ಮುಖ್ಯಮಂತ್ರಿ ಹಾಗು ಇತರ ಕೆಲವು ಮಂತ್ರಿಗಳ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ, ಭೂ ಡಿನೋಟಿಫೈ ಇತ್ಯಾದಿ ಆರೋಪಗಳ ಬಗ್ಗೆ ಲೋಕಾಯುಕ್ತರು ಮತ್ತು ನ್ಯಾಯಮೂರ್ತಿ ಪದ್ಮರಾಜ ಆಯೋಗ ವಿಚಾರಣೆ ನಡೆಸುತ್ತಿದೆ. ಮುಖ್ಯಮಂತ್ರಿ ವಿರುದ್ಧ ಬೆಂಗಳೂರಿನ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಈ ಎಲ್ಲ ಆರೋಪಗಳ ಬಗ್ಗೆ ಮೂರು ನ್ಯಾಯ ವೇದಿಕೆಗಳಲ್ಲಿ ವಿಚಾರಣೆ ನಡೆಯುವುದು ಎಷ್ಟರಮಟ್ಟಿಗೆ ಸರಿಯಾದೀತು?- ಪ್ರಜಾವಾಣಿ ಸಂಪಾದಕೀಯ
ಈಗಾಗಲೇ ಎರಡು ಸಂಸ್ಥೆಗಳು ತನಿಖೆ ನಡೆಸುತ್ತಿರುವಾಗ ಮೂರನೆಯದು ಯಾಕೆ ಎನ್ನುವ ಪ್ರಶ್ನೆಯನ್ನೂ ಕೇಳಲಾಗುತ್ತಿದೆ. ಈ ಪರಂಪರೆಯನ್ನು ಪ್ರಾರಂಭಿಸಿದ್ದು ಬಿಜೆಪಿ ಸರ್ಕಾರವೇ ಅಲ್ಲವೇ? ಲೋಕಾಯುಕ್ತರು ತನಿಖೆ ಮಾಡುತ್ತಿದ್ದ ಪ್ರಕರಣಗಳನ್ನು ಅವರ ಗಮನಕ್ಕೂ ತರದೆ ತಾವೇ ನೇಮಿಸಿದ ತನಿಖಾ ಆಯೋಗಕ್ಕೆ ಒಪ್ಪಿಸಿದಾಗ ಎರಡೆರಡು ತನಿಖೆಗಳು ಸರಿ ಅಲ್ಲ ಎಂದು ಸರ್ಕಾರಕ್ಕೆ ಅನಿಸಲಿಲ್ಲವೇ?-ದಿನೇಶ್ ಅಮೀನ್ ಮಟ್ಟು.
ರಾಜ್ಯಪಾಲರನ್ನು ಕಾಂಗ್ರೆಸ್ ಪಕ್ಷದ ಏಜೆಂಟ್ ಹಾಗು ಯುಪಿಎ ಸರ್ಕಾರದ ವಕ್ತಾರ ಎಂದು ಬಿಜೆಪಿ ನಾಯಕರು ಟೀಕಿಸುವುದರಲ್ಲಿ ಅರ್ಥವಿದೆ ಎಂಬಂತೆ ನಡೆದುಕೊಂಡರು-ಪ್ರಜಾವಾಣಿ ಸಂಪಾದಕೀಯ
ಭಾರದ್ವಾಜ್ ಅವರು ಕಾಂಗ್ರೆಸ್ ಏಜೆಂಟ್ ಅನಿಸಿಕೊಳ್ಳಲು ರಾಜ್ಯಪಾಲರಾಗುವ ಮೊದಲು ಅವರು ಆ ಪಕ್ಷದ ಸದಸ್ಯರಾಗಿದ್ದದ್ದೇ ಕಾರಣ ಎಂದಾದರೆ ಆರು ವರ್ಷಗಳ ಕಾಲ ಎನ್‌ಡಿಎ ಅಧಿಕಾರಾವಧಿಯಲ್ಲಿ ರಾಜ್ಯಪಾಲರಾಗಿ ನೇಮಕಗೊಂಡಿದ್ದವರೆಲ್ಲ ಬಿಜೆಪಿ ಏಜೆಂಟ್‌ಗಳೇ?-ದಿನೇಶ್ ಅಮೀನ್ ಮಟ್ಟು
ಮುಖ್ಯಮಂತ್ರಿ ಅಥವಾ ಸರ್ಕಾರದ ಇತರ ಮಂತ್ರಿಗಳ ಮೇಲೆ ಯಾರೇ ಭ್ರಷ್ಟಾಚಾರದ ದೂರು ಸಲ್ಲಿಸಿದರೂ ದಾಖಲೆ ಹಾಗೂ ಪುರಾವೆಗಳನ್ನು ಪರಿಶೀಲಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕೇ ಹೊರತು ಅದಕ್ಕೆ ಮೊದಲೇ ಸಂಘರ್ಷಕ್ಕೆ ಇಳಿದವರಂತೆ ಬಹಿರಂಗವಾಗಿ ಆರೋಪಗಳ ಬಗ್ಗೆ ವ್ಯಾಖ್ಯಾನ ಮಾಡುವುದು ಅಪೇಕ್ಷಣೀಯವಲ್ಲ.-ಪ್ರಜಾವಾಣಿ ಸಂಪಾದಕೀಯ
ಇಂತಹ ಸಂದರ್ಭದಲ್ಲಿ ತಮ್ಮ ಮುಂದಿರುವ ಸಾಕ್ಷ್ಯಾಧಾರಗಳ ಸತ್ಯಾಸತ್ಯತೆಯನ್ನು ತಮಗೆ ಇರುವ ಅಧಿಕಾರದ ವ್ಯಾಪ್ತಿಯಲ್ಲಿ ದೃಢೀಕರಿಸಿ ಮೇಲ್ನೋಟಕ್ಕೆ ಆರೋಪದಲ್ಲಿ ಹುರುಳಿದೆ ಎಂದು ರಾಜ್ಯಪಾಲರಿಗೆ ಮನವರಿಕೆಯಾದರೆ ಮುಖ್ಯಮಂತ್ರಿಗಳನ್ನು ಪ್ರಾಸಿಕ್ಯೂಟ್ ಮಾಡಲು ಅವಕಾಶ ನೀಡಬಹುದಾಗಿದೆ. ಇದು ರಾಜ್ಯಪಾಲರ ಸಂವಿಧಾನದತ್ತ ಅಧಿಕಾರ. ಅದನ್ನು ಭಾರದ್ವಾಜ ಚಲಾಯಿಸಿದ್ದಾರೆ. ಆದ್ದರಿಂದ ರಾಜ್ಯಪಾಲರು ತಮ್ಮ ಅಧಿಕಾರದ ದುರುಪಯೋಗ ಮಾಡಿದ್ದಾರೆ ಇಲ್ಲವೇ ಕಾನೂನಿನ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸುವ ಹಾಗಿಲ್ಲ.- ದಿನೇಶ್ ಅಮೀನ್ ಮಟ್ಟು.
ನಾವು ಏನನ್ನು ಹೇಳಲು ಹೊರಟಿದ್ದೇವೆ ಎಂಬುದು ನಿಮಗೆ ಈಗಾಗಲೇ ಸ್ಪಷ್ಟವಾಗಿ ಅರ್ಥವಾಗಿರಬಹುದು. ಇವತ್ತಿನ ಪ್ರಜಾವಾಣಿಯ ಸಂಪಾದಕೀಯ ಪುಟದಲ್ಲಿ ಪ್ರಕಟಗೊಂಡಿರುವ ಎರಡು ಬರಹಗಳು ನಿಮ್ಮ ಕಣ್ಣ ಮುಂದಿವೆ. ಒಂದು ರಾಜ್ಯಪಾಲರ ರಾಜಕೀಯ ನಡೆ ಎಂಬ ಸಂಪಾದಕೀಯ ಲೇಖನ. ಮತ್ತೊಂದು ದಿನೇಶ್ ಅಮೀನ್ ಮಟ್ಟು ಅವರ ಸೋಮವಾರದ ಅನಾವರಣ ಅಂಕಣದಲ್ಲಿ ಪ್ರಕಟಗೊಂಡಿರುವ ಅಧಿಕಾರದ ಕೆಸರಲ್ಲಿ ಹೂತುಹೋದ ನೈತಿಕತೆಯ ಕಮಲ ಎಂಬ ಬರಹ. ಎರಡೂ ಪಕ್ಕಪಕ್ಕದಲ್ಲೇ ಇವೆ. ಒಂದಕ್ಕೊಂದು ಎಷ್ಟು ವಿರುದ್ಧದ ಧೋರಣೆಗಳನ್ನು ತಳೆದಿವೆ ಎಂಬುದಕ್ಕೆ ಮೇಲೆ ಉದಾಹರಿಸಿದ ಸಾಲುಗಳು ಸಾಕ್ಷಿ ಹೇಳುತ್ತಿವೆ.
ಪ್ರಜಾವಾಣಿಗೆ ಏನಾಗಿ ಹೋಗಿದೆ? ಯಾಕಿಷ್ಟು ಗೊಂದಲ? ಏನಿದರ ಹಕೀಕತ್ತು?
ನಿನ್ನೆ ಪದ್ಮರಾಜ ದಂಡಾವತಿ ಏನನ್ನು ಹೇಳಲು ಹೊರಟಿದ್ದಾರೋ ಅದನ್ನೆಲ್ಲ ಒಂದೇ ಏಟಿನಲ್ಲಿ ನೀವಳಿಸಿ ಎಸೆಯುವಂತಿದೆ ದಿನೇಶ್ ಅವರ ಅಂಕಣ. ಇದಕ್ಕೂ ರಾಶಿ ರಾಶಿ ಸಾಕ್ಷಿಗಳಿವೆ.
ದಂಡಾವತಿ ಥೇಟ್ ಬಿಜೆಪಿಯ ಸಿ.ಟಿ.ರವಿಯ ಶೈಲಿಯಲ್ಲಿ ರಾಜ್ಯಪಾಲರ ಪೂರ್ವಾಶ್ರಮವನ್ನು ಕೆದಕಿ ಮಾತನಾಡಿದ್ದಾರೆ. ಪೂರ್ವಾಶ್ರಮ ಏನೇ ಆಗಿದ್ದರೂ ಸಂವಿಧಾನದ ಚೌಕಟ್ಟಿನಲ್ಲಿ ಅವರು ಕೈಗೊಂಡ ನಿರ್ಧಾರಗಳೆಲ್ಲ ಅಬದ್ಧ ಎಂದು ಹೇಳಬಹುದೇ? ಎಂದು ನೇರನೇರ ಟಾಂಗು ಕೊಟ್ಟಿದ್ದಾರೆ ದಿನೇಶ್.
ರಾಜ್ಯಪಾಲರ ಕುರಿತ ಏಜೆಂಟರೆಂಬ ದಂಡಾವತಿಯವರ ವ್ಯಾಖ್ಯಾನಕ್ಕೂ ದಿನೇಶ್ ಸಮರ್ಥವಾಗಿ ಉತ್ತರಿಸಿದ್ದಾರೆ. ದಿನೇಶ್ ಅವರು ಬರೆದ ವಾಕ್ಯಗಳ ಪೈಕಿ ಕೆಲವು ಒಳಮರ್ಮಗಳಿಗೆ ತಾಕುತ್ತವೆ, ಕೆಲವು ನೇರವಾಗಿ ಕಪಾಲಕ್ಕೆ ಹೊಡೆಯುತ್ತವೆ. ದಂಡಾವತಿಯವರ ನಾಲ್ಕನೇ ಆಯಾಮವನ್ನು ಓದುವುದಕ್ಕೂ ಮುನ್ನವೇ ದಿನೇಶ್ ಇದನ್ನು ಬರೆದಿರುವ ಸಾಧ್ಯತೆಗಳೂ ಇಲ್ಲದಿಲ್ಲ. ಆದರೂ ಬಹುತೇಕ ಪ್ರಶ್ನೋತ್ತರಗಳ ಹಾಗಿವೆ ಎರಡೂ ಅಂಕಣಗಳು.
ಆದರೆ ದಿನೇಶ್ ಅಂಕಣವನ್ನು ಮಸುಕು ಮಾಡಲೆಂದು ರಾಜ್ಯಪಾಲರನ್ನು ವಾಪಾಸು ಕರೆಸಿಕೊಳ್ಳಬೇಕು ಎಂಬ ಅಭಿಪ್ರಾಯ ಸೂಚಿಸುವ ಸಂಪಾದಕೀಯ ಏಕೆ ಸಿದ್ಧವಾಯಿತು? ಇದು ಉದ್ದೇಶಪೂರ್ವಕವಾಗಿ ಸೃಷ್ಟಿಯಾದ ಪ್ರತಿಕ್ರಿಯೆಯಾಗಿದ್ದರೆ ಇದರ ಅನಿವಾರ್ಯತೆ ಏನಿತ್ತು? ಪ್ರಜಾವಾಣಿಯ ಓದುಗ ಯಾವುದನ್ನು ನಂಬಬೇಕು? ದಂಡಾವತಿ? ದಿನೇಶ್? ಸಂಪಾದಕೀಯ? ತಾನೇ ಗೊಂದಲದ ಕೆಸರಲ್ಲಿ ಮುಳುಗಿಹೋಗಿರುವ ಪ್ರಜಾವಾಣಿಯನ್ನು ಮೇಲಕ್ಕೆ ಎತ್ತುವವರು ಯಾರು?
ನಿವೃತ್ತರಾಗುವವರೆಗೂ ಡಿ.ವಿ.ರಾಜಶೇಖರ ಪ್ರಜಾವಾಣಿಯ ಸಂಪಾದಕೀಯಗಳನ್ನು ಬರೆಯುತ್ತಿದ್ದರು. ಪ್ರಜಾವಾಣಿಯ ಸಂಪಾದಕೀಯಗಳಿಗೆ ನಿಜಕ್ಕೂ ಒಂದು ಘನತೆ ಇದೆ. ಡಿವಿಆರ್ ಆ ಪರಂಪರೆಯನ್ನು ಸಮೃದ್ಧಗೊಳಿಸಿದವರು. ಆದರೆ ಇವತ್ತು ತನ್ನ ಅಂಕಣಕಾರನ ಬರಹದ ಮೌಲ್ಯವನ್ನು ತಗ್ಗಿಸಲೆಂದೇ ಹೆಣೆಯಲಾದ ಸಂಪಾದಕೀಯಕ್ಕೆ ಯಾವ ಮೌಲ್ಯವಿದೆ? ಯಾರನ್ನು ಮೆಚ್ಚಿಸಲು ಈ ಸರ್ಕಸ್ಸು? ಯಾರ ಕುಣಿಕೆಯಲ್ಲಿ ಸಿಕ್ಕಿ ಬಿದ್ದಿದೆ ಪ್ರಜಾವಾಣಿ?
ಕೊನೆಕುಟುಕು: ಮೂರು ನ್ಯಾಯಸಂಸ್ಥೆಗಳ ಎದುರು ಮುಖ್ಯಮಂತ್ರಿ ವಿರುದ್ಧದ ಪ್ರಕರಣಗಳ ತನಿಖೆ ನಡೆಯುತ್ತಿವೆ ಎಂದು ನಿನ್ನೆ ದಂಡಾವತಿಯವರು ಬರೆದಿದ್ದರು. ಇವತ್ತಿನ ಸಂಪಾದಕೀಯ ಹಾಗು ದಿನೇಶ್ ಅಂಕಣದಲ್ಲೂ ಇದು ಪುನರಾವರ್ತನೆಗೊಂಡಿವೆ. ಸ್ವತಃ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರೇ ಪದೇ ಪದೇ ತಾವು ಮುಖ್ಯಮಂತ್ರಿ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿಲ್ಲ ಎಂದು ಹೇಳಿದರೂ ಯಾಕೆ ಹೀಗೆ ಹಸಿಹಸಿ ಸುಳ್ಳುಗಳನ್ನು ಬಿತ್ತರಿಸಲಾಗುತ್ತಿದೆ? ಬೇರೆಯವರು ಹಾಗಿರಲಿ, ದಿನೇಶ್ ಅವರಾದರೂ ಸತ್ಯ ಬರೆಯಬಹುದಿತ್ತಲ್ಲವೇ? ಇದನ್ನು ಸಹವಾಸದೋಷ ಅನ್ನೋಣವೇ?
发表评论