ಜ್ಯೋತಿಷಿ ನರೇಂದ್ರ ಬಾಬು ಶರ್ಮನ ಕುರಿತಾಗಿ ಗಂಭೀರವಾದ ವಿಷಯಗಳನ್ನು ಓದುಗರು ಬರೆದು ಹೇಳುತ್ತಿದ್ದಾರೆ. ಈ ವ್ಕಕ್ತಿ ಲೈವ್ ಕಾರ್ಯಕ್ರಮಗಳಲ್ಲಿ ದೂರವಾಣಿ ಕರೆ ಮಾಡುವ ವೀಕ್ಷಕರ ಜತೆ ತೀರಾ ಕೆಟ್ಟದಾಗಿ, ಕೊಳಕು ಭಾಷೆಯಲ್ಲಿ ಮಾತನಾಡುತ್ತಾನೆ.

ಒಂದೆರಡು ಉದಾಹರಣೆಗಳು ಇಲ್ಲಿವೆ.

ಒಬ್ಬಾಕೆ ಕರೆ ಮಾಡಿ, ತನ್ನ ಗಂಡ ಬೇರೆ ಸ್ತ್ರೀ ಸಹವಾಸ ಮಾಡಿದ್ದಾನೆ. ಇದರಿಂದಾಗಿ ತನ್ನ ಮನಸ್ಥಿತಿ ಕೆಟ್ಟು ಹೋಗಿದೆ. ಏನಾದ್ರೂ ಪರಿಹಾರ ಕೊಡಿ ಎಂದು ಕೋರುತ್ತಾಳೆ. ನರೇಂದ್ರ ಬಾಬು ಶರ್ಮ ಆಕೆಯ ಜನ್ಮದಿನಾಂಕವನ್ನು ಗಮನಿಸಿ ಹೌದೋ, ನಿನ್ನ ಗಂಡ ಕೆಟ್ಟಿದ್ದಾನೋ? ನೀನು ಸರಿಯಾಗಿದ್ದೀಯಾ? ನಿನ್ನ ಜಾತಕ ಹೇಳಲಾ ನಾನು? ನಿನಗೆ ಯಾರೊಂದಿಗೆ ಸಂಬಂಧವಿದೆ ಹೇಳಲಾ? ಎಂದು ಅಬ್ಬರಿಸುತ್ತಾನೆ.

ಅತ್ತ ಗಾಬರಿ, ಆಘಾತದಿಂದ ಕರೆ ಮಾಡಿದಾಕೆ ಸಂಪರ್ಕ ಕಡಿತ ಮಾಡುತ್ತಾಳೆ. ನೋಡಿದ್ರಾ, ಅವಳ ಜಾತಕ ಹೇಳುವಷ್ಟರಲ್ಲಿ ಆಕೆ ಹೇಗೆ ಕರೆ ಕಟ್ ಮಾಡಿದಳು ಎಂದು ನರೇಂದ್ರ ಬಾಬು ಶರ್ಮ ವಿಕೃತವಾಗಿ ನಗುತ್ತಾನೆ. ಆಘಾತಕ್ಕೆ ಒಳಗಾದ ಹೆಣ್ಣುಮಗಳ ಕಥೆ ಏನಾಯ್ತು? ಆಕೆ ಚೇತರಿಸಿಕೊಂಡಳಾ? ಗೊತ್ತಿಲ್ಲ.

ನರೇಂದ್ರ ಶರ್ಮನ  ದೃಷ್ಟಿಯಲ್ಲಿ ಹೆಣ್ಣುಮಕ್ಕಳೆಂದರೆ ಲಕ್ಷಣವಾಗಿ ಸೀರೆ ಉಟ್ಟು, ಕೈ ತುಂಬಾ ಬಳೆ ತೊಟ್ಟು, ಹಣೆಯಲ್ಲಿ ರುಪಾಯಿ ಗಾತ್ರದ ಸಿಂಧೂರ ಧರಿಸಿಕೊಂಡಿರಬೇಕು. ತನ್ನ ಕಾರ್ಯಕ್ರಮದಲ್ಲಿ ಆತ ಹೆಣ್ಣುಮಕ್ಕಳನ್ನು ಆಗಾಗ ಕಿಂಡಲ್ ಮಾಡುತ್ತಲೇ ಇರುತ್ತಾನೆ.

ಈಗಿನ ಕಾಲದ ಹೆಂಗುಸ್ರು, ಅವರ ವೇಷನೋ, ಮುಂಡೇವು ಯಾಕೆ ಹುಟ್ಟಿದ್ವೋ ಅನ್ನಿಸುತ್ತೆ. ಹಣೆಯಲ್ಲಿ ಕುಂಕುಮವಿಲ್ಲ, ಕೈಯಲ್ಲಿ ಬಳೆಯಿಲ್ಲ, ಬೂಬಮ್ಮಗಳ ಹಾಗೆ ಇರತಾವೆ ಎಂದು ಕಮೆಂಟ್ ಮಾಡುತ್ತಾನೆ. ಉದ್ಯೋಗಸ್ಥ ಮಹಿಳೆಯರೆಂದರೆ ಈತನಿಗೆ ಅಲರ್ಜಿ. ಆಗಾಗ ಅವರನ್ನು ಟೀಕಿಸುತ್ತಲೇ ಇರುತ್ತಾನೆ.

ಮುಂಡೇವು, ಅದೇನೋ ನೈಟಿ ಅಂತ ಹಾಕ್ಕೊಳ್ತಾವೆ. ಮನೇಲೂ ನೈಟಿ, ಹೊರಗಡೆನೂ ನೈಟಿ. ದರಿದ್ರ ಬರೋದೇ ಅದಕ್ಕೆ ಎಂದು ತೀರ್ಮಾನ ಕೊಡುತ್ತಾನೆ.

ಬೆಳಿಗ್ಗೆ ಎದ್ದ ಮೇಲೆ ಯಾರ‍್ಯಾರ ಮುಖವನ್ನೋ ನೋಡಬೇಡಿ. ಚಪ್ಪಲಿ, ಪೊರಕೆ ನೋಡಬೇಡಿ. ಅದರಲ್ಲೂ ಮುಂಡೇವು ಎದ್ದ ತಕ್ಷಣ ಹೊರಗೆ ಬಂದು ಬಿಡುತ್ತವೆ. ಅಲ್ಲಿ ಯಾರ‍್ಯಾರೋ ಓಡಾಡ್ತಾ ಇರ‍್ತಾರೆ. ಅದರಲ್ಲೂ ಹಜಾಮರ ಮುಖವನ್ನು ನೋಡಿದರೆ ಅಶುಭವಾಗದೆ ಇನ್ನೇನಾಗುತ್ತದೆ... ಎನ್ನುತ್ತಾನೆ ಈ ಪ್ರಕಾಂಡ ಪಂಡಿತ.

ಸತ್ತಾಗ ನೀವೆಲ್ಲ ಕಣ್ಣುದಾನ ಮಾಡ್ತೀರಾ, ಮುಂದಿನ ಜನ್ಮದಲ್ಲಿ ನೀವೆಲ್ಲ ಕುರುಡರಾಗಿ ಹುಟ್ತೀರಾ... ಇದು ನರೇಂದ್ರ ಬಾಬು ಶರ್ಮನ ಮಹಾನ್ ಸಂಶೋಧನೆ.

ಸವಿತಾ ಸಮಾಜಕ್ಕೆ ಸೇರಿದ ಯುವಕನೋರ್ವ ಕರೆ ಮಾಡುತ್ತಾನೆ. ತಾನು ರಿಯಲ್ ಎಸ್ಟೇಟ್ ವೃತ್ತಿಯನ್ನು ಮಾಡಬೇಕೆಂದಿದ್ದೇನೆ. ಯಶಸ್ವಿಯಾಗ್ತೀನಾ ಹೇಳಿ ಎಂದು ನರೇಂದ್ರ ಶರ್ಮಾನನ್ನು ಕೇಳುತ್ತಾನೆ. ಯಾವ ಜಾತಿ ನೀನು? ಎಂದು ನರೇಂದ್ರ ಶರ್ಮ ಹೇಳುತ್ತಾನೆ. ಯುವಕ ತನ್ನ ಜಾತಿಯನ್ನು ಹೇಳಿಕೊಳ್ಳುತ್ತಾನೆ. ಓಹೋ ನೀವು ಅವರೋ, ನಿಮಗೆ ಕ್ಷೌರದ ಕೆಲಸ ಬಿಟ್ಟು ಬೇರೆ ಯಾವುದೂ ಬರಕತ್ತಾಗಲ್ಲ ಬಿಡು ಎಂದು ವಿಕೃತವಾಗಿ ಕೈಯಲ್ಲಿ ಕತ್ತರಿಯಿಂದ ಕತ್ತರಿಸುವ ಶೈಲಿಯನ್ನು ತೋರಿ ನಗುತ್ತಾನೆ.

ಇಷ್ಟೆಲ್ಲ ಹೇಳ್ತೀಯಲ್ಲ, ಗಾಯತ್ರಿ ಮಂತ್ರಕ್ಕೆ ಎಷ್ಟು ಪಾದಗಳಿವೆ ಹೇಳು ಅಂತ ಈತನ ಪತ್ರಿಕಾಗೋಷ್ಠಿಯೊಂದರಲ್ಲಿ ಹಿರಿಯ ಪತ್ರಕರ್ತ ಸ. ಚಂದ್ರಶೇಖರ ರಾವ್ ಗಂಟುಬಿದ್ದಿದ್ದರಂತೆ. ನರೇಂದ್ರ ಬಾಬು ಶರ್ಮ ಕಕ್ಕಾಬಿಕ್ಕಿ. ನಿನಗೆ ಗೊತ್ತಿರೋದೆಲ್ಲ ನೀನು ಹೇಳು, ನಿನಗೆ ಗೊತ್ತಿಲ್ಲದನ್ನು ನಾನು ಹೇಳ್ತೀನಿ ಅಂದ್ರೆ ಶರ್ಮ ಗಪ್‌ಚುಪ್. ಅಶ್ವಮೇಧ ಯಾಗ ಮಾಡ್ತೀನಿ ಅಂತೀಯಲ್ಲ, ಹಿಂದೆ ಕುದುರೆಯನ್ನು ರಾಣಿಯ ಜತೆ ಒಂದು ರಾತ್ರಿ ಮಲಗಿಸುತ್ತಿದ್ದರು. ನೀನು ಯಾರನ್ನು ಮಲಗಿಸುತ್ತೀ? ಯಾಗದ ಹೆಸರಲ್ಲಿ ಎಷ್ಟು ಕೋಟಿ ಕಲೆಕ್ಷನ್ ಮಾಡಿದ್ದೀ. ಎಲ್ಲಿ ಸ್ವಲ್ಪ ಲೆಕ್ಕ ಕೊಡು ಎಂದು ಅವರು ಸಾಲುಸಾಲು ಪ್ರಶ್ನೆ ಕೇಳಿದಾಗ ನರೇಂದ್ರ ಬಾಬು ಶರ್ಮ ಗೋಷ್ಠಿಯನ್ನೇ ಬರಕಾಸ್ತು ಮಾಡಿ ಓಡಿಹೋಗಿದ್ದನಂತೆ.

ಕಸ್ತೂರಿಯಲ್ಲಿ ಈತ ಕಾರ್ಯಕ್ರಮ ನಡೆಸುತ್ತಿದ್ದಾಗ, ಈತನನ್ನು ನೋಡಲು ಹಿಂಡುಗಟ್ಟಲೆ ಜನರು ಕಸ್ತೂರಿ ಕಚೇರಿಯೆದುರೇ ಬಂದು ನಿಲ್ಲುತ್ತಿದ್ದರು. ತೊಲಗ್ರೀ ಮುಂಡೇವಾ ಎಂದು ಈತ ಅವರನ್ನು ಅಕ್ಷರಶಃ ಒದ್ದುಕೊಂಡೇ ಕಚೇರಿಗೆ ಹೋಗುತ್ತಿದ್ದುದನ್ನು ಕಂಡವರಿದ್ದಾರೆ. ಕಚೇರಿಯಲ್ಲಿ ಕುಳಿತ ಪತ್ರಕರ್ತರು ಎದ್ದು ನಿಂತು ಈತನಿಗೆ ನಮಸ್ಕಾರ ಹೇಳದಿದ್ದರೆ, ದುರಹಂಕಾರಿ ಮುಂಡೇವು ಎಂದು ಗೊಣಗಿಕೊಂಡು ಹೋಗುತ್ತಿದ್ದ.

ಎಲ್ಲಾ ಹಾಳಾಗಿ ಹೋಗಲಿ, ಸಲ್ವಾರ್ ಕಮೀಜ್ ಧರಿಸಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತದೆ ಎಂದು ಹೇಳಿದ್ದನಂತೆ ಈ ಭೂಪ.

ಈತನಿಗೆ ಮೆದುಳಿಗೇ ತಗುಲಿಕೊಂಡಿರುವ ಕ್ಯಾನ್ಸರ್ ವಾಸಿ ಮಾಡೋದು ಯಾರು?

ಅಷ್ಟಕ್ಕೂ ಜೀ ಟಿವಿಯವರು ಯಾಕೆ ಇವನನ್ನು ಇನ್ನೂ ಇಟ್ಟುಕೊಂಡಿದ್ದಾರೆ? ಟಿಆರ್‌ಪಿ, ಹೊಟ್ಟೆಪಾಡು ಇತ್ಯಾದಿ ಸಮರ್ಥನೆಗಳನ್ನು ಅವರು ಕೊಡಬಹುದು. ಅದಷ್ಟೇ ಸಾಕೆ? ಅವರಿಗೆ ಕನಿಷ್ಠ ಸಾಮಾಜಿಕ ಜವಾಬ್ದಾರಿಯೂ ಇಲ್ಲವೇ? ಇದನ್ನು ಕೇಳುವವರು ಯಾರು?

ನೀವೇನಂತೀರಿ?
0 komentar

Blog Archive