಆಗಬೇಕು ಎಂಬುದೇನಿಲ್ಲ. ಕೆಲವರಿಗೆ ಅದು ಬೋರೋ ಬೋರು. ಇಲ್ಲಿ ಅದೇ ರಾಗ ಅದೇ ಹಾಡು ಬಿಡ್ರೀ ಅನ್ನೋ ಸಿನಿಕರಿಗೇನು ಕೊರತೆಯಿಲ್ಲ.

ಆದರೆ ಕೆಲವು ಪತ್ರಕರ್ತರು ಬಜೆಟ್ ಬರುವುದನ್ನೇ ಕಾಯುತ್ತಾರೆ. ಹಾಗೆ ಕಾಯುವವರಿಗೆ ಅಲ್ಪಸ್ವಲ್ಪ ಎಕನಾಮಿಕ್ಸು ಗೊತ್ತಿರುತ್ತದೆ, ಜನರ ನಾಡಿಮಿಡಿತವೂ ಗೊತ್ತಿರುತ್ತದೆ. ಯಾವುದಕ್ಕೆ ಎಷ್ಟು ಹಣ ಹಂಚಿದ್ದಾರೆ, ಎಲ್ಲಿಂದ ಎಷ್ಟು ಹಣ ತರುತ್ತಾರೆ, ಎಷ್ಟು ಸಾಲ ಇದೆ, ಎಷ್ಟು ತೀರಿದೆ, ಇನ್ನೆಷ್ಟು ತರುತ್ತಾರೆ, ಇಲ್ಲಿ ಘೋಷಿಸಿರುವ ಕಾರ್ಯಕ್ರಮಗಳಿಗೆ ಹಣ ನಿಜಕ್ಕೂ ಒದಗುತ್ತಾ? ಇತ್ಯಾದಿ ಇತ್ಯಾದಿಗಳನ್ನು ಅವರು ಒಂದೇ ಅಬ್ಸರ್‌ವೇಷನ್‌ನಲ್ಲಿ ಹೇಳಬಲ್ಲರು.

ಅದೆಲ್ಲ ಹಾಗಿರಲಿ, ಆ ಕುರಿತು ಇನ್ನೊಮ್ಮೆ ಚರ್ಚೆ ಮಾಡೋಣ. ಇವತ್ತಿನ ಪತ್ರಿಕೆಗಳನ್ನು ನೋಡಿದ್ರಾ? ಬಜೆಟ್ ಕವರೇಜ್ ಯಾವ ಯಾವ ಪತ್ರಿಕೆಯಲ್ಲಿ ಹೇಗನ್ನಿಸಿತು. ದಯವಿಟ್ಟು ಬರೆದು ತಿಳಿಸಿ.

ನಮಗೆ ಅನ್ನಿಸಿದ ಪ್ರಕಾರ, ಬಜೆಟ್ ಕವರೇಜ್‌ನಲ್ಲಿ ಮೊದಲ ಸ್ಥಾನ ದಕ್ಕಬೇಕಾಗಿರುವುದು ಕನ್ನಡಪ್ರಭಕ್ಕೆ. ಪುಟಪುಟವನ್ನೂ ಕನ್ನಡಪ್ರಭದ ಸಿಬ್ಬಂದಿ ಉತ್ಸಾಹ ಮತ್ತು ಶ್ರದ್ಧೆಯಿಂದ ಕಟ್ಟಿದ್ದಾರೆ. ಒನ್ಸ್ ಎಗೇನ್ ಇಲ್ಲಿ ವಿಶ್ವೇಶ್ವರ ಭಟ್ಟರ ಕೈಚಳಕ ಎದ್ದು ಕಾಣುತ್ತದೆ. ಯಡಿಯೂರೈತಪ್ಪ ಎಂಬ ಶೀರ್ಷಿಕೆ ತುಂಬಾ ಚೆನ್ನಾಗಿದೆ ಎಂದೇನು ಅನಿಸಲಿಲ್ಲವಾದರೂ, ಒಟ್ಟು ಬಜೆಟ್‌ನ ಎಲ್ಲ ಅಂಶಗಳನ್ನು ವಿವರಿಸುವ ಸುದ್ದಿಗಳು, ಆ ಕುರಿತು ತಜ್ಞರ, ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಪರಿಣಿತರ ಅಭಿಪ್ರಾಯಗಳು ಸೊಗಸಾಗಿ ಮೂಡಿಬಂದಿದೆ.

ಕನ್ನಡಪ್ರಭಕ್ಕೆ ಪೈಪೋಟಿ ನೀಡುತ್ತಿರುವುದು ಇವತ್ತಿನ ಉದಯವಾಣಿ. ರವಿ ಹೆಗಡೆ ಉದಯವಾಣಿ ಸೇರಿದ ದಿನದಿಂದಲೇ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ ಎಂಬ ಸುದ್ದಿಯೇನೋ ಇತ್ತು. ಇವತ್ತಿನ ಪತ್ರಿಕೆ ಅದನ್ನು ಸಾರಿ ಹೇಳುತ್ತಿದೆ. ಮುಖಪುಟದ ಅಗ್ರಲೇಖನ ಬಜೆಟ್‌ನ ಒಳಹೊರಗನ್ನು ಅರ್ಥ ಮಾಡಿಸುವಲ್ಲಿ ಸಫಲವಾಗಿದೆ.

ವಿಜಯ ಕರ್ನಾಟಕ ಮುಖಪುಟದ ಕಾನ್ಸೆಪ್ಟ್ ಹೊಸತನದಿಂದ ಕೂಡಿದೆ. ಒಳಗೆ  ನಾಲ್ಕು ವಿಶೇಷ ಪುಟಗಳೇನೋ ಇವೆ. ಆದರೆ ಇನ್ನಷ್ಟು ಕವರೇಜ್ ಬೇಕಿತ್ತು ಅನಿಸುತ್ತದೆ. ಮುಖಪುಟದ ಹೆಡ್ಡಿಂಗು ಆಕರ್ಷಕವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಪಾದಕ ಇ.ರಾಘವನ್ ಮುಖಪುಟದಲ್ಲೇ ಬರೆದಿರುವ ಪುಟ್ಟ ಟಿಪ್ಪಣಿ ಗಮನಸೆಳೆಯುತ್ತದೆ. ಕೃಷಿ ಮತ್ತು ಸಾಮಾನ್ಯ ಬಜೆಟ್ ವರ್ಣನೆಗೆ ಅವರು ಬಳಸಿರುವ ಡಬಲ್ ಬ್ಯಾರಲ್ ಗನ್‌ನ ಉಪಮೆಯೂ ಚೆನ್ನಾಗಿದೆ.

ಪ್ರಜಾವಾಣಿ ಸಂಪಾದಕೀಯ ಬಜೆಟ್ ಕುರಿತು ಸಮರ್ಥ ಒಳನೋಟ ನೀಡುತ್ತಿದೆ. ಆದರೆ ಉಳಿದ ಪುಟಗಳು ಸಪ್ಪೆ. ಹೇಳುವುದನ್ನೇ ಆಕರ್ಷಕ ವಿನ್ಯಾಸದಲ್ಲಿ ಹೇಳಿದರೆ ಹೆಚ್ಚು ಜನರಿಗೆ ಇಷ್ಟವಾಗಬಹುದಿತ್ತೇನೋ.

ಹೊಸದಿಗಂತದ ಪುಟಪುಟಗಳ ವಿನ್ಯಾಸ ಸೂಪರ್. ಆದರೆ ಈ ಮಾತನ್ನು ವಿನ್ಯಾಸಕ್ಕೆ ಸೀಮಿತವಾಗಿ ಹೇಳಬೇಕಾಗುತ್ತದೆ. ಯಾಕೆಂದರೆ ಇದು ಯಡಿಯೂರಪ್ಪನವರ ಜಾಹೀರಾತು ಪುರವಣಿಯ ಹಾಗೆ ರೂಪಿತವಾಗಿದೆ. ಏಕಮುಖಿಯಾದ ವಿಶ್ಲೇಷಣೆಗಳಿಂದ ಓದುಗರಿಗೆ ಯಾವ ಉಪಯೋಗವೂ ಇಲ್ಲ ಎಂದು ಬೇರೆ ಹೇಳಬೇಕಾಗಿಲ್ಲ.

ಇನ್ನು ನ್ಯೂಸ್ ಚಾನಲ್‌ಗಳ ಪೈಕಿ ಹೆಚ್ಚು ಆಕರ್ಷಿಸಿದ್ದು ಸುವರ್ಣ ನ್ಯೂಸ್. ಎಚ್.ಆರ್.ರಂಗನಾಥ್ ಅವರ ಪ್ರೌಢಿಮೆ ವರ್ಕ್ ಔಟ್ ಆಯಿತು. ಇತ್ತ ಟಿವಿ೯ನಲ್ಲಿ ಲಕ್ಷ್ಮಣ್ ಹೂಗಾರ್ ಮತ್ತು ಶಿವಪ್ರಸಾದ್ ನಡೆಸಿಕೊಟ್ಟ ಕಾರ್ಯಕ್ರಮಗಳೂ ಚೆನ್ನಾಗಿದ್ದವು. ಸಮಯ ಟಿವಿಯವರಿಗೆ ಇದು ಮೊದಲ ಬಜೆಟ್. ಆದರೂ ಓದುಗರನ್ನು ಸೆಳೆಯಲು ಅದು ಯಶಸ್ವಿಯಾಯಿತು. ಜನಶ್ರೀಯಲ್ಲಿ ರಮಾಕಾಂತ್ ಬಜೆಟ್ ಕುರಿತ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಜನಶ್ರೀ ಹೊಸ ಚಾನಲ್, ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾದೀತು.

ಇದು ನಮಗನ್ನಿಸಿದ್ದು, ನಿಮಗನ್ನಿಸಿದ್ದನ್ನು ದಯವಿಟ್ಟು ಹೇಳಿ.
0 komentar

Blog Archive