ಹೌದು, ಸಮಯ ಚಾನಲ್ ಮಾರಾಟಕ್ಕಿದೆ. ಅದರ ಮಾಲೀಕರೊಂದಿಗೆ ಮಾತುಕತೆಯಲ್ಲಿದ್ದೇನೆ. ಆದರೂ ಇನ್ನೂ ಈ ಕುರಿತ ಒಡಂಬಡಿಕೆ ಇನ್ನೂ ಆಗಿಲ್ಲ.
ಬೆಂಗಳೂರು ಮಿರರ್ ಪತ್ರಿಕೆಗೆ ಎಚ್.ಡಿ.ಕುಮಾರಸ್ವಾಮಿ ಹೇಳಿರುವ ಮಾತು ಇದು.

ಸಮಯ ಟಿವಿಯನ್ನು ಕುಮಾರಸ್ವಾಮಿ ಕೊಳ್ಳಲಿದ್ದಾರೆ ಎಂಬ ಗುಸುಗುಸು ಸುದ್ದಿ ನಿಜವಾಗುವ ಸಮಯ ಹತ್ತಿರವಾಗುತ್ತಿರುವಂತೆ ಬೆಂಗಳೂರು ಮಿರರ್ ಪತ್ರಿಕೆ ಈ ಬಗ್ಗೆ ಮೊದಲು ಬೆಳಕು ಚೆಲ್ಲಿದೆ. 

ತುಂಬಾ ಆಸಕ್ತಿಕರವಾದ ವಿಷಯವೆಂದರೆ, ಕುಮಾರಸ್ವಾಮಿ ಇದನ್ನು ತಮ್ಮ ಗೆಳತಿ ರಾಧಿಕಾ ಅವರಿಗಾಗಿ ಸಮಯ ಚಾನಲ್ ಕೊಳ್ಳುತ್ತಿದ್ದಾರೆ ಎಂಬುದು. ಈ ಕುರಿತು ಬೆಂಗಳೂರು ಮಿರರ್ ಕುಮಾರಸ್ವಾಮಿಯವರನ್ನು ಕೇಳಿದೆ. ಹೌದಾ, ರಾಧಿಕಾ ಅವರಿಗಾಗಿ ಈ ಚಾನಲ್ ಕೊಳ್ಳುತ್ತಿದ್ದೀರಾ ಅಂದರೆ ಕುಮಾರಸ್ವಾಮಿ ಗಹಗಹಿಸಿ ನಕ್ಕರಂತೆ. ನಗುವಿಗೆ ನಾನಾರ್ಥಗಳಿರುತ್ತವೆ. ಅದು ಸಮ್ಮತಿ ಸೂಚಕವೂ ಆಗಿರಬಹುದು.

ಸದ್ಯ ಸುವರ್ಣ ನ್ಯೂಸ್‌ನ ಮುಖ್ಯಸ್ಥರಾಗಿರುವ ಎಚ್.ಆರ್.ರಂಗನಾಥ್‌ಗೂ ಅದರ ಮಾಲೀಕರಾದ ರಾಜೀವ್ ಚಂದ್ರಶೇಖರ್ ಅವರಿಗೂ ಅಷ್ಟಾಗಿ ಆಗಿಬರುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಲೇ ಇದ್ದವು. ಹೀಗಾಗಿ ನ್ಯೂಸ್ ಚಾನಲ್ ಆಗಲಿರುವ ಕಸ್ತೂರಿಗೆ ಅವರು ವಲಸೆ ಹೋಗುತ್ತಾರೆ ಎಂಬುದು ಗುಸುಗುಸು ಆಗಿತ್ತು. ಆದರೆ ಸಮಯ ಚಾನಲ್ ಕೊಂಡು ಕುಮಾರಸ್ವಾಮಿಯವರು ಅದನ್ನು ತಮ್ಮ ಆತ್ಮೀಯವಾಗಿರುವ ರಂಗನಾಥ್ ಅವರ ಉಸ್ತುವಾರಿಗೆ ಒಪ್ಪಿಸಲಿದ್ದಾರೆ ಎಂಬುದು ಹೊಸ ಸುದ್ದಿ.

ಅಷ್ಟಕ್ಕೂ ಕುಮಾರಸ್ವಾಮಿ ಕಸ್ತೂರಿ ಟಿವಿಯನ್ನು ನ್ಯೂಸ್ ಚಾನಲ್ ಮಾಡುತ್ತಿರುವಾಗ ಮತ್ತೊಂದು ನ್ಯೂಸ್ ಚಾನಲ್ ಕೊಳ್ಳುವ ಅಗತ್ಯವಾದರೂ ಏನಿತ್ತು? ಒಂದು ವೇಳೆ ಸಮಯವನ್ನು ಕೊಂಡರೆ ಕಸ್ತೂರಿಯನ್ನು ನ್ಯೂಸ್ ಚಾನಲ್ ಮಾಡುವ ಪ್ರಯತ್ನವನ್ನು ಕೈಬಿಡುತ್ತಾರಾ? ನಿಜಕ್ಕೂ ಸಮಯವನ್ನು ಅವರು ರಾಧಿಕಾಗಾಗಿ ಕೊಳ್ಳುತ್ತಿದ್ದಾರಾ? ರಂಗನಾಥ್ ಸುವರ್ಣ ನ್ಯೂಸ್ ಬಿಟ್ಟು ಸಮಯಕ್ಕೆ ಸೇರ್ಪಡೆಯಾಗುತ್ತಾರಾ? ಒಂದು ವೇಳೆ ರಂಗನಾಥ್ ಸಮಯದ ಉಸ್ತುವಾರಿ ವಹಿಸಿಕೊಂಡರೆ, ಈಗ ಚಾನಲ್ ಹೆಡ್ ಆಗಿರುವ ಶಶಿಧರ ಭಟ್ಟರ ಭವಿಷ್ಯವೇನು? ಸಮಯವೇ ಇದಕ್ಕೆ ಉತ್ತರ ಹೇಳಲಿದೆ.

ಕಸ್ತೂರಿ ಟಿವಿ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿಯವರ ಒಡೆತನದಲ್ಲಿದೆ. ರಾಧಿಕಾ ಮತ್ತು ಕುಮಾರಸ್ವಾಮಿಯವರ ಸಂಬಂಧದ ಕುರಿತು ಯಾವುದೇ ಸಂಶಯ ಈಗ ಉಳಿದುಕೊಂಡಿಲ್ಲ. ಅವರಿಗೆ ಶಮಿಕಾ ಎಂಬ ಮಗಳೂ ಇದ್ದಾಳೆ. ಹೀಗಾಗಿ ತಮ್ಮ ಮತ್ತೋರ್ವ ಪತ್ನಿಗಾಗಿ ಕುಮಾರಸ್ವಾಮಿ ಚಾನಲ್ ಕೊಳ್ಳುವ ವಿಷಯ ಈಗ ಮಾಧ್ಯಮರಂಗದಲ್ಲಿ ಹಾಟ್‌ಹಾಟ್ ಚರ್ಚೆಯಾಗಿದೆ.
0 komentar

Blog Archive