ಕನ್ನಡ ನ್ಯೂಸ್ ಚಾನಲ್‌ಗಳ ಸುದ್ದಿ ನಿರೂಪಕರು/ವಿಶ್ಲೇಷಕರ ಪೈಕಿ ನಿಮಗೆ ಯಾರು ಹೆಚ್ಚು ಇಷ್ಟವಾಗುತ್ತಾರೆ ಎಂದು ಪ್ರಶ್ನಿಸಿದ್ದೆವು. ನೀವು ಉತ್ತರಿಸಿದ್ದೀರಿ. ಎಲ್ಲರಿಗಿಂತ ಹೆಚ್ಚು ಪ್ರೀತಿ, ಮೆಚ್ಚುಗೆ ಗಳಿಸಿರುವವರು ಸುವರ್ಣ ನ್ಯೂಸ್‌ನ ಹಮೀದ್ ಪಾಳ್ಯ. ಅವರಿಗೆ ನಮ್ಮ ಅಭಿಮಾನದ ಅಭಿನಂದನೆಗಳು.

ಈ ಪೋಲ್ ಆರಂಭವಾದ ದಿನದಿಂದಲೂ ಹಮೀದ್ ಅವರಿಗೆ ಓಟ್ ಮಾಡುವವರ ಸಂಖ್ಯೆ ಒಂದೇ ಪ್ರಮಾಣದಲ್ಲಿ ಏರುಗತಿಯಲ್ಲಿ ಸಾಗುತ್ತಿತ್ತು. ಶೇ.೫೦ರ ಆಜುಬಾಜಿನಲ್ಲಿ ಅವರಿಗೆ ಮತಗಳು ಚಲಾವಣೆಯಾದವು. ಅದರರ್ಥ ಪ್ರತಿ ಇಬ್ಬರಲ್ಲಿ ಒಬ್ಬರು ಹಮೀದ್ ಪಾಳ್ಯ ಅವರನ್ನು ಆಯ್ಕೆ ಮಾಡಿದ್ದರು. ಇದು ಅತ್ಯಂತ ಅರ್ಹ ಆಯ್ಕೆ ಎನ್ನುವುದಕ್ಕೆ ಇದು ತೋರುಗನ್ನಡಿ.
ಈ ಸಮೀಕ್ಷೆಗೂ ಮುನ್ನ ಹಮೀದ್ ಅವರನ್ನು ಪರಿಚಯಿಸಿದಾಗ ಹೇಳಿದ ಹಾಗೆಯೇ ಅವರು ಪಕ್ಕಾ ಪ್ರೊಫೆಷನಲ್. ತನಗೆ ಕೊಟ್ಟ ಜವಾಬ್ದಾರಿಯನ್ನು ಯಾವ ಅಂಜಿಕೆ-ಅಳುಕೂ ಇಲ್ಲದಂತೆ ನಿಭಾಯಿಸುವ ಛಾತಿ ಉಳ್ಳವರು.

ಹಮೀದ್ ಅವರದು ಇನ್ನೂ ಚಿಕ್ಕ ವಯಸ್ಸು. ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಪಾಳ್ಯ ಎಂಬ ಪುಟ್ಟ ಹಳ್ಳಿಯಿಂದ ಬಂದವರು. ಮೊದಲು ಈಟಿವಿಯಲ್ಲಿ ಸುದ್ದಿ ವಾಚಕರಾಗಿ ಕಾರ್ಯ ನಿರ್ವಹಣೆ. ನಂತರ ಟಿವಿ೯ನಲ್ಲಿ ಕೆಲಸ. ನ್ಯೂಸ್ ಚಾನಲ್‌ನ ಅಗತ್ಯಗಳನ್ನು ಬಲುಬೇಗನೆ ಗ್ರಹಿಸಿಕೊಂಡು ಅದಕ್ಕೆ ತಯಾರಾದವರು. ಇದೀಗ ಸುವರ್ಣ ನ್ಯೂಸ್‌ನಲ್ಲಿ ಪ್ರಮುಖ ಹುದ್ದೆಯಲ್ಲಿದ್ದಾರೆ. ಹಮೀದ್ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಹೌದು. ಈ ಬಾರಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ.

ಹಮೀದ್ ಪಾಳ್ಯ ಅವರಿಗೆ ೨೯೩ ಮತಗಳು ಚಲಾವಣೆಯಾಗಿದ್ದರೆ, ಅವರ ಸಹೋದ್ಯೋಗಿ, ಸುವರ್ಣ ನ್ಯೂಸ್‌ನವರೆ ಆದ ಗೌರೀಶ್ ಅಕ್ಕಿ ಅವರಿಗೆ ೧೭೮ ಮತಗಳು ಲಭಿಸಿವೆ. ರಂಗನಾಥ್ ಭಾರದ್ವಾಜ್ ೧೭೧, ರೆಹಮಾನ್ ಹಾಸನ್ ೧೩೮, ಲಕ್ಷ್ಮಣ್ ಹೂಗಾರ್ ೧೦೫, ರಮಾಕಾಂತ್ ೩೬, ಚಂದ್ರೇಗೌಡ ೨೧ ಮತಗಳನ್ನು ಪಡೆದಿದ್ದಾರೆ. ಟಿವಿ೯ನ ಶಿವಪ್ರಸಾದ್ ಟಿ.ಆರ್. ಈ ಸಮೀಕ್ಷೆಯಿಂದ ತಮ್ಮ ಹೆಸರನ್ನು ತೆಗೆಯಲು ಎರಡು ಬಾರಿ ವಿನಂತಿಸಿದ್ದರಿಂದಾಗಿ ಅವರ ಕುರಿತ ಮತಗಳ ವಿವರ ಇಲ್ಲಿ ಪ್ರಕಟಿಸಿಲ್ಲ. ಈ ಎಲ್ಲರಿಗೂ ನಮ್ಮ ಕೃತಜ್ಞತೆಗಳು ಹಾಗು ಅಭಿನಂದನೆಗಳು. ಹಾಗೆಯೇ ಮತ ಚಲಾಯಿಸಿದ ಎಲ್ಲರಿಗೂ ನಮ್ಮ ಥ್ಯಾಂಕ್ಸ್.

ಹಮೀದ್ ಅವರಿಗೊಂದು ಅಭಿನಂದನೆ ಹೇಳಿ ಹೋಗಿ.
0 komentar

Blog Archive