
ಶಶಿಧರ ಭಟ್ಟರು ಬರುವುದಕ್ಕೆ ಮುನ್ನ ಚಾನೆಲ್ ಮಾರಿಬಿಡುವ ಒಂದು ಪ್ರಸ್ತಾಪವೂ ಜಾರಕಿಹೊಳಿ ಮುಂದೆ ಇತ್ತು. ರೇಟು ಕುದುರಲಿಲ್ಲ, ಹೀಗಾಗಿ ಮಾರಲಿಲ್ಲ ಎಂಬುದು ನಂಬಲರ್ಹವಾದ ಮಾಹಿತಿ. ಸಮಯದಲ್ಲಿ ಎಲ್ಲವೂ ಇದೆ, ಆದರೆ ಏನೋ ಒಂದು ಕೊರತೆ ಕಾಡುತ್ತಲೇ ಇತ್ತು. ಬಹುಶಃ ಸಮರ್ಥ ಟೀಮ್ ಲೀಡರ್ ಬೇಕಿತ್ತೇನೋ? ಈಗ ಭಟ್ಟರು ಬಂದಿದ್ದಾರೆ. ಚಾನೆಲ್ ಸುಧಾರಿಸುತ್ತಾ? ಕಾದು ನೋಡಬೇಕು.
ಭಟ್ಟರು ಹಿಂದೆಲ್ಲ ತಾವು ನಂಬಿದವರಿಂದಲೇ ಏಟು ತಿಂದಿದ್ದಾರೆ, ಈ ಬಾರಿಯೂ ತಿನ್ನದಿರಲಿ ಎಂಬುದು ಎಲ್ಲರ ಆಶಯ. ಜೊತೆಯಲ್ಲಿದ್ದವರೇ ಕೈಕೊಟ್ಟರು ಎಂದು ಭಟ್ಟರು ಆಗಾಗ ಹಳಹಳಿಸುವುದುಂಟು. ಆದರೆ ಇವತ್ತಿನ ಮಾರುಕಟ್ಟೆ ಯುಗದಲ್ಲಿ ಇಂಥ ಹಳಹಳಿಕೆಗೆ ಬೆಲೆ ಇಲ್ಲ ಎಂಬುದು ಅವರಿಗೂ ಗೊತ್ತುಂಟು.
ಭಟ್ಟರ ಸಮಸ್ಯೆ ಇರುವುದೇ ಅವರು ಕಟ್ಟಿಕೊಳ್ಳುವ ಟೀಮಿನಲ್ಲಿ. ತಮ್ಮನ್ನೇ ಎಲ್ಲದಕ್ಕೂ ಅವಲಂಬಿಸುವವರನ್ನು ಕಟ್ಟಿಕೊಂಡು ಎಷ್ಟು ಕಾಲ ಏಗಲು ಸಾಧ್ಯ? ಸ್ಟುಡಿಯೋಗೆ ಬರುವ ಅತಿಥಿಗಳ ಫೋನ್ ನಂಬರುಗಳನ್ನೂ ತಾವೇ ಹುಡುಕಿಕೊಡಬೇಕಾದ ಅನಿವಾರ್ಯತೆ ಸೃಷ್ಟಿಸಿಕೊಂಡರೆ ದೊಡ್ಡ ಚಾನೆಲ್‌ಗಳ ಬೇರೆ ಕೆಲಸಗಳು ಹೇಗೆ ಮುಂದೆ ಸಾಗುತ್ತವೆ? ಬೇರೆ ಬೇರೆ ಕ್ಷೇತ್ರಗಳ ಬಗ್ಗೆ ವಿಶೇಷ ಜ್ಞಾನ, ಪರಿಣತಿ ಹೊಂದಿರುವವರನ್ನು ಗುರುತಿಸಿ, ಆಯಕಟ್ಟಿನ ಜಾಗದಲ್ಲಿ ನೇಮಿಸಿ ಅವರಿಂದ ಕೆಲಸ ತೆಗೆಸುವುದು ಸುಲಭದ ಮಾತಲ್ಲ. ಇದು ಭಟ್ಟರಿಗೆ ಅಸಾಧ್ಯದ ಮಾತೂ ಅಲ್ಲ. ಬೇಸರದ ವಿಷಯವೆಂದರೆ ಭಟ್ಟರಿಗೆ ಇದು ಈವರೆಗೆ ಸಾಧ್ಯವಾಗಿಲ್ಲ.

ಮೊನ್ನೆ ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ಸುದ್ದಿ ಹೊರಬಂದಾಗ ತೀರ್ಪಿನ ಸಂಪೂರ್ಣ ಮಾಹಿತಿಗಳನ್ನು ಇದೇ ತಂಡ ಹೇಗೆ ಒದಗಿಸಿತೆಂದರೆ ಉಳಿದೆಲ್ಲ ಚಾನೆಲ್‌ಗಳೂ ಸುವರ್ಣದ ಎದುರು ಸಪ್ಪೆಯಾಗಿಬಿಟ್ಟವು.
ಎಂಥವರನ್ನಾದರೂ ಕೊಡಿ, ನಾವು ಪಳಗಿಸಿ ಕೆಲಸ ತೆಗೆಸುತ್ತೇವೆ ಎಂದು ಹೇಳುವ ಟೀಮ್ ಲೀಡರ್‌ಗಳು ಒಂದೇ ಅತಿಯಾದ ಆತ್ಮವಿಶ್ವಾಸದಿಂದ ಕುಸಿದು ಬೀಳುತ್ತಾರೆ ಅಥವಾ ಗೊತ್ತಿದ್ದೇ ಸಂಸ್ಥೆಯನ್ನು ವಂಚಿಸುತ್ತಿರುತ್ತಾರೆ. ಆದರೆ ರಂಗನಾಥ್ ಹೀಗೆ ಮಾಡದೆ, ಸಂಸ್ಥೆಗೆ ನಿಜಕ್ಕೂ ಉಪಯೋಗವಾಗುವ ಕ್ಯಾಂಡಿಟೇಟುಗಳನ್ನು ತಂದು ಜತೆಗಿಟ್ಟುಕೊಂಡು ಕೆಲಸ ತೆಗೆಸಿದರು, ಸೋಮಾರಿ ಬಿದ್ದಿದ್ದ ಜಿಲ್ಲಾ ವರದಿಗಾರರ ಪೈಕಿ ಕೆಲವರನ್ನು ಬದಲಿಸಿದರು ಮತ್ತೆ ಕೆಲವರನ್ನು ತಮ್ಮ ದಾರಿಗೆ ತಂದುಕೊಂಡರು. ತಾವೇ ಕರೆದುಕೊಂಡು ಬಂದ ಪರಮೇಶ್ವರ ಭಟ್ಟರು ಜಿಲ್ಲಾ ವರದಿಗಾರರಿಗೆ ಕಿರುಕುಳ ನೀಡಲು ಶುರು ಮಾಡಿದಾಗ ಮನೆಯ ದಾರಿ ತೋರಿದರು. ಈ ಎಲ್ಲ ಕಾರ್ಯಾಚರಣೆಗಳಿಂದ ಒಂದು ಹಂತದವರೆಗೆ ಯಶಸ್ವಿಯೂ ಆದರು.
ಆದರೆ ರಂಗಣ್ಣ ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ತಮ್ಮ ಸಹೋದ್ಯೋಗಿಗಳನ್ನು ಮನಸ್ಸಿಗೆ ಬಂದಂತೆ ನಿಂದಿಸಿದರು, ಕೊಂದು ಹಾಕಿಬಿಡ್ತೇನೆ ಎಂದು ಕೂಗಾಡಿದ್ದೂ ಉಂಟು. ಹಿಂದೆ ಕ್ರೈಂ ಬೀಟು ವರದಿಗಾರಿಕೆ ಮಾಡುತ್ತಿದ್ದುದರ ಪರಿಣಾಮ ಅದು. ಸಕ್ಸಸ್ಸಿನ ಫಾರ್ಮುಲಾದಲ್ಲಿ ಇಂಥ ಅತಿರೇಕಗಳು ಇರಬೇಕಿಲ್ಲ. ಈ ಕುರಿತು ಇನ್ನೊಮ್ಮೆ ಚರ್ಚಿಸೋಣ.
ಮತ್ತೆ ಶಶಿಧರ ಭಟ್ಟರ ವಿಷಯಕ್ಕೆ ಬರುವುದಾದರೆ, ಅವರು ಈಗ ಸಮಯದ ಚಾನೆಲ್ ಹೆಡ್ ಆಗಿದ್ದರೂ ಹೊಸ ತಂಡವನ್ನು ಕಟ್ಟಿಕೊಳ್ಳುವ ಅವಕಾಶಗಳು ಕಡಿಮೆ. ಒಂದಷ್ಟು ಬದಲಾವಣೆ ಮಾಡಿಕೊಳ್ಳಬಹುದಾದರೂ ತಮ್ಮ ಅಭಿರುಚಿಗೆ, ಅಗತ್ಯಕ್ಕೆ ತಕ್ಕಂತೆ ಪೂರ್ತಿ ತಂಡವನ್ನು ಪುನರ್ ರಚಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಇದು ಅವರಿಗೆ ದೊಡ್ಡ ಸವಾಲು ಕೂಡ ಹೌದು.
ಭಟ್ಟರು ಸೂಕ್ಷ್ಮ ಮನಸ್ಸಿನ ಅಂತರ್ಮುಖಿ, ಸಣ್ಣಪುಟ್ಟದ್ದಕ್ಕೂ ಬೇಸರ ಪಟ್ಟುಕೊಳ್ಳುತ್ತಾರೆ. ಇತರರಿಂದ ವಂಚನೆಯಾದಾಗ, ಅವರ ನಂಬಿಕೆಗಳು ಅಲುಗಿದಾಗ ಸಂಕಟಪಟ್ಟುಕೊಳ್ಳುತ್ತಾರೆ. ಆದರೆ ಟೀಮ್ ಲೀಡರ್ ಆದವನು ಇದನ್ನು ಮೀರದ ಹೊರತು ಕಿರುಕುಳ ಕೊಡುವವರ ಸಂಖ್ಯೆಯೇನು ಕಡಿಮೆ ಇರಲಾರದು.
ಭಟ್ಟರು ಜನಪರ ಕಾಳಜಿಯುಳ್ಳವರು. ಅಗ್ಗದ ಜನಪ್ರಿಯತೆ ತಂದುಕೊಡುವ ಮನುಷ್ಯವಿರೋಧಿ ಸಿದ್ಧಾಂತಗಳಿಗೆ ಎಂದೂ ಬಲಿಯಾದವರಲ್ಲ. ವೈಯಕ್ತಿಕವಾಗಿ ಪ್ರಾಮಾಣಿಕತೆಯನ್ನು ಉಳಿಸಿಕೊಂಡವರು, ತಾನು ನಂಬಿದ ಜೀವನಧರ್ಮಕ್ಕೆ ನಿಷ್ಠರಾಗಿ ಬದುಕುತ್ತಿರುವವರು.
ಶಶಿಧರ ಭಟ್ಟರಿಗೆ ಒಳ್ಳೆಯದಾಗಲಿ.
发表评论