ಸಂಪಾದಕೀಯದ ಓದುಗರಿಗಾಗಿ ಶಂಕರ ಬಿದರಿಯವರ ಪತ್ರದ ಪೂರ್ಣಪಾಠವನ್ನು ಪ್ರಕಟಿಸುತ್ತಿದ್ದೇವೆ.
ಬೆಂಗಳೂರು,
ದಿನಾಂಕ ೧೭-೧೧-೨೦೦೯.
ಗೆ,
ಸನ್ಮಾನ್ಯ ಶ್ರೀ ವಿಶ್ವೇಶ್ವರ ಭಟ್ಟರು,
ಸಂಪಾದಕರು,
ವಿಜಯ ಕರ್ನಾಟಕ ದಿನಪತ್ರಿಕೆ,
ಬೆಂಗಳೂರು.
ಮಾನ್ಯರೆ,
೧. ತಮ್ಮ ಸಂಪಾದಕತ್ವದಲ್ಲಿ ಹೊರ ಬರುತ್ತಿರುವ ವಿಜಯ ಕರ್ನಾಟಕ ಪತ್ರಿಕೆಯ ದಿನಾಂಕ ೧೭-೧೧-೨೦೦೯ರ ಬೆಂಗಳೂರು ಆವೃತ್ತಿಯ ಪುಠ ೯ರಲ್ಲಿ ಕಾನೂನು ಎಷ್ಟಕ್ಕೆ ಬಿಕರಿಯಾಗಿತ್ತು, ಹೇಳಿ ಬಿದರಿ ಅವರೇ? ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿರುವ ತಮ್ಮ ವರದಿಗಾರರಾದ ಶ್ರೀ ರಾಘವೇಂದ್ರ ಭಟ್ಟರ ಲೇಖನವನ್ನು ಗಮನಿಸಿದ್ದೇನೆ.
೨. ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ಸರಸ್ವತಿಪುರ ನಿವಾಸಿ ಎಂಬಿಎ ವಿದ್ಯಾರ್ಥಿನಿ ಪ್ರೇಮ ಪ್ರಕರಣ ಮತ್ತು ನಂತರ ಅವರಿಗಾದ ವಂಚನೆ ಪ್ರಸಂಗವು ನನ್ನ ಗಮನಕ್ಕೆ ದಿನಾಂಕ ೧೩-೧೧-೨೦೦೯ರಂದು ಮಧ್ಯಾಹ್ನ ಬಂದ ತಕ್ಷಣ, ಈ ಪ್ರಕರಣದಲ್ಲಿ ನ್ಯಾಯಯುತವಾದ ಮತ್ತು ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಸೂಚನೆ ನೀಡಿದ್ದು, ಅದರ ಪ್ರಕಾರ ಕ್ರಮ ಜರುಗುವಂತೆ ನೋಡಿಕೊಂಡಿದ್ದೇನೆ. ಈ ಬಗ್ಗೆ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು ದಿನಾಂಕ ೧೬-೧೧-೨೦೦೯ ರಂದು ನನ್ನನ್ನು ಭೇಟಿ ಮಾಡಿದ್ದು, ಅವರಿಗೆ ಕೈಗೊಂಡ ಕ್ರಮದ ಬಗ್ಗೆ ವಿವರಿಸಿದ್ದೇನೆ. ತದ ನಂತರ, ಈ ಪ್ರಕರಣದಲ್ಲಿ ವಂಚಿತ ವಿದ್ಯಾರ್ಥಿನಿಯು ಮಾಡಿರುವ ಆರೋಪಗಳನ್ನು ಗಮನಿಸಿದ್ದೇನೆ. ದಿನಾಂಕ ೧೪ ಮತ್ತು ೧೫ರಂದು ಸರ್ಕಾರಿ ರಜೆ ದಿನಗಳು ಇದ್ದ ಕಾರಣದಿಂದ, ದಿನಾಂಕ ೧೬-೧೧-೨೦೦೯ರಂದು ನಾನು ನಮ್ಮ ಕಾರ್ಯಾಲಯ ಪ್ರಾರಂಭವಾದ ತಕ್ಷಣ ವಂಚಿತ ಹೆಣ್ಣು ಮಗಳು ಮಾಡಿರುವ ಆರೋಪಗಳ ವಿಚಾರಣೆಗೆ ಆದೇಶ ನೀಡಿದ್ದೇನೆ.
೩. ಈ ಪ್ರಕರಣದಲ್ಲಿ ವಂಚಿತ ಹೆಣ್ಣುಮಗಳ ಮತ್ತು ಸಾಮಾನ್ಯವಾಗಿ ಹೆಣ್ಣುಮಕ್ಕಳ ಕುಂದು-ಕೊರತೆಗಳ ಬಗ್ಗೆ ನನಗೆ ಇತರೆ ಯಾವುದೇ ವ್ಯಕ್ತಿ ಮತ್ತು ಸಂಘಟನೆಗಳಿಗೆ ಇರುವಷ್ಟೇ ಕಾಳಜಿ ಇದೆ ಮತ್ತು ಕಾನೂನು ಬದ್ಧವಾಗಿ ಇಂತಹ ಕುಂದು-ಕೊರತೆಗಳನ್ನು ನಾನು ಸತತವಾಗಿ ನಿರ್ವಹಿಸುತ್ತಿದ್ದೇನೆ. ಈ ಹಿಂದೆ ಕೆಲವು ಭೂಮಿಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ, ಪೊಲೀಸರು ಕಾನೂನುಬಾಹಿರವಾಗಿ ನಡೆದುಕೊಂಡಿರಬಹುದು. ಆ ಕಾರಣದಿಂದ ಈ ಪ್ರಕರಣದಲ್ಲಿ ಪೊಲೀಸರು ಕಾನೂನು ಬಾಹಿರವಾಗಿ ಕ್ರಮ ಕೈಗೊಳ್ಳುವುದು ಸೂಕ್ತವಲ್ಲ ಎಂದು ನಾನು ನಂಬಿದ್ದೇನೆ. ಈ ಪ್ರಕರಣದಲ್ಲಿ ವಂಚಿತ ಹೆಣ್ಣುಮಗಳ ಬಗ್ಗೆ ನನಗೆ ಅಪಾರವಾದಂತ ಕಾಳಜಿ ಇದ್ದು, ಅವಳಿಗೆ ಆಗಿರುವ ಅನ್ಯಾಯದ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮತ್ತು ಈ ವಿಷಯದಲ್ಲಿ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ವರ್ಗದವರು ತಪ್ಪು-ತಡೆ ಎಸಗಿದ್ದರೆ ಕಠಿಣ ಕ್ರಮ ಕೈಗೊಳ್ಳಲು ನಾನು ಕಟಿಬದ್ದನಾಗಿದ್ದೇನೆ. ನಮ್ಮ ಪ್ರತಿಕ್ರಿಯೆ ಮತ್ತು ನಾವು ಕೈಗೊಂಡಿರುವ ಕ್ರಮವು ಸಾರ್ವಜನಿಕರಿಗೆ ಮತ್ತು ಎಲ್ಲಾ ಮಾಧ್ಯಮದವರಿಗೆ ಗೊತ್ತಿದ್ದರೂ ಸಹಿತ, ತಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿರುವ ಶ್ರೀ ರಾಘವೇಂದ್ರ ಭಟ್ಟರ ಲೇಖನದಲ್ಲಿ ವಿಷಯವನ್ನು ತಿರುಚಿ ನಮ್ಮ ಇಲಾಖೆಯ ಮತ್ತು ವೈಯಕ್ತಿಕವಾಗಿ ನನ್ನ ವರ್ಚಸ್ಸಿಗೆ ಧಕ್ಕೆ ಬರುವಂತಹ ಲೇಖನವನ್ನು ಪ್ರಕಟಿಸಲಾಗಿದೆ.
: ಪುಟ: ೨ :
೪. ಕಳೆದ ಕೆಲವು ತಿಂಗಳಿಂದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವೃತ್ತಿಯಲ್ಲಿ ನಾನು ಕೈಗೊಂಡಿರುವ ಕ್ರಮ ಮತ್ತು ಬೆಂಗಳೂರು ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆ ಕುರಿತು ಹಲವಾರು ಪ್ರತಿಕೂಲ ವರದಿಗಳು ಪ್ರಕಟವಾಗಿರುತ್ತವೆ. ಈ ಲೇಖನವೂ ಕೂಡಾ ಇದೇ ಸಾಲಿನಲ್ಲಿ ಇದೆ. ನೀವು ದಿನಾಂಕ ೩೦-೦೬-೨೦೦೯ ರಂದು ತಮ್ಮ ಅಂಗರಕ್ಷಕರಾಗಿ ಪೊಲೀಸರನ್ನು ನಿಯುಕ್ತಗೊಳಿಸಲು ಅರ್ಜಿ ಸಲ್ಲಿಸಿರುವುದು ಸರಿಯಷ್ಠೆ. ಈ ಬಗ್ಗೆ ಸೂಕ್ತ ವಿಚಾರಣೆ ಮಾಡಿಸಿ; ವಿಚಾರಣಾ ವರದಿಯನ್ನು ಆಧರಿಸಿ ನಿಮಗೆ ಪೊಲೀಸ್ ಅಂಗರಕ್ಷಕರನ್ನು ನಿಯಮಿಸುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ನಾನು ಬಂದಿರುವ ವಿಷಯ ನಿಮಗೆ ಗೊತ್ತಿದೆ. ಈ ಬಗ್ಗೆ ತಮ್ಮ ವರದಿಗಾರರಾದ ಶ್ರೀ ರಾಘವೇಂದ್ರ ಭಟ್ಟರು ಮತ್ತು ಹಲವು ಉನ್ನತ ಮೂಲಗಳಿಂದ ಸಾಕಷ್ಟು ಒತ್ತಡ ಬಂದಿದ್ದರೂ, ನಾನು ನನ್ನ ನಿರ್ಧಾರಕ್ಕೆ ಬದ್ದನಾಗಿದ್ದೇನೆ. ಈ ಕಾರಣದಿಂದಲೇ, ಕೆಲವು ತಿಂಗಳಿಂದ ನಾನು ಕೈಗೊಂಡ ವೃತ್ತಿಪರ ಕ್ರಮಗಳ ಬಗ್ಗೆ ಮತ್ತು ಬೆಂಗಳೂರು ಪೊಲೀಸ್ ಕಾರ್ಯನಿರ್ವಹಣೆಯ ಹಲವಾರು ಪ್ರತಿಕೂಲ ವರದಿಗಳು ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿವೆ ಮತ್ತು ಈ ಲೇಖನವು ಸಹಿತ ಅದೇ ಕಾರಣದಿಂದ ಪ್ರಕಟವಾಗಿದೆ ಎಂದು ನಾನು ನಂಬಲು ಬಲವಾದ ಕಾರಣಗಳಿವೆ. ಆದರೂ ಸಹಿತ ಪತ್ರಿಕಾ ಧರ್ಮವನ್ನು ತಿಳಿದಿರುವ ತಾವು, ಈ ತರಹದ ಕೃತ್ಯವನ್ನು ಎಸುಗುವುದಿಲ್ಲ ಎಂದು ನಂಬಲು ಪ್ರಯತ್ನಿಸುತ್ತಿದ್ದೇನೆ.
೫. ಈ ನನ್ನ ಪ್ರತಿಕ್ರಿಯೆಯಿಂದ ತಮ್ಮ ಪತ್ರಿಕೆಯಲ್ಲಿ ತಾವು ಸಾಕಷ್ಟು ವಿವಾದಗಳನ್ನು ಸೃಷ್ಟಿಸುವ ಮತ್ತು ಪ್ರತಿಕೂಲ ವರದಿಗಳನ್ನು ಬರೆಯುವ ಸಾಧ್ಯತೆ ಇದೆ ಎಂಬ ಸಂಪೂರ್ಣ ಅರಿವು ನನಗೆ ಇದೆ. ಎಂತಹದೇ ಪ್ರಬಲವಾದ ಪತ್ರಿಕೆಯಾದರೂ ಸಹಿತ, ಎಷ್ಟೇ ಪ್ರತಿಕೂಲ ವರದಿಗಳನ್ನು ಪ್ರಕಟಿಸಿದರೂ, ರಾಜ್ಯದ ಜನತೆಯು ಸಾಕಷ್ಟು ವಿವೇಚನೆಯಿಂದ ಮತ್ತು ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸತ್ಯವನ್ನು ತಿಳಿಯಲು ಶಕ್ತರಾಗಿದ್ದಾರೆ ಎಂದು ನಾನು ನಂಬಿದ್ದೇನೆ.
೬. ಬೆಂಗಳೂರು ನಗರ ಕೆಲವು ನಿಶ್ಚಿತ ವರ್ಗದವರಿಗೆ ಸುರಕ್ಷಿತ ನಗರವಾಗಿದೆ ಎಂದು ಬರೆದಿದ್ದೀರಿ. ತಮಗೂ ಸಹಿತ ಬೆಂಗಳೂರು ಸುರಕ್ಷಿತ ನಗರವಾಗಿದೆ ಎಂಬುದನ್ನು ಮರೆಯದಿರಿ.
೭. ಹಲವಾರು ಕಾರಣಗಳಿಂದಾಗಿ ವಿಜಯ ಕರ್ನಾಟಕ ದಿನಪತ್ರಿಕೆಯು ರಾಜ್ಯದ ಒಂದು ಪ್ರಮುಖ ದಿನಪತ್ರಿಕೆಯಾಗಿ ಹೊರ ಹೊಮ್ಮಿದೆ. ಈಗ ಅದು ಶತ-ಶತಮಾನಗಳಿಂದ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿದಿರುವ ಟೈಮ್ಸ್ ಆಫ್ ಇಂಡಿಯಾ ಸಮೂಹಕ್ಕೆ ಸೇರಿದೆ. ಪ್ರತಿಷ್ಠಿತ ಮತ್ತು ಗೌರವಾನ್ವಿತ ಪತ್ರಿಕಾ ಸಮೂಹವಾದ ಟೈಮ್ಸ್ ಆಫ್ ಇಂಡಿಯಾ ಸಮೂಹಕ್ಕೆ ಸೇರಿರುವ ವಿಜಯ ಕರ್ನಾಟಕ ಪತ್ರಿಕೆ ಪತ್ರಿಕಾ ಧರ್ಮಕ್ಕೆ ಅನುಗುಣವಾಗಿ ನಡೆಯಲಿ ಎಂದು ಆಶಿಸುತ್ತೇನೆ.
೮. ಪ್ರತಿಕಾ ಧರ್ಮಕ್ಕೆ ಅನುಗುಣವಾಗಿ, ಸದುದ್ದೇಶದ ರಚನಾತ್ಮಕ ಟೀಕೆಗಳನ್ನು ಸದಾ ಸ್ವಾಗತಿಸುತ್ತೇನೆ.
೯. ಆದರೆ, ವೈಯಕ್ತಿಕವಾದ ರಾಗದ್ವೇಷಗಳಿಂದ ಯಾವುದೇ ಪ್ರತಿಕೂಲ ಲೇಖನವಾಗಲೀ, ವರದಿಗಳಾಗಲೀ ತಮ್ಮ ಗೌರವಾನ್ವಿತ ಪತ್ರಿಕೆಯಲ್ಲಿ ಮೂಡದಿರಲೆಂದು ಆಶಿಸುತ್ತೇನೆ.
ಇಂತಿ ಆದರಗಳೊಂದಿಗೆ,
ನಿಮ್ಮ ವಿಶ್ವಾಸಿ,
ಸಹಿ/-
(ಶಂಕರ್ ಬಿದರಿ)
ಪೊಲೀಸ್ ಆಯುಕ್ತರು,
ಬೆಂಗಳೂರು ನಗರ.
ಅಜಯ್ ಕುಮಾರ್ ಸಿಂಗ್ ಅವರ ಪತ್ರಕ್ಕೂ ಶಂಕರ್ ಬಿದರಿಯವರ ಪತ್ರಕ್ಕೂ ಅಂಥ ವ್ಯತ್ಯಾಸವೇನೂ ಇಲ್ಲ. ಈ ಎರಡೂ ಪತ್ರಗಳನ್ನು ಓದಿದ ನಂತರ ತುಂಬಾ ಕಾಡುವ ಪ್ರಶ್ನೆ ಪತ್ರಿಕಾ ಸ್ವಾತಂತ್ರ್ಯ ಯಾವುದಕ್ಕೆ ಬಳಸಬೇಕು? ಯಾವುದಕ್ಕೆ ಬಳಸಬಾರದು? ಅಜಯ ಕುಮಾರ ಸಿಂಗ್ ಹೇಳಿದ್ದು ನಿಜ: ಪತ್ರಿಕಾ ಸ್ವಾತಂತ್ರ್ಯವೆಂದರೆ ಕೊಲ್ಲಲು ಪರವಾನಗಿ ಅಲ್ಲ.
发表评论