ಹುತಾತ್ಮ ಭಗತ್ ಸಿಂಗ್‌ರನ್ನು ನೇಣಿಗೆ ಏರಿಸಿದ ದಿನ ಯಾವುದು? ಎಲ್ಲರಿಗೂ ಗೊತ್ತಿರುವ ಹಾಗೆ ಅದು ಮಾ.೨೩. ಭಾರತದ ಮೊದಲ ಮಾರ್ಕ್ವಿಸ್ಟ್‌ಗಳಲ್ಲಿ ಒಬ್ಬರಾಗಿದ್ದ ಭಗತ್ ಅಪ್ಪಟ ನಾಸ್ತಿಕ ಮತ್ತು ಜಾತೀಯತೆಯ ವಿರೋಧಿ. ಭಗತ್ ಸಿಂಗ್ ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಮರೆಯಲಾಗದ ಹೆಸರು. ಸುಖದೇವ್, ರಾಜಗುರು ಹಾಗು ಭಗತ್ ಸಿಂಗ್‌ರನ್ನು ಲಾಹೋರ್‌ನಲ್ಲಿ ಬ್ರಿಟಿಷ್ ಸರ್ಕಾರ ೧೯೩೧ರ ಮಾ.೨೩ರಂದು ಗಲ್ಲಿಗೇರಿಸಿತು.

ಆದರೆ ಪ್ರಮೋದ್ ಮುತಾಲಿಕ್ ಎಂಬ ಸ್ವಘೋಷಿತ ಹಿಂದೂ ಮುಖಂಡನ ಪ್ರಕಾರ ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಿದ್ದು ಫೆ.೧೪ರಂದು!

ನಿನ್ನೆ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಟಿವಿ೯ ವಿಶೇಷ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿತು. ಶಿವಪ್ರಸಾದ್ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದರು. ದೂರವಾಣಿ ಕರೆಗಳನ್ನೂ ತೆಗೆದುಕೊಳ್ಳಲಾಗುತ್ತಿತ್ತು. ಕರೆ ಮಾಡಿದ ಒಬ್ಬಾತ, ಇವತ್ತು ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಿದ ದಿನ, ನಾವು ಹುತಾತ್ಮರನ್ನು ನೆನೆಯುವುದರ ಬದಲು ಪ್ರೇಮಿಗಳ ದಿನಾಚರಣೆ ಆಚರಿಸುವುದು ಎಷ್ಟು ಸರಿ ಎಂದ. ಇದನ್ನು ಕೇಳಿದ ಪ್ರಮೋದ್ ಮುತಾಲಿಕ್, ಹೌದು ಹೌದು. ಇವತ್ತು ಭಗತ್‌ರನ್ನು ಗಲ್ಲಿಗೇರಿಸಿದ ದಿನ ಎಂದು ಹೇಳಿಬಿಟ್ಟರು.

ಕಾರ್ಯಕ್ರಮ ನಡೆಸುತ್ತಿದ್ದ ಶಿವಪ್ರಸಾದ್ ಈ ಬಗ್ಗೆ ಏನೂ ಹೇಳಲಿಲ್ಲ. ಪ್ರೇಮಿಗಳ ದಿನಾಚರಣೆಯ ವಿರೋಧಿಗಳು ಹೀಗೆ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂಬುದು ಶಿವಪ್ರಸಾದ್‌ಗೆ ಮೊದಲೇ ಗೊತ್ತಿದ್ದರೆ, ದಿನಾಂಕವನ್ನು ಗೊತ್ತುಪಡಿಸಿಕೊಂಡು ಅವರನ್ನು ಗಲ್ಲಿಗೇರಿಸಿದ್ದು ಫೆ.೧೪ ಅಲ್ಲ, ಮಾ.೨೩ ಎಂದು ಹೇಳುತ್ತಿದ್ದರೇನೋ? ಆದರೆ ಅಚಾನಕ್ಕಾಗಿ ಮುತಾಲಿಕ ಮತ್ತು ಶಿಷ್ಯರು ಫೆ.೧೪ರಂದೇ ಭಗತ್‌ರನ್ನು ಗಲ್ಲಿಗೇರಿಸಿಬಿಟ್ಟರು!

ಅಸಲಿ ವಿಷಯವೇನೆಂದರೆ, ನಿನ್ನೆ ಬೆಳಗ್ಗೆಯಿಂದಲೇ On 14/2/1931 LAHORE, in morning time the legendary  BHAGATH SINGH, RAJAGURU, SUKHDEV were hanged to their deaths. BUT We only celebrate Valentine day. Lets pass this message to everybody and salute their sacrifice. BE AN INDIAN FIRST…   ಎಂಬ ಮೆಸೇಜನ್ನು ಮೊಬೈಲ್‌ಗಳಲ್ಲಿ ಹರಿಬಿಡಲಾಗಿತ್ತು. ಇಂಥ ಸುಳ್ಳುಗಳನ್ನು ಹರಡುವ ವಿಘ್ನಸಂತೋಷಿಗಳು ಇದರಿಂದ ಯಾವ ಲಾಭ ಪಡೆದರೋ ಶ್ರೀರಾಮನೇ ಬಲ್ಲ.

ಈಗೀಗ ಪ್ರೇಮಿಗಳ ದಿನ ಅಂದರೆ ನಮ್ಮ ಟಿವಿ ಚಾನಲ್‌ನವರಿಗೆ ಮೊದಲು ನೆನಪಾಗುವುದೇ ಪ್ರಮೋದ್ ಮುತಾಲಿಕ್. ಶ್ರೀರಾಮಸೇನೆಯ ಎರಡು ಮತ್ತು ಮೂರನೇ ಹಂತದ ನಾಯಕರಿಗೂ ಟಿವಿ ಚಾನಲ್‌ಗಳ ಸ್ಟುಡಿಯೋಗಳಲ್ಲಿ ಜಾಗ ಸಿಗುತ್ತಿದೆ. ಮುತಾಲಿಕ್ ಪ್ರೇಮಿಗಳ ದಿನದಂದು ಎಷ್ಟು ಬಿಜಿ ಎಂಬುದಕ್ಕೆ ಇದು ಸಾಕ್ಷಿ.

ಅಷ್ಟಕ್ಕೂ ಶ್ರೀರಾಮಸೇನೆಯನ್ನು ಯಾಕೆ ಹೀಗೆ ಪ್ರೇಮಿಗಳ ದಿನದಂದು ಟಿವಿ ಪರದೆಗಳಲ್ಲಿ ವೈಭವೀಕರಿಸಲಾಗುತ್ತದೆ ಎಂಬುದೇ ಅರ್ಥವಾಗದ ವಿಷಯ.

ಪ್ರೇಮಿಗಳ ದಿನದ ಮುನ್ನಾದಿನ ಸುವರ್ಣ ನ್ಯೂಸ್‌ನಲ್ಲಿ ಜುಗಲ್‌ಬಂದಿ ನಡೆದಿತ್ತು. ಅಲ್ಲಿ ಭಾಗವಹಿಸಿದ್ದ ಶ್ರೀರಾಮಸೇನೆಯ ವ್ಯಕ್ತಿಯೋರ್ವ ಈ ಬಾರಿ ಗಲಾಟೆ, ಸಂಘರ್ಷ ಮಾಡೋದಿಲ್ಲ. ಪ್ರೇಮಿಗಳ ಫೋಟೋ ತೆಗೀತೀವಿ, ಅದನ್ನು ಅವರ ಮನೆಯವರಿಗೆ, ಪೊಲೀಸ್ ಠಾಣೆಗೆ ಕೊಡ್ತೀವಿ ಎಂದು ಹೇಳಿದ.

ಅಲ್ರೀ, ಹೀಗೆ ಯಾರದೋ ಫೋಟೋ ತೆಗೀತಿವಿ ಅಂತೀರಲ್ಲ, ಹಾಗೆ ಮಾಡುವುದರಿಂದ ವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡ ಹಾಗೆ ಆಗುವುದಿಲ್ಲವಾ? ಪ್ರೇಮಿಗಳು ಕೈ ಕೈ ಹಿಡಿದು ಓಡಾಡೋದು ಭಾರತ ದಂಡಸಂಹಿತೆಯ ಪ್ರಕಾರ ಅಪರಾಧನಾ? ಮತ್ತೇಕೆ ಫೋಟೋ ತೆಗೆದು ಪೊಲೀಸ್ ಠಾಣೆಗೆ ಕೊಡ್ತೀರಿ ಎಂದು ಕಾರ್ಯಕ್ರಮ ನಡೆಸುತ್ತಿದ್ದ ಎಚ್.ಆರ್.ರಂಗನಾಥ್, ಹಮೀದ್ ಪಾಳ್ಯ ಕೇಳಬಹುದಿತ್ತು, ಅವರು ಕೇಳಲಿಲ್ಲ.

ನಿನ್ನೆ ಟಿವಿ೯ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಪ್ರಮೋದ್ ಮುತಾಲಿಕ್, ಪ್ರೇಮಿಗಳ ದಿನ ಎನ್ನುವುದು ಕ್ರಿಶ್ಚಿಯನ್ನರ ಸಂಚು ಎಂದು ಅಬ್ಬರಿಸಿದರು. ಹೀಗೆ ಟಿವಿ ಸ್ಟುಡಿಯೋದಲ್ಲಿ ಕುಳಿತು ಕ್ರಿಶ್ಚಿಯನ್ನರ ಸಂಚು, ಮುಸ್ಲಿಮರ ಸಂಚು, ಹಿಂದೂಗಳ ಸಂಚು ಎಂದು ಹೇಳೋದು ಅಪರಾಧವಲ್ಲವೆ? ಮಾತನಾಡುವವರಿಗೆ ನಾಲಿಗೆ ಮೇಲೆ ಹಿಡಿತ ಬೇಡವೇ? ಹೀಗೆ ಮುತಾಲಿಕನನ್ನು ಸ್ಟುಡಿಯೋದಲ್ಲಿ ಕೂರಿಸಿಕೊಂಡು ಆತನಿಗೆ ಮನಸ್ಸಿಗೆ ಬಂದಂತೆ ಮಾತನಾಡಲು ಬಿಡುವುದು ಎಷ್ಟು ಸರಿ?

ಪ್ರೇಮಿಸಿ ಮದುವೆಯಾದವರು, ಪ್ರೇಮದ ಕುರಿತು ಹಾಡು ಕಟ್ಟಿದವರು-ಹಾಡಿದವರು, ಪ್ರೇಮಕ್ಕಾಗಿ ಹೊಸ ಇತಿಹಾಸ ನಿರ್ಮಿಸಿದವರು, ಪ್ರೇಮಕ್ಕೆ ಹೊಸ ಅರ್ಥ ಹುಡುಕಿದವರು, ಪ್ರೇಮಕ್ಕಾಗಿಯೇ ಬದುಕಿದವರು... ನ್ಯೂಸ್ ಚಾನಲ್‌ಗಳಿಗೆ ಇವರ‍್ಯಾರೂ ಸಿಕ್ಕುವುದಿಲ್ಲವೇ?

ಪ್ರತಿ ವರ್ಷ ಫೆ.೧೪ರಂದು ಅದೇ ಪ್ರಮೋದ ಮುತಾಲಿಕನ ಅಮಂಗಳ ಮುಖವನ್ನೇ  ನೋಡಿ ಪ್ರೇಮಿಗಳು ಮೂಡ್ ಕೆಡಿಸಿಕೊಳ್ಳಬೇಕಾ?

ಮುಂದಿನ ವರ್ಷವಾದರೂ ಇದರಿಂದ ಮುಕ್ತಿ ಕೊಡ್ತೀರಾ ಸರ್? ರಂಗನಾಥ್, ಹಮೀದ್, ಶಶಿಧರ ಭಟ್, ಚಂದ್ರೇಗೌಡ, ಶಿವಪ್ರಸಾದ್, ರೆಹಮಾನ್, ಲಕ್ಷ್ಮಣ್ ಹೂಗಾರ್ ಮತ್ತು ಇತರ ಎಲ್ಲ ಮಹನೀಯರಲ್ಲಿ ಇದು ನಮ್ಮ ವಿನಮ್ರ ಪ್ರಶ್ನೆ.
0 komentar

Blog Archive