ಇದು ನಿಮ್ಮ ಧೈರ್ಯ ಮತ್ತು ಮನಃಸಾಕ್ಷಿಯ ಕೊರತೆಯನ್ನು ಬಹಿರಂಗಗೊಳಿಸುತ್ತದೆ.  ಸತ್ಯ, ನ್ಯಾಯ ಮತ್ತು ನ್ಯಾಯಯುತ ಗುಣದ ಬಗ್ಗೆ ನಿಮಗೆ ಹೊಣೆಗಾರಿಕೆ ಇರುವುದಿಲ್ಲ. ಆದರೆ ಪ್ರತಿಯೊಬ್ಬರ ಪ್ರಾಮಾಣಿಕತೆ ಮತ್ತು ನಿಷ್ಠೆ ಬಗ್ಗೆ ಟೀಕೆ ಮಾಡುವುದು ನಿಮ್ಮ ಆದ್ಯ ಕರ್ತವ್ಯವೆಂದು ತಿಳಿದಿರುತ್ತೀರಿ.

ಹೀಗೆ ನಿಷ್ಠುರ ಮಾತುಗಳಲ್ಲಿ ಅತ್ಯಧಿಕ ಪ್ರಸಾರದ ಪತ್ರಿಕೆಯ, ಸ್ಟಾರ್ ವ್ಯಾಲ್ಯೂ ಇರುವ ಸಂಪಾದಕರನ್ನು ತರಾಟೆಗೆ ತೆಗೆದುಕೊಂಡವರು ಡಿಜಿಪಿ ಅಜಯ ಕುಮಾರ್ ಸಿಂಗ್. ಸ್ವತಃ ಸಾಹಿತಿಯೂ ಆಗಿರುವ ಕವಿ ಮನಸ್ಸಿನ ಅಜಯ ಕುಮಾರ್ ಸಿಂಗ್ ನೇರವಾಗಿ ಹೀಗೆ ಹೇಳಿದ್ದು ಆ ಪತ್ರಿಕೆಯಲ್ಲಿ ಪ್ರಕಟವಾಗಲೇ ಇಲ್ಲ.

ನಿಮ್ಮ ಊಹೆ ನಿಜ. ಹೀಗೆ ಡಿಜಿಪಿಯವರ ಕಟುಟೀಕೆಗೆ ಒಳಗಾದವರು ವಿಜಯ ಕರ್ನಾಟಕದ ಮಾಜಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್.

ಯಾವುದೋ ಮೂಗರ್ಜಿಯ ವಿಚಾರಣೆಗೆಂದು ಪೊಲೀಸ್ ಒಬ್ಬ ತಮ್ಮ ಬಳಿ ಬಂದಿದ್ದನ್ನು ಕಂಡು ವಿಶ್ವೇಶ್ವರ ಭಟ್ಟರು ಕೆರಳಿದ್ದು ನಿಮಗೆ ನೆನಪಿರಬಹುದು. ಈ ಕುರಿತು ಪ್ರಕಟಗೊಂಡ ವರದಿಗಳೂ ನಿಮಗೆ ಸ್ಮರಣೆಯಲ್ಲಿರಬಹುದು. ನಂತರ ಡಿಜಿಪಿ ಅಜಯ ಕುಮಾರ್ ಸಿಂಗ್ ಅವರ ಸ್ಪಷ್ಟನೆಯೊಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾಯಿತು. ಅದನ್ನೂ ನೀವು ಓದಿರುತ್ತೀರಿ. ಹೀಗೆ ಪ್ರಕಟಗೊಂಡ ಪತ್ರವನ್ನು ಹೇಗೆ ಎಡಿಟ್ ಮಾಡಲಾಗಿತ್ತೆಂದರೆ, ಅದು ಡಿಜಿಪಿಯವರು ಏನನ್ನು ಹೇಳಲು ಬಯಸಿದ್ದರೋ ಅದನ್ನು ತಿರುಚಲಾಗಿತ್ತು, ಮುಚ್ಚಿಡಲಾಗಿತ್ತು.

ಆಗ ಅಜಯ ಕುಮಾರ್ ಸಿಂಗ್ ಇನ್ನೊಂದು ಪತ್ರವನ್ನು ಬರೆದಿದ್ದರು. ಆ ಪತ್ರದ ಪೂರ್ಣ ಪಾಠ ಇಲ್ಲಿದೆ.

ಅ.ಸ.ಪತ್ರ ಸಂಖ್ಯೆ:ಪಿಎಸ್/ಡಿಜಿ&ಐಜಿಪಿ/ವಿಕ/೨೦೧೦     ೨೫.೬.೨೦೧೦

ಪ್ರೀತಿಯ ಶ್ರೀ.ವಿಶ್ವೇಶ್ವರ ಭಟ್ ರವರೆ,

ವಿಷಯ: ದಿನಾಂಕ ೧೫ ರಿಂದ ೨೦ ಜೂನ್ ವರೆಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನನ್ನ ವಿರುದ್ಧ ಆಧಾರರಹಿತ,    ಅನೀತಿಯುತ, ನ್ಯಾಯವಲ್ಲದ ಮತ್ತು ಅಸಮಂಜಸ ವರದಿಗಳು ಪ್ರಕಟವಾದ ಬಗ್ಗೆ.

ಉಲ್ಲೇಖ: ೧. ನನ್ನ ಅ.ಸ.ಪತ್ರ ಸಂಖ್ಯೆ:ಪಿಎಸ್/ಡಿಜಿ&ಐಜಿಪಿ/ವಿಕ/೨೦೧೦ -        
         ದಿನಾಂಕ ೨೧.೬.೨೦೧೦.

ಇಂದಿನ ವಿಜಯ ಕರ್ನಾಟಕ ಪತ್ರಿಕೆಯ ವಾಚಕರ ವಿಜಯ ಅಂಕಣದಲ್ಲಿ, ಉಲ್ಲೇಖ ೧
ರಲ್ಲಿನ ನನ್ನ ಪತ್ರದ ಅಪೂರ್ಣ ಆವೃತ್ತಿ ಪ್ರಕಟವಾಗಿರುವುದನ್ನು ನೋಡಿದೆ.  ಇದು ನಿಮ್ಮ ಧೈರ್ಯ
ಮತ್ತು ಮನಃಸಾಕ್ಷಿಯ ಕೊರತೆಯನ್ನು ಬಹಿರಂಗ ಗೊಳಿಸುತ್ತದೆ.  ಸತ್ಯ, ನ್ಯಾಯ ಮತ್ತು
ನ್ಯಾಯಯುತ ಗುಣದ ಬಗ್ಗೆ ನಿಮಗೆ ಹೊಣೆಗಾರಿಕೆ ಇರುವುದಿಲ್ಲ.  ಆದರೆ ಪ್ರತಿಯೊಬ್ಬರ
ಪ್ರಾಮಾಣಿಕತೆ ಮತ್ತು ನಿಷ್ಠೆ ಬಗ್ಗೆ ಟೀಕೆ ಮಾಡುವುದು ನಿಮ್ಮ ಆದ್ಯ ಕರ್ತವ್ಯವೆಂದು ತಿಳಿದಿರುತ್ತೀರಿ.
ಈಗ ನೀವು ನಾನು ಬರೆದ ಪತ್ರವನ್ನು ನನ್ನ ಹೆಸರಿನಲ್ಲಿ ಪ್ರಕಟಿಸಿದ್ದರೂ, ಆ ಪತ್ರ ನಾನು
ಬರೆದ ಪೂರ್ಣಾವೃತಿ ಪತ್ರವಾಗದೆ, ಕೆಲವು ವಾಕ್ಯಗಳನ್ನು ಬೇರೆ ಅರ್ಥ ಬರುವಂತೆ ತಿರುಚಿ ಜನರ
ಹಾದಿ ತಪ್ಪಿಸುವಂತಿದೆ.  ನೀವು ನನ್ನ ವಿರುದ್ಧ ವರದಿಗಳನ್ನು ಪತ್ರಿಕೆಯಲ್ಲಿ ಎಷ್ಟು ಪ್ರಾಮುಖ್ಯವಾಗಿ
ಪ್ರಕಟಿಸಿದ್ದಿರೊ ಆ ಪ್ರಾಮುಖ್ಯತೆ ನನ್ನ ಪತ್ರಕ್ಕೆ ಕೊಡದೆ ವಾಚಕರ ವಿಜಯ ಅಂಕಣದಲ್ಲಿ ಯಾವುದೇ
ಪ್ರತಿಕ್ರಿಯೆಯಿಲ್ಲದೆ ಪ್ರಕಟಿಸಿರುತ್ತೀರಿ.  ನೀವು ನಿಮ್ಮ ಕ್ಷಮೆ/ವಿಷಾದವನ್ನು ಸಹ ವ್ಯಕ್ತಪಡಿಸಿರುವುದಿಲ್ಲ.
ದಯವಿಟ್ಟು ನಿಮ್ಮ ಪತ್ರಿಕೆಯ ಮುಖಪುಟದಲ್ಲಿ ನಿಮ್ಮ ಕ್ಷಮೆ/ವಿಷಾದವನ್ನು ವ್ಯಕ್ತಪಡಿಸಿ, ಇಲ್ಲವಾದಲ್ಲಿ
ನನಗೆ ಬೇರೆ ಮಾರ್ಗವಿಲ್ಲದೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ.
ನಿಮ್ಮ ವಿಶ್ವಾಸಿ,
(ಅಜಯ ಕುಮಾರ ಸಿಂಹ)

ಈ ಪತ್ರ ವಿಜಯ ಕರ್ನಾಟಕದಲ್ಲಿ ಪ್ರಕಟಗೊಳ್ಳಲಿಲ್ಲ.

ಇದಕ್ಕೂ ಮುನ್ನ ಅಜಯ ಕುಮಾರ ಸಿಂಹ ಬರೆದಿದ್ದ ಇನ್ನೊಂದು ಪತ್ರವನ್ನೂ ಒಮ್ಮೆ ಓದಿ. ಇದನ್ನು ವಿಜಯ ಕರ್ನಾಟಕದಲ್ಲಿ ತಿರುಚಿ ಪ್ರಕಟಿಸಲಾಗಿತ್ತು. ಆ ಪತ್ರದ ಪೂರ್ಣ ಪಾಠ ಇಲ್ಲಿದೆ.

ಅ.ಸ.ಪತ್ರ ಸಂಖ್ಯೆ:ಪಿಎಸ್/ಡಿಜಿ&ಐಜಿಪಿ/ವಿಕ/೨೦೧೦   ೨೧.೬.೨೦೧೦

ಪ್ರೀತಿಯ ಶ್ರೀ.ವಿಶ್ವೇಶ್ವರ ಭಟ್ ರವರೆ,

ಕಳೆದ ವಾರ ನಾನು ರಜೆಯ ಮೇಲೆ ಕರ್ನಾಟಕದಿಂದ ಹೊರಗಿದ್ದೆ.   ನಿಮ್ಮ ಪತ್ರಿಕೆ
ವಿಜಯ ಕರ್ನಾಟಕದಲ್ಲ್ಲಿ ನಾನು ಅನಾಮಧೇಯ ಅರ್ಜಿಯ ಮೂಲಕ ನಿಮ್ಮ ಮೇಲೆ
ವಿಚಾರಣೆಗೆ ಆದೇಶಿಸಿದ್ದೇನೆ ಎನ್ನುವ ನೆಪದಲ್ಲಿ ನನ್ನ ಮೇಲೆ ನಿರ್ದಯವಾಗಿ ದಾಳಿ
ನಡೆಸಿದ್ದೀರೆಂದು ದೂರವಾಣಿ ಮೂಲಕ ನನಗೆ ತಿಳಿದು ಬಂತು.

ನಾನು ಕರ್ತವ್ಯಕ್ಕೆ ಹಾಜರಾದ ನಂತರ, ದಿನಾಂಕ ೧೫ ರಿಂದ ೨೦ನೇ ಜೂನ್
೨೦೧೦ ರವರೆಗೆ ನಿಮ್ಮ ಪತ್ರಿಕೆಯಲ್ಲಿ ನನ್ನ ಮೇಲೆ ಪ್ರಕಟಿಸಿರುವ ವರದಿಯನ್ನು ಓದಿ ನನಗೆ
ಅತೀವ ನೋವು ಮತ್ತು ಆಶ್ಚರ್ಯವಾಯಿತು.

ಸದರಿ ವಿಷಯದ ಬಗ್ಗೆ ಪರಿಶೀಲಿಸಿದಾಗ ಕೆಲವು ಆಡಳಿತಾತ್ಮಕ
ತಪ್ಪುಗಳಾಗಿರುವುದು ನನಗೆ ಕಂಡು ಬಂದಿದೆ.  ಆದರೆ ಸದರಿ ಅರ್ಜಿ ಯಾವುದೇ
ಹಂತದಲ್ಲಿ ನನ್ನ ಗಮನಕ್ಕೆ ಬಂದಿರುವುದಿಲ್ಲ.  ಒಂದು ವೇಳೆ ಸದರಿ ಅರ್ಜಿ ನನ್ನ ಗಮನಕ್ಕೆ
ಬಂದಿದ್ದರೆ ನಾನು ಯಾವುದೇ ವಿಚಾರಣೆಗೆ ಆದೇಶಿಸುತ್ತಿರಲಿಲ್ಲ, ಎಲ್ಲಾ ಅನಾಮಧೇಯ
ಅರ್ಜಿಗಳು ಕಸದ ಬುಟ್ಟಿಗೆ ಹಾಕಲು ಅರ್ಹವಾದವು ಎನ್ನುವುದು ಸರಿಯಲ್ಲ.  ಪೊಲೀಸ್
ಇಲಾಖೆಗೆ ಸಂಬಂಧಪಟ್ಟಂತೆ ಅನಾಮಧೇಯ ಅರ್ಜಿಗಳು, ಪತ್ರಗಳು, ದೂರವಾಣಿ
ಕರೆಗಳು,  ಈ-ಮೇಲ್‌ಗಳು  ಮಾಹಿತಿಯ  ಮೂಲಗಳು.  ಅನೇಕ ಕೊಲೆ ಪ್ರಕರಣಗಳು
ಇಂತಹ ಅನಾಮಧೇಯ ಅರ್ಜಿಗಳು ನೀಡಿದ ಮಹತ್ವದ ಮಾಹಿತಿ ಮೂಲಕ
ಪತ್ತೆಯಾಗಿರುತ್ತವೆ.  ಆದರೆ ನನ್ನ ಅಭಿಪ್ರಾಯದಲ್ಲಿ ಈ ಅರ್ಜಿಯ ಮೇಲೆ ನಮ್ಮಿಂದ
ಯಾವುದೇ ಕ್ರಮದ ಅಗತ್ಯತೆ ಕಂಡು ಬರುವುದಿಲ್ಲ,

ವೈಯಕ್ತಿಕವಾಗಿ ನನ್ನ ವಿರುದ್ಧ ನಿಮ್ಮ ನಿಂದನೆ ಸಂಪೂರ್ಣವಾಗಿ ಅನಾಮಧೇಯ
ಅರ್ಜಿಯ ಮೇಲೆ ನಾನೇ ವಿಚಾರಣೆಗೆ ಆದೇಶಿಸಿದ್ದೇನೆ ಎಂಬ ಆಧಾರ ರಹಿತ ನೆಪವೊಡ್ಡಿ
ಮಾಡಿದ್ದಾಗಿರುತ್ತದೆ.  ಕೇವಲ ಒಬ್ಬ ಪೊಲೀಸ್ ಕಾನ್ಸ್‌ಟೇಬಲ್ ವಿಚಾರಣೆಗಾಗಿ ನಿಮ್ಮ ಬಳಿ
ಬಂದಾಗ, ನಿಮಗೆ ಬಂದಿರಬಹುದಾದ ಕೋಪ, ನಿಮ್ಮ ಮರ್ಯಾದೆ ಮತ್ತು ಸ್ವಪ್ರತಿಷ್ಠೆಗೆ ಧಕ್ಕೆ
ಉಂಟಾಗಿದೆ ಎಂಬ ಅನಿಸಿಕೆಯಿಂದಾಗಿ ದಿನಾಂಕ ೧೫.೬.೨೦೧೦ ರ ಪತ್ರಿಕೆಯಲ್ಲಿ ಪ್ರಕಟವಾದ
ವರದಿಯನ್ನು ಅರ್ಥಮಾಡಿಕೊಳ್ಳಬಹುದು.  ಆದಾಗ್ಯೂ ನೀವು ಈ ಬಗ್ಗೆ ಸ್ಪಷ್ಠೀಕರಣ
ಕೇಳಬಹುದಾಗಿತ್ತು.  ಆದರೆ ನೀವು ಹಾಗೆ ಮಾಡಲಿಲ್ಲ. ಪೊಲೀಸ್ ಆಯುಕ್ತರು,
ಬೆಂಗಳೂರು ನಗರ ರವರು ನಿಮಗೆ ಕಳುಹಿಸಿದ ಪತ್ರ ಸಂಖ್ಯೆ:ಡಿಸಿಪಿ.ಸಾ.ಸಂ.ಅ/೨೦೧೦
ದಿನಾಂಕ ೧೬.೬.೨೦೧೦ ರಲ್ಲಿ ಈ ಪ್ರಸಂಗದಲ್ಲಿ ನನ್ನ ಪಾತ್ರವೇನೂ ಇಲ್ಲವೆಂದು ಮತ್ತು ತಪ್ಪು
ಮಾಡಿದವರ ಮೇಲೆ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿರುತ್ತಾರೆ. ನಮ್ಮ ಕಛೇರಿಯೂ :  ೨  :
ಸಹ ಪತ್ರ ಸಂಖ್ಯೆ: ಜಿಸಿ(೧)೫೩೫/ಬೆಂ.ನಗರ/೨೦೧೦/ಭಾಗ-೭ ದಿನಾಂಕ ೧೭.೬.೨೦೧೦ ರಲ್ಲಿ
ವಾಸ್ತವಾಂಶವನ್ನು ವಿವರಿಸಿ ಪ್ರಕಟಿಸಲು ಕೋರಿರುತ್ತಾರೆ.  ಆದರೆ ನೀವು ಯಾವುದೇ
ಸ್ಪಷ್ಠೀಕರಣವನ್ನು ಪ್ರಕಟಿಸದೆ, ನಿಮ್ಮ ನಿಂದನೆ ತಪ್ಪು ಎಂದು ಸಾಬೀತಾದರೂ ನನ್ನ ವಿರುದ್ಧ
ನಿಮ್ಮ  ಟೀಕಾಪ್ರಹಾರವನ್ನು  ಮುಂದುವರಿಸಿದಿರಿ.   ಸದರಿ  ಅರ್ಜಿ  ಯಾವುದೇ ಹಂತದಲ್ಲಿ
ನನ್ನ ಗಮನಕ್ಕೆ ಬಂದಿಲ್ಲದಿದ್ದು ಮತ್ತು ನಿಮ್ಮ ಮೇಲೆ ಯಾವುದೇ ವಿಚಾರಣೆಗೆ ನಾನು
ಆದೇಶ ನೀಡಿಲ್ಲದಿರುವುದರಿಂದ, ಪತ್ರಿಕೋದ್ಯಮದ ಸ್ವಾತಂತ್ರ್ಯ ಹರಣಕ್ಕೆ ಯತ್ನಿಸಿರುವ
ಪ್ರಶ್ನೆಯೇ ಉದ್ಭವಿಸುವುದಿಲ್ಲ.  ನಾನು ಸದಾ ಪತ್ರಿಕೋದ್ಯಮದ ಸ್ವಾತಂತ್ರ್ಯವನ್ನು
ಸಮರ್ಥಿಸಿರುತ್ತೇನೆ.  ನನ್ನ  ಬಗ್ಗೆ ನಿಮ್ಮ ನಿಲುವು ನ್ಯಾಯಯುತ ಮತ್ತು
ಸಮಂಜಸವಾಗಿರುವುದಿಲ್ಲ ಎಂದು ಹೇಳಲು ಬಯಸುತ್ತೇನೆ.  ನೀವು ಪೂರ್ವಾಗ್ರಹ ಪೀಡಿತ
ಮತ್ತು ಹತಾಶೆಗೊಂಡ ವ್ಯಕ್ತಿಯಂತೆ ವರ್ತಿಸಿ ಅಸಂಸದೀಯ ಭಾಷೆಯನ್ನು
ಉಪಯೋಗಿಸಿರುವುದು ನನ್ನನ್ನು ಆಶ್ಚರ್ಯಚಕಿತನನ್ನಾಗಿಸಿದೆ.  ಪತ್ರಿಕಾ ಸ್ವಾತಂತ್ರ್ಯವೆಂದರೆ
ಕೊಲ್ಲಲು ಪರವಾನಗಿ ಅಲ್ಲ.

ನಾನು ಅಧಿಕೃತವಾಗಿ ರಜೆಯನ್ನು ಪಡೆದು, ರಾಜ್ಯದ ಮಾನ್ಯ
ಮುಖ್ಯಮಂತ್ರಿಗಳಿಗೂ ಮತ್ತು ಮಾನ್ಯ ಗೃಹ ಮಂತ್ರಿಗಳಿಗೂ ತಿಳಿಸಿ ರಜೆಯ ಮೇಲೆ
ತೆರಳಿದ್ದೆನು,   ಅದನ್ನು   ನೀವು  ಡಿಜಿಪಿ ಮಿಸ್ಸಿಂಗ್!  ಎಂದು  ಕರೆದಿರುತ್ತೀರಿ.  ಇದು
ಪತ್ರಿಕೋದ್ಯಮದ ಪ್ರಾಮಾಣಿಕತೆಯೆ?  ಅದೇ ವರದಿಯಲ್ಲಿ ನಾನು ರಜೆಯ ಮೇಲಿದ್ದೇನೆ
ಎಂದೂ ಸಹ ಬರೆದಿರುತ್ತೀರಿ.  ಸತ್ಯ ಮತ್ತು ಸುಳ್ಳಿನ ನಡುವಿನ ಈ ಅಂತರವನ್ನು ನೀವು
ಸರಿ ಎಂದು ಒಪ್ಪಿದರೆ, ಅದು ವಿಷಾದನೀಯ.  ತಪ್ಪು ಮಾಹಿತಿಯ ಆಧಾರದ ಮೇಲೆ
ಕೆಲವು ಮುಖ್ಯ ವ್ಯಕ್ತಿಗಳ ಅಭಿಪ್ರಾಯವನ್ನು ಪಡೆದುಕೊಂಡಿರುತ್ತೀರಿ ಎಂದು
ಸ್ಪಷ್ಟವಾಗಿರುತ್ತದೆ.  ಅವರಲ್ಲಿ ಕೆಲವರು ನನ್ನನ್ನು ನಿನ್ನೆಯಿಂದ ದೂರವಾಣಿ ಮೂಲಕ
ಸಂಪರ್ಕಿಸಿ ಅವರು ಹೇಳಿದ್ದು ಒಂದಾದರೆ, ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿರುವುದೇ ಬೇರೆ
ಎಂದು ತಿಳಿಸಿದ್ದಾರೆ.  ಇದು ಪತ್ರಿಕೆಯ ಸಂಪಾದಕರಾಗಿ ನಿಮ್ಮ ಸ್ವಾತಂತ್ರ್ಯ?  ನೀವು
ನ್ಯಾಯಯುತ, ಆತ್ಮಸಾಕ್ಷಿಯುಳ್ಳ ಸಜ್ಜನ  ವ್ಯಕ್ತಿಯಾಗಿದ್ದರೆ,  ವಾಸ್ತವಾಂಶವನ್ನು  ವಿವರಿಸಿ
ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಮತ್ತು ನಮ್ಮ ಕಛೇರಿಯಿಂದ ಕಳುಹಿಸಲಾದ
ಪತ್ರಗಳನ್ನು ಪ್ರಕಟಿಸಿ ನಂತರ ಸಾರ್ವಜನಿಕರ ಅಭಿಪ್ರಾಯವನ್ನು ಪಡೆಯಬಹುದಾಗಿತ್ತು.
ಯಾವುದೇ ತಪ್ಪಿಲ್ಲದೆ ಬಂದ ನೋವನ್ನು ಸಹಿಸಿಕೊಳ್ಳಬಹುದು ಎಂದು ಫ್ರೆಂಚ್
ಅಸ್ತಿತ್ವವಾದಿ, ಬರಹಗಾರ ಮತ್ತು ದಾರ್ಶನಿಕರಾದ ಅಲ್ಬೇರ್ ಕಾಮು ಹೇಳಿದ್ದಾರೆ.  ಈ
ಮಾತು ಈಗ ನನಗೆ ಸಹಾಯ ಮಾಡುತ್ತಿದೆ.  ಆತಂಕ, ಸಿಟ್ಟು ಮತ್ತು ಆತುರದಲ್ಲಿ ನನ್ನ
ಮೇಲೆ ದಾಳಿ ನಡೆಸುವ ಭರದಲ್ಲಿ, ಡಿಜಿ&ಐಜಿಪಿ ಹುದ್ದೆಯ ಮೌಲ್ಯ ಕಡಿಮೆ ಮಾಡಿರುತ್ತೀರಿ.
ರಾಜ್ಯದ ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿ ಡಿಜಿ&ಐಜಿಪಿ ಗೆ ರಾಜ್ಯದ ಆರು ಕೋಟಿ
ಜನರ ಸುರಕ್ಷತೆ ಮತ್ತು ಭದ್ರತೆ ಹೊಣೆ ಇರುತ್ತದೆ.  ಇಷ್ಟು ವರ್ಷಗಳ ಕಾಲ ಕರ್ನಾಟಕದ
ಜನರು ನನ್ನ ಮೇಲೆ ಅಪಾರ ಪ್ರೀತಿ ಮತ್ತು ವಾತ್ಸಲ್ಯದ ಹೊಳೆ ಹರಿಸಿದ್ದಾರೆ.  ಅವರಿಗೂ
ವಾಸ್ತವ ಏನೆಂದು ಗೊತ್ತಾಗಲಿ.:  ೩  :

ನ್ಯಾಯ ಮತ್ತು ಪ್ರಾಮಾಣಿಕತೆ ಹೆಸರಿನಲ್ಲಿ, ನನ್ನ ವಿರುದ್ಧ ವರದಿಗಳನ್ನು ಎಷ್ಟು
ಪ್ರಾಮುಖ್ಯವಾಗಿ ಪ್ರಕಟಿಸಿದ್ದಿರಿ, ಈ ಪತ್ರವನ್ನೂ ಸಹ ಅಷ್ಟೇ ಪ್ರಾಮುಖ್ಯವಾಗಿ ಯಥಾವತ್ತಾಗಿ
ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸುವಂತೆ ನಿಮ್ಮ ಆತ್ಮಸಾಕ್ಷಿಗೆ ಮನವಿ ಮಾಡುತ್ತೇನೆ.  ಅದು
ಆಗದಿದ್ದಲ್ಲಿ ನಿಮ್ಮ ಪತ್ರಿಕೆಯ ಮುಖಪುಟದಲ್ಲಿ ನಿಮ್ಮ ಕ್ಷಮೆ/ವಿಷಾದ ವ್ಯಕ್ತಪಡಿಸಿದರೂ
ಸಾಕು ಎಂದು ಭಾವಿಸುತ್ತೇನೆ.

ಶುಭಾಶಯಗಳೊಂದಿಗೆ,
ತಮ್ಮ ವಿಶ್ವಾಸಿ,
(ಅಜಯ ಕುಮಾರ ಸಿಂಹ)

ಕೊನೆಕುಟುಕು: ವಿಶ್ವೇಶ್ವರ ಭಟ್ಟರ ವೆಬ್‌ಸೈಟ್‌ನ ಕೇಳ್ರಪ್ಪೋ ಕೇಳಿ ಅಂಕಣದ ಒಂದು ಪ್ರಶ್ನೋತ್ತರ ಹೀಗಿದೆ
೧೯ ಜನವರಿ ೨೦೧೧ ೧/೧೮/೧೧
ಭಾರತಿ ನಾಗರಾಜ
ಮೈಸೂರು ಅಷ್ಟಕ್ಕೂ ನೀವು ವಿಜಯ ಕರ್ನಾಟಕ್ ಬಿಟ್ಟಿದ್ದು ಯಾಕೆ?
 - ಶ್ರಾದ್ಧದ ಊಟ ಆದ ಮೇಲೆ ಅಪ್ಪ ಸತ್ತಿದ್ದು ಹೇಗೆ ಎಂದು ಕೇಳಿದ ಹಾಗಾಯ್ತಲ್ಲಮ್ಮ!
ಇಲ್ಲಿ ಶ್ರಾದ್ಧದ ಊಟ ಅಂದರೆ ಏನು ಅಂತ ಕೇಳ್ತಿದ್ದಾರೆ ಅಭಿಮಾನಿಗಳು.
0 komentar

Blog Archive