ಕೆ.ವಿ.ಅಕ್ಷರ ಬರೆದ ಹರಕೆ-ಹರಾಜು ಲೇಖನ ಅತಿ ಹೆಚ್ಚು ಚರ್ಚಿತವಾದ ಲೇಖನ. ಈಗಾಗಲೇ ಅಂತರ್ಜಾಲದಲ್ಲಿ ಚರ್ಚೆ ಸಾಕಷ್ಟು ವೇಗವಾಗಿ ನಡೆದಿದೆ. ಆದರೆ ಲೇಖನ ಪ್ರಕಟಗೊಂಡು ಎರಡು ವಾರವಾದರೂ ಪ್ರಜಾವಾಣಿಯಲ್ಲಿ ಯಾವುದೇ ಪ್ರತಿಕ್ರಿಯೆ ಪ್ರಕಟಗೊಂಡಿಲ್ಲ. ಬಹುಶಃ ನಾಳೆಯ ಸಾಪ್ತಾಹಿಕ ಪುರವಣಿಯಲ್ಲಿ ಒಂದಷ್ಟು ಚರ್ಚೆಯನ್ನು ನಿರೀಕ್ಷಿಸಬಹುದು. ಈ ನಡುವೆ ಪ್ರಸಿದ್ಧ ಚಿಂತಕ ಎಚ್.ಎಸ್.ಶಿವಪ್ರಕಾಶ್ ಬರೆದ ಪ್ರತಿಕ್ರಿಯೆ ಇಲ್ಲಿದೆ. ಈಗಾಗಲೇ ಇದು ಇ-ಮೇಲ್‌ಗಳಲ್ಲಿ ಹರಿದಾಡಿ ಒಂದಷ್ಟು ಜನರನ್ನು ತಲುಪಿದೆ, ಸಂಪಾದಕೀಯಕ್ಕೂ ಸಿಕ್ಕಿದೆ. ಶಿವಪ್ರಕಾಶ್ ಅವರ ಬರವಣಿಗೆ ಎಂದಿನಂತೆ ಸತ್ಯದ ಅನ್ವೇಷಿ, ಹೃದಯ ತಟ್ಟುವ, ಒಳಗಿನ ಅಂತಃಸಾಕ್ಷಿಯನ್ನು ಬಡಿದೆಚ್ಚರಿಸುವ ಅಕ್ಷರಲಹರಿ. ಸಂಪಾದಕೀಯದ ಓದುಗರಿಗಾಗಿ ಅದರ ಪೂರ್ಣಪಾಠ ಇಲ್ಲಿದೆ. ಓವರ್ ಟು ಶಿವಪ್ರಕಾಶ್...
ಹರಕೆ ಮತ್ತು ಹರಾಜಿನ ಬಗ್ಗೆ ಶ್ರೀ ಅಕ್ಷರ ಅವರು ಬರೆದ ಬರಹ ಈಗಾಗಲೇ ಸಾಕಷ್ಟು ಚರ್ಚೆಯಾಗುತ್ತಿದೆ.
ಅವರು ಒಂದು ರೂಪಕವಾಗಿ ಬಳಸಿರುವ ಚಿತ್ರ ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ. ಒಬ್ಬ ಕೂತಿದ್ದಾನೆ, ಒಬ್ಬ ನಿಂತಿದ್ದಾನೆ, ಮತ್ತೊಬ್ಬ ನೋಡುತ್ತಿದ್ದಾನೆ. ನೋಡುವನು ಮಾನವಶಾಸ್ತ್ರಜ್ಞನಾಗಿದ್ದಾನೆ. ಅವನು ಬಹುಶಃ ಪಡುವಣ ನಾಡಿನವನಾಗಿದ್ದಾನೆ. ಕೂತವನು ಮೇಲು ಜಾತಿಯವನಂತಲೂ ನಿಂತವನು ಕೆಳಜಾತಿಯವನೆಂತಲೂ ಭಾವಿಸುತ್ತಾನೆ. ಇದು ಎಷ್ಟು ಸರಿ? ನಿಂತವನು ತಾನೇ ಅದನ್ನು ಯಾಕೆ ಆಯ್ಕೆ ಮಾಡಿಕೊಂಡಿರಬಾರದು. ಹಾಗಿದ್ದರೆ ಅದು ಅವನ ವಿಶ್ವಾಸದ ಮಾತು. ಕೇಳುವುದಕ್ಕೆ ನಾವು ಯಾರು?
ಎಂಜಲೆಲೆ ಸೇವೆಯಂಥ ಅವಹೇಳನಕಾರಿಯಾದ ಆಚರಣೆಯನ್ನು ವಿಶ್ಲೇಷಿಸುವುದಕ್ಕೆ ಇದೊಂದು ಅತ್ಯಂತ ಸರಳೀಕೃತವಾದ ರೂಪಕವೆಂಬ ಸತ್ಯವನ್ನು ಬದಿಗೊತ್ತಿ ಶ್ರೀ ಅಕ್ಷರ ಅವರ ದಾರಿಯನ್ನು ಹಿಡಿದು ಇನ್ನಷ್ಟು ಮುಂದೆಹೋಗಿ ಅದು ನಮ್ಮನ್ನು ಎಲ್ಲಿಗೆ ತಲುಪಿಸುತ್ತೆ, ನೋಡೋಣ.
ಹೀಗೆಂದು ಭಾವಿಸಿಕೊಳ್ಳಿ:
ಒಬ್ಬ ಹೆಂಗಸು ಸತಿ ಹೋಗುತ್ತಿದ್ದಾಳೆ. ಅವಳು ಈಗಾಗಲೇ ಚಿತೆಯ ಜ್ವಾಲೆಯೊಳಗೆ ಬಿದ್ದಿದ್ದಾಳೆ. ಸುತ್ತಾ ಗಂಡಸರು ದೊಣ್ಣೆ ಹಿಡಿದುಕೊಂಡು ನಿಂತಿದ್ದಾರೆ. ಇದನ್ನು ಒಬ್ಬ ನೋಡುತ್ತಿದ್ದಾನೆ. ಅವನು ಒಬ್ಬ ಸಮಾಜಸುಧಾರಕನಾಗಿದ್ದಾನೆ. ಇದು ಮಹಿಳೆಯರ ವಿರುಧ್ಧ ಶೋಷಣೆ ಅಂತ ಭಾವಿಸಿದರೆ, ಅದೆಷ್ಟು ಸರಿ? ಸುತ್ತಾ ನಿಂತಿರುವ ದೊಣ್ಣೆನಾಯಕರು ಅವಳನ್ನು ಹೊರಗೆ ಜಿಗಿಯದಂತೆ ನೋಡಿಕೊಳ್ಳುತ್ತಿದ್ದಾರೆ ಅಂತ ಅವನು ಊಹಿಸಬಹುದು. ನಾವು ಹಾಗೆ ಯೋಚಿಸಬಾರದು. ಸತಿಹೋಗುವಾಗ ದೊಣ್ಣೆನಾಯಕರು ಹಾಗೆ ನಿಲ್ಲಬೇಕೆಂಬುದು ಒಂದು ಆಚರಣೆಯಿರಬಹುದು. ಆದರೆ ಆ ಹೆಂಗಸು ಕಿರುಚುವ ಹಾಗೆ ಕಾಣುತ್ತಿದೆಯಲ್ಲ? ಹಾಗೆ ಭಾವಿಸುವುದೂ ತಪ್ಪಿರಬಹುದು. ಪತಿಪರಮೇಶ್ವರನೊಂದಿಗೆ ಸ್ವರ್ಗಾರೋಹಣ ಸನ್ನಿಹಿತವಾಗುತ್ತಿರುವುದರಿಂದ ಅವಳು ಆನಂದತುಂದಿಲಳಾಗಿ ಹಾಗೆ ಕೂಗುತ್ತಿರಲಿಕ್ಕೂ ಸಾಕು. ಆದ್ದರಿಂದೇ ಅವಳೇ ಸ್ವಂತ ಇಚ್ಛೆಯಿಂದ ಸತಿ ಹೋಗುತ್ತಿದ್ದಾಳೆ ಅಂತ ಭಾವಿಸುವುದೇ ಸರಿ. ಇದನ್ನು ಶೋಷಣೆ ಎನ್ನುವುದು ಎರವಲು ತಂದ ಬುದ್ಧಿ, ಅವಳು ನಂಬುವುದನ್ನು ಕೇಳಲು ನಾವು ಯಾರು?
ಅಥವಾ ಜೋನ್ಸಟೌನ್ ದುರಂತವನ್ನು ಜ್ಞಾಪಿಸಿಕೊಳ್ಳಿ:
ದಕ್ಷಿಣ ಅಮರಿಕದ ಡೋಂಗಿ ಗುರು ಜಿಮ್ ಜೋನ್ಸನ ಆದೇಶದ ಮೇರೆಗೆ ನೂರಾರು ಜನ ಅನುಯಾಯಿಗಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡು ಸತ್ತುಬಿದ್ದಿದ್ದಾರೆ. ಅದರಲ್ಲಿ ಹೆಂಗಸರು, ಮಕ್ಕಳು, ಮುದುಕರೂ ಇದ್ದಾರೆ. ಈ ಚಿತ್ರವನ್ನು ಒಬ್ಬ ನೋಡುತ್ತಿದ್ದಾನೆ. ಅವನು ಒಬ್ಬ ವಿಚಾರವಾದಿ ಎಂದುಕೊಳ್ಳಿ. ಈ ದುರಂತವನ್ನು ಮೂಢನಂಬಿಕೆಯ ಫಲವೆಂದು ಅವನು ಭಾವಿಸಿದರೆ ಅದೆಷ್ಟು ಸರಿ? ಆ ಸಾಮೂಹಿಕ ಆತ್ಮಹತ್ಯೆ ಅವರ ಆಯ್ಕೆ. ಆ ಮಕ್ಕಳು ಕೂಢ ಈ ಭಯಾನಕ ಆತ್ಮಹತ್ಯೆಯನ್ನು ಖುಷಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಇದು ದುರಂತವೇನಲ್ಲ. ಒಂದು ಧೀರೋದಾತ್ತ ಆಚರಣೆ. ಅವರೆಲ್ಲರೂ ತಾವಾಗಿಯೇ ಸಾವನ್ನಪ್ಪಿಕೊಂಡಿರುವುದರಿಂದ ಅದನ್ನು ಖಂಡಿಸಲು ನಾವು ಯಾರು?
ಅಥವಾ ಕ್ರಾಂತಿ ಪೂರ್ವ ಚೀಣಾದ ಒಂದು ಆಚರಣೆಯನ್ನು ಚಿತ್ರಿಸಿಕೊಳ್ಳಿ;
ವರ್ಷಕ್ಕೊಂದು ಸಲ ಅಲ್ಲಿನ ಚಕ್ರವರ್ತಿ ಬೀರ್ಜಿಂಗ್ ತನ್ನ ಭವ್ಯ ಅರಮನೆಯ ಮುಂದೆ ದೇಶದ ರೈತರಿಗೆ ದಿವ್ಯದರ್ಶನ ಕೊಡುತ್ತಾನೆ. ಆವತ್ತು ನೂರಾರು ಜನ ರೈತರು ತಮ್ಮ ಶಿಷ್ಣಗಳನ್ನು ಕಚಕ್ಕನೆ ಕತ್ತರಿಸಿಕೊಂಡು ತಮ್ಮ ನಾಯಕನಿಗೆ ಅರ್ಪಣೆ ಮಾಡುತ್ತಾರೆ. ಈ ಆಚರಣೆಯಿಂದ ನಾಯಕನ ವೀರ್ಯಶಕ್ತಿ ಹೆಚ್ಚಿ ನಾಡಿಗೆ ಒಳಿತಾಗುವುದೆಂದು ಅವರು ನಂಬುತ್ತಾರೆ. ಇದನ್ನು ಅಮಾನವೀಯ ಆಚರಣೆ ಅನ್ನುವದಕ್ಕೆ ನಾವು ಯಾರು? ಇದೂ ಅವರ ನಂಬಿಕೆಯಲ್ಲವೆ?
ಅಥವಾ ಅಕ್ಷರ ಅವರೇ ಖಂಡಿಸಿರುವ ಐಪಿಎಲ್ ಹರಾಜಿನ ಚಿತ್ರವನ್ನು ಹೀಗೆ ಭಾವಿಸಿಕೊಳ್ಳಿ:
ಹರಾಜು ಮಾಡಿಕೊಂಡ ಕ್ರಿಕೆಟಿಗರು ತಮ್ಮ ಕೊರಳಿಗೆ ತಾವು ಪಡೆದ ಬೆಲೆಯ ಫಲಕಗಳನ್ನು ಹಾಕಿಕೊಂಡು, ಟಿ ವಿ ಕ್ಯಾಮರಾಗಳ ಮುಂದೆ ಪೋಜು ಕೊಡುತ್ತಿದ್ದಾರೆ. ಅಭಿಮಾನಿಗಳು ಅವರನ್ನು ಅಭಿನಂದಿಸುತ್ತಿದ್ದಾರೆ. ಇದನ್ನು ಖಂಡಿಸಲು ನಾವು ಯಾರು? ಆ ಫಲಕಗಳು ಹೆಮ್ಮೆಯ ಸಂಕೇತಗಳೆಂದು ಅವರು ತಿಳಿದಿರಬಹುದಲ್ಲವೆ? ಅವರ ಪ್ಯಾನ್ಗಳೂ ಹಾಗೇ ತಿಳಿದಿದ್ದಾರೆ. ಆ ಸಮಾರಂಭದ ಶೋಭೆಯನ್ನು ಹೆಚ್ಚಿಸಲು ಬಂದ ಶಿಲ್ಪಾ ಶೆಟ್ಟಿ, ವಿಜಯ ಮಲ್ಯ ಅವರೂ ಹಾಗೇ ತಿಳಿದಿದ್ದಾರೆ. ಇದೇನು ಬೈಲಹೊಂಗಲದ ದನದ ಜಾತ್ರೆಯ ಥರದ ಹರಾಜಲ್ಲ. ಸ್ವಂತ ಇಚ್ಛೆಯಿಂದ ಕ್ರಿಕೆಟಿಗರು ತಮ್ಮ ಕ್ರಯವನ್ನು ಪಡೆದುಕೊಂಡಿದ್ದಾರೆ. ಇದು ಮನಮೋಹನ ಯುಗದ, ಯಡಿಯೂರಪ್ಪ ಯುಗದ ಎಲ್ಲ ಭಾರತೀಯರು, ವಿಶೇಷವಾಗಿ ಮುಕ್ಕೋಟಿ ಕನ್ನಡಿಗರು ಹೆಮ್ಮೆ ಪಡಬೇಕಾದ ವಿಷಯ.
ಹೀಗಾಗಿ ಮೇಲ್ಕಾಣಿಸಿದ ಯಾವ ಚಿತ್ರಗಳೂ ಖಂಡನೀಯವಲ್ಲ. ನಾವು ಅಪಮಾನ, ಖಂಡನೀಯ ಅಂತ ತಪ್ಪಾಗಿ ಭಾವಿಸುವುದಕ್ಕೆ ಗುರಿಯಾದ ಆ ಎಲ್ಲರೂ ನಮ್ಮ ಮೆಚ್ಚುಗೆಗೆ ಪಾತ್ರರು.
ಹೀಗೇ ಮುಂದುವರಿಯೋಣ. ದಲಿತರಿಗೆ ಮಲ ತಿನ್ನಿಸಿದ ಘಟನೆಯನ್ನೂ ನಾವು ಖಂಡಿಸಬೇಕಿಲ್ಲ. ಪರಜಾತಿಯ ಹುಡುಗನ ಜೊತೆ ಮದುವೆಯಾಗಿದ್ದಕ್ಕೆ ಒಬ್ಬ ಹುಡುಗಿಯನ್ನು ಮನೆಯವರು ಕೊಲೆ ಮಾಡಿದ ಘಟನೆಯನ್ನೂ ಖಂಡಿಸಬಾರದು. ಕೊಂದವರ ನಂಬಿಕೆಗಳನ್ನೂ ನಾವು ಗೌರವಿಸೋಣ. ಎಳೇ ಹುಡುಗಿಯನ್ನು ನರಬಲಿ ಕೊಟ್ಟವರನ್ನೂ ಬೈಯಬಾರದು. ಯಾಕಂದರೆ ಹುಡುಗಿ ಸ್ವರ್ಗಕ್ಕೆ ಹೋಗಿ ಸುಖವಾಗಿರುತ್ತಾಳೆ. ಹಳ್ಳಿಯಿಂದ ದಿಲ್ಲಿಯವರೆಗೆ ನಡೆಯುವ ಕೊಲೆಗಳು, ಮಾನಭಂಗಗಳು, ಹಲ್ಲೆಗಳು, ಶೋಷಣೆಯ ನಾನಾ ರೂಪಗಳು, ಎಮ್‌ಎಲ್‌ಎ, ಎಮ್‌ಪಿಗಳ ಹರಾಜು ಎಲ್ಲವೂ ಸಮರ್ಥನೀಯ.
ಕೊನೆಯದಾಗಿ ಇನ್ನೊಂದು ಚಿತ್ರ:
ಹೋತವೊಂದನ್ನು ಯಜ್ಞದಲ್ಲಿ ಬಲಿಕೊಡಲು ಕೊಂಡೊಯ್ಯುತ್ತಿದ್ದಾರೆ. ಅದನ್ನು ಬಸವಣ್ಣ ದೂರದಿಂದ ನೋಡುತ್ತಿದ್ದಾನೆ. ಅದನ್ನು ನೋಡಿ ಮರುಗತೊಡಗುತ್ತಾನೆ. ವೇದವನೋದಿದವರ ಮುಂದೆ ಅಳು ಕಂಡೆಯಾ ಹೋತೆ ಅನ್ನುತಿದ್ದಾನೆ. ಹೀಗೆನ್ನಲು ಅವನಿಗೇನು ಅಧಿಕಾರ? ಬಲಿಕೊಡವವರ ನಂಬಿಕೆಗಳನ್ನು ಅವನೇಕೆ ಅರ್ಥ ಮಾಡಕೊಳ್ಳುತ್ತಿಲ್ಲ? ಆ ಕುರಿಗೂ ಬೇಜಾರಿಲ್ಲ. ಅಗೋ ನೋಡಿ, ಅದು ತೋರಣದ ತಳಿರನ್ನು ತಿನ್ನುತ್ತಾ ನಿಂತಿದೆ. ಹೀಗೆ ಬಲಿಯ ಅಗತ್ಯವನ್ನು ಮೌನವಾಗಿ ಒಪ್ಪಿಕೊಂಡಿರುವ ಕುರಿಗೆ ನಾವೇಕೆ ವಕೀಲರಾಗಬೇಕು? ಅಥವಾ ಆ ಬಸವಣ್ಣ ಕೂಡ ಒಬ್ಬ ಮಾನವಶಾಸ್ತ್ರ್ರಜ್ಞನಾಗಿರಬಾರದೇಕೆ?
ಹೀಗೆ ಅಕ್ಷರ ಅವರ ದಾರಿಯನ್ನು ಹಿಡಿದು ನಾವು ಇಲ್ಲಿತನಕ ಬಂದಮೇಲೆ ಮಾನವಮುಕ್ತಿ ಯಜ್ಞಗಳ ಅಗ್ನಿ ಚರಿತ್ರೆಗಳಿಗೆ ವಿದಾಯ ಹೇಳಿಬಿಡೋಣ. ಕತ್ತಲಿನಿಂದ ಬೆಳಕಿಗೆ, ಪಾರತಂತ್ರದಿಂದ ಸ್ವಾತಂತ್ರ್ಯದ ಕಡೆ ಕೊಂಡೊಯ್ಯುವ ಹಾದಿಗಳನ್ನೇ ಅಳಿಸಿಬಿಡೋಣ.
ಸೂಫಿಗಳ ಒಂದು ಸೂಕ್ತಿ:
ಬೈಯಬೇಕಾದ್ದು ಬಾಣವನ್ನಲ್ಲ, ಬಾಣಬಿಟ್ಟವನನ್ನು. ಅ ಬಾಣ ಬಿಡಿಸಿದವನೂ ಇನ್ನೊಬ್ಬನಿರಬೇಕು.
ಅಕ್ಷರ ಬಾಣವಾಗಿದ್ದಾರೆಯೇ ಹೊರತು ಬಾಣ ಬಿಟ್ಟಿಲ್ಲ, ಬಿಡಿಸಿಲ್ಲ.
ಬನ್ನಿ, ಬಾಣವನ್ನು ಬಾಣದ ಪಾಡಿಗೆ ಬಿಟ್ಟು ಬಾಣ ಬಿಟ್ಟವರನ್ನು ಮತ್ತು ಬಿಡಿಸಿದವರನ್ನು ತರಾಟೆಗೆ ತೆಗೆದುಕೊಳ್ಳೋಣ.
ಮಾನವಶಾಸ್ತ್ರ್ರಜ್ಞರ ಕ್ಯಾಮರಾಕ್ಕೆ ಕಣ್ಣಿದೆ, ಕರುಳಿಲ್ಲ. ಹಾಗೆಯೇ ಕೂತುಕೊಂಡಿರುವನ ವಕೀಲರಿಗೆ ಬುದ್ಧಿಯಿದೆ, ಹೃದಯವಿಲ್ಲ.
ನೊಂದವರ ನೋವೇ ಬೇರೆ. ಅದ ಕಂಡು ಮರುಗಿದವರ ಮರುಕವಾಗಲಿ, ಕೆರಳಿದವರ ಸಿಟ್ಟಾಗಲಿ ಆ ವಕೀಲನಿಗಿಲ್ಲ. ಅವನಲ್ಲಿರುವುದು ನೋಯದವರ ನಿರಂಬಳತೆ ಮಾತ್ರ; ನೋವನ್ನೇ ಇಲ್ಲವೆನ್ನಿಸುವ ಘಾತುಕ ಚತುರತೆ ಮಾತ್ರ.
发表评论