ನಿಗದಿಗಿಂತ ಎರಡೂವರೆ ಗಂಟೆ ತಡವಾಗಿ ಉತ್ಸವಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಚಿವ ಶ್ರೀರಾಮುಲು ಹಂಪಿಯ ಪೇಟ ತೊಡಿಸಿ, ವಿಜಯ ಖಡ್ಗವನ್ನು ನೀಡುತ್ತಿದ್ದಂತೆಯೇ, ಒಂದು ಕ್ಷಣ ಯಡಿಯೂರಪ್ಪ ಅವರೂ, ವೀರಯೋಧನೂ ಆಗಿ, ಗಂಡರಗಂಡ, ವೀರರಮಣ ಎಂದೇ ಕರೆಯಿಸಿಕೊಂಡಿದ್ದ ಕೃಷ್ಣದೇವರಾಯನಂತೆ ಕಂಗೊಳಿಸಿದರು...


ಇವತ್ತಿನ ಪ್ರಜಾವಾಣಿಯ ರಾಜ್ಯ-ರಾಷ್ಟ್ರೀಯ ಪುಟದ (ಪುಟ-೮ಬಿ) ಬೆರಗು ಮೂಡಿಸಿದ ಹಂಪಿ ಉತ್ಸವದ ಬೆಡಗು ಎಂಬ ವರದಿಯ ಸಾಲುಗಳು ಇವು.

ವರದಿಗಾರಿಕೆಯ ಪ್ರಾಥಮಿಕ ಪಾಠಗಳನ್ನು ಕಲಿತ ಟ್ರೈನಿಗಳೂ ಕೂಡ ಬರೆಯದಂಥ ವಾಕ್ಯಗಳನ್ನು ಸಿದ್ಧಯ್ಯ ಹಿರೇಮಠ ಬರೆದಿದ್ದಾರೆ. ಅದನ್ನು ಪ್ರಕಟಿಸಿ, ಪ್ರಜಾವಾಣಿ ಪಾವನವಾಗಿದೆ.

ಈ ವರದಿಗಾರನಿಗೆ ಯಡಿಯೂರಪ್ಪ ಕೃಷ್ಣದೇವರಾಯನಂತೆ ಕಂಡಿರಬಹುದು, ಹೀಗೆ ಕಾಣಿಸುವುದಕ್ಕೂ ಅವರವರದ್ದೇ ಆದ ಕಾರಣಗಳಿರುತ್ತದೆ. ಆ ಕುರಿತು ನಮ್ಮ ಆಕ್ಷೇಪಣೆಗಳೇನೂ ಇಲ್ಲ.

ಆದರೆ ಇಂಥ ಕಾಲ್ಪನಿಕ, ಉತ್ಪ್ರೇಕ್ಷಿತ ಉಪಮೆಗಳನ್ನು ಪತ್ರಿಕಾ ವರದಿಗಾರ ಬರೆಯಕೂಡದು ಎಂಬ ಪ್ರಾಥಮಿಕ ಪಾಠವನ್ನು ಅವರಿಗೆ ಯಾರೂ ಹೇಳಿಕೊಡಲಿಲ್ಲವೆ? ತಮ್ಮ ವರದಿಗಾರರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಪ್ರವೇಶ ಪರೀಕ್ಷೆಯನ್ನು ನಡೆಸುವ, ನಂತರ ತಿಂಗಳುಗಟ್ಟಲೆ ತರಬೇತಿ ನೀಡುವ ಪ್ರಜಾವಾಣಿಯ ಹಿರಿಯ ತಲೆಗಳಾದರೂ ಅವರಿಗೆ ಇದನ್ನು ಹೇಳಿಕೊಟ್ಟಿರಲಿಲ್ಲವೇ?

ಪ್ರಜಾವಾಣಿಯಲ್ಲಿ ನಡೆಯುತ್ತಿರುವ ವಿಚಿತ್ರಗಳನ್ನು ಗಮನಿಸಿ. ಇಲ್ಲಿ ಒಬ್ಬ ಅಂಕಣಕಾರ ವರದಿ ಬರೆದಂತೆ ಅಂಕಣ ಬರೆಯುತ್ತಾರೆ, ವರದಿಗಾರ ವರದಿಯನ್ನು ಆಸ್ಥಾನಕವಿಯಂತೆ ಬರೆಯುತ್ತಾನೆ.

ವರದಿಗಾರನಿಗೆ ಯಡಿಯೂರಪ್ಪ ಸಾಕ್ಷಾತ್ ಕೃಷ್ಣದೇವರಾಯನಂತೆ ಕಂಡು, ಕಂಗೊಳಿಸಿದಂತೆ, ಜನಾರ್ದನರೆಡ್ಡಿ ಸಾಕ್ಷಾತ್ ಮದಕರಿ ನಾಯಕನಂತೆಯೂ, ಶ್ರೀರಾಮುಲು ಸಂಗೊಳ್ಳಿ ರಾಯಣ್ಣನಂತೆಯೂ ಕಾಣಿಸಿರಬಹುದು. ಆದರೆ ಅದನ್ನೂ ಆತ ಬರೆಯದೆ ಇರುವುದು ಓದುಗರಾದ ನಮ್ಮ ಭಾಗ್ಯ, ಪ್ರಜಾವಾಣಿಯ ಪುಣ್ಯ.

ಹಿಂದೆ ಜನಾರ್ದನರೆಡ್ಡಿ ಯಡಿಯೂರಪ್ಪನವರನ್ನು ಕೃಷ್ಣದೇವರಾಯನ ಅಪರಾವತಾರ ಎಂದು ಹೊಗಳಿದ್ದರು. ನಂತರ ಮುದುಕ-ಕಂಸ ಇತ್ಯಾದಿ ಬೈಗುಳಗಳೂ ಅವರ ಬಾಯಿಂದಲೇ ಬಂದವು. ರಾಜಕಾರಣಿಗಳು ಪರಸ್ಪರರನ್ನು ಹೀಗೆ ಅಸಹ್ಯವಾಗಿ ಹೊಗಳುವುದು, ತೆಗಳುವುದು ಮಾಮೂಲು. ಆದರೆ ಪತ್ರಿಕಾ ವರದಿಗಾರರಿಗೆ ಮುಖ್ಯಮಂತ್ರಿಗಳೋ ಇನ್ನ್ಯಾರೋ ಕೃಷ್ಣದೇವರಾಯನಂತೆ ಕಂಡು, ಕಂಗೊಳಿಸುವುದನ್ನು ಹೇಗೆ ಸ್ವೀಕರಿಸುವುದು? ಹೈಪ್ರೊಫೈಲ್ ಪತ್ರಕರ್ತರೇ ತುಂಬಿರುವ ಎಂಜಿ ರಸ್ತೆಯ ಕಚೇರಿಯಲ್ಲಿ ಈ ಕುರಿತು ಒಂಚೂರು ಚರ್ಚೆ ನಡೆಯಬಾರದೇ?

ಪ್ರಜಾವಾಣಿಯ ಇನ್ನೊಂದು ವರದಿಯನ್ನು ಗಮನಿಸಿ: ಹಂಪಿ ಉತ್ಸವ: ಗಮನ ಸೆಳೆದ ಶೋಭಾಯಾತ್ರೆ. ಇಲ್ಲಿ ಶೋಭಾಯಾತ್ರೆ ಅಂದರೆ ಏನು? ಈ ಪದವನ್ನು ಯಾರು, ಯಾಕೆ ಬಳಸುತ್ತಾ ಬಂದಿದ್ದಾರೆ? ಸರ್ಕಾರ ನಡೆಸುವ ಕಾರ್ಯಕ್ರಮಗಳ ಮೆರವಣಿಗೆಗೂ ಶೋಭಾಯಾತ್ರೆ ಎಂದು ಕರೆಯುವ ಪರಿಪಾಠ ಯಾವಾಗ ಆರಂಭವಾಯಿತು?

ಕೊನೆ ಕುಟುಕು: ಮೊನ್ನೆ ಪ್ರಜಾವಾಣಿ ಸಹಸಂಪಾದಕ ಪದ್ಮರಾಜ ದಂಡಾವತಿಯವರ ನಾಲ್ಕನೇ ಆಯಾಮದ ಎರಡು ಸಂಪುಟಗಳು ಬಿಡುಗಡೆಯಾದವು. ಪ್ರಜಾವಾಣಿಯಲ್ಲಿ ಈ ಕುರಿತ ವರದಿಯೂ ಪ್ರಕಟವಾಯಿತು. ಪುಸ್ತಕ ಬಿಡುಗಡೆಯಾಗುವ ಸಂದರ್ಭದಲ್ಲಿ ತಮ್ಮ ಸಹಸಂಪಾದಕರು ಸಾಕ್ಷಾತ್ ಶೇಕ್ಸ್‌ಪಿಯರ್‌ನಂತೆ ಕಾಣಿಸಿದರು ಎಂದು ವರದಿಗಾರ ಬರೆಯಲಿಲ್ಲ, ಥ್ಯಾಂಕ್ ಗಾಡ್!

0 komentar

Blog Archive