ರಾಜ್ಯಾದ್ಯಂತ ಸಫಾಯಿ ಕರ್ಮಚಾರಿಗಳ ಕುರಿತು ನಡೆಸುತ್ತಿರುವ ಸಂಶೋಧನಾ ತಂಡ ಸದಸ್ಯರಾದ ಚಂದ್ರಶೇಖರ್.ಪಿ ಅತ್ತಿಬೆಲೆ ಅಧ್ಯಯನ ಸಂದರ್ಭದಲ್ಲಿ ತಾವು ಕಂಡ ಕೆಲವು ಅಂಶಗಳನ್ನು ಇಲ್ಲಿ ಮಂಡಿಸಿದ್ದಾರೆ.- ಸಂಪಾದಕೀಯ
ಮುಖ್ಯವಾಗಿ ಸಂಪಾದಕೀಯ ಬ್ಲಾಗ್‌ನ ಬಳಗವಾಗಲಿ, ನಾನಾಗಲಿ. ದಯಾನಂದ ಆಗಲಿ ಮಲಹೊತ್ತವರಲ್ಲ. ಕೇವಲ ಕಾಳಜಿಯಿಂದ ಒಂದು ಸೇರಿರುವರು ನಾವು. ಆದರೆ ಮಲ ಹೊರುವ ಸಮುದಾಯದವರು ಸಚಿವರಾದ ಸುರೇಶ್ ಕುಮಾರ್‌ರವರನ್ನು ಪ್ರಶ್ನೆ ಮಾಡುವ ವಿಧಾನವೇ ಬೇರೆಯಾಗಿರುತ್ತಿತ್ತು. ಆದರೂ ಕಳೆದ ೮ ತಿಂಗಳಿನಿಂದ ಸಫಾಯಿ ಕರ್ಮಚಾರಿಗಳ ಕುರಿತಾಗಿ ರಾಜ್ಯದಾದ್ಯಂತ ಅಧ್ಯಯನ ನಡೆಸುವ ಸಂದರ್ಭದಲ್ಲಿ ಇವರನ್ನೆಲ್ಲ ಹತ್ತಿರದಿಂದ ನೋಡಿರುವುದರಿಂದ ನನ್ನ ಮನಸ್ಸಿನಲ್ಲೂ ಹಲವು ಪ್ರಶ್ನೆಗಳಿವೆ.
೧. ೩೧-೮-೨೦೧೦ರಂದು ಸಫಾಯಿ ಕರ್ಮಚಾರಿಗಳ ಬಗ್ಗೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಸುದ್ದಿಯಾಗಿತ್ತು.
೨. ಸಂಯುಕ್ತ ಕರ್ನಾಟಕದಲ್ಲಿ ೧೭-೮-೨೦೧೦ರಂದು ಅಮೃತಧಾರೆ ಎಂಬ ಪುಟದಲ್ಲಿ ವೈ.ಶಿವಶಂಕರ್‌ವರು ಬರೆದಿರುವ ಸಫಾಯಿಗಳಿಗೆ ಸಿಗದ ಸ್ವಾತಂತ್ರ್ಯ ಎಂಬ ಲೇಖನದಲ್ಲಿ ಈ ಸಮುದಾಯಗಳ ಇತಿಹಾಸದಿಂದ ಇವತ್ತಿನ ವಾಸ್ತವದವರೆಗೆ ಸಂಪೂರ್ಣ ಚಿತ್ರ ಕಟ್ಟಿಕೊಡಲಾಗಿತ್ತು.
೩. ವಾರ್ತಾಭಾರತಿ ಪತ್ರಿಕೆಯಲ್ಲಿ ಸಂಪಾದಕೀಯ ಪುಟದಲ್ಲಿ ಇದೇ ಕೆ.ಜಿ.ಎಫ್ ಬಗ್ಗೆ ಲೇಖನಗಳನ್ನು ಮಾಡಲಾಗಿತ್ತು.
ಇದು ಒಂದೆರಡು ಉದಾಹರಣೆಗಳು ಮಾತ್ರ. ಆದರೆ ಸರ್ಕಾರದ ಆಡಳಿತ ಯಂತ್ರಕ್ಕೆ ಕಣ್ಣಿದ್ದೂ ಕುರುಡು. ಸುಳ್ಳು ಅಫಿಡೆವಿಟ್ಟುಗಳನ್ನು ಸಲ್ಲಿಸಿದ ತಪ್ಪಿಗೆ ಅಧಿಕಾರಿಗಳು ಇಂಥದ್ದಕ್ಕೆ ಕುರುಡಾಗಿಯೇ ಇರುತ್ತಾರೆ.
ಕಳೆದ ಎರಡು ತಿಂಗಳ ಹಿಂದೆ ಇದೇ ಕೆ.ಜಿ.ಎಫ್‌ನ ಕೆನಡಿಸ್ ತೆಲುಗು ಲೈನ್‌ನಲ್ಲಿರುವ ಮಲ ಹೊರುವವರು ಸೇರಿ ನಗರಸಭೆಗೆ ಮುತ್ತಿಗೆ ಹಾಕಿ ಪುನರ್ವಸತಿಗಾಗಿ ಒತ್ತಾಯಿಸಿದ್ದರು. ಈ ವಿಷಯವು ನಿಮ್ಮ ಅಧಿಕಾರಿಗಳು ಮತ್ತು ಮಾನ್ಯ ಸಚಿವರಿಗೆ ತಿಳಿದಿಲ್ಲವೆಂದರೆ ನಂಬಲು ಸಾಧ್ಯವೆ? (ಇದು ಸಹ ಪ್ರತಿಕೆಗಳಲ್ಲಿ ಸುದ್ದಿಯಾಗಿತ್ತು)
ಮಲ ಹೊರುವ ಕೆಲಸ ಮಾಡುತ್ತಿದ್ದ ನಾಗರಾಜು ಎಂಬುವರನ್ನು ಕಳೆದ ೩ ತಿಂಗಳ ಹಿಂದೆ ಮಾತನಾಡಿಸಿಕೊಂಡು ಅವರ ಸಂದರ್ಶವನ್ನು ತೆಗೆದುಕೊಂಡು ಬಂದಿದ್ದೆವು. ಇತ್ತೀಚಿಗೆ ಅವರು ತೀರಿಕೊಂಡಿದ್ದಾರೆ. ನಾಗರಾಜುರವರ ತಮ್ಮನಾದ ಬಾಬುರವರು ಸಹ ತೀರಿಕೊಂಡಿದ್ದಾರೆ. ಬಾಬುರವರ ಹೆಂಡತಿ, ಮಕ್ಕಳು ಅನಾಥರಾಗಿದ್ದಾರೆ. ದೊಡ್ಡ ಮಗ ೧೦ನೇ ತರಗತಿ ಓದಿ ನಾನು ಕೆಲಸಕ್ಕೆ ಹೊಗುತ್ತೇನೆ ಎಂದು ತಾಯಿ ಹೆಗಲು ಕೊಡಲು ನಿರ್ಧರಿಸಿದ್ದಾನೆ.
ತಾವೇ ತಮ್ಮ ಎರಡು ಗಂಡು ಮಕ್ಕಳನ್ನು ಮಣ್ಣಿಗೆ ಹಾಕಿದ ಮಾರ್ಥಮ್ಮರವರ ಪರಿಸ್ಥಿತಿ ಏನು? ಇವತ್ತು ಮಾರ್ಥಮ್ಮರವರು ಸಹ ಅನಾಥರಾಗಿದ್ದಾರೆ. ಆನಾರೋಗ್ಯದಿಂದ ಚಿಕಿತ್ಸೆಗಾಗಿ ಕೆ.ಜಿ.ಎಫ್‌ನಿಂದ ಹುಬ್ಬಳ್ಳಿಗೆ ಹೋಗಿ ತಮ್ಮ ಸಂಬಂಧಿಗಳ ಸಹಕಾರದಿಂದ ಕಾಯಿಲೆಯನ್ನು ವಾಸಿಮಾಡಿಕೊಳ್ಳುವ ಅಶಯ ಆವರದಾಗಿದೆ. ಇಂತಹ ಪರಿಸ್ಥಿತಿಗಳು ಒಂದೊಂದು ಜಿಲ್ಲೆ, ನಗರ, ಹಳ್ಳಿಯಲ್ಲೂ ಇವೆ. ಪ್ರತಿಯೊಬ್ಬ ವ್ಯಕ್ತಿಯೂ ನರಕಸದೃಶವಾದ ಜೀವನ ನಡೆಸುತ್ತಿದ್ದಾರೆ.
ಹಾವೇರಿ ಜಿಲ್ಲೆಯ ಸವಣೂರುನಲ್ಲಿ ಭಂಗಿ ಜನರು ತಮ್ಮ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸಿದಾಗ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ (ಇದಕ್ಕೂ ಹಿಂದೆಯೇ ಹಾವೇರಿ ಜಿಲ್ಲೆಯಲ್ಲಿ ಮಲಹೋರುವರು ಯಾರು ಇಲ್ಲ ಎಂದು ಸುಪ್ರಿಂಕೋರ್ಟ್‌ಗೆ ಅಫಿಡೇವಿಟ್ ನೀಡಲಾಗಿತ್ತು.) ನಂತರ ಪರಿಹಾರ ಮತ್ತು ಕಾಯಂ ಕೆಲಸ ನೀಡುವುದಾಗಿ ತಿಳಿಸಿ ಸ್ವಲ್ಪ ದಿನದ ನಂತರ ಗುತ್ತಿಗೆ ಕೆಲಸ ನೀಡಿ ಮೋಸಮಾಡಲಾಯಿತು. ಇದೇ ಸಮಯದಲ್ಲಿ ಮಳೆ ಬಂದರೆ ಸುರಿಯುವ ಇಕ್ಕಟ್ಟಾದ ಜಾಗದಲ್ಲಿ ಜೀವನ ಸಾಗಿಸುತ್ತಿರುವ ಜನರಿಗೆ ಪುನರ್ವಸತಿ ಹೆಸರಿನಲ್ಲಿ ಬಲವಂತವಾಗಿ ಕುರಿ. ಮೇಕೆಗಳನ್ನು ನೀಡಲಾಯಿತು. ಜನರೇ ವಾಸ ಮಾಡಲು ಜಾಗವಿಲ್ಲದ ಮನೆಗಳಲ್ಲಿ ಈ ಪ್ರಾಣಿಗಳನ್ನು ಎಲ್ಲಿ ಕಟ್ಟುವುದು, ಇದು ಪರಿಹಾರ/ಪುನರ್ವಸತಿ ಎನ್ನಲು ಸಾಧ್ಯವೆ? ಇದು ಸರ್ಕಾರವನ್ನು ಪ್ರತಿನಿಧಿಸುತ್ತಿರುವರ ರಾಜಕಾರಣಿಗಳ ಮತ್ತು ಅಧಿಕಾರಿಗಳ ಮನಸ್ಥಿತಿ.
ಹಾವೇರಿ ಜಿಲ್ಲಾಧಿಕಾರಿಗಳು ನೇರವಾಗಿ ಭಂಗಿ ಜನರ ಮನೆಯ ಬಾಗಿಲಿಗೆ ಹೋಗಿ ನಿಮಗೆ ಕೆಲಸ ಕೊಡುವುದಕ್ಕೆ ಆಗುವುದಿಲ್ಲ, ಇಲ್ಲ್ಲೇ ಟಾಟಾರವರು ಒಂದು ಕಂಪನಿ ಪ್ರಾರಂಭಿಸುತ್ತಿದ್ದಾರೆ ಅದರಲ್ಲಿ ಕೆಲಸ ಕೊಡಿಸುವುದಾಗಿ ಹೇಳಿರುತ್ತಾರೆ. ಇದಾದ ನಂತರ ಸವಣೂರಿನ ೯ ಜನರು ತಮ್ಮ ಗುತ್ತಿಗೆ ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ. ನಂತರ ಹಾವೇರಿ ಜಿಲ್ಲೆಯಲ್ಲಿನ ೭೫-೮೦ ಜನ ಸಫಾಯಿ ಕರ್ಮಚಾರಿಗಳು ಮತ್ತು ಕುಟುಂಬದವರು ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಒಂದು ದಿನದ ಧರಣಿ ಕುಳಿತುಕೊಂಡರು. ನಂತರ ಸವಣೂರಿನ ಒಂಭತ್ತು ಕುಟುಂಬಗಳಿಗೆ ಕೆಲಸ ನೀಡಲಾಯಿತು, ಆದರೆ ಹಾವೇರಿ ಜಿಲ್ಲೆಯಲ್ಲಿರುವ ಉಳಿದ ಮಲಹೊರುವ ಜನರ ಸುಳಿವಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಗುಲ್ಬರ್ಗದಲ್ಲಿ ಒಬ್ಬ ಮಲಹೊರುವ ವ್ಯಕ್ತಿ ಮಲ ಸುರಿದುಕೊಂಡು ಪ್ರತಿಭಟಿಸಿದ್ದಾಗ ಅತನ ವಿರುದ್ಧ ಪೊಲೀಸ್ ಇಲಾಖೆಯಲ್ಲಿ ದೂರನ್ನು ದಾಖಲು ಮಾಡಲಾಯಿತು, ಆತ ಊರನ್ನೇ ಬಿಡಬೇಕಾಯಿತು.
ಖೊಟ್ಟಿ ಪ್ರಮಾಣ ಪತ್ರಗಳನ್ನು ಕೊಟ್ಟ ಅಧಿಕಾರಿಗಳ ಮೇಲೆ ಯಾವ ಕ್ರಮವನ್ನೂ ಜರುಗಿಸಲಾಗಲಿಲ್ಲ ಸರ್ಕಾರಕ್ಕ.
ಇದೇ ಸಂದರ್ಭದಲ್ಲಿ ಈ ವಿಷಯದ ಗಂಭೀರತೆಯನ್ನು ಅರಿಯದ ಪತ್ರಿಕೆಗಳು ತಲೆ ಮೇಲೆ ಮಲ ಸುರಿದುಕೊಳ್ಳುವುದು ಒಂದು ಟ್ರೆಂಡ್ ಆಗೋಗಿದೆ ಎಂದು ವ್ಯಂಗ್ಯ ಮಾಡಲು ಪ್ರಾರಂಭಿಸಿದವು. ಇದು ಒಂದು ರೀತಿಯ ಹೀನ ಮನಸ್ಥಿತಿ. ತನ್ನ ತಲೆಯ ಮೇಲೇ ಮಲ ಸುರಿದುಕೊಳ್ಳುವಂಥ ಸ್ಥಿತಿ ತಲುಪಿರುವ ವ್ಯಕ್ತಿ ಅನುಭವಿಸುತ್ತಿರುವ ಸಮಸ್ಯೆಗಳೇನು ಎಂಬುದನ್ನು ಅರಿಯದ ವಿಕೃತ ಮನಸ್ಸುಗಳು ಇದನ್ನೂ ಒಂದು ಟ್ರೆಂಡ್ ಎಂದು ಮೂದಲಿಸಿದವು.
ಕರ್ನಾಟಕದ ರಾಜಧಾನಿಯಾದ ಬೆಂಗಳೂರುನಲ್ಲೇ ಯು.ಜಿ.ಡಿ ಇಲ್ಲದ ಸ್ಥಳಗಳಲ್ಲಿ ಇದೇ ಸಫಾಯಿ ಕರ್ಮಚಾರಿಗಳು ಪಿಟ್‌ಗಳನ್ನು ಕ್ಲೀನ್ ಮಾಡುತ್ತಿದ್ದಾರೆ. ಇನ್ನೂ ಹಳ್ಳಿ. ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಯಾವ ಮಟ್ಟದಲ್ಲಿರಬಹುದು ಎಂಬುದನ್ನು ನೀವೆ ಯೋಚಿಸಬಹುದು.
ಮಲಹೋರುವ ಪದ್ಧತಿಯನ್ನು ನಿಷೇಧಿಸಲಾಗಿದೆ, ಆದರೆ ಪುನರ್ವಸತಿ ಸಹ ಕಡ್ಡಾಯವಾಗಿ ನಡೆಯಬೇಕು ಎಂಬ ಮೂಲಭೂತ ಚಿಂತನೆ ಸರ್ಕಾರಕ್ಕೆ ಇದ್ದ ಹಾಗಿಲ್ಲ. ಆದರೆ ಪುನರ್ವಸತಿ ಬಗ್ಗೆ ಯಾವುದೇ ಅಧಿಕಾರಿಗಳು, ರಾಜಕಾರಣಿಗಳು ಮಾತನಾಡಿಲ್ಲ.
ಪ್ರಧಾನ ಮಂತ್ರಿಯವರು ಇನ್ನು ೬ ತಿಂಗಳಲ್ಲಿ ಮಲಹೋರುವ ಪದ್ಧತಿ ನಾಶವಾಗಬೇಕು ಎಂದು ಎಲ್ಲಾ ರಾಜ್ಯಗಳಿಗೂ ಪತ್ರವನ್ನು ಬರೆದಿದ್ದಾರೆ. ಇದಕ್ಕೆ ನಮ್ಮ ಮುಖ್ಯಮಂತ್ರಿಗಳು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.
ಎಷ್ಟೋ ಕುಟುಂಬಗಳು ಮಲದಲ್ಲಿ ಅನ್ನ ಕಾಣುತ್ತಿದ್ದಾವೆ. ಹೇಲೆತ್ತುವ ಕೆಲಸವೂ ಸಿಗದೆ ಹಸಿವಿನಿಂದ ನರಳುವ ಕುಟುಂಬಗಳು ಇವೆ. ಅದೇ ಸಂದರ್ಭದಲ್ಲಿ ಹೇಲೆತ್ತುವ ಕೆಲಸದಿಂದ ಎಷ್ಟೋ ಜೀವನಗಳ ನಾಶವಾಗಿವೆ.
ಪ್ರೊ|| ವೈ.ಜೆ ರಾಜೇಂದ್ರ ಮತ್ತು ನಮ್ಮನ್ನು ಒಳಗೊಂಡ ಸಂಶೋಧನಾ ತಂಡ ಸಂಪೂರ್ಣ ಅಧ್ಯಾಯದ ವರದಿಯನ್ನು ಸಿದ್ಧಪಡಿಸುತ್ತಿದ್ದು, ಸದ್ಯದಲ್ಲೇ ವರದಿಯನ್ನು ಜನರ ಮುಂದೆ ತರಲಾಗುವುದು.

发表评论