ಇವತ್ತಿನ ಕನ್ನಡಪ್ರಭ ಮುಖಪುಟದ ಒಂದು ಸುದ್ದಿಯ ಶೀರ್ಷಿಕೆ: ಖಾಸಗಿ ಕಂಪನಿಗಳಲ್ಲಿ ಎಸ್‌ಸಿ, ಎಸ್‌ಟಿಗಳಿಗೆ ಜಾಗವೇ ಇಲ್ಲ.
ನಿಜ, ಖಾಸಗಿ ಸಂಸ್ಥೆಗಳಲ್ಲಿ ದಲಿತರಿಗೆ ಕೊಡಲಾಗುವ ಅವಕಾಶ ಅಷ್ಟಕ್ಕಷ್ಟೆ. ಇದು ಗೊತ್ತಿರುವ ವಿಷಯವೇ. ಈ ಕುರಿತ ಅಂಕಿಅಂಶಗಳನ್ನು ಕನ್ನಡಪ್ರಭ ಪ್ರಕಟಿಸಿದೆ.
ಆದರೆ ಮೀಡಿಯಾಗಳೆಂಬ ಖಾಸಗಿ ಸಂಸ್ಥೆಗಳು ಏನು ಮಾಡುತ್ತಿವೆ? ಮೀಡಿಯಾಗಳಲ್ಲಿ ಸಾಮಾಜಿಕ ನ್ಯಾಯಕ್ಕೆ ಏನಾದರೂ ಅರ್ಥ ಉಳಿದಿದೆಯೇ? ಬಹುಸಂಸ್ಕೃತಿಗಳ ಈ ನೆಲದಲ್ಲಿ ಸಣ್ಣಪುಟ್ಟ ಸಮುದಾಯಗಳ, ತಿರಸ್ಕೃತ ಸಮಾಜಗಳ ಅಭಿವ್ಯಕ್ತಿಯನ್ನು ಧ್ವನಿಸುವಂಥವರು ಮೀಡಿಯಾಗಳಲ್ಲಿ ಎಷ್ಟು ಮಂದಿ ಇದ್ದಾರೆ? ಬಹುಸಂಖ್ಯಾತ ಜನರ ಸಂವೇದನೆಗಳೆಲ್ಲ ನಮ್ಮ ಮೀಡಿಯಾಗಳಿಗೆ ನಗಣ್ಯ ಆಗಿರುವುದು ನಿಜವಲ್ಲವೆ?
ಸುಮ್ಮನೆ ಕನ್ನಡ ಮಾಧ್ಯಮಲೋಕದತ್ತ ಒಂದು ನೋಟ ಚೆಲ್ಲಿ. ಕನ್ನಡ ಮೀಡಿಯಾಗಳಲ್ಲಿ ಇರುವ ದಲಿತರ ಸಂಖ್ಯೆ ಎಷ್ಟು? ಸಂಪಾದಕರುಗಳಲ್ಲಿ ಬ್ರಾಹ್ಮಣೇತರರ ಸಂಖ್ಯೆ ಎಷ್ಟು? ಮುಸಲ್ಮಾನ ವರದಿಗಾರರು ಇದ್ದಾರೆಯೇ? ಇದ್ದರೆ ಅವರ ಪ್ರಮಾಣ ಎಷ್ಟು? ತಿಗಳ, ಕೊರಚ, ಕಮ್ಮಾರ, ಹೊಲೆಯ, ಮಾದಿಗ, ದೊಂಬರ, ಹಕ್ಕಿಪಿಕ್ಕಿ,... ಹೀಗೆ ನಾನಾ ಹಿಂದುಳಿದ ವರ್ಗಗಳ ಹುಡುಗ/ಹುಡುಗಿಯರು ಪತ್ರಿಕೋದ್ಯಮದಲ್ಲಿ ಎಲ್ಲಾದರೂ ಸಿಕ್ತಾರ?
ಯಾರಾದರೂ ಈ ಕುರಿತು ಒಂದು ಅಧ್ಯಯನ ನಡೆಸಿದ್ದಾರಾ?
ಇಂಥ ಪ್ರಶ್ನೆಗಳನ್ನು ಎತ್ತಿದ ತಕ್ಷಣ ಮೀಡಿಯಾಗಳಲ್ಲೂ ಜಾತಿ ಲೆಕ್ಕಾಚಾರನಾ? ಎಂದು ಟೀಕಿಸುವವರು ಇದ್ದೇ ಇರುತ್ತಾರೆ. ಹೀಗೆ ಹೇಳುವವರು ಒಳಗಿಂದೊಳಗೆ ಮಹಾನ್ ಜಾತಿವಾದಿಯಾಗಿರುತ್ತಾರೆ. ಅರಮನೆ ಮೈದಾನದಲ್ಲಿ ನಡೆಯುವ ಗಾಯತ್ರಿ ಸಹಸ್ರನಾಮ ಉತ್ಸವಕ್ಕೆ ನಮ್ಮ ಮಾಧ್ಯಮಗಳಲ್ಲಿ ಸಿಕ್ಕುವ ಪ್ರಚಾರ ಎತ್ತಿನ ಹಬ್ಬಕ್ಕೋ, ಮಾರಮ್ಮನ ಜಾತ್ರೆಗೋ ಯಾಕೆ ಸಿಕ್ಕುವುದಿಲ್ಲ? ಈ ಬಗ್ಗೆ ಯಾರಾದರೂ ಗಂಭೀರವಾಗಿ ಚಿಂತಿಸಿದ್ದಾರೆಯೇ?
ರಾಜ್ಯದ ಸಮಸ್ತರನ್ನು ಪ್ರತಿನಿಧಿಸಬೇಕಿರುವ ಪತ್ರಿಕೆ, ಮಾಧ್ಯಮಗಳು ಕೆಲವೇ ಕೆಲವು ಜಾತಿಗಳ ಸ್ವತ್ತಾಗಿರುವುದು ಅಪಾಯಕಾರಿ. ಜಾತಿ ಈ ದೇಶದಿಂದ ತೊಲಗಬೇಕು ಎಂಬುದು ಆದರ್ಶ, ಜಾತಿ ಇದೆ ಎಂಬುದು ಸತ್ಯ ಮತ್ತು ವಾಸ್ತವ. ಪ್ರತಿ ಜಾತಿಗೂ ಒಂದು ಭಿನ್ನ ಸಾಮಾಜಿಕ ಹಿನ್ನೆಲೆ ಇದೆ. ಮಾಧ್ಯಮ ಕೂಡಾ ಎಲ್ಲರನ್ನೂ ಪ್ರತಿನಿಧಿಸುವಂತಾದಾಗ ಮಾತ್ರ ಅದು ನಿಜ ಅರ್ಥದಲ್ಲಿ ಸಮೂಹ ಮಾಧ್ಯಮ.
ಈಗ ಮಾಧ್ಯಮ ರಂಗದಲ್ಲಿ ಅವಕಾಶ ಗಿಟ್ಟಿಸಿರುವವರು ಅನರ್ಹರು ಎಂಬ ಅಭಿಪ್ರಾಯ ನಮ್ಮದಲ್ಲ. ಆದರೆ ಇತರ ಸಮುದಾಯಗಳ ಅರ್ಹರನ್ನು ಹುಡುಕಿ ತಂದು ಅವಕಾಶ ನೀಡದೇ ಹೋದಲ್ಲಿ ಸಂವಿಧಾನದ ನಾಲ್ಕನೇ ಅಂಗ ಎನಿಸಿಕೊಳ್ಳುವ ಮಾಧ್ಯಮ ರಂಗ ಹೆಚ್ಚು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಕಾರ್ಯನಿರ್ವಹಿಸುವುದು ಅಸಾಧ್ಯ.
ಈ ಬಗ್ಗೆ ಹೆಚ್ಚು ಆಲೋಚನೆಗೆ ಹಚ್ಚುವ ಲೇಖನವೊಂದನ್ನು ಭಾರತದ ಪ್ರತಿಭಾವಂತ ಪರ್ತಕರ್ತ ಸಿದ್ಧಾರ್ಥ ವರದರಾಜನ್ ಈಗ್ಗೆ ಐದು ವರ್ಷಗಳ ಹಿಂದೆ ದಿ ಹಿಂದೂ ಪತ್ರಿಕೆಯಲ್ಲಿ ಬರೆದಿದ್ದರು. ಈ ಲೇಖನ ಇಂದಿನ ಮಾಧ್ಯಮರಂಗ ನಿರ್ವಹಿಸಬೇಕಿರುವ ಜವಾಬ್ದಾರಿಯನ್ನು ಸೂಕ್ಷ್ಮವಾಗಿ ತಿಳಿಸುತ್ತದೆ. ವರದರಾಜನ್ ಸದ್ಯ ದಿ ಹಿಂದೂ ಪತ್ರಿಕೆಯ ದೆಹಲಿ ಬ್ಯೂರೋ ಮುಖ್ಯಸ್ಥ. ಈ ಹಿಂದೆ ಇವರ ಸ್ಥಾನದಲ್ಲಿದ್ದ ಹರೀಶ್ ಖರೆ ಈಗ ಪ್ರಧಾನ ಮಂತ್ರಿಯವರ ಮಾಧ್ಯಮ ಸಲಹೆಗಾರರು. ವರದರಾಜನ್ ಹಿಂದೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಸಂಪಾದಕೀಯಗಳನ್ನು ಬರೆಯುತ್ತಿದ್ದರು. ಅವರ ಆಸಕ್ತಿಯ ಕ್ಷೇತ್ರ ಹಲವು - ಮುಖ್ಯವಾದದ್ದು ವಿದೇಶಾಂಗ ವ್ಯವಹಾರ.
ವರದರಾಜನ್ ಅವರದೊಂದು ಬ್ಲಾಗ್ ಕೂಡ ಇದೆ. ಅವರು ವಿದೇಶದಲ್ಲಿ ಕಲಿತವರು ಮತ್ತು ಕಲಿಸಿದವರು. ಭಾರತದ ಬೇರುಗಳನ್ನು ಚೆನ್ನಾಗಿ ಬಲ್ಲವರು. ಇವರ ಸಹೋದರ ಟುಂಕು ವರದರಾಜನ್ ಅಮೆರಿಕಾ ಮೂಲದ ನ್ಯೂಸ್ ವೀಕ್ ಪತ್ರಿಕೆ ಅಂತಾರಾಷ್ಟ್ರೀಯ ಸಂಪಾದಕ. ಒಮ್ಮೆ ವರದರಾಜನ್ ಅವರ ಬ್ಲಾಗ್ Reality, one bite at a timeಗೆ ಹೋಗಿ ಬನ್ನಿ.
发表评论