ಇದು ಕಾಸಿಗಾಗಿ ಬರೆದ ಸುದ್ದಿಯಲ್ಲ. ಪ್ರಜಾವಾಣಿ ಕಾಸಿಗಾಗಿ ಬರೆಯುವ ಪರಿಪಾಠವನ್ನು ಬೆಳೆಸಿಕೊಂಡಿಲ್ಲ. ಕಾಸಿಗಾಗಿ ಸುದ್ದಿಯನ್ನು ಕನ್ನಡ ಮಾಧ್ಯಮಗಳ ಪೈಕಿ ನೇರವಾಗಿ ವಿರೋಧಿಸಿದ್ದು ಪ್ರಜಾವಾಣಿ ಮಾತ್ರ. ಅದಕ್ಕಾಗಿ ಪ್ರಜಾವಾಣಿಯನ್ನು ಅಭಿನಂದಿಸಲೇಬೇಕು. ಹೀಗಾಗಿ ಇದನ್ನು ಅಡ್ವಟೋರಿಯಲ್ ಎಂದು ಭಾವಿಸುವಂತಿಲ್ಲ.
ಇದು ಪ್ರಜಾವಾಣಿಯ ಶೈಲಿಯೂ ಅಲ್ಲ. ಪ್ರಜಾವಾಣಿ ಎಂದಿಗೂ ಸಂಘಪರಿವಾರದ ಚಟುವಟಿಕೆಗಳನ್ನು ವೈಭವೀಕರಿಸಿ ಬರೆದದ್ದೂ ಇಲ್ಲ. ಬಹುಶಃ ಈ ಸುದ್ದಿ ಹೊಸದಿಗಂತಕ್ಕೋ, ಸಂಯುಕ್ತ ಕರ್ನಾಟಕಕ್ಕೋ ಅಥವಾ ಪಾಂಚಜನ್ಯ, ವಿಕ್ರಮ ತರಹದ ಪತ್ರಿಕೆಗಳಿಗೆ ಹೊಂದಬಹುದೇನೋ?
ಹಾಗಿದ್ದಾಗ್ಯೂ ಕಳೆದ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಈ ಸುದ್ದಿ ಉದಯ ಶಂಕರ ಭಟ್ಟರ ಶಿರೋನಾಮೆಯೊಂದಿಗೆ ಪ್ರಕಟವಾಗಿದ್ದು ಹೇಗೆ? ಪ್ರಕಟವಾದ ಮೇಲೂ ಅದನ್ನು ಅವರು ಜೀರ್ಣಿಸಿಕೊಂಡಿದ್ದು ಹೇಗೆ?
ಇದೇ ಪ್ರಜಾವಾಣಿಯಲ್ಲಿ ದಿನೇಶ್ ಅಮೀನ್ ಮಟ್ಟು ಅವರು ಪತ್ರಕರ್ತರು ಎಡವುತ್ತಿರುವುದು ಎಲ್ಲಿ ಎಂಬುದನ್ನು ಎಳೆಎಳೆಯಾಗಿ ಬರೆದು, ಅವರಿಗೆ ಸೃಷ್ಟಿಯಾಗಿರುವ ಅಭಿಮಾನಿಗಳಿಂದ ಭೇಷ್ ಅನ್ನಿಸಿಕೊಳ್ಳುತ್ತಾರೆ. ಪದ್ಮರಾಜ ದಂಡಾವತಿಯವರು ಪತ್ರಕರ್ತರು ಕಿತ್ತು ತಿನ್ನುವ ನಾಯಿಗಳಾಗಿದ್ದಾರೆ ಎಂಬ ಶರಣರ ಮಾತನ್ನು ಸಮರ್ಥಿಸಿ, ಪತ್ರಕರ್ತರ ಭ್ರಷ್ಟಾಚಾರದ ವಿರುದ್ಧ ಕತ್ತಿ ಝಳಪಿಸುತ್ತಾರೆ. ಭ್ರಷ್ಟಾಚಾರದ ವಿಷಯದಲ್ಲಿ ನಮ್ಮದು ಜೀರೋ ಟಾಲರೆನ್ಸ್ ಎಂದು ಪ್ರಜಾವಾಣಿಯ ಸಂಪಾದಕ ಶಾಂತಕುಮಾರ್ ತಮ್ಮ ಆಪ್ತರಲ್ಲಿ ಹೇಳಿಕೊಳ್ಳುವುದುಂಟು.
ಇಲ್ಲಿ ಪ್ರಕಟವಾಗಿರುವ ಸುದ್ದಿ ಒಂದು ಉದಾಹರಣೆ ಮಾತ್ರ. ಇಂಥವು ನೂರಾರು ಹುಬ್ಬಳ್ಳಿ, ಗುಲ್ಬರ್ಗ ಬ್ಯೂರೋಗಳಲ್ಲಿ ಪ್ರಕಟವಾಗಿವೆ. ಇವುಗಳನ್ನು ಸಂಪಾದಕ ಮಂಡಳಿ ಗಮನಿಸುವುದಿಲ್ಲವೆ? ಇಂಥ ಸುದ್ದಿಗಳಲ್ಲಿ ಭ್ರಷ್ಟಾಚಾರದ ವಾಸನೆ ಸಾಮಾನ್ಯ ಓದುಗನಿಗೇ ರಾಚುವಾಗ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಕುಳಿತ ಮೇಧಾವಿಗಳಿಗೆ ಗೊತ್ತಾಗುವುದಿಲ್ಲವೆ?
ಅಷ್ಟಕ್ಕೂ ಪ್ರಜಾವಾಣಿಯ ಉತ್ತರ ಕರ್ನಾಟಕದ ಉಸ್ತುವಾರಿ ಹೊತ್ತಿರುವ ಗೋಪಾಲ ಕೃಷ್ಣ ಹೆಗಡೆ ಏನು ಮಾಡುತ್ತಿದ್ದಾರೆ? ಅವರೇಕೆ ತಮ್ಮ ಶಿಷ್ಯ ಉದಯ ಶಂಕರ ಭಟ್ಟರನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದಾರೆ? ಇವರಿಬ್ಬರ ಮಾತಿಗೆ ಪದ್ಮರಾಜ ದಂಡಾವತಿಯವರೇಕೆ ಸೊಪ್ಪು ಹಾಕುತ್ತಾರೆ?
ಪ್ರಶ್ನೆಗಳೇನೋ ಇವೆ. ಉತ್ತರ ಸಿಕ್ಕೀತೆಂಬ ಭರವಸೆಗಳು ಕಾಣುತ್ತಿಲ್ಲ.
ಆದರೆ ಇವು ಕೇವಲ ಪ್ರಶ್ನೆಗಳಲ್ಲ, ವಿಶ್ವಾಸಾರ್ಹತೆಯ ಪ್ರಶ್ನೆಗಳು. ಹೀಗಾಗಿ ಉತ್ತರ ಸಿಗುವವರೆಗೂ ಕೇಳುತ್ತಲೇ ಇರುತ್ತೇವೆ.
发表评论