ಇಂಥ ಅದ್ಭುತ ಮನೋವೈಜ್ಞಾನಿಕ ಸತ್ಯಗಳನ್ನು ಹೇಳುತ್ತಿರುವವರು ಕೆ.ವಿ.ಅಕ್ಷರ. ಭಾನುವಾರದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯ ಮುಖಪುಟದ ಅಗ್ರ ಲೇಖನದಲ್ಲಿ ಇಂಥ ದಿವ್ಯಜ್ಞಾನವನ್ನು ಅವರು ಉಣಬಡಿಸಿದ್ದಾರೆ. ಲೇಖನದ ಶೀರ್ಷಿಕೆ: ಹರಕೆ ಹರಾಜು- ಯಾವುದು ಸಹಜ? ಯಾವುದು ಅವಮಾನ?
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಮಡೆಸ್ನಾನ ಹಾಗು ಐಪಿಎಲ್ ಹರಾಜು ಇವರೆಡರನ್ನೂ ತೌಲನಿಕವಾಗಿ ವಿಮರ್ಶಿಸಿ ಅಕ್ಷರ ಅವರು ಮೇಲಿನ ನಿರ್ಧಾರಕ್ಕೆ ತಲುಪಿದ್ದಾರೆ. ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಶೂದ್ರರು ಉರುಳಾಡಿದ್ದು ಮತ್ತು ಐಪಿಎಲ್‌ನಲ್ಲಿ ಆಟಗಾರರನ್ನು ಹರಾಜು ಹಾಕಿದ್ದು ಇವರೆಡರಲ್ಲಿ ಯಾವುದು ಹೆಚ್ಚು ಆದ್ಯತೆಯ ಸುದ್ದಿಯಾಗಬೇಕಿತ್ತು ಎಂಬ ಪ್ರಶ್ನೆಯನ್ನು ಮಾಧ್ಯಮಲೋಕಕ್ಕೆ ಎಸೆದಿದ್ದಾರೆ. ಉತ್ತರವೂ ಅವರ ಲೇಖನದಲ್ಲೇ ಇದೆ.
ಅಕ್ಷರ ಅವರು ತಮ್ಮ ವಾದ ಸಮರ್ಥನೆಗೆ ಒಂದು ಕೆಟ್ಟ, ಬಾಲಿಷ ದೃಷ್ಟಾಂತವನ್ನೂ ಕೊಟ್ಟಿದ್ದಾರೆ. ದೃಷ್ಟಾಂತವೂ ಸಹ ಮಡೆ ಸ್ನಾನದ ಪರವಾಗಿಯೇ ವಕಾಲತ್ತು ವಹಿಸುತ್ತದೆ. ಆದರೂ ಅವರು ಲೇಖನದ ಅಂತ್ಯದಲ್ಲಿ ಯಾವುದು ಸಹಜ, ಯಾವುದು ಅವಮಾನ ಎಂಬ ತೀರ್ಮಾನವನ್ನೇನು ಹೇಳಿಲ್ಲ ಎಂದು ಜಾಣತನದಲ್ಲೋ, ಅಪರಾಧಿಪ್ರಜ್ಞೆಯಲ್ಲೋ ಗೊಣಗಿರುವುದೂ ಕೇಳುತ್ತದೆ. ನಮ್ಮ ಕಾಲದೇಶ ಸಂದರ್ಭಕ್ಕೆ ನಮ್ಮದೇ ಸ್ವಂತ ಮಾನಾವಮಾನಗಳ ಪರಿಕಲ್ಪನೆಯೇ ಇನ್ನೂ ಹುಟ್ಟಿಲ್ಲವೇನೋ ಎಂಬ ಅನುಮಾನದಿಂದ ಈ ಬರಹಕ್ಕೆ ತೊಡಗಿದ್ದೇನೆ. ಅದೇನಾದರೂ ನಿಜವಾಗಿದ್ದರೆ, ನಮ್ಮ ಸಮಾಜಕ್ಕೆ ಅದಕ್ಕಿಂತ ದೊಡ್ಡ ಅವಮಾನ ಇನ್ನೊಂದಿಲ್ಲ ಎಂದು ಸಂಪೂರ್ಣ ಗೊಂದಲಮಯವಾಗಿ ಹೇಳುವ ಅಕ್ಷರ ಇಡೀ ಲೇಖನದಲ್ಲಿ ಮಡೆಸ್ನಾನವನ್ನು ಯಾವುದೋ ಸಂಸ್ಕೃತಿ ವಿಮರ್ಶೆಯ ಧಾಟಿಯಲ್ಲಿ ಸಮರ್ಥನೆ ಮಾಡಿಕೊಂಡಿರುವುದು ಮಾತ್ರ ಎದ್ದು ಕಾಣುತ್ತದೆ.
ಅಕ್ಷರ ಅವರಿಗೆ ವಾಪಾಸು ಒಂದು ದೃಷ್ಟಾಂತ ಹೇಳೋಣ. ಒಂದು ಹಳ್ಳಿಯಲ್ಲಿ ಒಬ್ಬ ದಲಿತನಿದ್ದಾನೆ. ಅವನಿಗೆ ದೇವಸ್ಥಾನದಲ್ಲಿ ಪ್ರವೇಶವಿಲ್ಲ. ಕಾಸು ಕೊಟ್ಟರೂ ಹೊಟೆಲಿನಲ್ಲಿ ಕಾಫಿ, ತಿಂಡಿ ಕೊಡುವುದಿಲ್ಲ. ಅದು ಅವನಿಗೆ ಅಭ್ಯಾಸವಾಗಿದೆ. ಅವನಿಗೆ ಅದು ಅವಮಾನ ಅಂತಲೂ ಅನಿಸುತ್ತಿಲ್ಲ. ಹಾಗೆಂದ ಮಾತ್ರಕ್ಕೆ ಅವನಿಗೆ ಅವಮಾನ ಆಗುತ್ತಿದೆ ಎಂಬುದನ್ನು ನಿರಾಕರಿಸಲಾಗುತ್ತದೆಯೇ? ಅವಮಾನವನ್ನು ನಿರ್ಧರಿಸಬೇಕಾದವನು ಅವಮಾನಕ್ಕೆ ಒಳಗಾದ ವ್ಯಕ್ತಿ ಮಾತ್ರ ಎನ್ನುವುದಾದರೆ ಅಸ್ಪೃಶ್ಯತೆಯೂ ಅವಮಾನ ಎಂದು ಹೇಳಲಾಗದು. ಯಾಕೆಂದರೆ ಅಸ್ಪೃಶ್ಯತೆಯನ್ನು ಅನುಭವಿಸುತ್ತಿರುವ ಸಮುದಾಯಗಳಲ್ಲಿ ಬಹುತೇಕರು ತಾವು ಅನುಭವಿಸುತ್ತಿರುವುದು ಅವಮಾನ ಎಂಬುದನ್ನೇ ಗೊತ್ತುಮಾಡಿಕೊಳ್ಳದ ಮುಗ್ಧರು.
ಅಕ್ಷರ ಅವರಿಗೆ ಇಂಥ ಬೇಸಿಕ್ ವಿಷಯಗಳು ಅರ್ಥವಾಗುವುದಿಲ್ಲವೇ? ಜನ ಇದನ್ನೆಲ್ಲ ಅರ್ಥಮಾಡಿಕೊಳ್ಳದಷ್ಟು ದಡ್ಡರು ಎಂದು ಅವರು ಭಾವಿಸಿದ್ದಾರೆಯೇ? ಅವಮಾನವೆಂಬುದು ಒಂದು ಕಾಲದೇಶಾಧೀನ ಸಾಂಸ್ಕೃತಿಕ ಪರಿಕಲ್ಪನೆಯೇ ಹೊರತು ಸಾರ್ವತ್ರಿಕವಾಗಿ ಸಾರ್ವಕಾಲಿಕವಾಗಿ ನಿರ್ವಚಿತವಾದ ಒಂದು ಸ್ಥಿತಿಯಲ್ಲ ಎಂಬಂಥ ಜಾಣ ವಾಕ್ಯಗಳ ಮೂಲಕ ಅವರು ಓದುಗರನ್ನು ಅರೆಕ್ಷಣ ಮೈಮರೆಸಿ ತನ್ನ ತೆಕ್ಕೆಗೆ ತಂದುಕೊಳ್ಳಬಹುದು ಎಂಬ ಭ್ರಮೆಯಲ್ಲಿದ್ದಾರೆಯೇ? ಮಡೆಸ್ನಾನವನ್ನು ಬೆಂಬಲಿಸುವುದರ ಮೂಲಕ ಅವರು ಮನುಷ್ಯನನ್ನು ಅಪಮಾನಕ್ಕೆ ಒಳಪಡಿಸುವ ಎಲ್ಲ ರೀತಿಯ ಮೌಢ್ಯ, ಕಂದಾಚಾರಗಳನ್ನು ಸಮರ್ಥಿಸುತ್ತಿದ್ದಾರೆಯೇ? ಇದು ಅಕ್ಷರ ಅವರು ಕಂಡುಕೊಂಡಿರುವ ಬೆತ್ತಲೆ ಜಗತ್ತೇ?
ಐಪಿಎಲ್ ಹರಾಜು ಗುಲಾಮಗಿರಿಯ ಸಂಕೇತ ನಿಜ. ಅಕ್ಷರ ಅವರು ಹೇಳುವಂತೆಯೇ ಪ್ರಾಚೀನ ರೋಮಿನ ಅನಾಗರಿಕ ಮನಸ್ಥಿಯು ಇನ್ನೂ ಮುಂದುವರೆದಿರುವುದರ ಸಂಕೇತ ಎಂದೂ ಭಾವಿಸೋಣ. ಆದರೆ ಐಪಿಎಲ್ ಹರಾಜಿಗೂ ಮಡೆ ಸ್ನಾನಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಐಪಿಎಲ್ ಹರಾಜನ್ನೇ ವಿರೋಧಿಸಲು ಅಕ್ಷರ ಪ್ರತ್ಯೇಕ ಲೇಖನವೊಂದನ್ನು ಬರೆಯಬಹುದಿತ್ತು. ಯಾಕೆ ಮಡೆಸ್ನಾನದ ವಿಷಯವನ್ನು ಇಲ್ಲಿ ತಳುಕು ಹಾಕಲು ಯತ್ನಿಸುತ್ತಿದ್ದಾರೆ. ಮಡೆಸ್ನಾನದ ಅನಾಗರಿಕ, ಅಮಾನವೀಯ ಸಂಪ್ರದಾಯವನ್ನು ಪರೋಕ್ಷವಾಗಿ ಸಮರ್ಥಿಸಿಕೊಳ್ಳುವ ಅಗತ್ಯವಾದರೂ ಏನಿತ್ತು? ಅದರಲ್ಲೂ ಪ್ರಜಾವಾಣಿಯಂಥ ಪ್ರಗತಿಪರ ಪತ್ರಿಕೆಯನ್ನು ಇದಕ್ಕೆ ಬಳಸಿಕೊಳ್ಳುವ ಹಕೀಕತ್ತಾದರೂ ಏನು? ಪ್ರಜಾವಾಣಿಯಾದರೂ ಇಂಥ ಅಮಾನವೀಯ (ಈ ಪದವನ್ನು ಅತ್ಯಂತ ನಿಷ್ಠುರವಾಗಿ, ಪ್ರಜ್ಞಾಪೂರ್ವಕವಾಗಿಯೇ ಬಳಸಿದ್ದೇವೆ.) ಲೇಖನವನ್ನು ಪುರವಣಿಯಲ್ಲಿ ಪ್ರಕಟಿಸುವ ಅಗತ್ಯವಾದರೂ ಏನಿತ್ತು?
ಮಡೆಸ್ನಾನದ ಅಸಹ್ಯಗಳ ವಿರುದ್ಧ ಕನ್ನಡ ಪತ್ರಿಕೆಗಳು ಸರಣಿಯಂತೆ ಬರೆದವು. ಈ ವಿಷಯದಲ್ಲಿ ಯಾರೂ ಹಿಂದೆ ಬೀಳಲಿಲ್ಲ. ಇದು ಕೆ.ವಿ.ಅಕ್ಷರ ಅಂಥವರಿಗೆ ಅಸಹನೆ ಹುಟ್ಟಿಸಿರಬಹುದಾ? ಯಾಕಾದರೂ ಇಂಥ ಅಸಹನೆ ಅವರಿಗೆ ಹುಟ್ಟಿತು?
ನೀನಾಸಂ ಮೂಲಕ ಹೆಗ್ಗೋಡನ್ನು ಜಗತ್ತಿನ ರಂಗಭೂಮಿಯ ನಕಾಶೆಯಲ್ಲಿ ಎದ್ದು ಕಾಣುವಂತೆ ರೂಪಿಸಿದವರು ಕೆ.ವಿ.ಸುಬ್ಬಣ್ಣ. ಅವರ ಕಾಲಾನಂತರ ಅಕ್ಷರ ನೀನಾಸಂನ ರೂವಾರಿಯಾಗಿದ್ದಾರೆ. ಈಗಲೂ ಸಂಸ್ಕೃತಿ ಶಿಬಿರಗಳು ಪ್ರತಿವರ್ಷ ನಡೆಯುತ್ತವೆ.
ಮುಂದಿನ ಸಂಸ್ಕೃತಿ ಶಿಬಿರದ ಥೀಮ್ ‘ಹರಕೆ-ಹರಾಜು ಎಂದಿರಬಹುದೇ?
发表评论