ಮಣಿಪಾಲ್ ಟವರ್‌ನಲ್ಲಿ ಚಟುವಟಿಕೆಗಳು ಗರಿಗೆದರಿವೆ. ಕನ್ನಡ ಮಾಧ್ಯಮರಂಗದಲ್ಲಿ ಜರುಗುತ್ತಿರುವ ಪತ್ರಕರ್ತರ ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಉದಯವಾಣಿಯೂ ಹಿಂದೆ ಬಿದ್ದಿಲ್ಲ. ಹಿಂದೆ ನಾವು ಹೇಳಿದಂತೆ ರವಿ ಹೆಗಡೆ ಉದಯವಾಣಿಗೆ ಇಂದು ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದಾರೆ. ಅದರ ಜತೆಗೆ ತಿಮ್ಮಪ್ಪ ಭಟ್ಟರ ನಿರ್ಗಮನದ ವಿಷಾದದ ಸುದ್ದಿಯೂ ಕೂಡ ಹೊರಬರುತ್ತಿದೆ.

ತಿಮ್ಮಪ್ಪಭಟ್ಟರು ಸಮಾಜವಾದಿ ಹಿನ್ನೆಲೆಯವರು. ಸಂಯುಕ್ತ ಕರ್ನಾಟಕದಲ್ಲಿ ಕೆಲ ಕಾಲ ವೃತ್ತಿಜೀವನ ನಡೆಸಿದ್ದರು. ನಂತರ ಅವರು ಕನ್ನಡಪ್ರಭದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. ರವಿ ಹೆಗಡೆಯವರು ಕನ್ನಡಪ್ರಭ ಸೇರಿದ್ದೂ ತಿಮ್ಮಪ್ಪಭಟ್ಟರು ಬ್ಯೂರೋ ಒಂದರ ಮುಖ್ಯಸ್ಥರಾಗಿದ್ದಾಗ. ಈಗ ಇಬ್ಬರೂ ಉದಯವಾಣಿಯ ಮ್ಯೂಸಿಕಲ್ ಚೇರ್‌ನ ಪಾತ್ರಧಾರಿಗಳಾಗಿದ್ದು ವಿಪರ್ಯಾಸ.

ಭಟ್ಟರು ಕನ್ನಡಪ್ರಭ ಬಿಟ್ಟ ನಂತರ ಉಷಾಕಿರಣದಲ್ಲಿ ಸುದ್ದಿಸಂಪಾದಕರಾಗಿದ್ದರು. ಗ್ರಾಮಾಂತರ ಸುದ್ದಿಯ ನಿರ್ವಹಣೆ ಅವರ ಜವಾಬ್ದಾರಿಯಾಗಿತ್ತು. ನಂತರ ಉಷಾಕಿರಣ ಮುಚ್ಚಿಹೋಗಿ ಅದು ಟೈಮ್ಸ್ ಆಫ್ ಇಂಡಿಯಾ ಕನ್ನಡವಾಗಿ ರೂಪಾಂತರವಾದಾಗಲೂ ಅದರ ಸುದ್ದಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಆ ಪತ್ರಿಕೆಯೂ ಬಂದ್ ಆಯಿತು.

ಉದಯವಾಣಿ ಪತ್ರಿಕೆ ಈಗ ಮಣಿಪಾಲ, ಬೆಂಗಳೂರು ಹಾಗು ಮುಂಬೈ ಆವೃತ್ತಿಗಳನ್ನು ಹೊಂದಿದೆ. ಹುಬ್ಬಳ್ಳಿ ಆವೃತ್ತಿಯನ್ನು ಆರಂಭಿಸುವ ಪೈಗಳ ಉದ್ದೇಶ ಇನ್ನೆರಡು ವಾರಗಳಲ್ಲಿ ಕೈಗೂಡಲಿದೆ. ಹುಬ್ಬಳ್ಳಿ ಆವೃತ್ತಿಗಾಗಿಯೇ ತಿಮ್ಮಪ್ಪ ಭಟ್ಟರನ್ನು ಉದಯವಾಣಿಗೆ ಕರೆತರಲಾಗಿತ್ತು. ಆ ಸಂದರ್ಭದಲ್ಲಿ ಸಂಪಾದಕಿ ಡಾ. ಪೂರ್ಣಿಮ ರಾಜೀನಾಮೆ ಕೊಟ್ಟು ಹೊರಹೋದರು. ಹೀಗಾಗಿ ತಿಮ್ಮಪ್ಪಭಟ್ಟರನ್ನೇ ಆ ಹುದ್ದೆಗೆ ನೇಮಿಸಲಾಗಿತ್ತು. ತಮಗೆ ಕೊಟ್ಟ ಜವಾಬ್ದಾರಿಯನ್ನು ಭಟ್ಟರು ನಿಷ್ಠೆಯಿಂದಲೇ ನಿಭಾಯಿಸಿದ್ದರು. ಹುಬ್ಬಳ್ಳಿ ಆವೃತ್ತಿಯನ್ನು ಹೊರತರುವ ಸಲುವಾಗಿ ಸಾಕಷ್ಟು ಶ್ರಮ ವಹಿಸಿದ್ದರು.

ಆದರೆ ಮ್ಯಾನೇಜ್‌ಮೆಂಟುಗಳು ಯಾವಾಗ ಹೇಗೆ ವರ್ತಿಸುತ್ತವೆ ಎಂಬುದನ್ನು ಹೇಳಲಾಗದು. ಆರಕ್ಕೇರದೆ, ಮೂರಕ್ಕಿಳಿಯದೇ ಇದ್ದ ಉದಯವಾಣಿಯನ್ನು ವಿಸ್ತಾರಗೊಳಿಸುವ ಸಲುವಾಗಿ ಪೈಗಳು ಹೊಸಬರನ್ನು ಪತ್ರಿಕೆಗೆ ತರುವ ಮನಸ್ಸು ಮಾಡಿದರು. ಹುಬ್ಬಳ್ಳಿ ಆವೃತ್ತಿ, ಅದರ ಬೆನ್ನಲ್ಲೇ ಮೈಸೂರು ಆವೃತ್ತಿ ತರುವ ಆಲೋಚನೆ ಪೈಗಳದು. ಅದರ ಫಲಿತವೇ ರವಿ ಹೆಗಡೆ ಸೇರ್ಪಡೆ.

ರವಿ ಹೆಗಡೆ ಕನ್ನಡಪ್ರಭದಿಂದ ಹೊರಬಂದು ತಮ್ಮೊಂದಿಗೆ ಸುವರ್ಣ ನ್ಯೂಸ್‌ನಲ್ಲಿ ಕೆಲಸವಿಲ್ಲದೇ ಉಳಿದಿರುವ ೨೫ಕ್ಕೂ ಹೆಚ್ಚು ಪತ್ರಕರ್ತರ ಭವಿಷ್ಯದ ಕುರಿತು ಚಿಂತಿತರಾಗಿದ್ದರು. ಇದೀಗ ಉದಯವಾಣಿ ಸೇರ್ಪಡೆಯಾಗುವುದರೊಂದಿಗೆ ಅವರ ಭವಿಷ್ಯವೂ ತೀರ್ಮಾನವಾಗಬಹುದು. ಇವತ್ತು ಹೆಗಡೆ ತಮ್ಮೊಂದಿಗೆ ಇನ್ನೂ ನಾಲ್ವರನ್ನು ಉದಯವಾಣಿಗೆ ಸೇರ್ಪಡೆಗೊಳಿಸಲಿದ್ದಾರೆ ಎಂಬ ಸುದ್ದಿಯಿದೆ.

ರವಿ ಹೆಗಡೆ ಸೇರ್ಪಡೆ ಉದಯವಾಣಿಯಲ್ಲಿ ಸಂಚಲನವನ್ನೇ ಮೂಡಿಸಿದೆ. ಉದಯವಾಣಿಯ ಸಮರ್ಥರಲ್ಲಿ ಒಬ್ಬರಾದ ಪ್ರಭುದೇವ ಶಾಸ್ತ್ರಿಮಠರನ್ನು ಈಗಾಗಲೇ ಹುಬ್ಬಳ್ಳಿ ಬ್ಯೂರೋಗೆ ಹೋಗಿ ಅಲ್ಲಿನ ಮೇಲ್ವಿಚಾರಣೆ ನೋಡಿಕೊಳ್ಳಲು ಸೂಚಿಸಲಾಗಿದೆ. ಇದು ತಾತ್ಕಾಲಿಕ ವ್ಯವಸ್ಥೆ ಎಂದು ಹೇಳಲಾಗುತ್ತಿದೆಯಾದರೂ ಮುಂದೆ ಏನೇನು ನಡೆಯುತ್ತದೋ ಹೇಳಲು ಸಾಧ್ಯವಿಲ್ಲ. ಹುಬ್ಬಳ್ಳಿ ಬ್ಯೂರೋಗೆ ಬೆಂಗಳೂರಿನಿಂದಲೇ ಮೂವರು ವರದಿಗಾರರು, ಮೂವರು ಉಪಸಂಪಾದಕರನ್ನು ಕಳುಹಿಸುವ ಆಲೋಚನೆ ಮ್ಯಾನೇಜ್‌ಮೆಂಟ್‌ಗೆ ಇದೆ ಎಂಬ ಮಾಹಿತಿಯಿದೆ.

ಇರುವ ಸಿಬ್ಬಂದಿ ಯಾರೂ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂಬುದು ರವಿ ಹೆಗಡೆ ಕಡೆಯಿಂದ ಬಂದಿರುವ ಪಾಸಿಟಿವ್ ಮೆಸೇಜು. ಅದು ಒಳ್ಳೆಯ ಸೂಚನೆ ಕೂಡ.

ಸದ್ಯಕ್ಕೆ ತಿಮ್ಮಪ್ಪ ಭಟ್ಟರಂತೂ ರಾಜೀನಾಮೆಯ ನಿರ್ಧಾರ ಕೈಗೊಂಡಿದ್ದಾರೆ. ಪವಾಡವೇನೂ ನಡೆಯದೆ ಹೋದರೆ ಇಂದು ಸಂಜೆಯ ಹೊತ್ತಿಗೆ ಅವರು ನಿರ್ಗಮಿಸಲೂಬಹುದು. ಅದರೊಂದಿಗೆ ಕನ್ನಡ ಪತ್ರಿಕಾರಂಗದ ಹಾವು ಏಣಿಯಾಟ ಇನ್ನೊಂದು ಹೆಜ್ಜೆ ಮುಂದೆ ಹೋದಂತಾಗಿದೆ.

ಇತ್ತ ಚಾಮರಾಜಪೇಟೆಯ ಪಂಪ ಮಾರ್ಗದಲ್ಲೂ ಏನೇನೋ ಬದಲಾವಣೆಗಳು. ಹೊಸದಿಗಂತದಿಂದ ಚನ್ನಕೃಷ್ಣ ಬಂದು ವಿಜಯ ಕರ್ನಾಟಕ ಸೇರ್ಪಡೆಯಾಗಿದ್ದಾರೆ. ಹೊಸದಿಗಂತಕ್ಕೆ ಹೊಸ ರೂಪ ಕೊಡುವಲ್ಲಿ ಶ್ರಮಿಸಿದವರಲ್ಲಿ ಚನ್ನಕೃಷ್ಣ ಪ್ರಮುಖರು.  ಅದಕ್ಕೂ ಮುನ್ನ ಈ ಸಂಜೆ ಪತ್ರಿಕೆಗೆ ಹೊಸರೂಪ ಕೊಟ್ಟಿದ್ದೂ ಚನ್ನಕೃಷ್ಣ ಅವರೇ. ವಿಭಿನ್ನ ರೀತಿಯ ಪತ್ರಿಕಾ ವಿನ್ಯಾಸದಲ್ಲಿ ಅವರು ಎತ್ತಿದ ಕೈ. ವಿಜಯ ಕರ್ನಾಟಕ ಅವರನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.

ವಿಜಯ ಕರ್ನಾಟಕಕ್ಕೆ ಹೊಸ ಸಂಪಾದಕರ ನೇಮಕಾತಿಯಾಗಿಲ್ಲ. ಇ. ರಾಘವನ್ ತಮಗೆ ಕೊಟ್ಟ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿಭಾಯಿಸುತ್ತಿರುವುದರಿಂದ ಹೊಸ ಸಂಪಾದಕರ ಅಗತ್ಯವಿಲ್ಲ ಎಂಬುದು ವಿಕದ ಕೆಲವು ಸಿಬ್ಬಂದಿಯ ನಿಲುವು. ರಾಘವನ್ ಅವರಿಗೆ ಮುಖ್ಯವರದಿಗಾರ ಎಲ್. ಪ್ರಕಾಶ್ ಬಳಗದ ಪೂರ್ಣ ಬೆಂಬಲವೂ ಲಭ್ಯವಾಗಿದೆ. ಒನ್ಸ್ ಎಗೇನ್, ಮ್ಯಾನೇಜ್‌ಮೆಂಟುಗಳು ಹೇಗೆ ಯೋಚಿಸುತ್ತವೆ ಹೇಳಲು ಸಾಧ್ಯವಿಲ್ಲವಲ್ಲ?

ಹಾಗಂತ ವಿಜಯ ಕರ್ನಾಟಕದಲ್ಲಿ ಸಮಸ್ಯೆಗಳು ಇಲ್ಲದೇ ಇಲ್ಲ. ಅಲ್ಲಿ ವಿಶ್ವೇಶ್ವರ ಭಟ್ಟರ ಪರವಾಗಿರುವವರ ಪಟ್ಟಿಯೊಂದನ್ನು ಮಾಡಿ, ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪಗಳೂ ಇವೆ. ಪತ್ರಕರ್ತರು ಹೈ ಪ್ರೊಫೈಲ್ ಪತ್ರಕರ್ತರ ನೇತೃತ್ವದಲ್ಲಿ ತಂಡಗಳಾಗಿ ಹಂಚಿಕೆಯಾಗುತ್ತಿರುವುದು ಇಂಥ ಕಳವಳಕಾರಿ ಬೆಳವಣಿಗೆಗಳಿಗೆ ಕಾರಣ.

ಸದ್ಯಕ್ಕೆ ಉದಯವಾಣಿ ನೇತೃತ್ವ ವಹಿಸಿಕೊಳ್ಳುತ್ತಿರುವ ರವಿ ಹೆಗಡೆಯವರಿಗೆ ಇದು ಮೊದಲ ಬಾರಿ ಸ್ವತಂತ್ರ ಹೊಣೆ. ಅವರಿಗೊಂದು ಅಭಿನಂದನೆ ಹೇಳೋಣ. ಹಾಗೆಯೇ ಮತ್ತೆ ತೆರೆಮರೆಗೆ ಸರಿಯುತ್ತಿರುವ ಭಟ್ಟರಿಗೂ ಒಳ್ಳೆಯದಾಗಲಿ ಎಂದು ಆಶಿಸೋಣ.
0 komentar

Blog Archive