ಡಾ. ಎಂ.ಚಿದಾನಂದಮೂರ್ತಿಯವರಿಗೆ ಈ ಹಿಂದೆ ಸಂಪಾದಕೀಯವು ಬರೆದ ಪತ್ರದಲ್ಲಿ ವ್ಯಂಗ್ಯವೇ ಢಾಳಾಗಿ ಎದ್ದು ಕಾಣುತ್ತಿತ್ತು ಎನ್ನುವುದು ಹಲವರ ಆಕ್ಷೇಪ. ಅದು ಹಾಗಲ್ಲ, ಅವರ ಕುರಿತು ಅಪಾರ ಗೌರವ ಇಟ್ಟುಕೊಂಡೇ ಅವರ ನಿಲುವನ್ನು ಟೀಕಿಸಿದ್ದೆವು; ಇಂಗ್ಲಿಷ್‌ನಲ್ಲಿ ವಿತ್ ಆಲ್ ರೆಸ್ಟೆಕ್ಟ್ ಅನ್ನುತ್ತಾರಲ್ಲ ಹಾಗೆ.

ಚಿದಾನಂದಮೂರ್ತಿಯವರು ಇತಿಹಾಸ ಸಂಶೋಧಕರು, ಅದಕ್ಕೂ ಮಿಗಿಲಾಗಿ ಕನ್ನಡ ಶಕ್ತಿ ಕೇಂದ್ರದ ಮೂಲಕ ಕನ್ನಡ ಚಳವಳಿಯನ್ನು ಕಟ್ಟಿದವರು. ಆದರೆ ಬರಬರುತ್ತ ಅವರ ಆಸಕ್ತಿ ಮತ್ತು ಕಾಳಜಿಗಳು ಕವಲೊಡೆಯುತ್ತ ಬಂದವು. ಹಾರ್ಡ್‌ಕೋರ್ ಆರ್‌ಎಸ್‌ಎಸ್‌ಗಳಂತೆ ಮಾತನಾಡಲು ಶುರು ಮಾಡಿದರು. ಮುಸ್ಲಿಮರು, ಕ್ರಿಶ್ಚಿಯನ್ನರ ವಿರುದ್ಧ ವಿಷ ಕಾರತೊಡಗಿದರು.

ಸ್ವಭಾವತಃ ಪ್ರಾಮಾಣಿಕರು, ಮುಗ್ಧರು, ಭಾವುಕರೂ ಆದ ಚಿದಾನಂದಮೂರ್ತಿಯವರು ಪಾರದರ್ಶಕವಾಗಿ ಬದುಕಿದವರು. ಎಸ್.ಎಲ್ ಭೈರಪ್ಪನವರಂತೆ ಚಿಮೂ ಸ್ಟ್ರಾಟರ್ಜಿಸ್ಟ್ ಅಲ್ಲ. ಆದರೆ ಮುಸ್ಲಿಮರ ಬಗ್ಗೆ, ಕ್ರಿಶ್ಚಿಯನ್ನರ ಬಗ್ಗೆ ಅವರು ಈ ವಯಸ್ಸಿನಲ್ಲಿ ಆಡುತ್ತಿರುವ ಮಾತುಗಳನ್ನು ನೋಡಿದರೆ, ಅವರ ಮಾನಸಿಕ ಸ್ಥಿತಿಯ ಬಗ್ಗೆಯೇ ಅನುಮಾನ ಹುಟ್ಟಿಸುತ್ತಿದೆ.

ಕನ್ನಡ ಜಾಗೃತಿಯ ಕೆಲಸ ತನ್ನಿಂದ ಸಂಪೂರ್ಣವಾಗಿ ಆಗಿಲ್ಲ ಎಂದು ನೊಂದ ಚಿದಾನಂದಮೂರ್ತಿಯವರು ಹಿಂದೆ ಹಂಪಿಯ ಪಂಪಾ ಕ್ಷೇತ್ರದ ತುಂಗಭದ್ರಾ ನದಿಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. (ಚಿಮೂ ಅವರು ಇದನ್ನು ಆತ್ಮಹತ್ಯೆ ಪ್ರಯತ್ನ ಎನ್ನುವುದಿಲ್ಲ; ಜಲಪ್ರವೇಶ ಎನ್ನುತ್ತಾರೆ!) ಹೀಗೆ ತುಂಗಭದ್ರಾ ನದಿಯಲ್ಲಿ ಲೀನವಾಗಿ ಹೋಗುವ ತೀರ್ಮಾನ ಮಾಡಿದಾಗ ಅವರು ಡಾ.ಎಲ್.ಎಸ್.ಶೇಷಗಿರಿರಾವ್ ಅವರಿಗೆ ಸುಮಾರು ೧೫ ಪುಟಗಳ ಪತ್ರವೊಂದನ್ನು ಬರೆದಿದ್ದರು. ಸತ್ತಮೇಲೂ ಕನ್ನಡ ಚಳವಳಿಗಾರರಿಗೆ ನಾನು ಪಾಂಚಜನ್ಯವಾಗಿ ಸ್ಫೂರ್ತಿ ನೀಡುತ್ತೇನೆ. ಕನ್ನಡದ ಶತ್ರುಗಳನ್ನು ಪ್ರೇತಾತ್ಮವಾಗಿ ಕಾಡುತ್ತೇನೆ ಎಂದು ಅವರು ಆ ಪತ್ರದಲ್ಲಿ ಬರೆದಿದ್ದರು.

ಚಿದಾನಂದಮೂರ್ತಿಯವರು ಎಷ್ಟು ಮುಗ್ಧರು ಎಂಬುದಕ್ಕೆ ಇದು ಸಾಕ್ಷಿ.

ಆದರೆ ಈ ಮುಗ್ಧತೆಯು ಅವರನ್ನು ಎಷ್ಟು ಅಪಾಯಕಾರಿಯಾದ ನಿಲುವುಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸಿದೆ ಎಂಬುದನ್ನು ಗಮನಿಸಿದರೆ ಆತಂಕವಾಗುತ್ತದೆ.

ಇವತ್ತಿನ ಪ್ರಜಾವಾಣಿ ನೋಡಿ. ಚಿಮೂ ಅವರ ಪತ್ರಿಕಾಗೋಷ್ಠಿಯ ವಿವರಗಳು ಪ್ರಕಟವಾಗಿವೆ. ಕ್ರೈಸ್ತರೇ ನೈಜ ಕೋಮುವಾದಿಗಳು ಎಂಬುದು ವರದಿಯ ಶೀರ್ಷಿಕೆ. ಏನು ಹಾಗೆಂದರೆ? ಕ್ರೈಸ್ತರಲ್ಲಿ ಕೆಲವರು ಅಂತಲೋ, ಕ್ರೈಸ್ತರಲ್ಲಿ ಬಹಳಷ್ಟು ಮಂದಿ ಎಂದೋ ಅವರು ಬಳಸಿಲ್ಲ. ಇಡೀ ಕ್ರೈಸ್ತ ಸಮುದಾಯವನ್ನು ಕೋಮುವಾದಿ ಎಂದು ಬಣ್ಣಿಸಿದ್ದಾರೆ. ಇದನ್ನು ಹೇಗೆ ಗ್ರಹಿಸುವುದು? ಜಗತ್ತಿನ ಕ್ರೈಸ್ತರೆಲ್ಲ ಕೋಮುವಾದಿಗಳಾಗಿದ್ದರೆ ಹೇಗಿರುತ್ತಿತ್ತು?

ಇನ್ನು ೩೦೦ ವರ್ಷಗಳಲ್ಲಿ ಹಿಂದೂ ಧರ್ಮ ನಾಶವಾಗಲಿದೆ ಎಂದು ಚಿದಾನಂದಮೂರ್ತಿಯವರು ಹೇಳಿಕೆ ನೀಡಿದ್ದಾರೆ. ಸತ್ತ ಮೇಲೆ ಕನ್ನಡದ ಶತ್ರುಗಳನ್ನು ಪ್ರೇತಾತ್ಮವಾಗಿ ಕಾಡುತ್ತೇನೆ ಎಂಬ ಅವರ ಹಿಂದಿನ ಹೇಳಿಕೆಯಷ್ಟೆ ಇದು ಬಾಲಿಷ. ಒಬ್ಬ ಸಂಶೋಧಕ ತಲುಪಿರುವ ಮಾನಸಿಕ ಸ್ಥಿತಿ ಇದು.

ಕ್ರೈಸ್ತರ ಮೇಲೆ, ಮುಸಲ್ಮಾನರ ಮೇಲೆ ಚಿದಾನಂದ ಮೂರ್ತಿಯವರು ಯಾಕಿಷ್ಟು ನಂಜು ಕಾರುತ್ತಿದ್ದಾರೆ? ತುಂಗಭದ್ರಾ ನದಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿ, ಮುಳುಗಿದರಲ್ಲ ಚಿದಾನಂದ ಮೂರ್ತಿಯವರು; ಆಗ ಅವರನ್ನು ಕಾಪಾಡಿದ್ದು ಯಾರು?
ಒಬ್ಬ ಅಂಬಿಗ, ಆತ ಮುಸ್ಲಿಮ್.

ಚಿದಾನಂದ ಮೂರ್ತಿಯವರ ವಿತಂಡವಾದ, ವಿಷ ಕಾರುವ ಹೇಳಿಕೆಗಳು.. ಇತ್ಯಾದಿಗಳ ಬಗ್ಗೆ ಚರ್ಚೆ ಸಾಕು ಅನ್ನಿಸುತ್ತೆ ಅಲ್ಲವೇ?
0 komentar

Blog Archive