ಇದನ್ನು ನಿರೀಕ್ಷಿಸಿದ್ದೆವು. ನಿನ್ನೆಯಿಂದ ಒಂದು ರಾಶಿ ಇ-ಮೇಲ್‌ಗಳು. ಎಲ್ಲವೂ ಒಂದೇ ಮಾದರಿಯವು. ನಿನ್ನೆ ಪ್ರಕಟಿಸಿದ ಪೋಸ್ಟ್ ಅಷ್ಟೊಂದು ಪ್ರಭಾವಶಾಲಿಯಾಗಿತ್ತಾ ಎಂಬ ಅಚ್ಚರಿ ನಮ್ಮದು. ಈ ದ್ವೇಷದ ಇ-ಮೇಲ್‌ಗಳನ್ನು ಪ್ರಕಟಿಸುವುದೂ ಸಾಧ್ಯವಿಲ್ಲ, ಹೀಗಾಗಿ ಪ್ರಕಟಿಸುವ ಗೋಜಿಗೆ ಹೋಗಿಲ್ಲ. ಎಲ್ಲ ಅಭಿಮಾನಿ ಬಂಧುಗಳಿಗೂ ಕೃತಜ್ಞತೆಗಳು.

ಆದರೆ ಪ್ರಶ್ನೆಗಳು ಹಾಗೇ ಉಳಿದಿವೆ.

ನಿತ್ಯಾನಂದ ಸ್ವಾಮೀಜಿಯ ಲೈಂಗಿಕ ಹಗರಣದ ವಿಷಯಕ್ಕೆ ಬನ್ನಿ. ನಿತ್ಯಾನಂದ ಮತ್ತು ರಂಜಿತಾರ ನಡುವಿನ ಸಂಬಂಧವನ್ನು ಬಯಲು ಮಾಡುವ ಟೇಪ್ ನೋಡಿದ ಎಲ್ಲರಿಗೂ ಅರ್ಥವಾಗುವುದೇನೆಂದರೆ ಅದು ಇಬ್ಬರಿಗೂ ಒಪ್ಪಿತ ಸಂಬಂಧ. ನಿತ್ಯಾನಂದನಾಗಲಿ, ರಂಜಿತಾ ಆಗಲಿ ಒಬ್ಬರನ್ನೊಬ್ಬರು ಬಲವಂತದಿಂದ ಕಾಮಕ್ರಿಯೆಗೆ ತೊಡಗಿಸಿದಂತೆ ಕಾಣುವುದಿಲ್ಲ. ಮೇಲಾಗಿ ರಂಜಿತಾ ಈ ಕುರಿತು ಯಾವ ಪೊಲೀಸ್ ಠಾಣೆಯಲ್ಲೂ ದೂರು ಸಲ್ಲಿಸಲಿಲ್ಲ. ನಿಜ, ಇದರಲ್ಲಿ ನೈತಿಕತೆಯ ಪ್ರಶ್ನೆಗಳಿದ್ದವು. ಹೀಗಾಗಿ ನಿತ್ಯಾನಂದ ಜನಸಾಮಾನ್ಯರ ದೃಷ್ಟಿಯಲ್ಲಿ ಪಾತಾಳಕ್ಕೆ ಕುಸಿದುಬಿದ್ದಿದ್ದ.

ಆದರೆ ಟೇಪ್ ಬಯಲಿಗೆ ಬಂದ ನಂತರ ಅದನ್ನು ನಮ್ಮ ಟಿವಿ ವಾಹಿನಿಗಳು ಅದೆಷ್ಟು ಬಾರಿ ತೋರಿಸಿದವು? ಯಾವ ಚಾನೆಲ್ ಹಾಕಿದರೂ ಇದೇ ವಿಡಿಯೋ. ನಮ್ಮ ಟೀವಿಗಳಲ್ಲಿ ಗಂಟೆಗಟ್ಟಲೆ ಆ ಕುರಿತೇ ಸರಣಿಯೋಪಾದಿಯಲ್ಲಿ ಕಾರ್ಯಕ್ರಮಗಳು ಪ್ರಸಾರವಾದವು. ಪತ್ರಿಕೆಗಳಲ್ಲಿ ಪುಟಗಟ್ಟಲೆ ಇದೇ ಪುರಾಣ. ಮಣಗಟ್ಟಲೆ ಬರೆದೂ ಬರೆದೂ ನಮ್ಮ ಪತ್ರಕರ್ತರು ಸುಸ್ತಾಗಿ ಹೋದರು. ಹೇಳಿದ್ದನ್ನೇ ಹೇಳಿ ಟೀವಿ ವರದಿಗಾರರು, ನಿರೂಪಕರು ತಲೆಚಿಟ್ಟು ಹಿಡಿಸಿದರು.

ನಿತ್ಯಾನಂದ ಶರಣಾಗಿದ್ದು ಸುದ್ದಿ, ಕೋರ್ಟಿಗೆ ಕರೆದೊಯ್ಯಲಾಗಿದ್ದು ಸುದ್ದಿ, ಸಿಓಡಿಯವರು ತನಿಖೆ ಮಾಡಿದ್ದು ಸುದ್ದಿ, ಜೈಲು ಸೇರಿದ್ದೂ ಸುದ್ದಿ, ನಿತ್ಯಾನಂದ ಬಿಡುಗಡೆಯಾಗಿದ್ದೂ ಸುದ್ದಿ, ಬಿಡದಿ ಆಶ್ರಮದಲ್ಲಿ ಪೂಜೆ ಮಾಡಿದ್ದೂ ಸುದ್ದಿ... ನಮ್ಮ ಮಾಧ್ಯಮಗಳೆಲ್ಲವೂ ನಿತ್ಯಾನಂದಮಯ.

ಆದರೆ ಇಲ್ಲಿ ಸಾಗರವೆಂಬ ಪುಟ್ಟ ಊರಿನಲ್ಲಿ ಪಾನಿಪುರಿ ಮಾರುವ ಬಡ ಬ್ರಾಹ್ಮಣ ದಂಪತಿಗಳ ಪುಟ್ಟ ಮಗಳು ಮಠವೊಂದರ ಗುರುಕುಲದಲ್ಲಿ ಗುರುವಿನ ಕಾಮತೃಷೆಗೆ ಬಲಿಯಾಗುವುದು ಸುದ್ದಿಯಾಗೋದೇ ಇಲ್ಲ. ಆಕೆ ಕೊಟ್ಟ ಕಂಪ್ಲೇಂಟು ಏನು ಎಂಬುದನ್ನು ಯಾವ ಪತ್ರಿಕೆಗಳು ಬರೆಯುವುದಿಲ್ಲ. ಪೊಲೀಸಿನವರು ತನಿಖೆ ನಡೆಸಿದರಾ ಇಲ್ಲವಾ? ಆರೋಪಿಯನ್ನು ಬಂಧಿಸಲಾಯಿತಾ? ಜೈಲಿಗೆ ಕಳಿಸಲಾಯಿತಾ? ಆರೋಪಿ ಈಗೇನು ಮಾಡುತ್ತಿದ್ದಾನೆ? ಹುಡುಗಿಯ ಪೋಷಕರು ಮಾನವ ಹಕ್ಕು ಆಯೋಗಕ್ಕೆ, ಮಹಿಳಾ ಆಯೋಗಗಳಿಗೆ ಕೊಟ್ಟ ದೂರುಗಳ ಫಾಲೋ ಅಪ್ ಏನು? ಮಠವನ್ನು ಎದುರು ಹಾಕಿಕೊಂಡ ಬಡ ದಂಪತಿಗಳ ಕಥೆ ಏನಾಯಿತು? ಅವರಿಗೆ ರಕ್ಷಣೆ ಕೊಡುವವರು ಯಾರು?

ಯಾಕೆ ಈ ಯಾವುದನ್ನೂ ನಮ್ಮ ಮಾಧ್ಯಮಗಳು ಟ್ರಾಕ್ ಮಾಡುವುದಿಲ್ಲ? ಯಾಕೆ ಇದೆಲ್ಲ ಸುದ್ದಿಗಳು ಶಿವಮೊಗ್ಗದ ಕೆಲವು ಸ್ಥಳೀಯ ಪತ್ರಿಕೆಗಳು ಮತ್ತು ಬೆಂಗಳೂರಿನಿಂದ ಪ್ರಕಟಗೊಳ್ಳುವ ಕೆಲವು ವಾರಪತ್ರಿಕೆಗಳಲ್ಲಿ ಮಾತ್ರ ಅಷ್ಟೋ ಇಷ್ಟೋ ಪ್ರಕಟಗೊಂಡವು? ಉಳಿದ ಪತ್ರಿಕೆಗಳು, ಚಾನೆಲ್‌ಗಳ ಪಾಲಿಗೆ ಇದು ಯಾಕೆ ಮಹತ್ವದ ಸುದ್ದಿಯಾಗಲಿಲ್ಲ?

ಎಲ್ಲೋ ನಡೆದ ಅರುಷಿ, ಜಸ್ಸಿಕಾ ಲಾಲ್ ಪ್ರಕರಣಗಳ ಕುರಿತು ನಮ್ಮ ಕನ್ನಡ ಮಾಧ್ಯಮಗಳು ಖರ್ಚು ಮಾಡಿದ ನ್ಯೂಸ್ ಪ್ರಿಂಟ್‌ನ ಪೈಕಿ ಕನಿಷ್ಟ ಐದು ಪರ್ಸೆಂಟಾದರೂ ನಮ್ಮ ರಾಜ್ಯದಲ್ಲೇ ಇರುವ ಸಾಗರದ ಅಮಾಯಕ ಹುಡುಗಿಗೂ ಖರ್ಚು ಮಾಡಬಹುದಿತ್ತಲ್ಲವೆ?

ಯಾವ ವಿಧಾನದಲ್ಲಿ ಯೋಚಿಸಿದರೂ ನಿತ್ಯಾನಂದನ ಪ್ರಕರಣಕ್ಕಿಂತ ಸಾಗರದ ಹುಡುಗಿ ಮೇಲೆ ನಡೆದ ಅತ್ಯಾಚಾರ ಯತ್ನದ ಪ್ರಕರಣವೇ ಹೆಚ್ಚು ಗಂಭೀರವಾದ, ಹೆಚ್ಚು ಚರ್ಚೆಗೆ ಗುರಿಯಾಗಬೇಕಾದ ವಿಷಯ. ಹೀಗಿದ್ದಾಗ್ಯೂ ನಮ್ಮ ಮಾಧ್ಯಮಗಳು ಸುಮ್ಮನಿದ್ದುದೇಕೆ? ಸುಮ್ಮನಿರುವುದೇಕೆ?

ಪತ್ರಕರ್ತರು, ಮಾಧ್ಯಮ ಸಂಸ್ಥೆಗಳ ಮಾಲೀಕರು ಈಚೀಚಿನ ದಿನಗಳಲ್ಲಿ ಸುದ್ದಿಯನ್ನು ಮಾರುವುದನ್ನು ಕಲಿತಿದ್ದಾರೆ. ಅಂದರೆ ಬೇಗ ಸೇಲ್ ಆಗುವ ಸುದ್ದಿಗಳು ಅವರಿಗೆ ಬೇಕು. ನಿತ್ಯಾನಂದನ ಸುದ್ದಿ ಬೇಗ ಬೇಗ ಸೇಲ್ ಆಗುವ ಸುದ್ದಿ. ಹೀಗಾಗಿ ಅದಕ್ಕವರು ಗಂಟುಬಿದ್ದು ಕುಳಿತಿದ್ದಾರೆ.

ಸುದ್ದಿಯನ್ನು ಸೇಲ್ ಮಾಡುವುದನ್ನು ಹೊರತುಪಡಿಸಿ ಮತ್ತೊಂದು ಮಾರ್ಗವೂ ಇದೆ. ತಾವೇ ಸೇಲ್ ಆಗಿ ಬಿಡೋದು. ಸಾಗರದ ಹುಡುಗಿಯ ವಿಷಯದಲ್ಲೇ ಇದೇ ಆಗಿ ಹೋಯ್ತಾ?

ಪಾನಿಪುರಿ ಮಾರುವಾತನ ಮಗುವಿಗೆ ನ್ಯಾಯ ಪಡೆಯುವ ಹಕ್ಕಿಲ್ಲವಾ?

ಪೂರಕ ಓದಿಗಾಗಿ:

ರಾಘವೇಶ್ವರರ ತೆಕ್ಕೆಯಲ್ಲಿ ಬಿದ್ದ ಸಂಪಾದಕರ ವಿರುದ್ಧ ದೂರು..

0 komentar

Blog Archive