ವಿಮರ್ಶೆಗೆ ಹೊರತಾದದ್ದು ಯಾವುದೂ ಇಲ್ಲ. ಹಾಗೆ ಇರಲೂಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ನಡವಳಿಕೆಯನ್ನು ವಿಮರ್ಶೆ ಮಾಡಲೆಂದೇ ನ್ಯಾಯಾಂಗ ಇದೆ. ಈ ಮೂರೂ ಅಂಗಗಳು ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿದರೆ, ಪ್ರತಿಕ್ರಿಯಿಸಬೇಕಾದದ್ದು ಮಾಧ್ಯಮ. ಆ ಕಾರಣಕ್ಕೆ ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಆಯಾಮ. ಮಾಧ್ಯಮವೇ ತಪ್ಪೆಸಗಿದರೆ?

ಉತ್ತರ ಸರಳ. ಮಾಧ್ಯಮ ತಪ್ಪೆಸಗಿದರೆ ಪ್ರಜಾಪ್ರಭುತ್ವಕ್ಕೆ ಐದನೇ ಆಯಾಮವನ್ನು ಸೇರಿಸಲಾಗುವುದಿಲ್ಲ. ಹಾಗಾಗಿ ಮಾಧ್ಯಮವೇ ಅದಕ್ಕೊಂದು ದಾರಿ ಕಂಡುಕೊಳ್ಳಬೇಕು. ಸರಕಾರ ಮೂಗು ತೂರಿಸಲು ಬಿಡಬಾರದು. ಶತಮಾನಗಳ ಇತಿಹಾಸ ಇರುವ ಮಾಧ್ಯಮ ಕ್ಷೇತ್ರ ಆಗಾಗ ತನ್ನನ್ನು ತಾನು ಟೀಕೆಗೆ ಗುರಿಯಾಗಿಸಿಕೊಂಡಿದೆ. ಒಂದು ಪತ್ರಿಕೆ ಅಥವಾ ಮಾಧ್ಯಮ ಸಂಸ್ಥೆ ವಿರುದ್ಧ ಇನ್ನೊಂದು ಮಾಧ್ಯಮ ಸಂಸ್ಥೆ ವರದಿ ಮಾಡಿದ ಉದಾಹರಣೆಗಳಿವೆ. ಆದರೆ ಅಂತಹ ವಿಮರ್ಶೆಗಳೂ ವಸ್ತುನಿಷ್ಠವಾಗಿರುತ್ತದೆ ಎಂದು ಹೇಳಲಾಗದು.

ಹೀಗಿರುವಾಗ ಮಾಧ್ಯಮ ಸಂಸ್ಥೆಗಳು ತಮ್ಮ ನಿಲುವುಗಳನ್ನು ವಿಮರ್ಶೆಗೆ ಒಡ್ಡಲು ತಮ್ಮ ವ್ಯಾಪ್ತಿಯಲ್ಲಿಯೇ ದಾರಿ ಕಂಡುಕೊಳ್ಳಬೇಕಾದ ಅಗತ್ಯವಿದೆ. ಮುಂದುವರಿದ ದೇಶ ಅಮೆರಿಕಾದ ಅನೇಕ ಮಾಧ್ಯಮ ಸಂಸ್ಥೆಗಳಲ್ಲಿ ಮಿಡಿಯಾ ಬೀಟ್ ವರದಿಗಾರರಿದ್ದಾರೆ. ಅದಕ್ಕೆ ಒಬ್ಬ ಮುಖ್ಯಸ್ಥ ಮತ್ತು ಅವರ ಅಡಿ ಒಂದಿಷ್ಟು ವರದಿಗಾರರು. ಅವರ ಕೆಲಸ ಮಾಧ್ಯಮ ಕ್ಷೇತ್ರದ ಆಗುಹೋಗುಗಳನ್ನು ವರದಿ ಮಾಡುವುದು. ಪತ್ರಿಕೆ ಪ್ರಸರಣ, ಲಾಭ ನಷ್ಟ, ಸಂಪಾದಕೀಯ ಧೋರಣೆ, ಆಗಾಗ ಬದಲಾಗುವ ಸಂಪಾದಕೀಯ ನಿಲುವುಗಳು, ಸರಕಾರದಿಂದ ಪತ್ರಿಕೆ ಪಡೆದ ಲಾಭ - ಹೀಗೆ ಎಲ್ಲವೂ ಅಲ್ಲಿ ವರದಿಯಾಗುತ್ತವೆ. ಮುಖ್ಯವಾಗಿ ಮಾಧ್ಯಮವೂ ಇತರೆ ಎಲ್ಲಾ ಕ್ಷೇತ್ರಗಳಂತೆ, ಹಾಗಾಗಿ ಓದುಗ ಮಹಾಶಯನಿಗೆ ಅದರ ವಿವರಗಳನ್ನು ತಿಳಿಸುವುದು ಅಗತ್ಯ ಎನ್ನುವುದು ಅಲ್ಲಿಯ ದೇಶದ ಮಾಧ್ಯಮಗಳ ನಂಬಿಕೆ. ಅಷ್ಟೇ ಅಲ್ಲ ಕೆಲ ಸಂದರ್ಭಗಳಲ್ಲಿ ಪತ್ರಿಕೆ ಒಳಗಿನ ಹಗರಣಗಳನ್ನು ಅದೇ ಪತ್ರಿಕೆ ತನಿಖೆ ಮಾಡಿ ವರದಿ ಮಾಡಿದ ಉದಾಹರಣೆಗಳೂ ಇವೆ ಎಂದರೆ ಅನೇಕರಿಗೆ ಅಚ್ಚರಿಯಾಗಬಹುದು.

ಭಾರತದ ಮಾಧ್ಯಮ ಕ್ಷೇತ್ರ ಇನ್ನೂ ಈ ಮಟ್ಟಿಗಿನ ಆತ್ಮವಿಮರ್ಶೆಗೆ ತನ್ನನ್ನು ಈಡು ಮಾಡಿಕೊಂಡಿಲ್ಲ. ಕೆಲ ತಪ್ಪು ಅಥವಾ ಹಗರಣಗಳ ಕಾರಣ ವರದಿಗಾರರನ್ನೋ, ಸಂಪಾದಕರನ್ನೋ ಕಂಪನಿ ಬಿಟ್ಟು ಹೋಗಿ ಎಂದಿರಬಹುದು. ಆದರೆ ಅವರು ಪತ್ರಿಕೆ/ಮಾಧ್ಯಮ ಸಂಸ್ಥೆ ಬಿಡಬೇಕಾದ ಪ್ರಸಂಗ ಎದುರಾದದ್ದು ಏಕೆ ಎನ್ನುವುದನ್ನು ಓದುಗರಿಗೆ ಎಂದೂ ಹೇಳುವುದಿಲ್ಲ. ಕಾರಣ ಬಹಳಷ್ಟು ಭಾರತೀಯ ಪತ್ರಕರ್ತರು ತಾವು ಓದುಗರಿಗೆ ಉತ್ತರದಾಯಿ ಎಂದು ಒಪ್ಪುವುದೇ ಇಲ್ಲ. ವಿಚಿತ್ರ ಎಂದರೆ, ಪತ್ರಿಕೆಗೆ ಹೊಸ ಸಂಪಾದಕರು ನೇಮಕಗೊಂಡಾಗ ಅವರ ಸಾಧನೆಗಳನ್ನು ಫೋಟೋ ಸಮೇತ ಸ್ವಾಗತಿಸುವ ಪತ್ರಿಕೆಗಳು, ಅದೇ ಸಂಪಾದಕರು ಹೊರ ನಡೆದಾಗ ಓದುಗರಿಗೆ ಅದನ್ನು ಹೇಳಬೇಕೆಂಬ ಕನಿಷ್ಟ ಸೌಜನ್ಯವನ್ನೂ ತೋರುವುದಿಲ್ಲ. ಆದರೆ ಪ್ರಜಾಪ್ರಭುತ್ವದ ಮೊದಲ ಮೂರು ಅಂಗಗಳಲ್ಲಿ ಈ ತೊಂದರೆ ಇಲ್ಲ. ಅಲ್ಲಿಯ ಘಟನೆಗಳನ್ನು ಓದುಗರು ತಿಳಿಯಲು ಅವಕಾಶ ಇದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಪತ್ರಿಕೋದ್ಯಮಕ್ಕೇಕೆ ಈ ಮಡಿವಂತಿಕೆ? ಹೀಗಿದ್ದರೂ ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎನ್ನಬಹುದೆ?

ಯಾರಾದರೂ ತಮ್ಮ ಧೋರಣೆಗಳನ್ನು, ತಮ್ಮ ಮಾಧ್ಯಮಸಂಸ್ಥೆಯ ನಿಲುವುಗಳನ್ನು ಟೀಕಿಸಿದರೆ ನಮ್ಮ ಪತ್ರಕರ್ತರು ಅಸಹನೆಗೆ ಒಳಗಾಗುತ್ತಾರೆ. ಧ್ವನಿ ಎತ್ತಿದವರ ಕತ್ತು ಹಿಚುಕುವ ಪ್ರಯತ್ನಗಳೂ ವ್ಯವಸ್ಥಿತವಾಗಿ ನಡೆಯುತ್ತವೆ. ಯಾಕೆಂದರೆ ಬಹಳಷ್ಟು ಪತ್ರಕರ್ತರು ಹಾಗೂ ಪತ್ರಿಕೋದ್ಯಮಿಗಳು ತಾವು ವಿಮರ್ಶಾತೀತರೆಂಬ ಭ್ರಮೆಯಲ್ಲಿದ್ದಾರೆ. ಅವರು ಮೊದಲು ಆ ಭ್ರಮೆ ಬಿಟ್ಟರೆ ಪತ್ರಿಕೋದ್ಯಮಕ್ಕೆ ಒಳಿತು.

ಕೆಲ ವರ್ಷಗಳ ಹಿಂದೆ ಅಲ್ಲಲ್ಲಿ ಮಾಧ್ಯಮ ಕುರಿತ ತೆಳು ವಿಮರ್ಶೆಗೆ ಅವಕಾಶ ಇತ್ತು. ಟಿವಿ ಲೋಕದ ಬಗ್ಗೆ ದಿವಸ್ಪತಿ ಹೆಗಡೆ ಬರೆಯುತ್ತಿದ್ದರು. ಆದರೆ ಪತ್ರಿಕೆಗಳ ಬಗ್ಗೆ ಯಾವ ಗಂಭೀರ ಅಂಕಣವೂ ಪ್ರಕಟವಾದದ್ದಿಲ್ಲ. ಇತ್ತೀಚೆಗೆ ವಿಜಯ ಕರ್ನಾಟಕದಲ್ಲಿ ಜಿ.ಎನ್.ಮೋಹನ್ ಬರೆಯುತ್ತಿದ್ದ ಮೀಡಿಯಾ ಮಿರ್ಚಿ ಎಂಬ ಅಂಕಣ ಯಾವುದೇ ಪತ್ರಿಕೆಯ ಧೋರಣೆಗಳ ಬಗ್ಗೆ ಚರ್ಚೆಗೆ ಕೈ ಹಾಕಲೇ ಇಲ್ಲ. ಕೇವಲ ಹೆಸರಿಗಷ್ಟೆ ಮಿರ್ಚಿ. ಖಾರವೇ ಇಲ್ಲ. ಪತ್ರಕರ್ತನೊಬ್ಬನ ಆತ್ಮಕಥನದ ಹಾಗಿತ್ತು ಅಂಕಣ. ಆ ಅಂಕಣವೂ ಇತ್ತೀಚೆಗೆ ಕಾಣುತ್ತಿಲ್ಲ. ಹೀಗಾಗಿ ಮೀಡಿಯಾಗಳ ಕುರಿತು ಮೀಡಿಯಾಗಳಲ್ಲಿ ಚರ್ಚೆ ಜೀರೋ ಆಗಿದೆ.

ಒಟ್ಟಿನಲ್ಲಿ ಮಾಧ್ಯಮ ಕ್ಷೇತ್ರದ ವಿಮರ್ಶೆ ಎಲ್ಲಿಯೂ ಕಾಣ ಸಿಗುತ್ತಿಲ್ಲ. ಏಕೆ ಹೀಗೆ? ಪತ್ರಿಕಾಲಯಗಳು ಇತ್ತ ಯೋಚಿಸಲಿ. ಊರ ಗಟಾರಗಳು ಕೊಳೆತು ನಾರುತ್ತಿವೆ ಎನ್ನುವ ಮಂದಿ, ಮನೆಯ ಬಾತ್ ರೂಂ ಕಡೆಯೂ ಆಗಾಗ ಗಮನ ಹರಿಸುತ್ತಿರಬೇಕು ಅಲ್ಲವೇ?
0 komentar

Blog Archive