ಸುವರ್ಣ ಚಾನಲ್‌ನ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು-೨ ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇದೆ. ಹಿಂದೆ ನಾವೆಲ್ಲರೂ ಇದೇ ರಿಯಾಲಿಟಿ ಶೋನಲ್ಲಿ ಮುಗ್ಧ ಬಾಲಕನನ್ನು ಬೆತ್ತಲೆ ಮಾಡಿ ಹಿಂಸಿಸಿದ ಪ್ರಕರಣದ ಕುರಿತು ಪ್ರತಿಭಟನೆಯ ಧ್ವನಿ ಎತ್ತಿದ್ದೆವು. ಈಗ ಶೋನಲ್ಲಿ ಭಾಗವಹಿಸಿದ್ದ ಯುವತಿಯೊಬ್ಬಳು ಮೀಡಿಯಾಗಳ ಮುಂದೆ ನಿಂತು ತನಗೆ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದಾಳೆ.

ಅಕ್ಷತಾ
ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಆಸೆಯಿಂದ ಬಂದೆ. ನಿರ್ದೇಶಕ ರಾಘವೇಂದ್ರ, ನಿರೂಪಕ ಅಕುಲ್ ಹಾಗು ತಂಡ ನನಗೆ ಮಾನಸಿಕ, ದೈಹಿಕ ಹಿಂಸೆ ನೀಡಿದ್ದಾರೆ. ಮರ್ಯಾದಸ್ಥ ಮನೆತನದ ಹೆಣ್ಣುಮಕ್ಕಳು ಯಾರೂ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಬಾರದು. ಎಲ್ಲ ಟಾಸ್ಕ್‌ಗಳಲ್ಲೂ ಗೆದ್ದಿದ್ದ ನನ್ನನ್ನು ಅನ್ಯಾಯದಿಂದ ಎಲಿಮಿನೇಟ್ ಮಾಡಲಾಯಿತು. ತಂಡದೊಂದಿಗೆ ಸಹಕರಿಸದೇ ಹೋಗಿದ್ದಕ್ಕೆ ಇದು ಶಿಕ್ಷೆ....

ಇತ್ಯಾದಿಯಾಗಿ ಮಾತನಾಡುತ್ತಿರುವಾಕೆ ಕಾರ್ಯಕ್ರಮದಿಂದ ಎಲಿಮಿನೇಟ್ ಆಗಿರುವ ಅಕ್ಷತಾ. ಈಗಾಗಲೇ ಈಕೆ ಪತ್ರಿಕಾಗೋಷ್ಠಿ ನಡೆಸಿ ಆರೋಪಗಳ ಮೇಲೇ ಆರೋಪ ಮಾಡಿದ್ದಾಳೆ. ಈಕೆಯ ಹಾಗೆಯೇ ಎಲಿಮಿನೇಟ್ ಆದ ಪೂರ್ಣಿಮ ಎಂಬ ಯುವತಿಗೂ ಸಹ ಇದೇ ರೀತಿ ಅನ್ಯಾಯ  ಮಾಡಲಾಗಿದೆಯಂತೆ.

ಕನ್ನಡ ಚಾನಲ್‌ಗಳಲ್ಲಿ ಪ್ರಸಾರವಾದ, ಪ್ರಸಾರವಾಗುತ್ತಿರುವ ಅತ್ಯಂತ ದರಿದ್ರ ರಿಯಾಲಿಟಿ ಶೋ ಇದು. ಟಾಸ್ಕ್ ನಲ್ಲಿ ಸೋತವರಿಗೆ ಮೆಣಸಿನಕಾಯಿ ತಿನ್ನಿಸುವ, ಹಸುವಿನ ಗುದದ್ವಾರಕ್ಕೆ ಕಿಸ್ ಮಾಡಿಸುವ, ಇಡೀ ದಿನ ಹಸು ಸೆಗಣಿ ಹಾಕುವುದನ್ನೇ ಕಾದು ಅದನ್ನು ನೆಲಕ್ಕೆ ಬೀಳದಂತೆ ಬೊಗಸೆಯಲ್ಲಿ ಹಿಡಿಸುವ, ಗಂಜಲ ಕುಡಿಸುವ, ಹಸಿ ಮೀನು ತಿನ್ನಿಸುವ ವಿಕೃತ ಮನಸ್ಸಿನ ಶಿಕ್ಷೆಗಳನ್ನು ನೀಡುವ ಈ ರಿಯಾಲಿಟಿ ಶೋಗಳನ್ನು ವಿಕೃತ ಮನಸ್ಸಿನವರಷ್ಟೆ ರೂಪಿಸಲು ಸಾಧ್ಯ.

ಇಂಥ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಯುವತಿಯರೂ ಸಹ ಹಣಕ್ಕಾಗಿ ಸ್ವಾಭಿಮಾನವನ್ನೇ ಬಿಟ್ಟು ನಿಂತ ಮುಖೇಡಿಗಳು. ಯಾರದೋ ಇಶಾರೆಯ ಮೇಲೆ ತಮ್ಮ ವ್ಯಕ್ತಿತ್ವವನ್ನೇ ಮರೆತು ಇಂಥ ಅಸಹ್ಯಗಳನ್ನೆಲ್ಲ ಮಾಡುವ ಈ ಯುವತಿಯರು ಸಾರ್ವಜನಿಕ ಅನುಕಂಪಕ್ಕೂ ಲಾಯಕ್ಕಾದವರಲ್ಲ.

ಅಕುಲ್ ಬಾಲಾಜಿ
ಅಕ್ಷತಾ ಹೇಳುತ್ತಿರುವುದೆಲ್ಲಾ ನಿಜವಾದರೆ, ಆಕೆ ಮಹಿಳಾ ಆಯೋಗಕ್ಕೆ ದೂರು ನೀಡುವುದಕ್ಕೂ ಮುನ್ನ ಪೊಲೀಸ್ ಠಾಣೆಯಲ್ಲಿ ತನ್ನ ದೂರು ಕೊಡುವುದು ಒಳ್ಳೆಯದು. ಒಂದು ವೇಳೆ ಆಕೆಯ ಮೇಲೆ ದೈಹಿಕ, ಮಾನಸಿಕ ಹಲ್ಲೆ ನಡೆದಿರುವುದು ಖಾತ್ರಿಯಾದರೆ ಶೋನ ನಿರ್ಮಾಪಕ, ನಿರ್ದೇಶಕ, ನಿರೂಪಕರೆಲ್ಲರೂ ಜೈಲು ಸೇರುತ್ತಾರೆ. ಅದೊಂದನ್ನು ಮಾಡಿದರೆ ಈ ರಿಯಾಲಿಟಿ ಶೋನ ಚಿತ್ರಹಿಂಸೆ ಕನ್ನಡಪ್ರೇಕ್ಷಕರಿಗೆ ತಪ್ಪಿದಂತಾಗುತ್ತದೆ. ಈ ಶೋನಲ್ಲಿ ಭಾಗವಹಿಸಿದ್ದಕ್ಕೆ ಆಕೆ ತಕ್ಕ ಪ್ರಾಯಶ್ವಿತ್ತವನ್ನೂ ಮಾಡಿಕೊಂಡಂತಾಗುತ್ತದೆ.

ಪ್ಯಾಟಿ ಹುಡ್ಗೀರ್ ಸೇರಿದಂತೆ ಸುವರ್ಣದಲ್ಲಿ ಪ್ರಸಾರವಾಗುವ ಇದೇ ಬಗೆಯ ರಿಯಾಲಿಟಿ ಶೋಗಳಿಗೆ ಯುವತಿಯರೇ ಆಸ್ತಿ, ಬಂಡವಾಳ. ಈ ಯುವತಿಯರನ್ನು ನಡೆಸಿಕೊಳ್ಳುವ ರೀತಿಯಲ್ಲೇ ತಮ್ಮ ವಿಕೃತ ಲೈಂಗಿಕ ಚೇಷ್ಟೆಗಳನ್ನು ಈಡೇರಿಸಿಕೊಳ್ಳುವ ಕಾರ್ಯಕ್ರಮದ ತಂಡ, ಅದನ್ನೇ ಕನ್ನಡ ಪ್ರೇಕ್ಷಕರಿಗೆ ಉಣಬಡಿಸುತ್ತಿರುವುದು ಹೇಸಿಗೆ ಹುಟ್ಟಿಸುವ ವಿಷಯ. ಯುವತಿಯರನ್ನು ನೀರಲ್ಲಿ, ಕೊಚ್ಚೆಯಲ್ಲಿ ಹೊರಳಾಡಿಸುವುದರ ಉದ್ದೇಶ ಏನೆಂಬುದನ್ನು ಯಾರು ಬೇಕಾದರೂ ಸುಲಭವಾಗಿ ಊಹಿಸಿಕೊಳ್ಳಬಹುದು. ಪ್ರಸಾರವಾಗುವ ಕಾರ್ಯಕ್ರಮದಲ್ಲೇ ಇಂಥ ಹಿಂಸೆ ಇರುವಾಗ ತೆರೆಮರೆಯಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ಊಹಿಸಿಕೊಳ್ಳುವುದು ಸುಲಭ. ಅಕ್ಷತಾ ಇದೇ ವಿಷಯಗಳನ್ನು ಈಗ ಪ್ರಸ್ತಾಪಿಸುತ್ತಿದ್ದಾಳೆ.

ಕನ್ನಡ ಚಾನಲ್‌ಗಳು ಟಿಆರ್‌ಪಿಗಾಗಿ, ಅಗ್ಗದ ಜನಪ್ರಿಯತೆಗಾಗಿ ಇಂಥ ವ್ಯಭಿಚಾರಗಳನ್ನು ನಡೆಸುತ್ತಲೇ ಇದ್ದರೆ, ಅವುಗಳನ್ನು ನಮ್ಮ ಪ್ರೇಕ್ಷಕರು ಕಣ್ಣುಬಾಯಿ ಬಿಟ್ಟುಕೊಂಡು ನೋಡುತ್ತಲೇ ಹೋದರೆ, ಯಾರೂ ಏನನ್ನೂ ಮಾಡಲಾಗದು. ಜನರು ಇಂಥ ಕಾರ್ಯಕ್ರಮಗಳನ್ನು ತಿರಸ್ಕರಿಸಿದ ಹೊರತು ವಿಕೃತ ಮನಸ್ಸಿನವರ ವಿಕೃತ ಶೋಗಳಿಗೇನು ಕೊರತೆಯಿರುವುದಿಲ್ಲ.

ಈ ಲೇಖನಗಳನ್ನೂ ಒಮ್ಮೆ ಓದಿ:


ಪ್ಯಾಟೆ ಹುಡ್ಗೀರು: ನೋಟೀಸು ಕೊಟ್ಟರೆ ಸಾಕೆ? ಈ ಅಸಹ್ಯ ನಿಲ್ಲಬೇಡವೇ?


ರಿಯಾಲಿಟಿ ಶೋ ಹೆಸರಿನಲ್ಲಿ ಬಾಲಕನ ಮೇಲೆ ದೌರ್ಜನ್ಯ
0 komentar

Blog Archive