ಜನಶ್ರೀ ಕುರಿತು ಬರೆದ ಪೋಸ್ಟ್‌ಗೆ ಬಂದ ಕೆಲವು ಪ್ರತಿಕ್ರಿಯೆಗಳು ಇಂಟರೆಸ್ಟಿಂಗ್ ಆಗಿದ್ದವು. ಒಂದೆರಡು ಪ್ರತಿಕ್ರಿಯೆಗಳನ್ನು ಗಮನಿಸಿ.
ಜನಶ್ರೀ ಟೀವಿ ಚಾನೆಲ್ ಎಂದು ಬರುತ್ತದೆ ಎಂಬ ಕುತೂಹಲ ಕೇವಲ ಜರ್ನಲಿಸ್ಟುಗಳಾದ ನಿಮಗೆ ಇದೆಯೇ ಹೊರತು ನಮ್ಮಂಥ ಸಾಮಾನ್ಯ ಟೀವಿ ವೀಕ್ಷಕನಿಗೆ ಖಂಡಿತವಾಗಿಯೂ ಇಲ್ಲ. ಹೇಳಿ ಕೇಳಿ, ಇದು ವಿವಾದಾತ್ಮಕ ರಾಜಕಾರಣಿಯ ಮಾಲಿಕತ್ವದ್ದು. ಅಂದ ಮೇಲೆ ಅವರ ವಿರುದ್ಧದ ಆಪಾದನೆಗಳನ್ನು ನಿರಾಕರಿಸುವಂಥ ರಾಜಕೀಯ ನಿಲುವು ಇರುತ್ತದೆ, ಸಂದೇಹವೇ ಇಲ್ಲ. ಪತ್ರಿಕೆಗಳಿಂದ, ಇತರ ಚಾನೆಲ್‌ಗಳಿಂದ ಹೆಚ್ಚಿನ ಸಂಬಳದ ಆಸೆಗೆ ಕೆಲಸ ಬದಲಾಯಿಸುವವರಿಗೆ ಮಾತ್ರ ಹೊಸ ಚಾನೆಲ್ ಆಗಮನ ಖುಷಿ ತರುತ್ತಿರಬಹುದು.
yes. really true. Laymen like us are really not interested in Janaashree news chnl. we do not expect any miracle from that new, upcoming news chnl. It is an another business for them. may be this is the factor which pricking its management.and they are delaying its launch. Any way for journalists, it is an another company to get salary for their degree.
ಎರಡೂ ಅಭಿಪ್ರಾಯಗಳು ನಿಜ. ಜನಶ್ರೀ ಕುರಿತು ಯಾರಿಗೂ ಅಂಥ ವಿಶೇಷವಾದ ನಿರೀಕ್ಷೆಗಳೇನೂ ಇಲ್ಲ. ರೆಡ್ಡಿ ಸೋದರರು ನಡೆಸುವ ಈ ಚಾನೆಲ್ ಹೇಗಿರುತ್ತದೆ ಎಂದು ಸುಲಭವಾಗಿ ಊಹಿಸಬಹುದು.
ಉದಾಹರಣೆಯಾಗಿ ಕಸ್ತೂರಿ ಟಿವಿ ನಮ್ಮ ಕಣ್ಣ ಮುಂದೆಯೇ ಇದೆ.
ಅನಿತಾ ಕುಮಾರಸ್ವಾಮಿ ಮಧುಗಿರಿಗೆ ಭೇಟಿ ಅನ್ನೋದೂ ಕಸ್ತೂರಿ ವಾಹಿನಿಯಲ್ಲೊಂದು ಫ್ಲಾಶ್ ನ್ಯೂಸ್! ಅಲ್ಲಾ ಕಣ್ರೀ, ಅನಿತಾ ಕುಮಾರಸ್ವಾಮಿ ಮಧುಗಿರಿಯ ಶಾಸಕಿ. ಅವರು ಇರಬೇಕಾಗಿದ್ದೇ ಮಧುಗಿರಿಯಲ್ಲಿ. ಹೀಗೆಲ್ಲ ಸುದ್ದಿ ಮಾಡಿ ಅವರ ಮಾನ ಯಾಕೆ ಕಳೀತೀರಾ ಅಂದ್ರೆ, ಇಲ್ಲ ಗುರುವೇ ನಮ್ಮ ಕರ್ಮ, ನಾವು ಹಾಗೆ ಸುದ್ದಿ ಮಾಡಲೇಬೇಕು ಅನ್ನುತ್ತಾರೆ ಕಸ್ತೂರಿಯ ವರದಿಗಾರರು.
ಸರ್ಕಾರದ ವಿರುದ್ಧ ದಿನಕ್ಕೆ ಮೂರರಿಂದ ನಾಲ್ಕು ಪ್ಯಾಕೇಜ್ ಸ್ಟೋರಿಗಳು. ಕುಮಾರಸ್ವಾಮಿ, ರೇವಣ್ಣ, ದೇವೇಗೌಡರು ಎಲ್ಲಿಲ್ಲಿ ಇರ‍್ತಾರೋ ಅಲ್ಲಿಲ್ಲಿಂದ ತಲಾ ಒಂದೊಂದು ಸ್ಟೋರಿ. ಇನ್ನು ಜೆಡಿಎಸ್ ಇತರ ಲೀಡರುಗಳಿಗೆ ಒಂದೆರಡು ನಿಮಿಷ. ಅರ್ಧ ಗಂಟೆಯ ಬುಲೆಟಿನ್‌ನಲ್ಲಿ ಇನ್ನೇನು ಉಳಿಯಿತು? ಯಾಕೆ ಹೀಗೆಲ್ಲ ಮಾಡ್ತೀರಿ ಅಂದ್ರೆ, ಅದು ಸ್ಟಾಂಡಿಂಗ್ ಇನ್‌ಸ್ಟ್ರಕ್ಷನ್ ಎನ್ನುತ್ತಾರೆ ವರದಿಗಾರರು.
ಒಮ್ಮೊಮ್ಮೆ ಕಸ್ತೂರಿ ಪತ್ರಕರ್ತರು ಒಳ್ಳೆ ತನಿಖಾ ವರದಿಗಳನ್ನೇ ಮಾಡುತ್ತಾರೆ. ಯಡಿಯೂರಪ್ಪನವರ ಹಗರಣಗಳು ಹೊರಬಂದಾಗ ಹೆಚ್ಚಿನ ಸುದ್ದಿಗಳನ್ನು ಬ್ರೇಕ್ ಮಾಡಿದ್ದು ಕಸ್ತೂರಿ ನ್ಯೂಸೇ. ಆದರೆ ಏನು ಪ್ರಯೋಜನ? ಇದು ಜೆಡಿಎಸ್ ತುತ್ತೂರಿ ಎಂಬ ಕಾರಣಕ್ಕೆ ಬಹಳಷ್ಟು ಮಂದಿ ಕಸ್ತೂರಿಯ ನ್ಯೂಸನ್ನು ನೋಡೋದೆ ಇಲ್ಲ. ನೋಡಿದವರು ಆಪೋಜಿಷನ್ ಪಾರ್ಟಿಯವರಲ್ವಾ? ಏನೇನೋ ಮಾಡ್ತಾರೆ ಎಂದು ಮೂಗು ಮುರಿಯುತ್ತಾರೆ. ಅಲ್ಲಿಗೆ ವರದಿಗಾರರು ಕಷ್ಟಪಟ್ಟು ತಂದು ಮಾಡಿದ ಸುದ್ದಿ ಖಲ್ಲಾಸ್.
ದೇವೇಗೌಡರು ಗುಡುಗಿದ್ದಾರೆ, ಕುಮಾರಸ್ವಾಮಿ ಕೆರಳಿದ್ದಾರೆ, ರೇವಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ, ಚೆಲುವರಾಯಸ್ವಾಮಿ ಚಾಟಿ ಬೀಸಿದ್ದಾರೆ, ದತ್ತ ಕಿಡಿಕಿಡಿಯಾಗಿದ್ದಾರೆ ಅಂತ ಎಷ್ಟು ದಿನ ಹೇಳಿಕೊಂಡು ಇರ‍್ತೀರಿ? ಇವತ್ತಿನ ಪೈಪೋಟಿ ಯುಗದಲ್ಲಿ ನಿಮ್ಮ ನ್ಯೂಸನ್ನು ಯಾರು, ಯಾಕೆ ನೋಡಬೇಕು? ಹೀಗೆಲ್ಲ ಕೇಳಿ ನೋಡಿ, ಕಸ್ತೂರಿ ಪತ್ರಕರ್ತರು ಪೆಚ್ಚಾಗಿ ಹೋಗುತ್ತಾರೆ, ಅವರ ಬಳಿ ಉತ್ತರಗಳಿಲ್ಲ.
ಈ ಚಂದಕ್ಕೆ ಕಸ್ತೂರಿಯನ್ನು ನ್ಯೂಸ್ ಚಾನೆಲ್ ಮಾಡುವ ಐಡಿಯಾ ಬೇರೆ ಕುಮಾರಸ್ವಾಮಿಯವರಿಗೆ ಇದೆ. ಇದೇ ಧೋರಣೆ, ಜೆಡಿಎಸ್ ಭಟ್ಟಂಗಿತನ ಇಟ್ಟುಕೊಂಡಿದ್ದರೆ ನ್ಯೂಸ್ ಚಾನಲ್ ಕಥೆ ಅಷ್ಟೆ. ಕನಿಷ್ಟ ಎಂಟರ್‌ಟೈನ್‌ಮೆಂಟ್‌ಗಾಗಿಯಾದರೂ ಎಲ್ಲರೂ ಕಸ್ತೂರಿಯನ್ನು ಆಗೊಮ್ಮೆ ಈಗೊಮ್ಮೆ ನೋಡುತ್ತಿರುತ್ತಾರೆ. ಇದೇ ನಿಲುವು ಇಟ್ಟುಕೊಂಡು ನ್ಯೂಸ್ ಚಾನಲ್ ಮಾಡಿದರೆ ಸ್ವತಃ ಕಾಲಭೈರವೇಶ್ವರನೂ ಕಾಪಾಡಲಾರ. ಹಾದಿಬೀದಿಯಲ್ಲೂ ಜೆಡಿಎಸ್ ಪೋಸ್ಟರುಗಳಿರುತ್ತವೆ, ಟಿವಿಯಲ್ಲೂ ಅದೇ ನೋಡಬೇಕಾ?
ತಮಿಳುನಾಡಿನಲ್ಲಿ ಸನ್ ಟಿವಿ, ಜಯ ಟಿವಿಯಂಥವು ಬೆಳೆದುಕೊಂಡವು ನಿಜ. ಅಲ್ಲಿನ ಜನ ರಾಜಕಾರಣಿಗಳ ಬಗ್ಗೆ ವಿಚಿತ್ರ ವ್ಯಾಮೋಹ ಇಟ್ಟುಕೊಂಡವರು. ಹೀಗಾಗಿ ರಾಜಕಾರಣಿಗಳು ಆರಂಭಿಸಿದ ಚಾನಲ್‌ಗಳನ್ನೂ ಪ್ರೀತಿಸಿದರು. ಕರ್ನಾಟಕದಲ್ಲಿ ಹಾಗಿಲ್ಲ. ರಾಜಕಾರಣಿಗಳನ್ನು ಪ್ರೀತಿಸುವ ಮಾತು ಹಾಗಿರಲಿ, ಅವರನ್ನು ದ್ವೇಷಿಸುವ ಜನರೇ ಇಲ್ಲಿ ಹೆಚ್ಚು. ಹೀಗಾಗಿ ಚಾನಲ್‌ಗಳ ಮೂಲಕ ತಮಗಿಷ್ಟವಾಗಿದ್ದನ್ನೆಲ್ಲ ಕೊಡುತ್ತೇವೆ ಎಂದರೆ ತೆಗೆದುಕೊಳ್ಳಲು ಇಲ್ಲಿ ಯಾರೂ ಸಿದ್ಧರಿಲ್ಲ.
ಕಸ್ತೂರಿಯ ಕಥೆಯೇ ಜನಶ್ರೀಯಲ್ಲೇ ಆಗುವುದು ದಿಟ. ಅದರಲ್ಲಿ ಅನುಮಾನ ಪಡಬೇಕಾಗಿಲ್ಲ. ಹಾಗೆ ನೋಡಿದರೆ ಟಿವಿ ಪತ್ರಕರ್ತರಿಗೆ ಇರುವ ಆಯ್ಕೆಗಳಾದರೂ ಯಾವುವು? ಸಮಯ ಟಿವಿಯೂ ರಾಜಕಾರಣಿಯ ಮಾಲಿಕತ್ವದಲ್ಲೇ ಇದೆ. ಸುವರ್ಣ ಟಿವಿಯ ಮಾಲಿಕರೂ ಪಾರ್ಟ್ ಟೈಮ್ ರಾಜಕಾರಣಿಯೇ ಆಗಿದ್ದಾರೆ.
ಪತ್ರಕರ್ತರ ಮುಂದೆ ಆಯ್ಕೆಗಳು ಕಡಿಮೆ. ರಾಜಕಾರಣಿಗಳಲ್ಲದ ಮ್ಯಾನೇಜ್‌ಮೆಂಟುಗಳು ವ್ಯವಸ್ಥೆಯ ಆಮಿಷಕ್ಕೆ ಒಳಗಾಗಿ ಯಾವಾಗ ನೈತಿಕವಾಗಿ ಡಿನೋಟಿಫೈ ಆಗುತ್ತವೋ ಹೇಳಲು ಬರುವುದಿಲ್ಲ. ಮಾಧ್ಯಮರಂಗ ಇಂದು ಒಂದೋ ನೇರವಾಗಿ ರಾಜಕಾರಣಿಗಳ ಮಾಲಿಕತ್ವದಲ್ಲಿದೆ ಅಥವಾ ರಾಜಕಾರಣಿಗಳ ಪರೋಕ್ಷ ನಿಯಂತ್ರಣದಲ್ಲಿದೆ. ಈ ವ್ಯವಸ್ಥೆಯನ್ನು ಮೀರಿ ನಡೆಯುವ ಪತ್ರಕರ್ತರಿಗೆ ಸೋಡಾ ಚೀಟಿ ಸಿದ್ಧಪಡಿಸಿಕೊಂಡೇ ಇರಲಾಗುತ್ತದೆ.
ಹಿಂದೆ ಹಾಗಿರಲಿಲ್ಲ. ಒಂದು ಸಣ್ಣ ಉದಾಹರಣೆ. ರಾಜ್ಯದ ಪ್ರತಿಷ್ಠಿತ ಪತ್ರಿಕೆಯೊಂದರಲ್ಲಿ ಪ್ಯಾಕರ್ ಒಬ್ಬನನ್ನು ಕೆಲಸದಿಂದ ತೆಗೆಯಲಾಗಿತ್ತು. ಪ್ಯಾಕರ್‌ಗಳು ಎಂದರೆ ಮುದ್ರಣವಾದ ಪತ್ರಿಕೆಗಳ ಬಂಡಲ್ ಕಟ್ಟುವವರು. ಈಗ ಮೆಷಿನ್ನುಗಳೇ ಈ ಕೆಲಸವನ್ನು ಮಾಡುತ್ತವೆ. ಹಿಂದೆ ಈ ಕೆಲಸಕ್ಕಾಗಿಯೇ ಒಂದು ಸೆಕ್ಷನ್ ಇರುತ್ತಿತ್ತು.
ಪ್ಯಾಕರ್ ಪರವಾಗಿ ಇಡೀ ಪತ್ರಿಕಾ ಸಿಬ್ಬಂದಿ ಮುಷ್ಕರ ಹೂಡಿತು. ಪತ್ರಿಕೆಯ ಪಾಲುದಾರರೊಬ್ಬರು ಸಿಟ್ಟಿಗೆದ್ದರು. ಅವರಿಗೆ ವಿಶೇಷವಾಗಿ ಪತ್ರಕರ್ತರ ಮೇಲೆ ಸಿಟ್ಟಿತ್ತು. ಪ್ಯಾಕರ್‌ಗಳ ಬೆಂಬಲಕ್ಕೆ ಪತ್ರಕರ್ತರು ನಿಂತಿದ್ದು ಅವರಿಗೆ ಸಹಿಸಲಾಗಲಿಲ್ಲ. ಈ ಜರ್ನಲಿಸ್ಟುಗಳು ಪ್ಯಾಕರ್‌ಗಳಾಗಲು ಲಾಯಕ್ಕು ಎಂದು ಅವರು ನಾಲಿಗೆ ಸಡಿಲಬಿಟ್ಟು ಮಾತನಾಡಿಬಿಟ್ಟರು. ಇದು ಎಲ್ಲರಿಗೂ ಗೊತ್ತಾಯಿತು. ಆಗ ಪತ್ರಿಕೆಯಲ್ಲಿದ್ದ ಹಿರಿಯ ಪತ್ರಕರ್ತರೊಬ್ಬರು ಏನೆಂದು ಗುಡುಗಿದರು ಗೊತ್ತೆ? ನಾವು ಪ್ಯಾಕರ್‌ಗಳಾಗಲು ತಯಾರು. ಹೆಮ್ಮೆಯಿಂದ ಆ ಕೆಲಸ ಮಾಡುತ್ತೇವೆ. ಆದರೆ ಈ ಮಾಲೀಕರು ಪ್ಯಾಕರ್‌ಗಳಾಗಲೂ ನಾಲಾಯಕ್.
ಹೀಗೆ ಮ್ಯಾನೇಜ್‌ಮೆಂಟ್‌ಗಳನ್ನು ಎದುರುಹಾಕಿಕೊಂಡು ಬದುಕುವ ಸಾಹಸವನ್ನು ಯಾರಾದರೂ ಪತ್ರಕರ್ತರು ಮಾಡಲು ಸಾಧ್ಯವೇ? ಕನಸಿನ ಮಾತು.
ಇಂಥ ಕಲುಷಿತ ವಾತಾವರಣದಲ್ಲಿ ಪತ್ರಕರ್ತರು ಯಾವ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ಸಂಕೀರ್ಣ ಚರ್ಚೆಗೆ ಆಸ್ಪದ ಮಾಡಿಕೊಡುತ್ತದೆ.
ಪತ್ರಕರ್ತರು ಕಡೇ ಪಕ್ಷ ತಮ್ಮ ಆತ್ಮಗೌರವಕ್ಕೆ ಧಕ್ಕೆ ಬರದಂತೆ ಕೆಲಸ ಮಾಡಿದರೆ ಸಾಕು, ಅಲ್ಲವೆ?
ಕೊನೆಕುಟುಕು: ಈಗಾಗಲೇ ಅಕ್ರಮ ಗಣಿಗಾರಿಕೆ ಸಂಬಂಧ ತನಿಖೆ ನಡೆಸುತ್ತಿರುವ ಸಿಬಿಐನವರು ಜನಾರ್ಧನರೆಡ್ಡಿಯನ್ನು ಬಂಧಿಸಿದರೆ ಜನಶ್ರೀಯಲ್ಲಿ ಹೇಗೆ ಸುದ್ದಿ ಮಾಡಬಹುದು?
* ಜನಾರ್ಧನ ರೆಡ್ಡಿ ಅಕ್ರಮ ಬಂಧನ: ರಾಜ್ಯಾದ್ಯಂತ ರೊಚ್ಚಿಗೆದ್ದ ಜನತೆ
* ಶಂಕಿತ ಸಿಬಿಐ ಅಧಿಕಾರಿಗಳಿಂದ ದುಷ್ಕೃತ್ಯ
* ಸಿಬಿಐ ಅಧಿಕಾರಿಗಳಿಂದ ಜನಾರ್ಧನ ರೆಡ್ಡಿ ಅಪಹರಣ
* ಕಾಂಗ್ರೆಸ್ ಏಜೆಂಟ್ ಸಿಬಿಐನಿಂದ ಜನಾರ್ಧನ ರೆಡ್ಡಿ ವಿರುದ್ಧ ಪಿತೂರಿ
( ಅಥವಾ ಹೀಗೂ ಆಗಬಹುದು: ಸ್ಯಾಟಲೈಟ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಅಡಚಣೆಯಿಂದಾಗಿ ಇಂದು ಸುದ್ದಿ ವಾಹಿನಿ ಪ್ರಸಾರವಾಗುವುದಿಲ್ಲ.)
发表评论