
ರವಿ ಬೆಳಗೆರೆ ಕನ್ನಡದ ಪ್ರತಿಭಾವಂತ ಬರಹಗಾರ. ಪಾವೆಂ ಹೇಳಿದ ಕಥೆಗಳು ತರಹದ ಉತ್ತಮ ಕಥೆಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟವರು. ಪತ್ರಿಕಾ ವೃತ್ತಿ ಅವರೊಳಗಿನ ಕಥೆಗಾರರನ್ನು ಕೊಂದುಹಾಕಿತು. ಆಮೇಲೆ ಅವರು ಬರೆದದ್ದೆಲ್ಲ ಅಗ್ಗದ ಜನಪ್ರಿಯತೆ, ಮಾರಾಟಕ್ಕಾಗಿ ಬರೆದ ಕೃತಿಗಳು. ಅವರ ಬರವಣಿಗೆಯ ಶೈಲಿಗೆ ಊರು ತುಂಬ ಅಭಿಮಾನಿಗಳು. ಸುತ್ತಲೂ ಅಣ್ಣ, ಬಾಸ್ ಎನ್ನುವ ಭಟ್ಟಂಗಿಗಳು.
ಪ್ರತಾಪ ಸಿಂಹ ಇತ್ತೀಚಿನ ತಲೆಮಾರಿನ ಹುಡುಗ. ಬಿಸಿ ರಕ್ತ, ಆವೇಶ, ಅತ್ಯುತ್ಸಾಹ. ವಿಜಯ ಕರ್ನಾಟಕದಲ್ಲಿ ವಿಶ್ವೇಶ್ವರ ಭಟ್ಟರು ಕೊಟ್ಟ ಅವಕಾಶ, ಸ್ವಾತಂತ್ರ್ಯವನ್ನು ಬಳಸಿಕೊಂಡು ತನ್ನದೇ ಓದುಗರನ್ನು ಸೃಷ್ಟಿಸಿಕೊಂಡಾತ. ಈತನ ಬರವಣಿಗೆ ತುಂಬೆಲ್ಲ ಕೋಮುವಾದದ ನಂಜು, ಮುಸ್ಲಿಂ-ಕ್ರಿಶ್ಚಿಯನ್ನರ ವಿರುದ್ಧ ದ್ವೇಷದ ಒಡಲುರಿ. ಇಂಟರ್‌ನೆಟ್‌ನಲ್ಲಿ ಶ್ರದ್ದೆಯಿಂದ ಹುಡುಕಾಡಿ ಏನೇನನ್ನೋ ಹೆರಕಿ ತಂದು ತನ್ನ ವಾದಗಳನ್ನು ಸಮರ್ಥಿಸಿಕೊಳ್ಳುವ ಪ್ರತಾಪ ಜಾಣ ಲೇಖಕ. ಹೀಗಾಗಿಯೇ ಈತನಿಗೂ ಅಭಿಮಾನಿಗಳು. ಸುತ್ತಲೂ ಪ್ರತಾಪಣ್ಣ, ಪ್ರತಾಪಜೀ ಎನ್ನುವ ಭೋಪರಾಕು ಗಿರಾಕಿಗಳು.
ಇಬ್ಬರಿಗೂ ಕದನ ಯಾಕೆ ಹುಟ್ಟಿಕೊಳ್ತು ಅನ್ನೋದು ನಿಗೂಢ. ಭಟ್ಟರಿಗೂ ಬೆಳಗೆರೆಗೂ ಗಾಢ ಸ್ನೇಹವಿದ್ದ ದಿನಗಳಲ್ಲೂ ಪ್ರತಾಪ ಆಗಾಗ ವಿಜಯ ಕರ್ನಾಟಕದಲ್ಲಿ ರವಿ ಬೆಳಗೆರೆಯನ್ನು ಕುಟುಕುತ್ತಿದ್ದ. ಬೆಳಗೆರೆ ಬಿಟ್ಟಾರೆಯೇ? ಅವರೂ ಸಹ ತಮ್ಮ ಹಾಯ್ ಬೆಂಗಳೂರಿನಲ್ಲಿ ಪೀಪಿ ಸಿಮ್ಮ, ಕಾಂಡೋಮ್ ಸಿಮ್ಮ, ಪಿಟ್ಟು ಸಿಮ್ಮ ಇತ್ಯಾದಿಯಾಗಿ ಗೇಲಿಗಳನ್ನು ಮಾಡಿಯೇ ಮಾಡಿದರು.
ಇವರಿಬ್ಬರ ಜಗಳಕ್ಕೆ ಅಕ್ರಮ ಗಣಿಗಾರಿಕೆಯ ಧೂಳೂ ಮೆತ್ತಿಕೊಂಡಿದೆ. ಬಳ್ಳಾರಿ ರೆಡ್ಡಿಗಳ ವಿರುದ್ಧ ಪ್ರತಾಪ ಸಿಂಹ ಮೈನಿಂಗ್ ಮಾಫಿಯಾ ಎಂಬ ಪುಸ್ತಕ ಬರೆದರೆ, ರವಿ ಬೆಳಗೆರೆ ರೆಡ್ಡಿಗಳ ವಿರೋಧಿಗಳಾಗಿರುವ ಲಾಡ್‌ಗಳ ವಿರುದ್ಧ ಅನಿಲ್ ಲಾಡ್ ಮತ್ತು ೪೦ ಮಂದಿ ಕಳ್ಳರು ಎಂಬ ಪುಸ್ತಕ ಬರೆದರು. ಬೆಳಗೆರೆಯ ಖಾಸ್‌ಬಾತ್‌ಗಳು ಪುಸ್ತಕದಂಗಡಿಗಳಲ್ಲಿ ಸೇಲಾಗುವಷ್ಟೇ ವೇಗದಲ್ಲಿ ಪ್ರತಾಪಸಿಂಹನ ಬೆತ್ತಲೆ ಜಗತ್ತೂ ಸೇಲ್ ಆಗುತ್ತದೆ. ಇಬ್ಬರಿಗೂ ವೃತ್ತಿ ಮಾತ್ಸರ್ಯ ಬಂತಾ? ಅದಕ್ಕೇ ಈ ಹೊಡಿಬಡಿ ಕದನವಾ?
ವಿಶ್ವೇಶ್ವರ ಭಟ್ಟರು ವಿಜಯ ಕರ್ನಾಟಕ ಬಿಟ್ಟ ನಂತರದ ಬೆಳವಣಿಗೆಗಳು ಎಲ್ಲರಿಗೂ ಗೊತ್ತೇ ಇದೆ. ಬೆಳಗೆರೆ ಮೊದಲ ಸಂಚಿಕೆಯಲ್ಲಿ ಪ್ರತಾಪ್ ಸಿಂಹನನ್ನು ಗುರಿಯಾಗಿಸಿಕೊಂಡು ಬರೆದರು, ವಿಶ್ವೇಶ್ವರ ಭಟ್ಟರನ್ನು ಸಮರ್ಥಿಸಿಕೊಂಡರು. ನಂತರದ ಸಂಚಿಕೆಗಳಲ್ಲಿ ವಿಶ್ವೇಶ್ವರ ಭಟ್ಟರನ್ನು ಸೇರಿಸಿಯೇ ಹಣಿದರು. ಪ್ರತಾಪ ಕೊರ್ಟಿನಲ್ಲಿ ಕೇಸು ಜಡಿದು ತನ್ನ ವಿರುದ್ಧ ಮಾನನಷ್ಟವಾಗುವಂತೆ ಬರೆಯಕೂಡದು ಎಂಬ ಆದೇಶವನ್ನೂ ತಂದುಬಿಟ್ಟ.

ಅತ್ತ ಬೆಳಗೆರೆ ಪ್ರತಾಪನನ್ನು ಹಡಬೆ ನಾಯಿ ಇತ್ಯಾದಿಯಾಗಿ ಸಂಬೋಧಿಸುತ್ತಿದ್ದರೆ, ಇತ್ತ ಪ್ರತಾಪ ನಿಮ್ಮ ಅಪ್ಪ ಯಾರು ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಪ್ರಶ್ನೆ ಮಾಡುತ್ತ ಕುಳಿತಿದ್ದಾರೆ. ಭಟ್ಟರು ಗಂಜೀಕೇಂದ್ರ ಸೇರುತ್ತಾರೆ ಎಂದು ಬೆಳಗೆರೆ ಬರೆದರೆ, ಸದ್ಯ ನಾನು ಮಾಂಸದ ಅಂಗಡಿ ಸೇರುತ್ತಿಲ್ಲ ಎಂದು ಭಟ್ಟರು ತಿರುಗೇಟು ನೀಡುತ್ತಿದ್ದಾರೆ.
ಈ ಜಗಳದಲ್ಲಿ ಯಾರು ಗೆದ್ದರೂ ಸೋತರೂ ಕನ್ನಡದ ಮಾಧ್ಯಮ, ಸಾಂಸ್ಕೃತಿಕ ಜಗತ್ತಿಗೇನು ಪ್ರಯೋಜನವಿಲ್ಲ ಎನ್ನುವುದು ಬೇರೆ ಮಾತು. ಇದು ಅಂಥ ಆರೋಗ್ಯಕರ ಕದನದ ಹಾಗೇನೂ ಕಾಣುತ್ತಿಲ್ಲ. ಆದರೆ ಯಾವುದೋ ಕಮರ್ಷಿಯಲ್ ಸಿನಿಮಾದ ಕ್ಲೈಮ್ಯಾಕ್ಸಿನಂತೆ ಕಾಣುತ್ತಿರುವುದಂತೂ ನಿಜ.
ಈ ಅಪ್ಪಟ ಬೀದಿ ಕಾಳಗದ ಕುರಿತಾಗಿ ಈ ಇಬ್ಬರು ಲೇಖಕರ ಫ್ಯಾನ್ ಫಾಲೋಯಿಂಗ್‌ಗಳನ್ನು ಹೊರತುಪಡಿಸಿದರೆ ಬೇರೆ ಯಾರೂ ಅಂಥ ಕುತೂಹಲವನ್ನೇನು ಇಟ್ಟುಕೊಂಡಿಲ್ಲ. ಪುಕ್ಕಟೆ ಮನರಂಜನೆ ಸಿಗಲಿ ಬಿಡಿ ಎಂದು ಉಳಿದವರು ಕಾದು ನೋಡುತ್ತಿದ್ದಾರೆ.
ಕೊನೆ ಕುಟುಕು: ರವಿ ಬೆಳಗೆರೆ ಮತ್ತು ಪ್ರತಾಪ ಸಿಂಹ ಇಬ್ಬರೂ ರಿವಾಲ್ವರ್ ಲೈಸೆನ್ಸ್ ಹೊಂದಿದ್ದಾರೆ. ಇಬ್ಬರೂ ರಿವಾಲ್ವರ್ ಹೊತ್ತುಕೊಂಡೇ ಹೊರಗಡೆ ಓಡಾಡುತ್ತಾರೆ. ಇಬ್ಬರ ಜಗಳ ಮಾತಿಗೆ, ಬರಹಕ್ಕೆ ಸೀಮಿತವಾಗಿರಲಿ ಎಂದು ಹಾರೈಸೋಣ.
发表评论