
ದಂಡಾವತಿಯವರು ಮೂಲತಃ ಬಿಜಾಪುರದವರು, ಪ್ರತಿಭಾವಂತರು. ಪ್ರಜಾವಾಣಿ ಸೇರುವ ಮುನ್ನ ಶೂದ್ರ ಪತ್ರಿಕೆಯಲ್ಲಿ ಕೆಲಕಾಲ ದುಡಿದಿದ್ದರು. ದಿ ಪ್ರಿಂಟರ‍್ಸ್ ಮೈಸೂರು ಸಂಸ್ಥೆಗೆ ಸೇರಿದ ನಂತರ ಹಲವು ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡಮಿ ಪತ್ರಿಕೋದ್ಯಮ ಕುರಿತ ದಂಡಾವತಿಯವರ ಎರಡು ಕೃತಿಗಳನ್ನು ಪ್ರಕಟಿಸಿದೆ. ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿದೆ.
ಇಂಥ ಹಿರಿಯ ಪತ್ರಕರ್ತರೂ ಒಮ್ಮೊಮ್ಮೆ ಎಡವಿಬಿಡುತ್ತಾರೆ. ಎಡವಿದ್ದು ಇವತ್ತಿನ ಆಧುನಿಕಯುಗದಲ್ಲಿ ನಿಚ್ಚಳವಾಗಿ ಎಲ್ಲರಿಗೂ ಕಾಣಸಿಗುತ್ತದೆ. ಇಲ್ಲಿ ಒಂದು ಉದಾಹರಣೆ ನಿಮ್ಮ ಮುಂದಿದೆ.
ಕಳೆದ ವರ್ಷ ನಡೆದ ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ದಂಡಾವತಿಯವರು ತಮ್ಮ ನಾಲ್ಕನೇ ಆಯಾಮದಲ್ಲಿ ಉಪಚುನಾವಣೆಗಳ ಕುರಿತಾಗಿ ಬರೆದಿದ್ದರು. ನಿಷ್ಠುರವಾಗಿ ಹೇಳಬೇಕೆಂದರೆ ಅದು ಅವರ ಅಂಕಣಕ್ಕೆ ಒಗ್ಗುವ ವಿಷಯವೇ ಆಗಿರಲಿಲ್ಲ. ವರದಿಗಾರನೊಬ್ಬನ ಚುನಾವಣಾ ವಿಶ್ಲೇಷಣೆಯ ಧಾಟಿಯಲ್ಲಿ ಬರಹ ಸಾಗುತ್ತದೆ.
ಚುನಾವಣೆಯ ಕುರಿತು ಬರೆಯುತ್ತ ದಂಡಾವತಿಯವರು ಒಂದು ವಿಷಯವನ್ನು ತೇಲಿಬಿಟ್ಟರು. ಈ ಸಾಲುಗಳನ್ನು ಗಮನಿಸಿ: ಬಿಜೆಪಿ ಆಂತರಿಕವಾಗಿ ಕುದಿಯುತ್ತಿರುವಾಗಲೇ ಅತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಬೇರೆಯದೇ ಲೆಕ್ಕ ಹಾಕಿದಂತಿದೆ. ದೇವೇಗೌಡರಿಗೆ ನಿಕಟವಾಗಿರುವ ಧರ್ಮಸಿಂಗ್, ಗುಲಬರ್ಗಾ ದಕ್ಷಿಣ ಕ್ಷೇತ್ರವನ್ನು ನಮಗೆ ಬಿಟ್ಟುಕೊಡಿ, ಕಡೂರು ಕ್ಷೇತ್ರವನ್ನು ನಿಮಗೆ ಬಿಟ್ಟುಕೊಡುತ್ತೇವೆ ಎಂದು ಮಾತಾಡಿದ್ದಾರೆ ಎಂಬ ಗಾಳಿ ಸುದ್ದಿ ಹರಡಿದೆ.

ಎಚ್.ಡಿ.ದೇವೇಗೌಡರು ಸುಮ್ಮನಿರಲಿಲ್ಲ. ಸೆ.೮ರ ವಿಜಯ ಕರ್ನಾಟಕದ ಮುಖಪುಟದಲ್ಲೇ ಗೌಡರ ವಿಶೇಷ ಸಂದರ್ಶನ ಪ್ರಕಟಗೊಂಡಿತು. ಒಳ ಒಪ್ಪಂದ: ಮಾಧ್ಯಮ ವರದಿಗೆ ಆಕ್ರೋಶ ಎಂಬ ತಲೆಬರಹದ ಈ ಸಂದರ್ಶನದಲ್ಲಿ ಗೌಡರು ಈ ಗಾಳಿಸುದ್ದಿಯನ್ನು ತಿರಸ್ಕರಿಸಿದರಲ್ಲದೆ, ಈ ರೀತಿ ಸುದ್ದಿ ಹಬ್ಬಿಸುವವರಿಗೆ ನಾಚಿಕೆ ಇಲ್ಲ ಎಂದು ಗುಡುಗಿದರು.
ನಂತರ ಚುನಾವಣೆ ನಡೆಯಿತು. ಗೆದ್ದಿದ್ದು ಜೆಡಿಎಸ್ ಅಭ್ಯರ್ಥಿ.
ವಿಷಯ ಏನು ಅಂದರೆ, ಇದರಲ್ಲಿ ದಂಡಾವತಿಯವರ ದುರುದ್ದೇಶಗಳೇನೂ ಇರಲಿಲ್ಲ. ಅವರಿಗೆ ಮಾಹಿತಿ ಒದಗಿಸಿದ ಗುಲ್ಬರ್ಗದ ಹಿರಿಯ ಸಿಬ್ಬಂದಿ ಬೇಕೆಂದೇ ದಾರಿ ತಪ್ಪಿಸಿದ್ದರು. ಈ ಉಪಚುನಾವಣೆಯಲ್ಲಿ ವಿಪರೀತ ಆಕ್ಟಿವ್ ಆಗಿದ್ದ ಆ ಮಹಾನುಭಾವ ತಮ್ಮ ಸಂಪಾದಕರಿಂದಲೇ ಇಂಥದ್ದನ್ನು ಬರೆಸುವ ಹಿಂದೆ ಯಾವ ಉದ್ದೇಶವಿತ್ತೋ ಯಾರು ಬಲ್ಲರು? ಇದೆಲ್ಲ ಗೊತ್ತಾದ ನಂತರ ದಂಡಾವತಿ ಆ ತಮ್ಮ ಶಿಷ್ಯನನ್ನು ತರಾಟೆಗೆ ತೆಗೆದುಕೊಂಡರಾ? ಗೊತ್ತಿಲ್ಲ.

ನಾಳೆ ದಂಡಾವತಿಯವರ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ, ಇಂಥ ಇನ್ನೂ ಹಲವು ಸಂಪುಟಗಳನ್ನು ಅವರು ಹೊರತರುವಂತಾಗಲಿ ಎಂದು ಆಶಿಸುತ್ತೇವೆ. ದಂಡಾವತಿಯವರಿಗೆ ಅಭಿನಂದನೆಗಳು.
ಮರೆತಿದ್ದ ಮಾತು: ಇಲ್ಲಿ ಬಳಸಿರುವ ಪದ್ಮರಾಜ ದಂಡಾವತಿಯವರ ಫೋಟೋ ಶ್ರೀವತ್ಸ ಜೋಷಿಯವರ ಕ್ಯಾಮರಾದಿಂದ ತೆಗೆದದ್ದು. ಮೀಡಿಯಾ ಮಿರ್ಚಿಯಲ್ಲಿ ಪ್ರಕಟಗೊಂಡಿದ್ದನ್ನು ಕದ್ದಿದ್ದೇವೆ. ಕೇಳದೇ ಬಳಸಿದ್ದಕ್ಕೆ ಕ್ಷಮೆಯಿರಲಿ.
发表评论