ಉದಯವಾಣಿ ಪತ್ರಿಕಾ ಸಮೂಹದ ನೂತನ ಗ್ರೂಪ್ ಎಡಿಟರ್ ಆಗಿ ರವಿ ಹೆಗಡೆ ೧೬-೨-೨೦೧೧ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ೨೦ ವರ್ಷಗಳ ಅನುಭವ ಇರುವ ಇವರು ಈ ಮೊದಲು ಸಂಯುಕ್ತ ಕರ್ನಾಟಕ, ಕನ್ನಡಪ್ರಭ ಪತ್ರಿಕೆ ಹಾಗು ಸುವರ್ಣ ನ್ಯೂಸ್ ಟಿವಿ ವಾಹಿನಿಯಲ್ಲಿ ಕಾರ್ಯನಿರ್ವಹಿಸಿದ್ದರು.
ಹೀಗಂತ ಇವತ್ತಿನ ಉದಯವಾಣಿಯ ಮುಖಪುಟದಲ್ಲಿ ಅನೌನ್ಸ್‌ಮೆಂಟು ಹೊರಬಿದ್ದಿದೆ. ನಾವು ನಿನ್ನೆ ಮಧ್ಯಾಹ್ನ ಹೇಳಿದಂತೆಯೇ ರವಿ ಹೆಗಡೆ ಸಂಜೆ ೪-೩೦ರ ಸುಮಾರಿಗೆ ಉದಯವಾಣಿಯ ಚಾರ್ಜು ವಹಿಸಿಕೊಂಡರು. ತಿಮ್ಮಪ್ಪ ಭಟ್ಟರು ರಾಜೀನಾಮೆ ಕೊಟ್ಟು ಹೊರಟರು.

ಹಿಂದೆ ತಿಮ್ಮಪ್ಪಭಟ್ಟರು, ಪೂರ್ಣಿಮ ಅವರು ಬೆಂಗಳೂರು ಆವೃತ್ತಿಗಳಿಗಷ್ಟೆ ಸಂಪಾದಕರಾಗಿದ್ದರು. ಈಗ ಹಾಗಲ್ಲ, ಎಲ್ಲ ಆವೃತ್ತಿಗಳೂ ರವಿ ಹೆಗಡೆಯವರ ಕೈಗೇ ಬಂದಿವೆ. ಅವರ ಡೆಸಿಗ್ನೇಷನ್ನು ಗ್ರೂಪ್ ಎಡಿಟರ್. ನಾವು ಕೇಳಿದ ಪ್ರಕಾರ ರವಿ ಹೆಗಡೆ ಟೆಕ್ನಿಕಲಿ ಗುಡ್ ಹ್ಯಾಂಡ್. ಉದಯವಾಣಿಯಲ್ಲಿ ಅವರು ಏನೇನು ಬದಲಾವಣೆ ತರುತ್ತಾರೆ? ಕಾದು ನೋಡಬೇಕು.

ಸಾಧಾರಣವಾಗಿ ಎಲ್ಲ ಪತ್ರಿಕೆಗಳ ಸಂಪಾದಕರುಗಳಿಗೆ ಆಗುವ ಮೊದಲ ಕಿರಿಕಿರಿಯೇ ಮುಖಪುಟಕ್ಕೆ ಬರುವ ಜಾಹೀರಾತುಗಳದ್ದು. ಅಲ್ಲಾ ಸ್ವಾಮಿ, ಬೊಜ್ಜು ಕರಗಿಸುವುದು ಹೇಗೆ? ಎಂಬ ಕಾಲುಪುಟದ ಜಾಹೀರಾತು ಮುಖಪುಟದಲ್ಲಿ ಪ್ರಕಟಿಸಿದರೆ ಬೊಜ್ಜು ಹೊತ್ತ ವ್ಯಕ್ತಿಯ ಅಸಹ್ಯ ಹೊಟ್ಟೆಯನ್ನು ಓದುಗರು ಹೇಗೆ ಸ್ವೀಕರಿಸುತ್ತಾರೆ ಎಂಬುದು ಸಂಪಾದಕರುಗಳ ಪ್ರಶ್ನೆ. ಜಾಹೀರಾತು ಬೇಕು, ನಿಜ. ಆದರೆ ಮುಖಪುಟದಿಂದಾದರೂ ಇವುಗಳಿಗೆ ಮುಕ್ತಿ ನೀಡಬೇಡವೇ? ಎಂದು ಅವರು ಪ್ರಶ್ನಿಸುತ್ತಾರೆ. ಕಾಸು ಮುಖ್ಯ ಕಣ್ರೀ, ಸುಮ್ನೆ ಪೇಜಿಗೆ ಕೂರಿಸಿ ಎಂಬುದು ಜಾಹೀರಾತು ವಿಭಾಗದ ಫರ್ಮಾನು.

ಅದು ಹೋಗಲಿ, ಮುಖಪುಟವನ್ನು ಚೆನ್ನಾಗಿ ವಿನ್ಯಾಸ ಮಾಡೋಣ ಅಂದ್ರೆ ಶಕ್ತಿ ದೋಷ, ಶೀಘ್ರ ವೀರ‍್ಯ ಸ್ಖಲನ, ಸ್ವಪ್ನ ಸ್ಖಲನ, ಪುರುಷತ್ವ ನಾಶ ಇತ್ಯಾದಿಗಳಿಗೆ ನಮ್ಮಲಿದೆ ಪರಿಹಾರ ಎಂದು ಹೇಳುವ ಡಿಸ್ಪೆಂಸರಿಗಳ ಪಾಪ್ ಅಪ್ ಜಾಹೀರಾತುಗಳನ್ನು ಮುಖಪುಟಕ್ಕೇ ಕೊಟ್ಟರೆ ಏನು ಮಾಡೋದು ಅಂದ್ರೆ ಮತ್ತದೇ ಕಾಸು ಬೇಕು ಎಂಬ ಉತ್ತರ. ಹೋಗಲಿ ಮಾಸ್ಟ್‌ಹೆಡ್ ಪಕ್ಕದ ಕೆಟ್ಟ ವಿನ್ಯಾಸದ ಪ್ಯಾನಲ್ ಜಾಹೀರಾತುಗಳಾದರೂ ತೆಗೆಯಿರಿ, ಒಳಗಿನ ಪೇಜಿನಲ್ಲಿ ಏನಿದೆ ಅಂತನಾದ್ರೂ ಕಾಣಿಸ್ತೀವಿ ಅಂತ ಗೋಗರೆದರೂ ಜಾಹೀರಾತು ವಿಭಾಗದವರು ಕೇಳೋದಿಲ್ಲ.

ಕಾಲ ಬದಲಾಗಿದೆ. ಕೆಲವು ಇಂಗ್ಲಿಷ್ ಪತ್ರಿಕೆಯವರು ಮುಖಪುಟದಲ್ಲಿ ನಾವು ಜಾಹೀರಾತು ಪ್ರಕಟಿಸುವುದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ. ನಾವು ಪ್ರಾಯೋಜಿತ ಸುದ್ದಿ (ಪೇಯ್ಡ್ ನ್ಯೂಸ್) ಪ್ರಕಟಿಸುವುದಿಲ್ಲ ಎಂದು ಡಿಎನ್‌ಎ ಪತ್ರಿಕೆ ಇತ್ತೀಚಿಗೆ ತಾನೇ ಮಾಸ್ಟ್‌ಹೆಡ್ ಜತೆನೇ ಬರೆದುಕೊಂಡಿದೆ.

ಕನ್ನಡ ಪತ್ರಿಕೆಗಳು ಜಾಹೀರಾತಿನ ವಿಷಯದಲ್ಲಿ ಸಣ್ಣಪುಟ್ಟ ರಾಜಿಗಳಿಗೆ ತಯಾರಾಗಿವೆಯೇ? ಇದು ಸದ್ಯದ ಪ್ರಶ್ನೆ.
ಉದಯವಾಣಿಗೊಂದು ಹೊಸ ರೂಪ ಕೊಡುವ ಉತ್ಸಾಹದಲ್ಲಿರುವ ರವಿ ಹೆಗಡೆ ಕೂಡ ಇಂಥ ಸಮಸ್ಯೆ, ಸವಾಲುಗಳನ್ನು ಎದುರಿಸಬೇಕಾದೀತು.

ಇನ್ನು ಉದಯವಾಣಿಯ ಬಹುದೊಡ್ಡ ಕೊರತೆಯೇನೆಂದರೆ ಅದಕ್ಕೆ ಪೂರ್ಣ ಪ್ರಮಾಣದ ಜಿಲ್ಲಾ ವರದಿಗಾರರು ಇಲ್ಲದೇ ಇರುವುದು. ಈಗ ಜಿಲ್ಲಾ ವರದಿಗಾರರಿಲ್ಲವೆಂದೇನಲ್ಲ, ಆದರೆ ಬಹುತೇಕರು ಸ್ಟ್ರಿಂಜರ್‌ಗಳು. ಅವರು ಸಂಸ್ಥೆಯಿಂದ ನೇಮಕವಾದ ಪೂರ್ಣಾವಧಿ ವರದಿಗಾರರಲ್ಲ. ಈ ವರದಿಗಾರರೋ ಒಂದೇ ಮೇಷ್ಟ್ರುಗಳು ಅಥವಾ ಅಂಗಡಿ ಮುಂಗಟ್ಟು ಇಟ್ಟುಕೊಂಡು ಜೀವನಕ್ಕೆ ಬೇರೆ ಏನಾದರು ಮಾಡಿಕೊಂಡು ಇರುವವರು. ಅವರ ವೃತ್ತಿ ಕಮಿಟ್‌ಮೆಂಟುಗಳ ನಡುವೆ ಇವತ್ತಿನ ಸ್ಪರ್ಧಾತ್ಮಕ ಮೀಡಿಯಾ ಯುಗದಲ್ಲಿ ಎಂಥ ಸುದ್ದಿಗಳನ್ನು ನಿರೀಕ್ಷಿಸುತ್ತೀರಿ? ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬರು ಚೆನ್ನಾಗಿ ಕೆಲಸ ಮಾಡುತ್ತಿರಬಹುದು. ಆದರೆ ಬಹುತೇಕರು ಅಧಿಕಾರಿಗಳು ಕೊಡುವ ಪ್ರೆಸ್‌ನೋಟುಗಳಿಗೇ ಜೋತುಬಿದ್ದು ಕೆಲಸ ಮಾಡುವವರು. ಅವರಾದರೂ ಏನು ಮಾಡಿಯಾರು? ಕೆಲವು ಜಿಲ್ಲೆಗಳಲ್ಲಿ ಮಾತ್ರ ಉದಯವಾಣಿಯ ಸಿಬ್ಬಂದಿಯೇ ಜಿಲ್ಲಾ ವರದಿಗಾರರಿದ್ದಾರೆ, ಇನ್ನುಳಿದ ಕಡೆ ಸ್ಟ್ರಿಂಜರುಗಳು ಎಂದು ಕರೆಯಲ್ಪಡುವ ಒಂಥರದ ಹವ್ಯಾಸಿ ವರದಿಗಾರರೇ ಇದ್ದಾರೆ.

ಇಂಥ ಸಮಸ್ಯೆಗಳ ಕಡೆ ರವಿ ಹೆಗಡೆ ಗಮನ ಕೊಡಬೇಕೆನಿಸುತ್ತದೆ, ಅದಕ್ಕೆ ತಕ್ಕ ಬೆಂಬಲವೂ ಮ್ಯಾನೇಜ್‌ಮೆಂಟ್ ಕಡೆಯಿಂದ ದಕ್ಕಬೇಕಾಗುತ್ತದೆ. ಮ್ಯಾನೇಜ್‌ಮೆಂಟು ಸಂಪಾದಕರ ಬೆಂಬಲಕ್ಕೆ ನಿಲ್ಲುತ್ತದಾ? ವಿಜಯ ಕರ್ನಾಟಕ, ಪ್ರಜಾವಾಣಿಗಳ ಜತೆ ನಂ.೧ ಪಟ್ಟಕ್ಕೆ ಅದು ಪೈಪೋಟಿ ನಡೆಸುತ್ತದಾ? ಕಾದು ನೋಡೋಣ. ಓದು, ಬದಲಾಗು, ಮುನ್ನಡೆಸು... ಎಂಬುದು ಉದಯವಾಣಿಯ ಘೋಷವಾಕ್ಯ. ಅದು ಕನ್ನಡ ಮಾಧ್ಯಮ ರಂಗದಲ್ಲಿ ಜಾರಿಯಾಗಲಿ. ಕನ್ನಡ ಪತ್ರಿಕೆಗಳ ಈ ಆರೋಗ್ಯಕರ ಪೈಪೋಟಿ, ಕರ್ನಾಟಕದ ಓದುಗರಿಗೆ ಹೊಸತನ್ನು ಕೊಡಲಿ, ಜ್ಞಾನವನ್ನು ವೃದ್ಧಿಸಲಿ.

ಮರೆತಿದ್ದ ಮಾತು: ನಾಳೆನೇ ಜನಶ್ರೀ ಚಾನಲ್ ಲೋಕಾರ್ಪಣೆ. ಚಾನಲ್ ಸಾಕಷ್ಟು ಮಂದಿಯಲ್ಲಿ ಕುತೂಹಲ ಹುಟ್ಟಿಸಿರುವುದು ರವಿ ಬೆಳಗೆರೆ ಕಾರಣಕ್ಕೆ. ಬೆಳಗೆರೆಯವರನ್ನು ಪ್ರೀತಿಸುವವರು, ದ್ವೇಷಿಸುವವರು ಎಲ್ಲರೂ ಚಾನಲ್ ಹೇಗಿರಬಹುದು ಎಂಬ ಚರ್ಚೆಯಲ್ಲಿ ತೊಡಗಿದ್ದಾರೆ. ಬೆಳಗೆರೆ ಏನಾದರೂ ಮ್ಯಾಜಿಕ್ ಮಾಡಬಹುದಾ? ನೋಡೋಣ.
0 komentar

Blog Archive