ಏನಾದ್ರೂ ಪ್ರಶ್ನೆ ಕೇಳಿ ಅಂತ ಕೇಳಿದೆ ನಿಮ್ಮನ್ನು. ಇದು ಪತ್ರಿಕೆ ತಂಡದ ಸಭೆ. ಏನನ್ನಾದರೂ ಕೇಳಬಹುದಿತ್ತು ನೀವು, ಏನನ್ನೂ ಕೇಳಲಿಲ್ಲ. ನಿಮ್ಮ ಮನಸ್ಸಿನಲ್ಲಿ ಇರಬಹುದಾದ ಪ್ರಶ್ನೆಗಳನ್ನು ಊಹಿಸಿ, ನಾನೇ ಎರಡು ಪ್ರಶ್ನೆ ಕೇಳಿಕೊಂಡು ಉತ್ತರ ಕೊಡುತ್ತೇನೆ. 
ನೀವೇನೋ ಬಂದ್ರಿ, ನಿಮ್ಮ ಜತೆ ಸೇರಿಕೊಳ್ಳಲು ಯಾರಾದರೂ ಬರುತ್ತಾರಾ? ಎಂಬುದು ಮೊದಲ ಪ್ರಶ್ನೆ. ಹೌದು, ನಾಲ್ಕು ಮಂದಿ ಬಂದು ಸೇರಿಕೊಳ್ಳುತ್ತಾರೆ-ಇದು ನನ್ನ ಉತ್ತರ. 
ಬರುವವರಿಂದ ನಮಗೆ ಏನಾದರೂ ಸಮಸ್ಯೆನಾ? ಜವಾಬ್ದಾರಿಗಳು ಬದಲಾಗುತ್ತವಾ? ಇದು ಎರಡನೇ ಪ್ರಶ್ನೆ. ಇಲ್ಲ, ಹಾಗೇನೂ ಆಗುವುದಿಲ್ಲ. ಬರುವವರಿಂದ ನಿಮಗೇನೂ ತೊಂದರೆಯಾಗುವುದಿಲ್ಲ. ಯಾರ ಜವಾಬ್ದಾರಿಗಳನ್ನೂ ಬದಲಾಯಿಸುವುದಿಲ್ಲ. ನಿಮ್ಮ ಪಾಡಿಗೆ ನೀವು ಕೆಲಸ ಮಾಡಿಕೊಂಡು ಹೋಗಿ- ಇದು ನನ್ನ ಉತ್ತರ. 
ನನಗೆ ಜಾತಿ, ಮತ ಇತ್ಯಾದಿಗಳಿಲ್ಲ. ನನಗೆ ಗೊತ್ತಿರೋದು ಎರಡೇ ಜಾತಿ. ಒಂದು ಬರೆಯುವವರ ಜಾತಿ, ಇನ್ನೊಂದು ಬರೆಯದವರ ಜಾತಿ. ನೀವು ಬರೆಯುವವರ ಜಾತಿನೋ, ಬರೆಯದವರ ಜಾತಿನೋ ಅಂತ ನೀವೇ ತೀರ್ಮಾನ ಮಾಡಿಕೊಳ್ಳಿ. ನಿಮ್ಮಿಂದ ಸಾಧ್ಯವಾಗದಿದ್ದರೆ ಮೂರು ತಿಂಗಳು ಸಮಯ ಕೊಡಿ, ನಾನೇ ಹೇಳುತ್ತೇನೆ. 
ಎಲ್ಲರೂ ಬರೆಯಿರಿ. ನಿಮ್ಮ ಬರವಣಿಗೆ ಸರ್‌ಪ್ರೈಸಿಂಗ್ ಆಗಿರಬೇಕು, ಫ್ರೆಷ್‌ನೆಸ್ ಇರಬೇಕು. ಒಡೆದು ಕಟ್ಟುವ ಕೆಲಸ ನಮ್ಮಿಂದ ಆಗಬೇಕು. ಹಿಂದೆಲ್ಲ ಯಾರಾದರೂ ಸತ್ತರೆ ದೇಹಾಂತ್ಯ ಅಂತನೂ ಬರೆಯುವ ಹಾಗಿರಲಿಲ್ಲ. ಬರೆದರೆ ಏಕೆ ಇಂಥ ಪದ ಪ್ರಯೋಗ ಮಾಡಿದ್ರಿ ಎಂದು ಪ್ರಶ್ನಿಸುತ್ತಿದ್ದರು. ಈಗ ಹಾಗಿಲ್ಲ, ಪ್ರಕಾಶಮಾಯ ಅಂತ ಹೆಡ್ಡಿಂಗು ಕೊಟ್ಟರೆ ಕನಿಷ್ಠ ಐವತ್ತು ಓದುಗರು ಹೆಡ್ಡಿಂಗು ಚೆನ್ನಾಗಿತ್ತು ಅಂತ ಎಸ್‌ಎಂಎಸ್ ಮಾಡ್ತಾರೆ. 
...ಅವರು ಗೊತ್ತಲ್ಲ ನಿಮಗೆ. ಹಿಂದೆ ಅವರು ಪೇಟೆಧಾರಣೆ, ಟ್ರೈನ್ ಟೈಮಿಂಗ್ ಇತ್ಯಾದಿ ಬರೆಯುತ್ತಿದ್ದರು. ಪ್ರತಿಭಾವಂತರು. ಅವಕಾಶ ನೀಡಿದೆ, ಬಳಸಿಕೊಂಡರು. ಅವರು ಬರೆದಷ್ಟು ಅಂಕಣವನ್ನು ಮತ್ತೆ ಯಾರೂ ಬರೆಯಲಿಲ್ಲ. ನಿಮ್ಮಲ್ಲಿ ಯಾರಿಗೆ ಯಾವ ಆಸಕ್ತಿ ಇದೆಯೋ ನನಗೆ ತಿಳಿಸಿ. ಅಂಕಣ ಬರೆಯುವುದಾದರೆ ಬರೆಯಿರಿ. ಎಲ್ಲರಿಗೂ ಇಲ್ಲಿ ಸ್ಪೇಸ್ ಇರುತ್ತದೆ. ಪತ್ರಿಕೆಯಲ್ಲಿ ಕೆಲಸ ಮಾಡುವವರ ಭಾವಚಿತ್ರದ ಜತೆ ಅಂಕಣ, ಲೇಖನ ಬರೆಸಲು ಆರಂಭಿಸಿದ್ದು ನಾನು. ಅದು ನಿಮಗೆ ಗೊತ್ತಿದೆ ಎಂದು ಭಾವಿಸುತ್ತೇನೆ. ನಿಮ್ಮಲ್ಲಿ ನನಗಿಂತ ತಿಳಿದವರು ಇರಬಹುದು. ಒಂದೇ ರಾತ್ರಿಯಲ್ಲಿ ಎಲ್ಲವನ್ನೂ ಬದಲಿಸಿ ಕ್ರಾಂತಿ ಮಾಡುವ ಭ್ರಮೆಯೇನು ನನಗಿಲ್ಲ. ನಿಮ್ಮೆಲ್ಲರ ಸಹಕಾರ ನನಗೆ ಬೇಕು. ಎಲ್ಲರೂ ಸೇರಿಯೇ ಪತ್ರಿಕೆಯನ್ನು ಬೆಳೆಸೋಣ. 
ಬರೀತಾ ಹೋಗಿ ನೀವು. ಇಷ್ಟು ಗಂಟೆಗೇ ಬರಬೇಕು, ಇಷ್ಟು ಗಂಟೆಗೇ ಹೋಗಬೇಕು ಎಂಬ ನೌಕರಿ ತರಹ ಪತ್ರಿಕಾವೃತ್ತಿಯಲ್ಲ. ನೀವು ಎಷ್ಟು ಹೊತ್ತು ಹೊರಗಿರುತ್ತೀರೋ, ಅದರಿಂದ ಪತ್ರಿಕೆಗೆ ಅನುಕೂಲವಾಗಬೇಕು. ರಜೆ ಬೇಕು ಅಂದ್ರೆ ತಗೊಳ್ಳಿ, ಒಂದು ವಾರ, ತಿಂಗಳು, ವರ್ಷ... ಎಷ್ಟು ಬೇಕಾದರೂ ತಗೊಳ್ಳಿ. ಒಂದು ವರ್ಷದ ರಜೆ ಆರು ವರ್ಷ ಬರೆಯುವುದಕ್ಕೆ ಸರಕಾಗಬೇಕು. ದೇಶ ಸುತ್ತಿ, ವಿದೇಶಕ್ಕೂ ಹೋಗಿಬನ್ನಿ, ಆದರೆ ನಿಮ್ಮ ಪ್ರವಾಸ, ಅಧ್ಯಯನ ಪತ್ರಿಕೆಗೆ ಎಷ್ಟು ಅನುಕೂಲ ಅನ್ನುವುದಷ್ಟೇ ನನ್ನ ಲೆಕ್ಕಾಚಾರ. 
ಹಿಂದೆ ನಾನು ಯಾರೊಬ್ಬರಿಗೂ ಮೆಮೋ ಕೂಡ ಕೊಟ್ಟವನಲ್ಲ. ಅಂಥದ್ದರಲ್ಲಿ ನನಗೆ ನಂಬಿಕೆಯೂ ಇಲ್ಲ. ಹಾಗಂತ ನಾನು ಪನಿಷ್ ಮಾಡಲ್ಲ ಅಂತಲ್ಲ. ಯಾರಾದ್ರೂ ತಪ್ಪು ಮಾಡಿದರೆ ನನ್ನ ಎದುರು ಅರ್ಧ ಗಂಟೆ ನಿಲ್ಲಿಸಿಕೊಳ್ಳುತ್ತೇನೆ, ಅಷ್ಟು ಶಿಕ್ಷೆ ಸಾಕು ಅಂದುಕೊಳ್ತೀನಿ. 
ತುಂಬಾ ದೊಡ್ಡದೊಡ್ಡವರು ಕುಳಿತು ಹೋದ ಸಂಪಾದಕ ಸ್ಥಾನ ಇದು. ಆ ಜವಾಬ್ದಾರಿ ನನಗಿದೆ, ನಿಭಾಯಿಸುವ ವಿಶ್ವಾಸವೂ ನನಗಿದೆ. 
ಎಲ್ಲರಿಗೂ ಒಳ್ಳೆಯದಾಗಲಿ, ಹೋಗಿಬನ್ನಿ.

                                                                        ****

ಈಗೀಗ ಗಾರ್ಮೆಂಟ್ಸ್ ನೌಕರರಿಗೆ ಇರುವಷ್ಟೂ ಭದ್ರತಾಭಾವ ಪತ್ರಕರ್ತರಿಗಿಲ್ಲ. ದೊಡ್ಡದೊಡ್ಡವರೇ ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಂಡು ಬ್ಯಾಗು ನೇತುಹಾಕಿಕೊಂಡು ಹೊರಟುಬಿಡುವ ಕಾಲ ಇದು. ಮಾಧ್ಯಮ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು ಕಿರಿಯ ಪತ್ರಕರ್ತರಲ್ಲಿ ಅಭದ್ರತಾ ಭಾವ ಮೂಡಿಸಿರುವುದು ಸುಳ್ಳಲ್ಲ. ಹೀಗಿರುವಾಗ ಒಬ್ಬ ಸಂಪಾದಕ ಹೊಸದಾಗಿ ಕೂಡಿಕೊಂಡ ಸಂಸ್ಥೆಯ ಹಳೆಯ ಸಿಬ್ಬಂದಿಯೊಂದಿಗೆ ಇದಕ್ಕಿಂತ ವಿಶ್ವಾಸಪೂರ್ವಕವಾಗಿ ಮಾತನಾಡಲು ಸಾಧ್ಯವೇ? ಹಳೆಯ ಸಿಬ್ಬಂದಿ ಒಳಗಿನ ದುಗುಡ, ಆತಂಕಗಳನ್ನು ತಣಿಸಲು ಇದಕ್ಕಿಂತ ಒಳ್ಳೆಯ ಮಾತುಗಳು ಬೇಕೆ?

ಹೀಗೆಲ್ಲ ತಮ್ಮ ಸಿಬ್ಬಂದಿಯೊಂದಿಗೆ ಮಾತನಾಡಬಲ್ಲ, ನಡೆದುಕೊಳ್ಳಬಲ್ಲ ವಿಶ್ವೇಶ್ವರ ಭಟ್ಟರು ಇಷ್ಟವಾಗುವುದು ಈ ಕಾರಣಗಳಿಗೇ ಅಲ್ಲವೇ?

0 komentar

Blog Archive