ಮಡೆ ಸ್ನಾನದ ಮಾನಾವಮಾನಗಳ ಚರ್ಚೆ ಕಾಲದೇಶಗಳ ಅಗತ್ಯಕ್ಕೆ ಅನುಸಾರವಾಗಿ ಇನ್ನೂ ಜಾರಿಯಲ್ಲಿರುವಾಗಲೇ, ಕನ್ನಡ ಟಿವಿ ವಾಹಿನಿಯ ಕಾರ್ಯಕ್ರಮವೊಂದು ದೀರ್ಪಾಚನೆಯ ಹೆಸರಿನಲ್ಲಿ ಕನ್ನಡ ಜನರನ್ನು ಗಾಡಾಂಧಕಾರಕ್ಕೆ ತಳ್ಳಿದೆ.

ಒಂದು ದೃಶ್ಯ ಮಾಧ್ಯಮ ಹೇಗೆ ಜನರನ್ನು ಮಂಕುಬೂದಿ ಎರಚಿ, ಹೊಸ ಹೊಸ ಸಂಪ್ರದಾಯ, ಆಚರಣೆಗಳನ್ನು ಜಾರಿಗೆ ತರಬಹುದು ಎನ್ನುವುದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಹೀಗೆ ಹೊಸ ಮೌಢ್ಯಗಳನ್ನು ಸೃಷ್ಟಿಸುವ ಮೂಲಕ ತನ್ನ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಚಾನಲ್‌ಗಳು ಕರ್ನಾಟಕವನ್ನು ಶಿಲಾಯುಗಕ್ಕೆ ಮರಳಿಸಲು ಯತ್ನಿಸುತ್ತಿರುವ ಹಾಗಿದೆ.

ಇದು ನರೇಂದ್ರ ಸ್ವಾಮಿ ಎಂಬ ಜೋತಿಷಿಯ ಬೃಹತ್ ಬ್ರಹ್ಮಾಂಡದ ಫಲ.

೨೦೧೨ರ ಪ್ರಳಯವನ್ನು ತಪ್ಪಿಸಲು, ಮಂಗಳವಾರ ಸಂಜೆ ೭-೦೫ರಿಂದ ಸಂಜೆ ೭-೨೫ರೊಳಗೆ  ೨೦ ನಿಮಿಷದಲ್ಲಿ ದೀಪರಾಧನೆಯನ್ನು ದೇವಸ್ಥಾನದಲ್ಲಿ ನಡೆಸಬೇಕೆಂದು ಜೀ ಕನ್ನಡದ ಬೃಹತ್ ಬ್ರಹ್ಮಾಂಡದಲ್ಲಿ ಜ್ಯೊತಿಷಿ ನರೇಂದ್ರಸ್ವಾಮಿ ಅಪ್ಪಣೆ ಕೊಟ್ಟಿದ್ದೇ ತಡ  ನಿನ್ನೆ ಸಂಜೆ  ಭಕ್ತಸಾಗರವು ಕುಟುಂಬ ಸಮೇತರಾಗಿ ರಾಜ್ಯದ ವಿವಿಧ ದೇವಸ್ಥಾನದಲ್ಲಿ  ಹರಿದಿದೆ.

ಐದು ಧಾನ್ಯಗಳ ಎಣ್ಣೆಯಿಂದ ದೀಪ ಬೆಳಗಿಸುವ ಮೂಲಕ ಶಾಸ್ತ್ರೋಕ್ತವಾಗಿ ದೀರ್ಪಾಚನೆಯನ್ನು ನಡೆಸಬೇಕು, ಇದನ್ನು ಕಡ್ಡಾಯವಾಗಿ ಕುಟುಂಬ ಸಮೇತವಾಗಿಯೇ ಮಾಡಬೇಕು ಎಂದು ನರೇಂದ್ರ ಸ್ವಾಮಿ ಆದೇಶ ನೀಡಿದ್ದರಿಂದ ಎಲ್ಲೆಡೆ  ದೇವಸ್ಥಾನಗಳಲ್ಲಿ ನಿಲ್ಲಲ್ಲೂ ಜಾಗವಿರಲಿಲ್ಲ.

ದೀಪವು ನಿನ್ನದೇ, ಗಾಳಿಯೂ ನಿನ್ನದೇ, ಆರದಿರಲಿ ಬೆಳಕು ಎನ್ನುವ ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಯನ್ನು ಬದಲಿಸಿ, ದೀಪವು ನಿನ್ನದೇ ಗಾಳಿಯೂ ನಿನ್ನದೇ ಆಗದಿರಲಿ ಪ್ರಳಯ ಎಂದು ಹಾಡುತ್ತಾ ಐದು ಧಾನ್ಯಗಳ ಎಣ್ಣೆಗಾಗಿ ಅಂಗಡಿಗಳನ್ನು ಎಡತಾಕಿ ಇದ್ದಬದ್ದ ಎಣ್ಣೆಯನ್ನೆಲ್ಲಾ ಬಳಿದುಕೊಂಡು ಮೂರ್ಖರಾಗಿದ್ದು ಜನಸಾಮಾನ್ಯರು.

ನರೇಂದ್ರ ಸ್ವಾಮಿ ಕಸ್ತೂರಿ ಟಿವಿಯಲ್ಲಿ ಬ್ರಹ್ಮಾಂಡ ಕಾರ್ಯಕ್ರಮ ನಡೆಸುತ್ತಿದ್ದರು. ಯಾಗ ಯಜ್ಞದ ಹೆಸರಲ್ಲಿ ಹಣ ಸಂಗ್ರಹ ಶುರು ಮಾಡಿದಾಗ ಕಸ್ತೂರಿಯಿಂದ ಹೊರಗೆ ಕಳಿಸಲಾಯಿತು. ನಂತರ ಭವ್ಯ ಬ್ರಹ್ಮಾಂಡ ಎಂಬ ಹೆಸರಿನಲ್ಲಿ ಇದೇ ವ್ಯಕ್ತಿ ಸುವರ್ಣ ಟಿವಿಯಲ್ಲಿ ಹಾಜರಾದರು. ಅಲ್ಲೂ ಏನೋ ಜಟಾಪಟಿ ನಡೆದು ಈಗ ಜೀ ಟಿವಿಯಲ್ಲಿ ಪ್ರತಿಷ್ಠಾಪಿತರಾಗಿದ್ದಾರೆ. ಇಲ್ಲಿ ಈತ ನಡೆಸಿಕೊಡುವ ಕಾರ್ಯಕ್ರಮದ ಹೆಸರು ಬೃಹತ್ ಬ್ರಹ್ಮಾಂಡ. ಬೆಳಿಗ್ಗೆ ಎದ್ದು ಮೊದಲು ಕ್ಷೌರಿಕರ ಮುಖ ನೋಡಿದರೆ ಅಶುಭವಾಗುತ್ತದೆ ಎಂದು ಹಿಂದೆ ಈತ ತನ್ನ ಕಾರ್ಯಕ್ರಮದಲ್ಲಿ ಹೇಳಿದ ಪರಿಣಾಮವಾಗಿ ಪ್ರತಿಭಟನೆಗಳು ನಡೆದಿದ್ದವು.

ಕಳೆದ ದಶಕದಲ್ಲಿ ಕರ್ನಾಟಕದಲ್ಲಿ ಜನರ ಮೌಢ್ಯ, ಕಂದಾಚಾರಗಳು ಹೆಚ್ಚಾಗಿದ್ದರೆ  ಅದಕ್ಕೆ  ಟಿವಿ ಚಾನಲ್‌ಗಳ ಭವಿಷ್ಯ-ಭೂತಪ್ರೇತ ಸಂಬಂಧಿ ಕಾರ್ಯಕ್ರಮಗಳು ಕಾರಣ. ವೈಜ್ಞಾನಿಕ ಯುಗದಲ್ಲಿ ನಾಡನ್ನು ಮುನ್ನಡೆಸಬೇಕಾದ ದೃಶ್ಯ ಮಾಧ್ಯಮಗಳು ಜನರನ್ನು ಭೀತಿಗೆ ತಳ್ಳುತ್ತ, ಅವರೊಳಗಿನ ಮೌಢ್ಯವನ್ನು ಪೋಷಿಸುತ್ತ, ತಮ್ಮ ಜೇಬು ತುಂಬಿಸಿಕೊಳ್ಳುವ ಕೆಳದರ್ಜೆಯ ಕುತಂತ್ರಗಳನ್ನು ನಡೆಸುತ್ತಿವೆ. ಆಶ್ಚರ್ಯವೆಂದರೆ ಇದನ್ನು ಯಾರೂ ಸಹ ಪ್ರತಿಭಟಿಸದೇ ಇರುವುದು!

ವಿಚಾರವಾದಿಗಳೆನಿಸಿಕೊಂಡ ಬಹುತೇಕರೂ ಸಹ ಬಾಯಿಮುಚ್ಚಿಕೊಂಡಿದ್ದಾರೆ; ಕಾರಣವೇನೆಂದರೆ ಅವರು ಮೀಡಿಯಾಗಳ ವಿರುದ್ಧ ಧ್ವನಿಯೆತ್ತಿ ಅಪಾಯ ತಂದುಕೊಳ್ಳಲಾರರು! ಇದು ಇನ್ನೊಂದು ಬಗೆಯ ಮೌಢ್ಯ!

ವಿಜಯ ಕರ್ನಾಟಕ ಇಂದಿನ ಪತ್ರಿಕೆಯ ಮುಖಪುಟದಲ್ಲೇ ಈ ಅವಾಂತರ ಕುರಿತು ವರದಿ ಮಾಡಿ ಗಮನ ಸೆಳೆದಿದೆ. ಅದೊಂದು ಸಮಾಧಾನ. ಕರ್ನಾಟಕದ ಜನತೆಯನ್ನು ಸದ್ಯಕ್ಕೆ ಮೀಡಿಯಾಗಳಿಂದಲೇ ಕಾಪಾಡುವ ಕೆಲಸ ಆಗಬೇಕಿದೆ.!
0 komentar

Blog Archive