ಸನ್ಮಾನ್ಯ ಡಾ. ಎಂ.ಚಿದಾನಂದಮೂರ್ತಿಯವರೇ,

ರಾಜ್ಯಪಾಲರು ಡಾಕ್ಟರೇಟು ತಡೆಹಿಡಿದದ್ದು, ಅನಂತಮೂರ್ತಿಯಂಥವರು ಪ್ರತಿಭಟಿಸಿದ್ದು, ಸಾಹಿತ್ಯ ಸಮ್ಮೇಳನದಲ್ಲಿ ಖಂಡನಾ ನಿರ್ಣಯ ಅಂಗೀಕಾರವಾಗಿದ್ದು, ರಾಜ್ಯಪಾಲರು ನಿಲುವು ಬದಲಿಸಿಕೊಂಡಿದ್ದು, ನೀವು ಡಾಕ್ಟರೇಟು ಸ್ವೀಕರಿಸಿದ್ದು, ಚಿದಾನಂದಮೂರ್ತಿಯವರೇನು ಕರ್ನಾಟಕಕ್ಕಿಂತ ದೊಡ್ಡವರಾ ಎಂದು ಪಾಪು ಪ್ರಶ್ನಿಸಿದ್ದು... ಇತ್ಯಾದಿ ಇತ್ಯಾದಿಗಳ ವಿಷಯ ದೇವರಾಣೆಗೂ ನಾವು ಚರ್ಚಿಸುವುದಿಲ್ಲ. ಅದೆಲ್ಲ ಈಗ ಹಳೆಯ ಸುದ್ದಿಯಾಯಿತು.

ವಾಚಕರ ವಾಣಿಗಳಿಗಾಗಿ ನೀವು ಬರೆದ ಪತ್ರವೊಂದನ್ನು ಹೊಸದಿಗಂತದಲ್ಲಿ ಮೊನ್ನೆ ಹಾಗು ಕನ್ನಡಪ್ರಭದಲ್ಲಿ ನಿನ್ನೆ ಓದಿದೆವು. ಆ ಪತ್ರಕ್ಕೆ ಇದು ಪ್ರತಿಪತ್ರ.  ದಯಮಾಡಿ ಪರಾಂಬರಿಸಬೇಕು. ನೀವು ಎಂ.ಪಿ.ಪ್ರಕಾಶರ ಅಂತಿಮ ದರ್ಶನಕ್ಕೆ ಹೋಗಿದ್ದು, ವಾಪಾಸು ಬರುತ್ತಾ ಭಿಕ್ಷುಕಿಗೂ ಆಕೆಯ ಮೂವರು ಮಕ್ಕಳಿಗೂ ಕಾಸು, ಚಾಕಲೇಟು ಕೊಟ್ಟಿದ್ದು, ಗಳಗಳನೆ ಅತ್ತಿದ್ದು.. ಇತ್ಯಾದಿ ಬರೆದಿದ್ದೀರಿ. ಅದು ನಿಮ್ಮ ಮಾನವೀಯತೆಯನ್ನು ತೋರಿಸುತ್ತದೆ, ಸಂತೋಷ.

ನಂತರ ನೀವೇನು ಬರೆಯುತ್ತಾ ಹೋದಿರಿ? ಏನಾಗಿದೆ ನಿಮಗೆ?

ನಿಮ್ಮ ಪತ್ರದ ಕೆಲವು ಸಾಲುಗಳು ಇವು:

ಮುಂದೆ ಆಟೋ ಹಂಪಿನಗರದ ಮನೆಗೆ ಗೋರಿಪಾಳ್ಯದ ಮೂಲಕ ಬಂದಿತು. ಅಲ್ಲಿನ ಪ್ರದೇಶದಲ್ಲಿ ನಿಧಾನಕ್ಕೆ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ- ಮುಸ್ಲಿಮರೇ ಜಾಸ್ತಿಯಿರುವುದರಿಂದ ಅನೇಕರು ಹೆದರಿ ತಮ್ಮ ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ. ಅಲ್ಲಿನ ಮುಖ್ಯ ರಸ್ತೆಯಲ್ಲಿ ಬಂದರೆ ಮಾಂಸದ ಕೆಟ್ಟ ವಾಸನೆ, ಹಲವು ಮಸೀದಿಗಳು ಅಲ್ಲಿವೆ-ಅಲ್ಲಿನ ಧ್ವನಿವರ್ಧಕಗಳಿಂದ ನನ್ನ ಮನೆಗೆ ಅಲ್ಲಿ ನಡೆಯುವ ಪ್ರಾರ್ಥನೆಗಳು ಕೇಳಿಸುತ್ತವೆ. 
ಆ ಮುಖ್ಯ ರಸ್ತೆಯಲ್ಲಿ ಬಲಗಡೆ ಒಂದು ಚರ್ಚು; ಅದರ ಎದುರಿಗೆ ಒಂದು ಮಾಂಸದ ಅಂಗಡಿಯಲ್ಲಿ ಮಾಂಸವನ್ನು ನೇತು ಹಾಕಿದ್ದರೆ ಅದರ ಮುಂದೆಯೇ ಒಂದು ಹಸು ನಿಂತಿತ್ತು. ಅದನ್ನು ದಾಟಿ ಬಂದರೆ ಅಲ್ಲೇ ಒಂದು ಹಿಂದೂ ದೇವಾಲಯ. ಅದರಿಂದ ಮುಂದೆ ಬಂದರೆ ಅಲ್ಲೇ ಎಡಗಡೆ ಮೂರು ನಾಲ್ಕು ಚಿಕ್ಕ ಮನೆಗಳ ಮೇಲೆ ಹಲವು ಹಸಿರು ಬಾವುಟಗಳು, ಮನಸ್ಸು ತೀರಾ ಖಿನ್ನವಾಯಿತು.

ಈಗ ನಿಧಾನವಾಗಿ ನಿಮ್ಮ ಮಾತುಗಳ ಕುರಿತು ಚರ್ಚಿಸೋಣ. ಹೌದು, ಗೋರಿಪಾಳ್ಯದಲ್ಲಿ ಮುಸ್ಲಿಮರೇ ಹೆಚ್ಚು. ಇರಬಾರದು ಎಂದು ಹೇಳಿದವರ‍್ಯಾರು? ಯಾಕಿರಬಾರದು? ಒಂದೊಂದು ಬಡಾವಣೆಗಳಲ್ಲಿ ಒಂದೊಂದು ಜಾತಿಯವರು, ಧರ್ಮದವರು ಹೆಚ್ಚು ಇರಬಹುದು, ಇರುತ್ತಾರೆ. ನಮ್ಮ ಹಳ್ಳಿಗಳಲ್ಲಿ ಜಾತಿಗೊಂದು ಕೇರಿ ಇರುವುದಿಲ್ಲವೇ? ಯಾಕೆ ಬೇಜಾರು ಮಾಡಿಕೊಳ್ತೀರಿ? ಮುಸ್ಲಿಮರಿಗೆ ಹೆದರಿ ಅನೇಕರು ತಮ್ಮ ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ ಎಂದು ನಿಮಗೆ ಹೇಗೆ ಗೊತ್ತಾಯಿತು?  ಅಣ್ಣಿಗೇರಿಯಲ್ಲಿ ಪಂಪನ ವಂಶಸ್ಥರನ್ನು ಹುಡುಕಿದ ಹಾಗೆ ಗೋರಿಪಾಳ್ಯದಲ್ಲಿ ಭೀತಿಯಿಂದ ಆಗುತ್ತಿರುವ ವಲಸೆ ಕುರಿತು ಗಂಭೀರ ಸಂಶೋಧನೆಯನ್ನೇನಾದರೂ ಮಾಡಿದ್ದೀರೆ?

ಮುಖ್ಯರಸ್ತೆಯಲ್ಲಿ ಮಾಂಸದ ಕೆಟ್ಟ ವಾಸನೆ ಎನ್ನುತ್ತೀರಿ. ಬೇಯಿಸಿದ ಮಾಂಸದ ವಾಸನೆನಾ? ಹಸಿ ಮಾಂಸದ ವಾಸನೆನಾ? ನೀವು ಬಿಡಿಸಿ ಹೇಳಬೇಕಿತ್ತು. ಯಾಕಂದ್ರೆ ಬೇಯಿಸಿದ ಮಾಂಸದ ವಾಸನೆ ಮಾಂಸಪ್ರಿಯರಿಗೆ ಅಚ್ಚುಮೆಚ್ಚು; ಅದಕ್ಕೆ ಕೇಳಿದೆವು. ಹಲವು ಮಸೀದಿಗಳು ಅಲ್ಲಿವೆ ಅಂತೀರಾ, ಇರಲಿ ಬಿಡಿ. ಧ್ವನಿವರ್ಧಕಗಳಿಂದ ಪ್ರಾರ್ಥನೆಯ ಧ್ವನಿ ಕೇಳಿಬರುತ್ತೆ ಅಂತೀರಿ. ಬೆಳ್ಳಂಬೆಳಗ್ಗೆ ಪ್ರಾರ್ಥನೆಗಳ ಶಬ್ದ ಕೇಳಿಬರುವುದು ಮಸೀದಿಗಳಿಂದ ಮಾತ್ರವಲ್ಲ, ಮಂದಿರಗಳಿಂದಲೂ ಕೇಳಿಬರುತ್ತವೆ. ನಿಮಗೆ ಕೇಳುತ್ತಿಲ್ಲವಾದರೆ ನಿಮ್ಮ ಮನೆಯ ಪಕ್ಕದಲ್ಲಿ ಇರುವ ದೇವಸ್ಥಾನಗಳ ಮುಖ್ಯಸ್ಥರಿಗೆ ಹೇಳಿ, ಅವರು ಬೆಳಿಗ್ಗೆ ಸುಶ್ರಾವ್ಯ ಭಕ್ತಿಗೀತೆಗಳನ್ನು ಹಾಕುತ್ತಾರೆ.

ಮಾಂಸದ ಅಂಗಡಿಯಲ್ಲಿ ಮಾಂಸವನ್ನು ನೇತು ಹಾಕದೆ ಚೆಂಡುಹೂವಿನ ಮಾಲೆಯನ್ನು ನೇತುಹಾಕುತ್ತಾರಾ ಚಿದಾನಂದಮೂರ್ತಿಗಳೇ? ಅಥವಾ ಮಾಂಸದಂಗಡಿಗಳಲ್ಲಿ ಸ್ಯಾನಿಟರಿ ಪೈಪುಗಳನ್ನು ಜೋಡಿಸಿಡುತ್ತಾರಾ? ಅಥವಾ ಅಲ್ಲಿ ಬತ್ತಾಸು, ಖರ್ಜೂರ, ಜೀರಿಗೆ ಮಿಠಾಯಿ ಮಾರಲು ಸಾಧ್ಯವೇ?

ಕೆಲವು ಮನೆಗಳ ಮೇಲೆ ಹಸಿರು ಬಾವುಟಗಳು ಕಂಡರೆ ನಿಮ್ಮ ಮನಸ್ಸಿಗೇಕೆ ಖಿನ್ನತೆ ಆವರಿಸಬೇಕು? ಹಸಿರು ಬಾವುಟವನ್ನು ದೇಶದಲ್ಲಿ ನಿಷೇಧಿಸಲಾಗಿದೆಯೇ? ಮನೆಗಳ ಮೇಲೆ ಕೇಸರಿ ಬಾವುಟಗಳನ್ನು ಕಂಡರೂ ನೀವು ಖಿನ್ನರಾಗುತ್ತೀರೆ?

ಪೂಜ್ಯರಾದ ಡಾ.ಎಂ.ಚಿದಾನಂದಮೂರ್ತಿಯವರೇ, ನಿಮ್ಮ ಪತ್ರದ ತಲೆಬುಡ ಅರ್ಥವಾಗಲಿಲ್ಲ ನಮಗೆ. ಅದಕ್ಕಾಗಿ ಈ ಪತ್ರವನ್ನು ನಿಮಗೆ ನಿವೇದಿಸಿಕೊಂಡಿದ್ದೇವೆ. ಅನ್ಯಥಾ ಭಾವಿಸಬೇಡಿ. ನಾವು ಪಾಮರರು, ಏನದ್ರೂ ತಪ್ಪಾಗಿದ್ರೆ ಕ್ಷಮಿಸಿ.

ಆದರಪೂರ್ವಕವಾಗಿ
-ಸಂಪಾದಕೀಯ

ಡಾ.ಎಂ.ಚಿದಾನಂದಮೂರ್ತಿಯವರ ಪತ್ರ ಯಾವುದೇ ಸ್ವರೂಪದ ಪತ್ರಿಕೆಯಲ್ಲಿ ಪ್ರಕಟವಾಗಲು ಯೋಗ್ಯವಾಗಿದೆಯೇ? ನೀವು ಹೇಳಿ.

0 komentar

Blog Archive