ಪ್ರಿಯ ಅನಾಮಿಕ ಕಮೆಂಟುದಾರರೇ,

ಹೇಗಿದ್ದೀರಿ?

ನಾಲ್ಕೈದು ದಿನಗಳಿಂದ ನಿಮ್ಮ ಪತ್ತೆಯಿಲ್ಲ. ಹಾಗೆ ಪತ್ತೆಯಿಲ್ಲದಂತಾಗಲು ನಾವೇ ಕಾರಣ ಅನ್ನೋದೂ ನಿಜಾನೇ. ನೀವಿಲ್ಲದೇ ನಮಗೂ ಬೋರು ಹೊಡೆದಿದೆ. ಅದನ್ನು ಹೇಳಲೆಂದೇ ಈ ಪತ್ರ.

ಈ ಬ್ಲಾಗು ಶುರು ಮಾಡಿದಾಗಿನಿಂದಲೂ ನಮ್ಮ ಜತೆ ಮಾತುಕತೆ ಆರಂಭಿಸಿದವರು ನೀವು. ಎಲ್ಲೋ ಕಂಡ ಚಿತ್ರ, ಓದಿದ ಸುದ್ದಿ, ಆಕರ್ಷಕ ಲಿಂಕು ಎಲ್ಲವನ್ನೂ ಕಳಿಸಿದವರು ನೀವು, ನಮ್ಮ ತಿಳಿವಳಿಕೆಯನ್ನು ಬೆಳೆಸಿದವರು ನೀವು.

ಇಂಗ್ಲೀಷಂದರೆ ಇಂಗ್ಲೀಷು, ಕನ್ನಡವೆಂದರೆ ಕನ್ನಡ, ಕಂಗ್ಲೀಷೆಂದರೆ ಕಂಗ್ಲೀಷು ಸಿಕ್ಕ ಭಾಷೆಯಲ್ಲಿ ಬರೆದಿರಿ ನೀವು. ಹಲವು ಬಾರಿ ನಿಮ್ಮ ಕಮೆಂಟುಗಳೇ ನಮ್ಮ ಪೋಸ್ಟ್‌ಗಳಿಗಿಂತ ಮಜಬೂತಾಗಿದ್ದವು. ತುಂಬ ಸರ್ತಿ ನಮ್ಮ ಓದುಗರು ನಿಮ್ಮ ಕಮೆಂಟು ಓದಲೆಂದೇ ಬರುತ್ತಿದ್ದರು. ಕೆಲವು ಪೋಸ್ಟ್‌ಗಳಿಗಂತೂ ದಾಖಲೆಗಳ ಜತೆ ಮೆಟೀರಿಯಲ್ಲುಗಳನ್ನು ಒದಗಿಸಿದವರೇ ನೀವು.

ಆದರೆ ಕೆಲವರು ಮಾತ್ರ ಶುದ್ಧ ಜಗಳಗಂಟರು. ಚರ್ಚೆ ಅಂದ್ರೆ ಜಗಳಾನೇ ಅಂತ ತೀರ್ಮಾನಿಸಿದವರು. ಕೆಲವರಿಗೆ ಅವರವರದೇ ಆದ ಅಜೆಂಡಾಗಳು. ಯಾರಿಗೋ ಅವರು ನಿಷ್ಠರು, ಅದಕ್ಕಾಗಿ ವಿತಂಡವಾದಕ್ಕೆ ನಿಂತುಬಿಡುತ್ತಾರೆ. ಅಭಿಮಾನ ಅನ್ನೋದು ನೆತ್ತಿಗೆ ಬಂದು ಕುಳಿತರೆ, ತಾವು ಆರಾಧಿಸುವ ವ್ಯಕ್ತಿಯ ವಿರೋಧಿಗಳೆಲ್ಲ ಅವರಿಗೆ ಶತ್ರುಗಳ ಹಾಗೆ ಕಾಣುತ್ತಾರೆ.

ವ್ಯಕ್ತಿ ನಿಂದನೆ, ಚಾರಿತ್ರ್ಯಹರಣ ಬೇಡ ಅಂತ ನಾವು ಮೊದಲಿನಿಂದಲೇ ಹೇಳುತ್ತಲೇ ಬಂದಿದ್ದೆವು. ನಿಮಗೆ ಗೊತ್ತಿದೆ, ನಾವು ಈ ಕೆಲಸವನ್ನು ಈ ಒಂದೂ ಮುಕ್ಕಾಲು ತಿಂಗಳಲ್ಲಿ ಯಾವತ್ತೂ ಮಾಡಿದವರಲ್ಲ. ಯಾರ ಬಗ್ಗೆಯೂ ನಂಜು ಇಟ್ಟುಕೊಂಡು ಬರೆಯುವುದು ನಮಗೆ ಆಗದು. ನಾವು ಆಧಾರರಹಿತವಾಗಿ ಯಾರ ವಿರುದ್ಧವೂ ಟೀಕೆ ಮಾಡಿದವರಲ್ಲ. ಹೀಗೆ ಟೀಕೆ ಮಾಡುವಾಗಲೂ ಸಭ್ಯತೆಯನ್ನು ಮರೆತವರಲ್ಲ. ಟೀಕೆ ರಚನಾತ್ಮಕವಾಗಿರಬೇಕು ಎಂಬುದು ನಮ್ಮ ನಿಲುವು.

ನಿಮ್ಮಲ್ಲಿ ಹಲವರು ನಮ್ಮನ್ನು ವಿಪರೀತ ಟೀಕೆ ಮಾಡಿದರು. ಧಿಕ್ಕಾರವಿರಲಿ ನಿಮಗೆ ಎಂದು ಬೈದರು. ಬೈಗುಳ ನಮಗಲ್ಲವೇ, ಅದು ನಮಗೆ ಸಹ್ಯ. ಆದರೆ ಇತರರನ್ನೂ ಹಾಗೇ ಬೈದರೆ ಅದನ್ನು ಮಾಡರೇಟ್ ಮಾಡುವುದು ಹೇಗೆ? ಕಮೆಂಟು ಪ್ರಕಟವಾಗದಿದ್ದರೆ, ಯಾಕ್ರೀ ಹಾಕಲಿಲ್ಲ- ನೀವೇ ತಾನೇ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡಿದವರು ಎಂದು ಚುಚ್ಚಿದವರಿದ್ದಾರೆ. ಎಡಿಟ್ ಮಾಡಿ ಹಾಕಿದರೆ, ಯಾಕ್ರೀ ಎಡಿಟ್ ಮಾಡಿದ್ದು, ಕಾಳಸರ್ಪ, ಹಾದರ ಅಂತ ಶಬ್ದ ಬಳಸಿದರೆ ತಪ್ಪಾ ಎಂದು ಕೇಳಿದವರೂ ಇದ್ದಾರೆ.

ತುಂಬ ಒಳ್ಳೆ ಚರ್ಚೆ ಆರಂಭಿಸಿದ್ದೀರಿ, ಆದರೆ ಅಲ್ಲಿ ಕಮೆಂಟು ಹಾಕುತ್ತಿರುವವರನ್ನು ಗಮನಿಸಿದರೆ ಅವರ ಜತೆ ಆರೋಗ್ಯಕರ ಚರ್ಚೆ ಸಾಧ್ಯವಿಲ್ಲ ಅನ್ನಿಸುತ್ತಿದೆ. ಅಂಥವರ ಜತೆ ಚರ್ಚಿಸುವುದಕ್ಕಿಂತ ಸುಮ್ಮನಿರುವುದು ವಾಸಿ ಎಂದು ಸಂಪಾದಕೀಯದ ಗಂಭೀರ ಓದುಗರೊಬ್ಬರು ಹೇಳಿದರು. ಏನಾದರೂ ಮಾಡಿ, ಅರ್ಥಪೂರ್ಣ ಚರ್ಚೆಯಾಗುವ ಹಾಗೆ ಮಾಡಿ ಎಂಬುದು ಅವರ ಬಿನ್ನಹ.

ನಿಜ, ಎಲ್ಲರನ್ನೂ ಮೆಚ್ಚಿಸಲು ಆಗುವುದಿಲ್ಲ. ಮೆಚ್ಚಿಸುವ ಉದ್ದೇಶವೂ ನಮಗಿಲ್ಲ. ಸಾವಿರಾರು ಮಂದಿ ದಿನವೂ ನಮ್ಮ ಬ್ಲಾಗ್ ಓದಬೇಕು ಎಂಬ ಟಿಆರ್‌ಪಿ ಆಸೆಯೂ ನಮಗಿಲ್ಲ. ಇದರಿಂದ ಏನೋ ಕ್ರಾಂತಿ ಜರುಗುತ್ತದೆ ಎಂಬ ಭ್ರಮೆಯೂ ನಮಗಿಲ್ಲ. ಕೆಲವು ಪ್ರತಿಭಟನೆಯ ಧ್ವನಿಗಳನ್ನು ದಾಖಲಿಸಲೇಬೇಕು ಎಂಬ ಕಾಳಜಿ ನಮ್ಮದು. ಇಂಥ ಧ್ವನಿಗಳು ಇಲ್ಲದೇ ಹೋದರೆ ಫ್ಯಾಸಿಸ್ಟ್ ಪ್ರವೃತ್ತಿ ಬಲವಾಗುತ್ತಾ ಹೋಗುತ್ತದೆ. ಪ್ರಜಾಪ್ರಭುತ್ವದ ಆಶಯಗಳಿಗೆ ತಕ್ಕ ಹಾಗೆ ಒಳಿತು-ಕೆಡುಕುಗಳ ಚರ್ಚೆ ನಡೆಯಲೇಬೇಕು. ಇದು ಎಲ್ಲ ಕ್ಷೇತ್ರಗಳಲ್ಲೂ ನಡೆಯಬೇಕು. ಭಿನ್ನ ಧ್ವನಿಗಳನ್ನು ಗೌರವಿಸುವ ಪರಂಪರೆ ನಮ್ಮದಾಗಬೇಕು. ಈ ಆಶಯಗಳೊಂದಿಗೆ ಈ ಪರ್ವ ಕಾಲದಲ್ಲಿ ನಿಂತಿದ್ದೇವೆ. ಹೀಗಿರುವಾಗ ಈ ಬ್ಲಾಗ್‌ನಲ್ಲಿ ಬಹಳಷ್ಟು ಮಂದಿಗೆ ತಮ್ಮ ನಿಜ ನಾಮಧೇಯದಲ್ಲಿ ಬರೆಯುವುದು ಕಷ್ಟವಾಗುತ್ತದೆ, ಅದಕ್ಕೆ ನಾನಾ ಕಾರಣಗಳೂ ಇರುತ್ತವೆ, ನಾವು ಅದನ್ನು ಬಲ್ಲೆವು. ಆದರೆ ಎಲ್ಲವೂ ಒಂದು ಮಿತಿಯಲ್ಲಿದ್ದರೆ ಚಂದವಲ್ಲವೇ?

ಇದೆಲ್ಲವನ್ನೂ ಹೇಳುತ್ತ, ಮತ್ತೆ ನಿಮಗೆ ಅಂದರೆ ಅನಾಮಿಕ ಕಮೆಂಟುದಾರರಿಗೆ ಮುಕ್ತ ಅವಕಾಶ ನೀಡುತ್ತಿದ್ದೇವೆ. ಹರಿದು ಬರುತ್ತಿದ್ದ ನೂರಾರು ಕಮೆಂಟುಗಳನ್ನು ಓದಲೂ ಸಾಧ್ಯವಾಗದೆ ಅನಾಮಿಕ ಕಮೆಂಟುಗಳನ್ನು ಬ್ಲಾಕ್ ಮಾಡಿದ್ದೆವು. ಇದು ನಮಗೆ ಇಷ್ಟವಾದ ನಿರ್ಧಾರವೇನೂ ಆಗಿರಲಿಲ್ಲ. ಈಗ ಅದನ್ನು ಮತ್ತೆ ತೆರವು ಮಾಡುತ್ತಿದ್ದೇವೆ. ನಿಮಗನ್ನಿಸಿದ್ದನ್ನು ನೀವು ಹೇಳಿ. ಮಂತ್ರಕ್ಕಿಂತ ಉಗುಳು ಜಾಸ್ತಿಯಾಗೋದು ಬೇಡ. ನಮ್ಮ ಉಗುಳು ನಮ್ಮ ಮೇಲೇ ಸಿಡಿಯಬಾರದಲ್ಲವೇ?
ಪ್ರೀತಿ ಹೀಗೇ ಇರಲಿ.

-ಸಂಪಾದಕೀಯ
0 komentar

Blog Archive