ಹೊಸದಿಗಂತದ ಸಂಪಾದಕ ದು.ಗು.ಲಕ್ಷ್ಮಣ್ ಗೇಲಿಯ ವಸ್ತುವಾಗಿ ಹೋಗಿದ್ದಾರೆ. ಕಾರಣ ಅವರು ತಮ್ಮದೇ ಸಂಪಾದಕತ್ವದ ಹೊಸದಿಗಂತದಲ್ಲಿ ತಮ್ಮದೇ ಅಂಕಣದಲ್ಲಿ ತಮ್ಮದೇ ಸಹೋದ್ಯೋಗಿಗಳನ್ನು ಕ್ಷುಲ್ಲಕ ಕಾರಣಕ್ಕೆ ಟೀಕಿಸಿ ಬರೆದಿರುವುದು.
ಇದೆಲ್ಲ ನಡೆದದ್ದು ಕಳೆದ ನವೆಂಬರ್ ತಿಂಗಳಿನಲ್ಲಿ. ಯಡಿಯೂರಪ್ಪ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗಳನ್ನು ಕಡಲೆಪುರಿ ಹಂಚಿದಂತೆ ಹಂಚಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಮೀಡಿಯಾಗಳ ಕೃಪಾಕಟಾಕ್ಷ ಪಡೆಯಲೆಂದು ಯಡಿಯೂರಪ್ಪ ಒಂದೊಂದು ಮಾಧ್ಯಮಸಂಸ್ಥೆಗೂ ಒಂದೊಂದು ಪ್ರಶಸ್ತಿ ಹಂಚಿದರು.. ಪ್ರಶಸ್ತಿ ಪುರಸ್ಕೃತರು ಅರ್ಹರಿದ್ದಾರೆಯೇ, ಅವರು ಎಷ್ಟು ವರ್ಷಗಳ ಕಾಲ ವೃತ್ತಿಯಲ್ಲಿದ್ದಾರೆ? ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಅವರ ವಿಶೇಷ ಸಾಧನೆಗಳೇನು ಎಂಬುದನ್ನು ಗಮನಿಸದೆ, ಮೀಡಿಯಾಗಳ ಆಯಕಟ್ಟಿನ ಜಾಗಗಳಲ್ಲಿರುವವರಿಗೆಲ್ಲ ಪ್ರಶಸ್ತಿ ಕೊಟ್ಟು ಕೈ ತೊಳೆದುಕೊಂಡರು.
ಈ ಸಂದರ್ಭದಲ್ಲಿ ಎಳೇ ಮಕ್ಕಳಂತೆ ಸಿಟ್ಟು ಮಾಡಿಕೊಂಡು ಮುಖ ಊದಿಸಿಕೊಂಡಿದ್ದು ಯಡಿಯೂರಪ್ಪ ಅವರ ಕೃಪಾಪೋಷಿತ ಹೊಸದಿಗಂತ ಪತ್ರಿಕೆಯ ಸಂಪಾದಕ ದು.ಗು.ಲಕ್ಷ್ಮಣ್. ತಮಗೆ ಪ್ರಶಸ್ತಿ ಕೊಡಲಿಲ್ಲ ಎಂಬ ಸಿಟ್ಟಿಗೆ ಅವರು ತಮ್ಮ ನೇರನೋಟ ಎಂಬ ಸೋಮವಾರದ ಅಂಕಣದಲ್ಲಿ ಅನರ್ಹರಿಗೆ ಪ್ರಶಸ್ತಿ ಕೊಡಲಾಗಿದೆ ಎಂದು ಬರೆದು ಗೋಳು ತೋಡಿಕೊಂಡರು. ರಚ್ಚೆ ಹಿಡಿದ ಮಗುವನ್ನು ಸಮಾಧಾನಿಸಬೇಕಲ್ಲವೇ? ಯಡಿಯೂರಪ್ಪ ಎರಡನೇ ಪಟ್ಟಿಯಲ್ಲಿ ದು.ಗು.ಲಕ್ಷ್ಮಣ್ ಹೆಸರು ಸೇರಿಸಿಯೇ ಬಿಟ್ಟರು. ಹೀಗೆ ಬಿ ಸ್ಕೀಂನಲ್ಲಿ ಪ್ರಶಸ್ತಿ ಪಡೆದ ಲಕ್ಷ್ಮಣ್ ಆಕಾಶದಲ್ಲೇ ತೇಲಿದರು. ಅವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ಮಾಮೂಲಿನಂತೆ ಅವರ ಕಚೇರಿಯ ಎಲ್ಲ ಉದ್ಯೋಗಿಗಳು ಶೇಕ್ ಹ್ಯಾಂಡ್ ಮಾಡಿ, ಅಭಿನಂದಿಸಿದರು. ಯಾಕೋ ಏನೋ ಮುಖ್ಯ ಹುದ್ದೆಯಲ್ಲಿರುವ ಓರ್ವ ಪತ್ರಕರ್ತರು ಸೇರಿದಂತೆ ಒಂದಿಬ್ಬರು ಲಕ್ಷ್ಮಣ್‌ರನ್ನು ಅಭಿನಂದಿಸಲಿಲ್ಲ. ರಚ್ಚೆ ಹಿಡಿದು ಪ್ರಶಸ್ತಿ ಪಡೆದದ್ದು ಅವರಿಗೆ ಸರಿಯೆನ್ನಿಸಿರಲಿಲ್ಲವೋ ಅಥವಾ ಬೇರೆ ಏನು ಕಾರಣವಿತ್ತೋ ಏನೋ ಅವರು ಶೇಕ್ ಹ್ಯಾಂಡ್ ಮಾಡಲೇ ಇಲ್ಲ.
ಸರಿ, ಇದು ಸಂಪಾದಕರನ್ನು ಸಿಕ್ಕಾಪಟ್ಟೆ ಕಾಡಿಸಿತು. ತಮ್ಮನ್ನು ಅಭಿನಂದಿಸದ ಸಹೋದ್ಯೋಗಿಗಳನ್ನು ಕರೆದು ಯಾಕ್ರೀ ನಿಮಗೆ ಸಂತೋಷ ಆಗಲಿಲ್ವಾ? ಎಂದು ನೇರವಾಗಿ ಕೇಳಬಹುದಿತ್ತು. ಆದರೆ ಸಂಪಾದಕರಿಗೆ ಬಿಗುಮಾನ. ಆದರೂ ತಮ್ಮ ಒಳಗೆ ಆಗುತ್ತಿದ್ದ ತಳಮಳವನ್ನು ಹೇಗಾದರೂ ಮಾಡಿ ವ್ಯಕ್ತಪಡಿಸಲೇಬೇಕಿತ್ತು. ಅದಕ್ಕಾಗಿ ಸಂಪಾದಕರು ಎಗ್ಗಿಲ್ಲದೆ ತಮ್ಮ ನೇರ ನೋಟ ಅಂಕಣವನ್ನೇ ಬಳಸಿಕೊಂಡರು. ನವೆಂಬರ್ ೮ರ ಹೊಸದಿಗಂತದ ತಮ್ಮ ಅಂಕಣದಲ್ಲಿ ಈ ಪ್ರಶಸ್ತಿ ನನಗಲ್ಲ, ನನ್ನ ಪತ್ರಿಕೆಗೆ, ನಾನು ನಂಬಿದ ವಿಚಾರಗಳಿಗೆ ಎಂಬ ಸುದೀರ್ಘ ಲೇಖನ ಹೊಸೆದೇ ಬಿಟ್ಟರು.
ರಾಜ್ಯೋತ್ಸವ ಪ್ರಶಸ್ತಿ ಪಡೆದ ತಮ್ಮನ್ನು ಅಭಿನಂದಿಸದ ಆ ಸಹೋದ್ಯೋಗಿಗಳ ಕುರಿತು ಅಸಮಾಧಾನ ಹೇಳಿಕೊಂಡರು. ಈ ಬಡ್ಡಿಮಗನಿಗೆ ಯಾಕಾದರೂ ಪ್ರಶಸ್ತಿ ಬಂತೋ ಎಂಬ ಭಾವ ತಮ್ಮ ಸಹೋದ್ಯೋಗಿಗಳದ್ದಾಗಿತ್ತು ಎಂದು ಸಂಕಟ ತೋಡಿಕೊಂಡರು. ಇದೇ ಸಾಲನ್ನು ಅವರು ಮುಜುಗರವಿಲ್ಲದೆ ಬರೆದುಕೊಂಡು ತಮ್ಮ ಹಾಗು ತಮ್ಮ ಕೈಕೆಳಗಿನವರ ಮಾನ ಹರಾಜಿಗಿಟ್ಟರು.
ಅದನ್ನು ಓದಿ ಇಡೀ ಆಫೀಸು ಕಿಲಕಿಲ ನಕ್ಕಿದ್ದೇ ನಕ್ಕಿದ್ದು. ದಿನಪತ್ರಿಕೆಯೊಂದರ ಸಂಪಾದಕ ತನ್ನ ಕೈಕೆಳಗಿನವರ ಕುರಿತೇ ಹೀಗೆ ಬರೆದದ್ದು ಸಾಕಷ್ಟು ಚರ್ಚೆಯ ವಿಷಯವೂ ಆಯಿತು.
ಸಂಪಾದಕರಿಗೆ ಮಾತ್ರ ಸೇಡು ತೀರಿಸಿಕೊಂಡ ಹೆಮ್ಮೆ. ತನಗೆ ವಿಶ್ ಮಾಡದವರನ್ನು ಹಣಿದ ತೃಪ್ತಿ.
发表评论