ಇಂಡಿಪೆಂಡೆನ್ಸ್ ಡೇ ಮುಗೀತು, ದಸರಾ ಬಂದು ಹೋಯ್ತು, ರಾಜ್ಯೋತ್ಸವವೂ ಆಯ್ತು, ದೀಪಾವಳಿಯೂ ಉರಿದು ಹೋಯ್ತು. ಉಳಿದಿದ್ದು ನ್ಯೂ ಇಯರ್, ನಂತರ ಸಂಕ್ರಾಂತಿ ಎಲ್ಲವೂ ಆಗಿ ಹೋದವು. ಚಾನೆಲ್ ಮಾತ್ರ ಶುರುವಾಗಲಿಲ್ಲ.
ಇದು ಜನಾರ್ದನ ರೆಡ್ಡಿ-ಶ್ರೀರಾಮುಲು ಅವರ ಜನಶ್ರೀ ಕಥೆ. ಜನಶ್ರೀ ಹೆಸರಿನಲ್ಲೇ ಜನಾರ್ದನ ರೆಡ್ಡಿ, ಶ್ರೀರಾಮುಲು ಇಬ್ಬರೂ ಇದ್ದಾರೆ. ಇಬ್ಬರೂ ಸದ್ಯದ ಕರ್ನಾಟಕ ರಾಜಕಾರಣದಲ್ಲಿ, ಉದ್ಯಮದಲ್ಲಿ ಓಡುತ್ತಿರುವ ಕುದುರೆಗಳು. ರೆಡ್ಡಿಗಳು ಕಳೆದ ಕೆಲವು ವರ್ಷಗಳಲ್ಲಿ ಕೈ ಇಟ್ಟಿದ್ದೆಲ್ಲ ಚಿನ್ನ.
ಆದರೆ ನಸೀಬು ಒಂದೇ ತರ ಇರಲ್ಲ ನೋಡಿ. ಸದ್ಯಕ್ಕೆ ಅವರ ಟೈಮು ಸರಿ ಇದ್ದಂತೆ ಕಾಣುತ್ತಿಲ್ಲ. ಒಂದೆಡೆ ಕರ್ನಾಟಕದ ಬಿಜೆಪಿ ಸರ್ಕಾರವೇ ಈಗಲೋ ಆಗಲೋ ನೆಗೆದುಬೀಳುವಂತಿದೆ. ಆಂಧ್ರದಲ್ಲಿ ರೆಡ್ಡಿಗಳಿಗೆ ಗಾಡ್‌ಫಾದರ್‌ನಂತಿದ್ದ ವೈಎಸ್‌ಆರ್ ಹೆಲಿಕಾಪ್ಟರಿನ ಸಮೇತ ಸುಟ್ಟುಹೋದರು; ಜೊತೆಜೊತೆಗೆ ರೆಡ್ಡಿಗಳ ರಾಜಕೀಯ ಮಹತ್ವಾಕಾಂಕ್ಷೆಗಳೂ ಭಸ್ಮವಾಗುತ್ತಿವೆ. ಅಕ್ರಮ ಗಣಿಗಾರಿಕೆ ಕುರಿತ ಸಿಬಿಐ ತನಿಖೆ ಆಂಧ್ರಸೀಮೆಯಿಂದ ಶುರುವಾಗಿ ರೆಡ್ಡಿಗಳ ಮನೆ ಬಾಗಿಲಿಗೆ ಬಂದು ನಿಂತಿದೆ. ರೆಡ್ಡಿಗಳ ಫ್ರೆಂಡು, ಪಾರ್ಟನರ್ ವೈಎಸ್‌ಆರ್ ಪುತ್ರ ಜಗನ್ ಕಾಂಗ್ರೆಸ್‌ನಿಂದ ಹೊರಬಿದ್ದು ಹೊಸಪಾರ್ಟಿ ಕಟ್ಟುವ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ.
ರಾಜಕೀಯವಾಗಿಯೂ ರೆಡ್ಡಿಗಳು ಸ್ವತಃ ಬಳ್ಳಾರಿಯಲ್ಲೇ ಏಟು ತಿಂದಿದ್ದಾರೆ. ಜಿಪಂ ಚುನಾವಣೆಗಳಲ್ಲಿ ರೆಡ್ಡಿಗಳಿಗೆ ಸರಿಯಾದ ಹೊಡೆತವೇ ಬಿದ್ದಿದೆ. ಹಾಗೂ ಹೀಗೂ ಆಪರೇಷನ್ ಕಮಲ ಮಾಡಿ ಗದ್ದುಗೆ ಹಿಡಿದರೂ, ರೆಡ್ಡಿಗಳ ಪಾಲಿಗೆ ಈ ಹಿಂಬಾಗಿಲ ಜಯ, ಜಯವಲ್ಲ.
ಹೀಗಿರುವಾಗ ಚಾನೆಲ್ ಕಥೆ ಏನಾಯ್ತು ಎಂದರೆ ಜನಶ್ರೀಯಲ್ಲಿ ಸೇರಿಕೊಂಡಿರುವ ಪತ್ರಕರ್ತರ ಮುಖಗಳಲ್ಲಿ ನಿಸ್ತೇಜ ಕಳೆ. ಮೊದಮೊದಲು ದಸರಾಗೆ ಶುರು, ದೀಪಾವಳಿಗೆ ಸಿಡಿತೀವಿ ನೋಡಿ, ಸಂಕ್ರಾಂತಿ ಎಳ್ಳುಬೆಲ್ಲದೊಂದಿಗೆ ಬರ‍್ತೀವಿ ಎನ್ನುತ್ತಿದ್ದ ಹುಡುಗ-ಹುಡುಗಿಯರು ಈಗೀಗ ಯಾವಾಗ ಶುರುವಾಗುತ್ತೋ ಗೊತ್ತಿಲ್ಲ ಕಣ್ರೀ ಎಂದು ನಿರುತ್ಸಾಹದಿಂದ ಗೊಣಗುತ್ತಿದ್ದಾರೆ.
ಇನ್ನೂ ಚಾನೆಲ್ ಅಪ್ರೂವಲ್ ಆಗಿಲ್ಲ, ಸ್ಯಾಟಲೈಟ್‌ದು ಏನೇನೋ ಪ್ರಾಬ್ಲಮ್ಮು, ಸೆಂಟ್ರಲ್ ಗವರ್ಮೆಂಟು ಬೇಕಂತ ಆಟ ಆಡಿಸ್ತಾ ಇದೆ... ಇತ್ಯಾದಿ ಇತ್ಯಾದಿ ಕಪೋಲಕಲ್ಪಿತ ಮಾತುಗಳು ಚಾನೆಲ್ ಹುಡುಗರಲ್ಲೇ ವಿನಿಮಯವಾಗುತ್ತಿದೆ.
ಸದ್ಯಕ್ಕೆ ಜನಶ್ರೀಯಲ್ಲಿ ಅನಂತ ಚಿನಿವಾರ್ ಬಾಸ್. ಚಿನಿವಾರ್ ಪ್ರತಿಭಾವಂತ ಪತ್ರಕರ್ತ, ಸೂಕ್ಷ್ಮಮತಿ. ಆದರೆ ಇಷ್ಟು ದೊಡ್ಡ ಟೀಮನ್ನು ನಿಯಂತ್ರಿಸುವುದು ಅವರಿಂದ ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಚಿನಿವಾರ್ ಹಿಂದೆ ತಮ್ಮ ಟೀಮಿನೊಂದಿಗೆ ರಾಜ್ ನ್ಯೂಸ್ ಎಂಬ ಶುರುವಾಗದ ಚಾನೆಲ್‌ಗೆ ಹೋಗಿ ಪಟ್ಟಪಾಡು ದೇವರಿಗೇ ಪ್ರೀತಿ. ಕಡೆಗೆ ಚಿನಿವಾರ್ ತಂಡ ಸಂಬಳಕ್ಕೂ ಜಗಳವಾಡಿ ಅಲ್ಲಿಂದ ಹೊರಬರಬೇಕಾಯಿತು.
ಜನಶ್ರೀಯಲ್ಲಿ ಸಂಬಳಕ್ಕೇನು ಕೊರತೆಯಿಲ್ಲ. ಇಲ್ಲಿ ಆಫರ್ ಮಾಡಲಾದ ಸಂಬಳವನ್ನು ನೆಚ್ಚಿಕೊಂಡೇ ಟಿವಿ೯, ಈಟಿವಿಯಿಂದ ಸಾಕಷ್ಟು ಮಂದಿ ಸಾಲುಮೇರೆ ವಲಸೆ ಬಂದಿದ್ದಾರೆ. ಇತ್ತೀಚಿಗಷ್ಟೆ ಸುವರ್ಣ ನ್ಯೂಸ್‌ನಿಂದ ಹೊರಗೆ ಬಂದಿರುವ ರಂಗನಾಥ ಭಾರದ್ವಾಜ್ ಕೂಡ ಜನಶ್ರೀಗೆ ಸೇರಿಕೊಳ್ಳುವ ಸಾಧ್ಯತೆಯಿದೆ. ಇದೆಲ್ಲ ಸರಿ. ಆದರೆ ಎಷ್ಟು ದಿನ ಟ್ರಯಲ್ ಪ್ರೋಗ್ರಾಮ್ ಮಾಡೋದು? ಯಾರೂ ನೋಡದ ಸುದ್ದಿಯನ್ನು ಎಷ್ಟು ದಿನ ಓದೋದು? ಕಾರ್ಯಕ್ರಮಗಳು, ಪ್ರೆಸ್‌ಮೀಟುಗಳಿಗೆ ಲೋಗೋ ಹಿಡಿದು ಹೋಗುವ ಹುಡುಗರನ್ನು ಜನರು ವಿಚಿತ್ರವಾಗಿ ನೋಡ್ತಾರಲ್ಲವೆ?
ಪತ್ರಕರ್ತರು ಗುಮಾಸ್ತರ ಥರ ಅಲ್ಲ. ಅದರಲ್ಲೂ ಟಿವಿ ಪತ್ರಕರ್ತರು ಇವತ್ತು ಸ್ಟಾರ್ ವ್ಯಾಲ್ಯೂ ಇರುವವರು. ಜನರನ್ನು ತಲುಪದೇ ಹೋದರೆ ಅವರು ಎಷ್ಟೇ ದುಡ್ಡು ಕೊಟ್ರೂ ಕೆಲಸ ಮಾಡುವವರಲ್ಲ. ಕೆಲಸ ಮಾಡಿದರೂ ವೃತ್ತಿಯೆಡೆಗಿನ ಪ್ಯಾಷನ್ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ.
ಜನಶ್ರೀ ಬೇಗ ಶುರುವಾಗಲಿ, ಅಲ್ಲಿರುವ ಹುಡುಗ-ಹುಡುಗಿಯರ ಮೊಗದಲ್ಲಿ ಮಂದಹಾಸ ಮೂಡಲಿ.
ಮರೆತಿದ್ದ ಮಾತು: ಪತ್ರಕರ್ತರು ಜನರನ್ನು ತಲುಪದೇ ಹೋದರೆ ಕಂಗಾಲಾಗಿ ಹೋಗಿಬಿಡುತ್ತಾರೆ ಎಂದೆವಲ್ಲ. ಅದಕ್ಕೆ ವಿಜಯ ಕರ್ನಾಟಕದಿಂದ ಹೊರಬಂದ ಪ್ರತಾಪಸಿಂಹ ಉದಾಹರಣೆ. ಲಾಲ್‌ಚೌಕದ ವಿದ್ಯಮಾನ, ಜಿಲ್ಲಾಧಿಕಾರಿ ಜೀವಂತ ದಹನ... ಇತ್ಯಾದಿ ಇತ್ಯಾದಿ ಘಟನೆಗಳೆಲ್ಲ ನಡೆಯುತ್ತಿರುವಾಗ ನಂಗೆ ಬರೆಯಲು ಕಾಲಂ ಇಲ್ಲ. ನಾನು ಹುಚ್ಚನಾಗುತ್ತಿದ್ದೇನೆ ಎಂಬ ಪ್ರಾಮಾಣಿಕ ಅನಿಸಿಕೆಯನ್ನು ಪ್ರತಾಪಸಿಂಹ ತಮ್ಮ ಫೇಸ್‌ಬುಕ್ ಗೋಡೆಗೆ ಅಂಟಿಸಿದ್ದಾನೆ. ೧೦ನೇ ತಾರೀಖಿನವರೆಗೆ ತಡೆದುಕೋ, ನಿಂಗೊಂದು ಕಾಲಂ ಸಿಗುತ್ತೆ ಎಂದು ಭಟ್ಟರು ಸಮಾಧಾನಪಡಿಸುತ್ತಿದ್ದಾರೆ ಎಂಬ ಮಾಹಿತಿಯಿದೆ. ಒಂದು ಹುಚ್ಚರಾಸ್ಪತ್ರ್ರೆ ನಾನು ಕಟ್ಟಿಸಿಕೊಡಲೇ ಎನ್ನುತ್ತ ರವಿ ಬೆಳಗೆರೆ ಮೀಸೆಯಡಿಯಲ್ಲೇ ಖಿಲ್ಲನೆ ನಕ್ಕರು ಎಂಬುದು ಮಾತ್ರ ಶುದ್ಧಕುಹಕ.
发表评论