ಯಾವುದು ಮೂಢನಂಬಿಕೆ, ಯಾವುದು ಅನುಮಾನ ಎಂಬುದನ್ನು ಮೀಡಿಯಾಗಳು ನಿರ್ಧಾರ ಮಾಡೋಹಂಗಿಲ್ಲ. ಮೀಡಿಯಾಗಳಿಗೆ ಆ ಹಕ್ಕನ್ನು ಯಾರೂ ಕೊಟ್ಟಿಲ್ಲ. ಯಾವುದು ಮೌಢ್ಯ ಎಂಬುದನ್ನು ನಿರ್ಧಾರ ಮಾಡಬಹುದಾದ ತಜ್ಞರು ಮೀಡಿಯಾಗಳಲ್ಲಿ ಇಲ್ಲವೇ ಇಲ್ಲ. ಹೀಗಾಗಿ ಯಾವುದನ್ನೂ ಅವರು ಮೌಢ್ಯ ಅನ್ನುವ ಹಾಗೆ ಇಲ್ಲ.
ಮಡೆಸ್ನಾನದ ಕುರಿತು ಅವಧಿ ಆರಂಭಿಸಿರುವ ಚರ್ಚೆಯಲ್ಲಿ ಜೋಗಿ ತಮ್ಮದಲ್ಲದ ಶೈಲಿಯಲ್ಲಿ ಬರೆದಿದ್ದಾರೆ. ಜೋಗಿ ಅವರ ಅಭಿರುಚಿಗಳು, ಪುಸ್ತಕಗಳ ಬಗ್ಗೆ ಗೊತ್ತಿರುವವರಿಗೆ ಇದು ಇನ್ನೊಂದು ವರಸೆಯ ದರ್ಶನ.
ಒಂದು ಆಚರಣೆಯಿಂದ ಯಾರಿಗೆ ಏನೇನು ಅನುಕೂಲವಾಗಿದೆ ಎನ್ನುವುದರ ಕುರಿತು ಎಲ್ಲ ಮನೋವಿಜ್ಞಾನಿಗಳೂ, ಸಮಾಜಶಾಸ್ತ್ರಜ್ಞರೂ ಸೇರಿ ಅಧ್ಯಯನ ನಡೆಸಬೇಕು ಎಂದು ಜೋಗಿ ಅಬ್ಬರಿಸಿದ್ದಾರೆ.
ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಮಗುವನ್ನು ಎಸೆಯುವ ಸಂಪ್ರದಾಯದ ಬಗ್ಗೆಯೂ ಜೋಗಿ ಬರೆದಿದ್ದಾರೆ. ಹೀಗೆ ಎಸೆದ ಮಗುವಿಗೆ ಏನೇನಾಯಿತು ಎನ್ನುವುದರ ಕುರಿತು ಪತ್ರಕರ್ತರು ಫಾಲೋ ಅಪ್ ಮಾಡಬೇಕಿತ್ತು ಎನ್ನುವುದು ಜೋಗಿ ಅಭಿಮತ. ಅದೇನೋ ಸರಿ, ಈ ಮಾತಿಗೆ ಅವರು ಇನ್ನೊಂದು ವಾಕ್ಯವನ್ನೂ ಪೋಣಿಸಿದ್ದಾರೆ. ಆ ಕ್ಷಣದ ತೆವಲಿಗೆ ಆಚರಣೆಗಳು ಮತ್ತು ಸಂಪ್ರದಾಯಗಳು ಬಲಿಯಾಗುತ್ತವೆ ಎಂದು ಅವರು ಸ್ಟೇಟ್‌ಮೆಂಟ್ ಹೊರಡಿಸಿದ್ದಾರೆ. ಏನಿದರ ಅರ್ಥ? ಯಾರ ತೆವಲಿಗೆ ಯಾವ ಸಂಪ್ರದಾಯ ಬಲಿಯಾಗಿದೆ?
ಜೋಗಿನ ಮಾತಿನ ಜಾಡು ಹಿಡಿದು ಹೊರಟರೆ, ಮಾಧ್ಯಮಗಳು ತಮಗೆ ಯಾವುದೇ ಸಂಪ್ರದಾಯ ಮೌಢ್ಯ, ಕಂದಾಚಾರದಿಂದ ಕೂಡಿದೆಯೆಂದು ಕಂಡರೆ ಅದನ್ನು ವಿರೋಧಿಸಿ ಬರೆಯುವಂತಿಲ್ಲ. ಒಂದು ವರ್ಷ ಕಾಲ ಸಮಾಜಶಾಸ್ತ್ರಜ್ಞರು, ಮನೋವಿಜ್ಞಾನಿಗಳಿಂದ ತನಿಖೆ ಮಾಡಿಸಿ, ನಂತರ ತೀರ್ಮಾನಕ್ಕೆ ಬರಬೇಕು.
ಮಗುವನ್ನು ಮೇಲಿಂದ ಎತ್ತಿ ಎಸೆದರೂ ಅಷ್ಟೆ, ಎಂಜಲೆಲೆ ಮೇಲೆ ಉರುಳಾಡಿದರೂ ಅಷ್ಟೆ. ಬರಿಗಣ್ಣಿಗೆ ಅದು ಅನಿಷ್ಟ, ರೋಗಿಷ್ಠ ಆಚರಣೆಯಂತೆ ಕಂಡರೂ ಅದನ್ನು ಪತ್ರಕರ್ತರು ಬರೆಯುವಂತಿಲ್ಲ, ಬರೀ ಕೂಡದು. ಒಂದು ವೇಳೆ ಬರೆದರೆ ಇಂಥ ಭವ್ಯವಾದ ಆಚರಣೆಗಳು ಅನ್ಯಾಯವಾಗಿ ಬಲಿಯಾಗಿಬಿಡುತ್ತವೆ!
ಯಾವುದು ಮೌಢ್ಯ ಎಂಬುದನ್ನು ಮಾಧ್ಯಮಗಳು ದಾಖಲೆ ಮಾಡದೆ ಇನ್ನ್ಯಾರು ಮಾಡಬೇಕು? ಕಡೆ ಪಕ್ಷ ಜೋಗಿಯವರು ಹೇಳುವ ಸಮಾಜವಿಜ್ಞಾನಿಗಳೂ ಸಹ ತಮ್ಮ ಅಭಿಪ್ರಾಯವನ್ನು ಮಾಧ್ಯಮಗಳ ಮೂಲಕವೇ ಪ್ರಚುರಪಡಿಸಬೇಕಲ್ಲವೇ? ಜೋಗಿ ಏನನ್ನು ಹೇಳಲು ಹೊರಟಿದ್ದಾರೆ?
ಮಾಧ್ಯಮಗಳು ಯಾರನ್ನು ತಿದ್ದುವುದೂ ಬೇಡ, ಬುದ್ಧಿವಂತರನ್ನಾಗಿ ಮಾಡುವುದೂ ಬೇಡ. ಕಣ್ಣಿಗೆ ರಾಚುವ ಅಂಧಶ್ರದ್ಧೆಯನ್ನು ಅದು ಇದ್ದಂತೆ ಹೇಳಿದರೆ ಸಾಕು. ಅದನ್ನೂ ಬೇಡ ಎನ್ನುವ ಜೋಗಿ ಏನನ್ನು ಸೂಚಿಸುತ್ತಿದ್ದಾರೆ?
ಸುವರ್ಣ ನ್ಯೂಸ್‌ನಲ್ಲಿ ಬಾಲ ಜ್ಞಾನಿ ಎಂಬ ಕಾರ್ಯಕ್ರಮ ಬರುತ್ತದೆ. ಆ ಕಾರ್ಯಕ್ರಮವನ್ನು ರೂಪಿಸಿದವರಲ್ಲಿ ಜೋಗಿ ಕೂಡ ಒಬ್ಬರು. ಎಳೇ ಹುಡುಗನೊಬ್ಬನನ್ನು ಎಳೆತಂದು ಜೋತಿಷ್ಯ ಹೇಳಿಸುವ ಕಾರ್ಯಕ್ರಮ ಅದು. ಇದು ಜೋಗಿಯವರ ಹೊಸ ಅಭಿರುಚಿ.
ಹೀಗಿರುವಾಗ ಮಡೆಸ್ನಾನವನ್ನು ಸಮರ್ಥಿಸಿಕೊಂಡು ಬರೆದ ಅಕ್ಷರ ಅವರ ಲೇಖನ ಜೋಗಿಗೆ ಇಷ್ಟವಾಗದೇ ಇರುತ್ತದೆಯೇ?
ಚರಿತ್ರೆಯಲ್ಲಿ ದಾಖಲಾಗುವುದು ಕ್ರಿಯೆಯೇ ಹೊರತು, ಮಾತಲ್ಲ. ಮಹಾತ್ಮ ಗಾಂಧಿ ದಂಡಿ ಮಾರ್ಚ್ ಮಾಡಿದ್ದಷ್ಟೇ ಮುಖ್ಯ, ಯಾರು ಅದನ್ನು ವರದಿ ಮಾಡಿದರು ಅನ್ನುವುದಲ್ಲ ಎಂದು ಜೋಗಿ ಪತ್ರಕರ್ತರಿಗೆ ಕಿವಿಮಾತು ಹೇಳಿದ್ದಾರೆ.
ಚರಿತ್ರೆಯಲ್ಲಿ ಒಳ್ಳೆಯದು ಮಾತ್ರವಲ್ಲ, ಕೆಟ್ಟದ್ದೂ ದಾಖಲಾಗುತ್ತದೆ. ಮೌಢ್ಯದ ಅನಿಷ್ಠ ಪರಂಪರೆಯೂ ದಾಖಲಾಗುತ್ತದೆ. ಅದನ್ನು ಸಮರ್ಥಿಸಿಕೊಂಡ ಅವಿವೇಕಿಗಳೂ ದಾಖಲಾಗುತ್ತಾರೆ.
ಪೂರಕ ಓದಿಗಾಗಿ:
发表评论