ಪದ್ಮರಾಜ ದಂಡಾವತಿ ಪ್ರಜಾವಾಣಿಯ ಸಹಸಂಪಾದಕರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ ಪುರಸ್ಕೃತರು. ನಾಲ್ಕನೇ ಆಯಾಮ ಪ್ರತಿ ಭಾನುವಾರ ಪ್ರಕಟಗೊಳ್ಳುವ ಇವರ ಅಂಕಣ. ಇವತ್ತಿನ ಅಂಕಣದ ಶೀರ್ಷಿಕೆ: ಘನತೆವೆತ್ತ ರಾಜ್ಯಪಾಲರೇ ಇದು ಸಹಜ ನ್ಯಾಯವಲ್ಲ. ದಂಡಾವತಿಯವರಿಗೆ ನಾವು ಹೇಳುತ್ತಿರುವ ಮಾತು: ಘನತೆವೆತ್ತ ಸಂಪಾದಕರೇ ಇದು ನ್ಯಾಯನಿಷ್ಠುರ ಲೇಖನ ಅಲ್ಲ.
ಇಡೀ ಲೇಖನವನ್ನು ಓದಿದರೆ, ನೂರೆಂಟು ಪ್ರಶ್ನೆಗಳು ಉದ್ಭವಿಸುತ್ತಿವೆ. ಅಂಕಣಕಾರರ ಅಜ್ಞಾನ, ವ್ಯಕ್ತಿನಿಷ್ಠೆ, ಪಕ್ಷನಿಷ್ಠೆ, ಜಾಣಮರೆವು ಎಲ್ಲವೂ ಬಟಾಬಯಲಾಗಿವೆ.
ಪ್ರಜಾವಾಣಿಯಂತಹ ಪತ್ರಿಕೆಯ ಅಂಕಣಕ್ಕೆ ಅದರದ್ದೇ ಆದ ಮಹತ್ವ ಇರುತ್ತದೆ. ಪ್ರಜಾವಾಣಿಗೊಂದು ಗಾಂಭೀರ್ಯವಿದೆ, ಸೈದ್ಧಾಂತಿಕ ಹಿನ್ನೆಲೆಯಿದೆ. ಜನಪರ ಕಾಳಜಿಯನ್ನು ಅದು ಸದಾ ಕಾಪಾಡುತ್ತಾ ಬಂದಿದೆ. ಈ ಎಲ್ಲ ಪರಂಪರೆಯನ್ನು ಮಣ್ಣುಪಾಲು ಮಾಡುವ ಅಂಕಣ ಬರಹ ಇದು.
ನಿಜ, ರಾಜ್ಯಪಾಲರ ನಡವಳಿಕೆ ಕೆಲವರಿಗೆ ಅತಿರೇಕವೆನ್ನಿಸಿರಬಹುದು. ಆದರೆ ಅದನ್ನು ಟೀಕಿಸುವುದಕ್ಕೂ ಒಂದು ಕ್ರಮ ಇರಬೇಕಿತ್ತು. ಸಂವಿಧಾನದ ಆಶಯ, ಅಧಿನಿಯಮ, ವಿವಿಧ ಕಾಯ್ದೆಗಳ ಆಧಾರದಲ್ಲಿ ವಾದ ಮಂಡಿಸಿದ್ದರೆ, ಒಂದಿಷ್ಟು ಚರ್ಚೆಗೆ ಅವಕಾಶ ಇತ್ತು. ಪ್ರಜಾವಾಣಿಯ ಅಂಕಣಕಾರನಿಂದ ಓದುಗ ಅದನ್ನೇ ನಿರೀಕ್ಷಿಸುತ್ತಾನೆ.
ಆದರೆ, ಮುಖ್ಯಮಂತ್ರಿಯ ಪತ್ರಿಕಾ ಹೇಳಿಕೆಯೇ ಅಂಕಣದ ರೂಪದಲ್ಲಿ ಪ್ರಕಟಗೊಂಡಂತೆ ಕಂಡರೆ?
ಪದ್ಮರಾಜ ದಂಡಾವತಿಯವರಿಗೆ ಎಷ್ಟು ಜಾಣ ಮರೆವು ಎಂದರೆ ತಮ್ಮ ಅಂಕಣದಲ್ಲಿ ಎಲ್ಲಿಯೂ, ಮುಖ್ಯಮಂತ್ರಿ ಅವರ ಮಕ್ಕಳು ಮಾಡಿರುವ ಭಾನಗಡಿಗಳನ್ನು ಉಲ್ಲೇಖಿಸುವುದೇ ಇಲ್ಲ. ಅನೈತಿಕ ಡಿನೋಟಿಫಿಕೇಷನ್‌ಗಳ ಮೂಲಕ ನೂರಾರು ಕೋಟಿ ಲೂಟಿಯಾಗಿರುವುದು ಅವರನ್ನು ಕಾಡಿಸುವುದೇ ಇಲ್ಲ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೇ ಮುಖ್ಯಮಂತ್ರಿ ಮಾಡಿರುವುದು ಅನೈತಿಕ ಎಂದು ಒಪ್ಪಿಕೊಳ್ಳುತ್ತಾರೆ. ಪತ್ರಕರ್ತ ದಂಡಾವತಿ ಮಾತ್ರ ಮುಖ್ಯಮಂತ್ರಿಯ ನಿರ್ಧಾರಗಳನ್ನು ಟೀಕಿಸುವ ಗೋಜಿಗೇ ಹೋಗುವುದಿಲ್ಲ.
ಮುಖ್ಯಮಂತ್ರಿಯ ಕೆಲವು ನಿರ್ಧಾರಗಳಿಂದ ರಾಜ್ಯದ ಬೊಕ್ಕಸಕ್ಕೆ ೪೫೦ ಕೋಟಿಗೂ ಹೆಚ್ಚು ನಷ್ಟವಾಗಿದೆ. ಅವರ ಕುಟುಂಬಕ್ಕೆ ೨೦೦ ಕೋಟಿ ರೂ ಅಕ್ರಮವಾಗಿ ಸಂದಾಯವಾಗಿದೆ. ಇದನ್ನೆಲ್ಲಾ ಕೇಳುತ್ತಿದ್ದರೆ, ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿರುವವರ ಬಗ್ಗೆ ಎಂತಹವರಿಗೂ ಸಿಟ್ಟು ಬರುವುದು ಸಹಜ. ಆದರೆ ದಂಡಾವತಿಗೆ ಅದಾವುದೂ ಆಗುವುದಿಲ್ಲ!?
ರಾಜ್ಯಪಾಲರು ಮುಖ್ಯಮಂತ್ರಿಗೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಅವಕಾಶ ಕೊಟ್ಟಿಲ್ಲ ಎನ್ನುತ್ತಾರೆ ದಂಡಾವತಿ.
ಒಬ್ಬ ವ್ಯಕ್ತಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾನೆ ಎಂದರೆ, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಆರೋಪ ಎದುರಿಸುತ್ತಿರುವವರು ಮುಖ್ಯಮಂತ್ರಿ ಅಥವಾ ಮಂತ್ರಿಯಾಗಿದ್ದರೆ, ಅವರ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ರಾಜ್ಯಪಾಲರ ಅನುಮತಿ ಬೇಕು ಎನ್ನುತ್ತದೆ ಕಾನೂನು. ಅವರು ಇರುವ ಸ್ಥಾನದ ಕಾರಣ ಈ ವಿಶೇಷ ಅನುಮತಿ ಅನಿವಾರ್ಯ. ಅದರ ಹೊರತಾಗಿ ಅವರೂ ಸಾಮಾನ್ಯರೆ. ರಾಜ್ಯಪಾಲರು ತಮ್ಮ ಎದುರಿಗೆ ಬಂದ ಅರ್ಜಿಯನ್ನು ನೋಡಿ, ಅದರಲ್ಲಿ ದಾವೆ ಹೂಡಲು ಸಾಕಷ್ಟು ಮಾಹಿತಿ ಇದೆ ಎಂದು ಅನಿಸಿದರೆ ಅವರು ಯಾವುದೇ ಕಾಲಮಿತಿ ಇಲ್ಲದೆ ಅನುಮತಿ ನೀಡಲು ಅವಕಾಶ ಇದೆ. ಆದರೆ ಈ ಸಂದರ್ಭದಲ್ಲಿ ರಾಜ್ಯಪಾಲ ಭಾರದ್ವಾಜ ಪೂರಕ ಮಾಹಿತಿ ಕೇಳಿ ರಾಜ್ಯ ಸರಕಾರಕ್ಕೆ ಪತ್ರ ಬರೆದರು. ತಮಗೆ ತಲುಪಿಸಿದ ದಾಖಲೆಗಳನ್ನು ಪರಿಶೀಲಿಸಿ ನಂತರವಷ್ಟೆ ಅನುಮತಿ ನೀಡಿದ್ದಾರೆ. ದಂಡಾವತಿ ಹೇಳುವಂತೆ ಮುಖ್ಯಮಂತ್ರಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡಿಲ್ಲ ಎನ್ನುವುದು ಒಪ್ಪುವ ಮಾತಲ್ಲ. ಏಕೆಂದರೆ, ವಾದಿ, ಪ್ರತಿವಾದಿ ಎಲ್ಲರನ್ನೂ ಕೇಳಿ ತೀರ್ಮಾನ ಕೊಡಲು ರಾಜ್ಯಪಾಲರಿಗೆ ಅವಕಾಶ ಇಲ್ಲ. ಅದೇನಿದ್ದರೂ ನ್ಯಾಯಾಲಯದ ಕೆಲಸ. ಹಾಗಾಗಿ ಈಗ ಆರೋಪ ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಅಲ್ಲಿ ಮುಖ್ಯಮಂತ್ರಿಗೆ ಸಮರ್ಥಿಸಿಕೊಳ್ಳಲು ಅವಕಾಶ ಇದೆ. ದಂಡಾವತಿಯಂತಹ ಹಿರಿಯ ಪತ್ರಕರ್ತರಿಗೆ ಇದು ತಿಳಿಯುವುದಿಲ್ಲ ಎಂದು ನಂಬಬಹುದೆ?
ಅಷ್ಟಕ್ಕೂ ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ದಾವೆ ಹೂಡಲು ಏಕೆ ಅನುಮತಿ ಕೊಟ್ಟರೆಂಬುದನ್ನು ಕನ್ನಡಪ್ರಭ ವಿಸ್ತ್ರತವಾಗಿ ಬರೆದಿದೆ, ಒಮ್ಮೆ ಓದಿ. ದಾವೆ ಹೂಡಲು ಅನುಮತಿ ಕೊಟ್ಟಿದ್ದು ಹೇಗೆ ಸರಿ ಎಂಬುದನ್ನು ವಿಜಯ ಕರ್ನಾಟಕದ ಇಂದಿನ ಮುಖಪುಟದಲ್ಲಿ ಪ್ರಕಟಗೊಂಡಿರುವ ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ ಅವರ ಸಂದರ್ಶನ ಹೇಳುತ್ತದೆ, ಅದನ್ನೂ ಒಮ್ಮೆ ಓದಿ.
ಮುಖ್ಯಮಂತ್ರಿಯ ವಿರುದ್ಧದ ಆರೋಪಗಳನ್ನು ಈಗಾಗಲೇ ಲೋಕಾಯುಕ್ತ ಹಾಗೂ ನ್ಯಾಯಮೂರ್ತಿ ಬಿ ಪದ್ಮರಾಜ ಆಯೋಗ ತನಿಖೆ ನಡೆಸುತ್ತಿದೆ ಎಂದು ದಂಡಾವತಿ ಬರೆಯುತ್ತಾರೆ.
ಕೆಲ ಆರೋಪಗಳು ಲೋಕಾಯುಕ್ತರ ಮುಂದೆ ದಾಖಲಾಗಿದ್ದು ನಿಜ. ಅವರು ತನಿಖೆ ಕೈಗೆತ್ತಿಕೊಳ್ಳುವ ಮೊದಲೇ, ಸರಕಾರ ಆಯೋಗವನ್ನು ನೇಮಿಸಿತು. ೧೯೯೫ ರಿಂದ ಕೇಳಿಬಂದಿರುವ ಆರೋಪಗಳನ್ನು ತನಿಖೆ ಮಾಡುವುದು ಆಯೋಗದ ಜವಾಬ್ದಾರಿ. ಲೋಕಾಯುಕ್ತರ ಮುಂದಿದ್ದ ಕೇಸುಗಳೂ ಆಯೋಗಕ್ಕೆ ವರ್ಗ ಆದವು. ಈ ಸಂದರ್ಭದಲ್ಲಿ ಯಡಿಯೂರಪ್ಪ ಜಾಣತನದಿಂದ ಜನತಾದಳದ ವೈಎಸ್‌ವಿ ದತ್ತ ತಮ್ಮ ವಿರುದ್ಧ ದೂರು ನೀಡಿದ ಹಿಂದಿನ ದಿನದವರೆಗಿನ ತನಿಖೆಗಳನ್ನು ಮಾತ್ರ ಲೋಕಾಯುಕ್ತಕ್ಕೆ ಸೀಮಿತಗೊಳಿಸಿ ಆದೇಶ ಹೊರಡಿಸಿದರು. ಸುಮಾರು ಐದು ವರ್ಷಗಳ ಕಾಲ ಕ್ರೈಮ್ ವರದಿಗಾರಿಕೆಯನ್ನೂ ಮಾಡಿದ್ದ ದಂಡಾವತಿಯವರಿಗೆ ಇದು ಗೊತ್ತಿಲ್ಲವೆ? ಹೀಗಿದ್ದೂ ಮುಖ್ಯಮಂತ್ರಿ ವಿರುದ್ಧದ ತನಿಖೆ ಲೋಕಾಯುಕ್ತರ ಮುಂದಿದೆ ಎಂದು ಏಕೆ ಬರೆಯುತ್ತಾರೆ? ಯಾರನ್ನು ಮಂಗ ಮಾಡುವ ಉದ್ದೇಶವಿದು?
ಇನ್ನು ನ್ಯಾಯಮೂರ್ತಿ ಪದ್ಮರಾಜ ಆಯೋಗದ ಮುಂದಿರುವುದು ಯಡಿಯೂರಪ್ಪನವರ ಪ್ರಕರಣಗಳು ಮಾತ್ರವಲ್ಲ. ಎಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ, ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿಯವರ ಕಾಲದ ಪ್ರಕರಣಗಳೂ ಆ ಆಯೋಗದ ಮುಂದಿದೆ.
ಅದಲ್ಲದೆ ಲೋಕಾಯುಕ್ತರ ಮುಂದಿದ್ದ ಕೇಸುಗಳು ಆಯೋಗಕ್ಕೆ ವರ್ಗವಾದ ವಿಚಾರ ಕೋರ್ಟ್ ಮುಂದಿದೆ. ಆಯೋಗ ಯಾವುದೇ ಸಾಕ್ಷ್ಯ ದಾಖಲಿಸದಂತೆ ಹಾಗು ಮಧ್ಯಂತರ ಆದೇಶ ಹೊರಡಿಸದಂತೆ ಕೋರ್ಟ್ ಆದೇಶಿಸಿದೆ. ಹಾಗಾಗಿ ಸದ್ಯ ಆಯೋಗ ತನಿಖೆ ನಡೆಸುತ್ತಿಲ್ಲ ಎನ್ನವುದು ನಿರ್ವಿವಾದ. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಎರಡು ದಿನಗಳಿಂದ ಸಾರಿ ಸಾರಿ ಹೇಳಿದ್ದಾರೆ: ಅವರು ಮುಖ್ಯಮಂತ್ರಿ ವಿರುದ್ಧ ಯಾವುದೇ ಕೇಸನ್ನೂ ತನಿಖೆ ಮಾಡುತ್ತಿಲ್ಲ. ಆದರೆ ಈ ದಂಡಾವತಿಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದು ಯಾರು? ಪತ್ರಿಕೆಗಳನ್ನು ಓದುವ ಅಭ್ಯಾಸ ಈ ಹಿರಿಯ ಪತ್ರಕರ್ತರಿಗಿಲ್ಲವೆ?
ನೆನಪಿರಲಿ. ಮುಖ್ಯಮಂತ್ರಿಯ ಕೆಲ ಕಾನೂನು ವಿರೋಧಿ ಕ್ರಮಗಳಿಂದ ಅನ್ಯಾಯ ಆಗಿರುವುದು ಬಡ ರೈತರಿಗೆ. ಸ್ವಾಧೀನಕ್ಕೆ ಗುರುತಿಸಿದ್ದ ಜಮೀನನ್ನು ಮೂಲ ಮಾಲೀಕರಾದ ಬಡ ರೈತರಿಂದ ಅಕ್ರಮವಾಗಿ ವಶಪಡಿಸಿಕೊಂಡು ಡಿನೋಟಿಫೈ ಮಾಡಿದ್ದು ಸರಿಯೇ? ಹೀಗೆ ಡಿನೋಟಿಫೈ ಮಾಡಲಾದ ಜಮೀನನ್ನು ತಮ್ಮ ಕರುಳ ಬಳ್ಳಿಗಳಿಗೆ ಕೊಟ್ಟಿದ್ದು ಸರಿಯೇ?
ತಪ್ಪುಗಳಾಗಿದ್ದರೆ ಶಿಕ್ಷೆ ಅನುಭವಿಸಲಿ ಬಿಡಿ. ನಿಮಗ್ಯಾಕೆ ದುಃಖ ದಂಡಾವತಿಯವರೆ? ಬಿಜೆಪಿಯಲ್ಲಿ ಇರುವವರಿಗೆ ಮರ್ಯಾದೆ ಇದ್ದರೆ ಈ ಭ್ರಷ್ಟ ಮುಖ್ಯಮಂತ್ರಿಯನ್ನು ಕೆಳಗಿಳಿಸಿ, ಪಕ್ಷ, ಅಧಿಕಾರ ಉಳಿಸಿಕೊಳ್ಳುತ್ತಾರೆ. ‘ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಹೇಗಾದರೂ ಮಾಡಿ ಉರುಳಿಸುವ ಯತ್ನ ನಡೆಯುತ್ತಿದೆ ಎಂದೇಕೆ ರೋಧಿಸುತ್ತೀರಿ?
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಯಡಿಯೂರಪ್ಪನವರ ಅವ್ಯವಹಾರಗಳ ಬಗ್ಗೆ ಚಕಾರ ಎತ್ತದೆ ದಂಡಾವತಿ ಮತ್ತು ಪ್ರಜಾವಾಣಿ ಕಳ್ಳನನ್ನು ಬೆಂಬಲಿಸಿದ ಆರೋಪ ಎದುರಿಸಬೇಕೆ? ಪ್ರಜಾವಾಣಿ ಸಂಸ್ಥೆಯ ಮಾಲೀಕರಿಗೆ ಇದೆಲ್ಲ ಏನೂ ಅನ್ನಿಸುವುದಿಲ್ಲವೆ?
ಇವತ್ತಿಗೂ ಕಾಡುವ ಗಂಭೀರವಾದ ಪ್ರಶ್ನೆ ಏನೆಂದರೆ ಡಿನೋಟಿಫಿಕೇಷನ್ ದಂಧೆಯ ಕುರಿತು ಪ್ರಜಾವಾಣಿ ಏಕೆ ಮೃದುವಾಗಿದೆ?
ಕೊನೆ ಕುಟುಕು: ಪದ್ಮರಾಜ ದಂಡಾವತಿಯವರ ನಾಲ್ಕನೇ ಆಯಾಮ ಅಂಕಣ ಬರಹದ ಎರಡು ಪುಸ್ತಕಗಳು ಈ ವಾರ ಬಿಡುಗಡೆಯಾಗಲಿವೆ. ಸಾಹಿತಿ ಚಂದ್ರಶೇಖರ ಕಂಬಾರ ಕೃತಿಗಳನ್ನು ಬಿಡುಗಡೆ ಮಾಡುತ್ತಾರೆ. ಪ್ರಜಾವಾಣಿ ಸಂಪಾದಕ ಶಾಂತಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ಕಾರ್ಯಕ್ರಮದ ಅತಿಥಿಗಳು. ಕೃತಿಗಳ ಬಿಡುಗಡೆಗೆ ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪ ಅವರನ್ನು ಆಹ್ವಾನಿಸಿದ್ದರೆ ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು.
发表评论