ಚರ್ಚ್ ದಾಳಿ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ಕೆ.ಸೋಮಶೇಖರ್ ಆಯೋಗ ವಿಚಾರಣೆ ನಡೆಸಿ ನೀಡಿದ ಅಂತಿಮ ವರದಿಯ ಕುರಿತಾಗಿ ಪತ್ರಿಕೆಗಳಲ್ಲಿ ಹಲವು ಬಗೆಯ ಸಂಪಾದಕೀಯಗಳು ಬಂದಿವೆ.

ಪತ್ರಿಕೆಗಳಲ್ಲಿ ಪ್ರಕಟವಾಗುವ ಸಂಪಾದಕೀಯವೆಂದರೆ ವರದಿಯಲ್ಲ. ಸಮಕಾಲೀನ ವಿದ್ಯಮಾನಗಳಿಗೆ ಆಯಾ ಪತ್ರಿಕೆ ಸ್ಪಂದಿಸುವ, ತನ್ನ ನಿಲುವನ್ನು ಸ್ಪಷ್ಟಪಡಿಸುವ ವೇದಿಕೆ. ಒಂದು ಪತ್ರಿಕೆಯ ಸಂಪಾದಕೀಯವನ್ನು ಓದುತ್ತಿದ್ದಂತೆ, ಆ ಪತ್ರಿಕೆಯ ತಾತ್ವಿಕ ನಿಲುವು ಎಂಥದ್ದು ಎಂಬುದು ಬಹಿರಂಗವಾಗುತ್ತದೆ.

ಸೋಮಶೇಖರ್ ಆಯೋಗದ ವರದಿ ಕುರಿತಾಗಿ ಕರ್ನಾಟಕದ ಪ್ರಮುಖ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಸಂಪಾದಕೀಯವನ್ನು ಗಮನಿಸಿ. ಅದು ವರದಿಯ ಧಾಟಿಯಲ್ಲಿ ಆರಂಭವಾಗುತ್ತದೆ. ಹಾಗೇ ಮುಂದೆ ಸಾಗುತ್ತದೆ. (ಓದುಗರ ಅನುಕೂಲಕ್ಕಾಗಿ ಪತ್ರಿಕೆಯ ಸಂಪಾದಕೀಯದ ಸಾಲುಗಳನ್ನು ಬೋಲ್ಡ್ ಅಕ್ಷರಗಳಲ್ಲಿ ಪ್ರಕಟಸಿದ್ದೇವೆ.)

ಮಂಗಳೂರಿನ ದಾಳಿಯ ಬಗೆಗೆ ಬಜರಂಗದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ಅವರನ್ನು ಹೊಣೆಯನ್ನಾಗಿಸಿರುವುದನ್ನು ಬಿಟ್ಟರೆ, ಈ ದಾಳಿಯಲ್ಲಿ ಸಂಘಪರಿವಾರದ ಸಂಘಟನೆಗಳು ಭಾಗಿಯಾಗಿಲ್ಲ ಎನ್ನುವ ಆಯೋಗದ ನಿಲುವು ಪ್ರತಿಪಕ್ಷಗಳಲ್ಲಿ, ಜಾತ್ಯತೀತ ಮತ್ತು ಪ್ರಗತಿಪರ ಸಂಘಟನೆಗಳಲ್ಲಿ ತೀವ್ರ ಅಸಮಾಧಾನ ತಂದಿದೆ. ಆಯೋಗದ ವರದಿ ಪಕ್ಷಪಾತಿಯಾಗಿದೆ ಎನ್ನುವ ಕಟು ಟೀಕೆಗಳು ಕೇಳಿ ಬರುತ್ತಿವೆ.

ಸರಿ ಸ್ವಾಮಿ, ಇದೆಲ್ಲವನ್ನು ನಿಮ್ಮ ಪತ್ರಿಕೆಯ ವರದಿಗಳಲ್ಲೇ ಓದಿದ್ದೇವಲ್ಲ, ಸಂಪಾದಕೀಯದಲ್ಲೂ ಪುನರಾವರ್ತನೆ ಯಾಕೆ? ಪ್ರತಿಪಕ್ಷಗಳು, ಜಾತ್ಯತೀತ-ಪ್ರಗತಿಪರ ಸಂಘಟನೆಗಳಲ್ಲಿ ಅಸಮಾಧಾನ ಮೂಡಿಸಿರುವುದು ನಿಜ, ನಿಮಗೇನನ್ನಿಸುತ್ತದೆ? ಅದನ್ನು ಹೇಳಬೇಕಲ್ಲವೇ?

ಇನ್ನೊಂದು ವಾಕ್ಯ ಗಮನಿಸಿ: ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿ ಅವರು, ಆಯೋಗದ ವರದಿಯ ಬಗೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಚರ್ಚ್‌ಗಳ ಮೇಲಿನ ದಾಳಿ ಪ್ರಕರಣಗಳನ್ನು ಸಿಬಿಐನಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿರುವುದರಲ್ಲಿ ರಾಜಕೀಯ ಉದ್ದೇಶ ಇರುವುದನ್ನು ತಳ್ಳಿಹಾಕಲಾಗದು.

ಯಾಕೆ ರಾಜಕೀಯ ಉದ್ದೇಶವನ್ನೇ ಗ್ರಹಿಸಿದಿರಿ? ರಾಜಕೀಯ ಉದ್ದೇಶಕ್ಕೆ ಹೊರತಾದ ಅಂಶಗಳೂ ಇರಬಹುದಲ್ಲವೆ?

ಚರ್ಚ್‌ಗಳ ಮೇಲೆ ಹಿಂದೂ ಮೂಲಭೂತವಾದಿಗಳು ಮತ್ತು ಕೋಮುವಾದಿ ದುಷ್ಟ ಶಕ್ತಿಯ ಗುಂಪುಗಳು ದಾಳಿ ನಡೆಸಿವೆ ಎನ್ನುವ ಶಂಕೆಯನ್ನು ಆಯೋಗ ವ್ಯಕ್ತಪಡಿಸಿದೆ. ಆದರೆ ಈ ದುಷ್ಟ ಶಕ್ತಿಯ ಗುಂಪುಗಳು ಯಾವುವು ಎಂಬುದನ್ನು ಆಯೋಗವು ತನ್ನ ವಿಚಾರಣೆಯಿಂದ ಪತ್ತೆಹಚ್ಚಲು ಆಗಿಲ್ಲದಿರುವುದು ದುರದೃಷ್ಟಕರ ಎಂದು ನೀವೇ ಗುರುತಿಸಿದ್ದೀರಿ. ಯಾವ ಗುಂಪುಗಳು ಇದನ್ನು ಮಾಡಿವೆ ಎಂಬುದನ್ನು ಕಂಡುಹಿಡಿಯಲು ಸಿಬಿಐ ತನಿಖೆ ನಡೆಸಬೇಕು ಎಂದು ಮೊಯ್ಲಿ ಹೇಳಿದ್ದರೆ ಅದರಲ್ಲಿ ರಾಜಕೀಯ ವಾಸನೆಯನ್ನು ಏಕೆ ಹುಡುಕಬೇಕು?

ಮತ್ತೊಂದು ಅಬ್ಸರ್‌ವೇಷನ್: ಈ ಘಟನೆಗಳು ನಡೆದಾಗ ಅದಕ್ಕೆಲ್ಲ ರಾಜ್ಯ ಸರ್ಕಾರ, ಬಿಜೆಪಿ ಮತ್ತು ಸಂಘಪರಿವಾರಗಳೇ ಕಾರಣ ಎಂದು ಬೊಬ್ಬೆ ಹಾಕಿದ ಪ್ರತಿ ಪಕ್ಷಗಳು ಮತ್ತು ಪ್ರಗತಿಪರ ಸಂಘಟನೆಗಳು, ಆಯೋಗದ ಮುಂದೆ ಪ್ರಮಾಣ ಪತ್ರ ಸಲ್ಲಿಸದೆ ವಿಚಾರಣೆ ವೇಳೆ ಯಾವುದೇ ಸಾಕ್ಷ್ಯ ನೀಡದೇ ಹೋದುದು ಅವುಗಳ ಬೇಜವಾಬ್ದಾರಿಯನ್ನು ತೋರಿಸುತ್ತದೆ.

ಇದು ಇನ್ನೊಂದು ವಿಚಿತ್ರ ಬಗೆಯ ವಾದ. ಈ ಪುಗಸಟ್ಟೆ ಬೋಧನೆ ಯಾರನ್ನು ಮೆಚ್ಚಿಸಲು? ಇದನ್ನು ಬರೆದವರು ಬೊಬ್ಬೆ ಎಂಬ ಪದವನ್ನು ಬಳಸಿರುವುದರ ಹಿನ್ನೆಲೆಯಲ್ಲೇ ಅವರ ಮನಸ್ಥಿತಿ ಏನೆಂಬುದನ್ನು ಗ್ರಹಿಸಬಹುದು. ಸಂಘಪರಿವಾರದ ಮುಖಂಡರೇ ತಾವೇದಾಳಿಯನ್ನು ಸಂಘಟಿಸಿದ್ದು ಎಂದು ಬೊಬ್ಬೆ ಹೊಡೆದಿದ್ದರು. ಅದನ್ನು ಕೇಳಿಯೂ ಪ್ರತಿಪಕ್ಷಗಳು, ಪ್ರಗತಿಪರ ಸಂಘಟನೆಗಳು ಸುಮ್ಮನಿರಬೇಕಿತ್ತೆ? ಬೊಬ್ಬೆ ಹಾಕಬಾರದಿತ್ತೆ?

ಆಯೋಗದ ಮುಂದೆ ಪ್ರತಿಪಕ್ಷಗಳು, ಪ್ರಗತಿಪರ ಸಂಘಟನೆಗಳು ಪ್ರಮಾಣಪತ್ರ ಸಲ್ಲಿಸದೆ, ಸಾಕ್ಷ್ಯ ಒದಗಿಸದೆ ಬೇಜವಾಬ್ದಾರಿ ತೋರಿವೆ ಎಂಬುದು ಇನ್ನೊಂದು ಆರೋಪ. ದಾಳಿಗೆ ಒಳಗಾದ ಕ್ರಿಶ್ಚಿಯನ್ ಸಮುದಾಯದ ಸಂಘಟನೆಗಳು, ಚರ್ಚ್ ಮುಖ್ಯಸ್ಥರು, ಸಾರ್ವಜನಿಕರು ಸಾಕ್ಷ್ಯಗಳನ್ನು ಕೊಟ್ಟಿಲ್ಲವೇ? ವಿಚಾರಣೆಯಲ್ಲಿ ಹಾಜರಾಗಿ ತಮ್ಮ ಮೇಲಾದ ದೌರ್ಜನ್ಯದ ವಿವರಗಳನ್ನು ದಾಖಲಿಸಿರಲಿಲ್ಲವೇ? ದಾಳಿಗೊಳಗಾದವರ ಸಾಕ್ಷ್ಯಗಳೇ ಇರುವಾಗ ಮೂರನೆಯವರ ಸಾಕ್ಷ್ಯಗಳು ಏಕೆ ಬೇಕು?

ಈ ಸಂಘಟನೆಗಳು ಕೇವಲ ಪ್ರಚಾರಕ್ಕಾಗಿ ಮತ್ತು ಸಂಘಪರಿವಾರವನ್ನು ವಿರೋಧಿಸುವ ಏಕೈಕ ದುರುದ್ದೇಶದಿಂದ ಆರೋಪಗಳನ್ನು ಮಾಡಿವೆ ಎನ್ನುವುದು ಸಾಬೀತಾದಂತಾಗಿದೆ ಎಂದು ಈ ಸಂಪಾದಕೀಯದಲ್ಲಿ ಅಂತಿಮ ತೀರ್ಪು ನೀಡಲಾಗಿದೆ.

ಹಾಗಿದ್ದರೆ ಭಜರಂಗದಳದ ಆಗಿನ ಸಂಚಾಲಕ ಮಹೇಂದ್ರ ಕುಮಾರ್ ಇದನ್ನು ನಾವೇ ಮಾಡಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದು ಸುಳ್ಳೇ? ತನ್ನ ಕೃತ್ಯಗಳನ್ನು ಸಂಘಟನೆಯೇ ಸಮರ್ಥಿಸಿಕೊಂಡ ನಂತರವೂ ಅನುಮಾನ ಎಲ್ಲಿ ಉಳಿಯಿತು? ದಾಳಿ ಎಸಗಿದವರೇ ಒಪ್ಪಿಕೊಂಡ ನಂತರ, ಅವರ ವಿರುದ್ಧ ನೀಡುವ ಹೇಳಿಕೆ ದುರುದ್ದೇಶದ ಆರೋಪ ಹೇಗಾಗುತ್ತದೆ?

ಹಾಗಂತ ಈ ಸಂಪಾದಕೀಯ ಪ್ರಕಟಗೊಂಡಿರುವುದು ಬೇರೆ ಯಾವ ಪತ್ರಿಕೆಯಲ್ಲೂ ಅಲ್ಲ, ಕನ್ನಡದ ಅತ್ಯಂತ ವಿಶ್ವಾಸಾರ್ಹ ದಿನಪತ್ರಿಕೆ ಪ್ರಜಾವಾಣಿಯಲ್ಲಿ. ಪ್ರಗತಿಪರ ಸಂಘಟನೆಗಳು, ಜಾತ್ಯತೀತ ಸಂಘಟನೆಗಳು ಕೇವಲ ಪ್ರಚಾರಕ್ಕಾಗಿ ಮತ್ತು ಸಂಘಪರಿವಾವನ್ನು ವಿರೋಧಿಸುವ ಏಕೈಕ ದುರುದ್ದೇಶದಿಂದ ಆರೋಪಗಳನ್ನು ಮಾಡಿವೆ ಎನ್ನುವುದು ಸಾಬೀತಾಗಿದೆ ಎಂದು ಹೇಳುವ ಮೂಲಕ ಪ್ರಜಾವಾಣಿ ಸಹ ಕೇಶವಕೃಪದ ಸೇವೆಗೆ ನಿಂತಿದೆ. ಹಿಂದೆ ವಿಜಯ ಕರ್ನಾಟಕದಲ್ಲಿ ಪ್ರಗತಿಪರರನ್ನು, ಬುದ್ಧಿಜೀವಿಗಳನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ಆ ರೋಗ ಪ್ರಜಾವಾಣಿಗೂ ಅಂಟಿಕೊಂಡಿದೆ.

ಇದು ಪ್ರಜಾವಾಣಿ ಈಗ ಬಂದು ತಲುಪಿರುವ ಸ್ಥಿತಿ.

ಮರೆತಿದ್ದ ಮಾತು: ಪ್ರಜಾವಾಣಿ ತನ್ನ ನಿಲುವು ಬದಲಿಸಿದೆಯೇ ಎಂಬ ಪ್ರಶ್ನೆ ಇಟ್ಟುಕೊಂಡು ನಡೆಸುತ್ತಿರುವ ಸಮೀಕ್ಷೆ ಸಾಗಿದೆ. ಇನ್ನೂ ಓಟ್ ಮಾಡದವರು ಮರೆಯದೆ ಮಾಡಿ. ನಿಮ್ಮ ಕಂಪ್ಯೂಟರ್‌ನಿಂದ ನೀವು ಒಂದು ಬಾರಿ ಮಾತ್ರ ಓಟ್ ಮಾಡಬಹುದು. ನಿಮ್ಮ ಓಟನ್ನು ಬದಲಿಸುವ ಅವಕಾಶವೂ ನಿಮಗಿದೆ.
0 komentar

Blog Archive