ಹಂಪಿ ಉತ್ಸವಕ್ಕೆ ವೈಭವದ ತೆರೆ ಬಿದ್ದಿದೆ. ಹಂಪಿ ಉತ್ಸವದಲ್ಲಿ ದಿಢೀರನೆ ಎದ್ದುನಿಂತ ಬಣ್ಣ ಬಣ್ಣದ ಬೆಳಕು, ಅಬ್ಬರ ಎಲ್ಲವನ್ನೂ ಕಳೆದುಕೊಂಡು ಕಲ್ಲುಬಂಡೆಗಳು ಪುನಃ ಮಹಾಮೌನಕ್ಕೆ ಶರಣಾಗಿವೆ.

ಮೂರುದಿನದ ಉತ್ಸವದಲ್ಲಿ ಬಿದ್ದಿರುವ ಕಸದರಾಶಿಯನ್ನು ಜಾಡಮಾಲಿಗಳು ಸ್ವಚ್ಛಗೊಳಿಸುತ್ತಿದ್ದಾರೆ. ಇತಿಹಾಸದ ಕಸವನ್ನು ದುಡಿಯುವ ಜನ ವರ್ತಮಾನದ ಪೂರಕೆಯಿಂದ ಸ್ವಚ್ಛಗೊಳಿಸುತ್ತಲೇ ಬಂದಿದ್ದಾರೆ. ಎಲ್ಲವನ್ನೂ ನೋಡುತ್ತಲೇ ಬಂದ ತುಂಗಾಭದ್ರೆ ಎಲ್ಲವನ್ನೂ ಒಡಲಲ್ಲಿ ಹುದುಗಿಸಿಟ್ಟುಕೊಂಡು ನಿರುಮ್ಮಳವಾಗಿ, ನಿತ್ಯನೂತನ ಚೈತನ್ಯದಾಯಿಕೆಯಾಗಿ ಹರಿಯತ್ತಾ ಇದ್ದಾಳೆ.

ಹಂಪಿ ಉತ್ಸವ ನೀಡಿದ ಸಂದೇಶವಾದರೂ ಏನು? ಈ ಪ್ರಶ್ನೆಯನ್ನು ಮಾಧ್ಯಮಗಳಾದರೂ ಕೇಳಬೇಕಿತ್ತು. ಅವು ಕೇಳಲೇ ಇಲ್ಲ. ಉತ್ಸವದುದ್ದಕ್ಕೂ ಕಾಡಿದ ಅನೇಕ ಪ್ರಶ್ನೆಗಳಿಗೆ ಮಾಧ್ಯಮಗಳು ಮುಖಾಮುಖಿ ಆಗಲೇ ಇಲ್ಲ. ಕ್ಲೀಷೆಯಾಗಿರುವ ಪದಪುಂಜಗಳನ್ನು ಬಳಿಸಿ, ಸ್ಥಳೀಯ ಪೇಜುಗಳನ್ನು ತುಂಬಿಸಲು ಹಗಲು-ರಾತ್ರಿ ಹೆಣಗಿದ ಮಾಧ್ಯಮದವರನ್ನು ನೋಡಿದರೆ ಗಣಿ ಕಾರ್ಮಿಕರು ನೆನಪಾಗುತ್ತಿದ್ದರು.

೩೦೦ ಎಕರೆ ಪ್ರದೇಶದಲ್ಲಿ ೩೦೦ ಕೋಟಿ ರೂ. ಹಣದಲ್ಲಿ ನಿರ್ಮಾಣವಾಗುವ ಥೀಮ್ ಪಾರ್ಕು ಯಾವ ಉದ್ದೇಶ ಹೊಂದಿದೆ. ಅದರ ಘನ ಸಾಧನೆ ಏನು? ಅದಕ್ಕೂ ಈ ಹಂಪಿಗೂ ಇರುವ ಸಂಬಂಧವಾದರೂ ಏನು? ವಿಜಯನಗರ ಪಟ್ಟಣವನ್ನು ಪುನಃ ಕಟ್ಟುವ ಅಗತ್ಯ ಏನಿದೆ? ಇಂತಹ ಪ್ರಶ್ನೆಗೆ ಮಾಧ್ಯಮಗಳು ಮುಖಾಮುಖಿ ಆಗಬೇಕಿತ್ತು. ಗಣಿಗಾರಿಕೆಯ ಅಬ್ಬರದಲ್ಲಿ ಹಂಪಿ-ಹೊಸಪೇಟೆಗಳಷ್ಟೇ ಅಲ್ಲದೆ ಇಡೀ ಬಳ್ಳಾರಿ ಜಿಲ್ಲೆ ಅನುಭವಿಸುತ್ತಿರುವ ಪ್ರಾಕೃತಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸಮಸ್ಯೆಗಳೇನು? ಅವುಗಳಿಗೆ ಉತ್ತರವೇನು? ಕನ್ನಡದ ಶ್ರೇಷ್ಠ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿಗೆ ಗಣಿಧೂಳಿನಿಂದ ಮುಕ್ತಿ ಯಾವಾಗ? ಈ ಪ್ರಶ್ನೆಗಳು ಪ್ರಸ್ತುತವಾಗಿರಲಿಲ್ಲವೇ?

ಅದು ಹೋಗಲಿ, ಮೂರು ದಿನ ಉತ್ಸವದಲ್ಲಿ ಎಲ್ಲವೂ ಶ್ರೀಕೃಷ್ಣದೇವರಾಯ ಮುಖ್ಯವೇದಿಕೆಗೆ ಸೀಮಿತವಾದರೆ ಉಳಿದ ವೇದಿಕೆಗಳ ಗತಿ ಏನು? ಅಲ್ಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಗುಣಮಟ್ಟ, ಜನರ ಸ್ಪಂದನೆ ಈ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಲೇ ಇಲ್ಲ. ಮುಖ್ಯವೇದಿಕೆಯಲ್ಲಿ ಲೇಸರ್ ಬೆಳಕಿನ ಸಂಭ್ರಮ. ಹೀಗಾಗಿ, ಬೆಳಕಿದ್ದಲ್ಲಿ ವರದಿ ಎನ್ನುವಂತೆ ಆಯಿತು.

ಪ್ರಜಾವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ ತಾಲೂಕು ವರದಿಗಾರರನ್ನು ಇತರ ವೇದಿಕೆಗಳಿಗೆ ಸಾಗಹಾಕಿ ವರದಿ ಮಾಡಿಸಿ, ಪೇಜು ತುಂಬಿಸಿದವು. ಜಿಲ್ಲಾ ವರದಿಗಾರು, ಅವರಿಗಿಂತ ಹಿರಿಯರು ಮುಖ್ಯವೇದಿಕೆಯಲ್ಲೇ ಝಂಡಾ ಹೂಡಿದ್ದರು.

ಮೂರು ದಿನವೂ ಉತ್ಸವದಲ್ಲಿದ್ದ ಕವಿ ಚೆನ್ನವೀರ ಕಣವಿಯನ್ನು ಮಾತನಾಡಿಸಿದ ಸಂಯುಕ್ತ ಕರ್ನಾಟಕ ಉತ್ಸವದಲ್ಲಿ ವಿಚಾರ ಬೇಡವೇ? ಉತ್ಸವದ ನಡೆ ಯಾವ ಕಡೆ? ಎನ್ನುವ ಅತ್ಯಗತ್ಯ ಪ್ರಶ್ನೆಗಳ ಮೂಲಕ ಉತ್ಸವದ ಸಾಕ್ಷಿ ಪ್ರಜ್ಞೆಯನ್ನು ಹಿಡಿದಿಡುವ ಪ್ರಯತ್ನವನ್ನು ತನ್ನ ಮಿತಿಯಲ್ಲಿ ಆದರೂ ಮಾಡಿತು. ಉಳಿದ ಪತ್ರಿಕೆಗಳು ಅದನ್ನೂ ಮಾಡಲಿಲ್ಲ. ಪ್ರಜಾವಾಣಿಯು ಉತ್ಸವದ ಕೊನೆಯ ದಿನ, ಲೈಟ್ ಟು ಹಂಪಿ ವಿಶೇಷ ವರದಿ ಮಾಡಿದರೂ ಅದು ಕೂಡಾ ಅಧಿಕಾರಿಗಳು ನೀಡಿದ ಪ್ರೆಸ್‌ನೋಟಿನಂತಿತ್ತು. ಹಂಪಿಯಲ್ಲಿ ಹಗಲು ಏಕಾಂಗಿಯಾಗಿ ಸಂಚರಿಸುವುದೇ ಆಪಾಯ ಆಗಿರುವಾಗ ರಾತ್ರಿ ಜನ ಬಂದು ಹೇಗೆ ನೋಡುತ್ತಾರೆ? ರಾತ್ರಿ ಪುನಃ ಅವರು ಹೊಸಪೇಟೆಗೆ ಹೋಗುವುದು ಹೇಗೆ? ವಾಹನ ವ್ಯವಸ್ಥೆ ಎಲ್ಲಿದೆ ಎಂದು ಕೇಳಿಕೊಂಡಿದ್ದರೆ ಹೊಸ ಲೈಟ್ ಕಾಣುತ್ತಿತ್ತು. ಪದ್ಯ ಇಷ್ಟು ಲೈಟ್ ಆದರೆ ಹೇಗೆ ಸ್ವಾಮಿ ಎನ್ನುವಂತೆ ಮಾಧ್ಯಮಗಳು ಎಲ್ಲವನ್ನೂ ಲೈಟ್ ಆಗಿ ತೆಗೆದುಕೊಂಡವು.

ತೆಲುಗು ನಟಿ ಶ್ರೇಯಾ ಕನ್ನಡ ಹಾಡಿಗೆ, ಆ ಹಾಡಿಗೆ ಸಂಬಂಧವಿಲ್ಲದಂತೆ ನರ್ತಿಸಿದ್ದನ್ನೇ ವರ್ಣಿಸಿ ಬರೆದು ದಣಿದ ಪತ್ರಕರ್ತರು, ಸಾಂಸ್ಕೃತಿಕ ವರದಿಗಾರಿಕೆ ಅನ್ನುವುದು ಕನ್ನಡ ಪತ್ರಿಕೆಗಳಲ್ಲಿ ಇದೆಯೇ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದರು.

ಕಮಲಾಪುರದ ಮಯೂರ ಭುವನೇಶ್ವರಿ ಹೊಟೇಲ್ ಆವರಣದಲ್ಲಿರುವ ವೇದಿಕೆಯ ಕಾರ್ಯಕ್ರಮಗಳು ಕೇಳಲಾರದಂತೆ ಅಲ್ಲಿಯ ಸನಿಹದಲ್ಲಿದ್ದ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯೆಂಬ ರಾಕ್ಷಸನ ಅಟ್ಟಹಾಸ ನಡೆದಿತ್ತು. ಇದು ಒಟ್ಟು ಹಂಪಿ ಉತ್ಸವದ ರೂಪಕವಾಗಿತ್ತು. ಇನ್ನು ಪಿಸು ಮಾತುಗಳಿಗೆ, ಸೂಕ್ಷ್ಮತೆಗೆ, ಚರ್ಚೆ, ಸಂವಾದಕ್ಕೆ, ವಿಚಾರಕ್ಕೆ ಇನ್ನೆಲ್ಲಿ ಜಾಗ?

ವಿಜಯನಗರ ಸಾಮ್ರಾಜ್ಯ ಉಚ್ಛ್ರಾಯ ಸ್ಥಿತಿಯಲ್ಲಿರುವಾಗಲೇ ಅಷ್ಟದಿಗ್ಗಜರ ಕವಿಗಳ ಸಾಲಿನಲ್ಲಿ ನಿಲ್ಲದೆ, ಅರಸನ ದಾಸರಾಗದೇ ಕನಕ-ಪುರಂದರರು ವಿಜಯನಗರದ ರಾಜಬೀದಿಯಲ್ಲಿ ನಿಂತು ಲೊಳಲೊಟ್ಟೆ ಇದು ಲೊಳಲೊಟ್ಟೆ ಎಂದು ಹಾಡಿದ್ದರು. ಈ ಕಾಲದಲ್ಲೂ ಅದೇ ಧ್ವನಿ ಹಂಪಿಯ ಕಲ್ಲು ಬಂಡೆಗಳಲ್ಲಿ ಪ್ರತಿಧ್ವನಿಸಿದವು. ಇದನ್ನು ಕೇಳುವ ಕಿವಿ ಕಿವುಡಾಗಿದೆ. ಕಣ್ಣು ಕುರುಡಾಗಿದೆ. ಬಾಯಿ ಸತ್ತು ಹೋಗಿದೆ. ಗ್ಲಾಮರ್ ಆಕರ್ಷಣೆಗಾಗಿ ನಡೆದ ಎರವಲು ಸಾಂಸ್ಕೃತಿಕ ಕಾರ್ಯಕ್ರಮಗಳಿಂದಾಗಿ ಕನ್ನಡ ಸಂಸ್ಕೃತಿ ಇಲ್ಲಿ ನೇಪಥ್ಯಕ್ಕೆ ಸರಿಯಿತು.

ಇದನ್ನೆಲ್ಲ ಹೇಳಬೇಕಾದವರು ಯಾಕೋ ಏನೋ ಹೇಳಲೇ ಇಲ್ಲ.
0 komentar

Blog Archive