ಈ ಮಾಹಿತಿ ವಿಚಿತ್ರ ಆದರೂ ಸತ್ಯ. ಇಂದಿನ ವಿಜಯ ಕರ್ನಾಟಕ ಪತ್ರಿಕೆಯ ಹಾಡು ಹುಟ್ಟಿದ ಸಮಯ ಅಂಕಣದಲ್ಲಿ  ಆರ್.ಮಣಿಕಾಂತ್ ಒಂದು ಸುಂದರ ಹಾಡಿನ ಕುರಿತು ಪ್ರಸ್ತಾಪಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡುವ ಅಗತ್ಯವಿಲ್ಲ. ತಮಿಳಿನ ಆಟೋಗ್ರಾಫ್ ಕನ್ನಡದಲ್ಲೂ ಯಶಸ್ಸು ಕಂಡಿತು. ಜೊತೆಗೆ ಅದರ ಒಂದು ಹಾಡು ಅನೇಕರಿಗೆ ಸ್ಪೂರ್ತಿ ನೀಡಿತು. ಇವತ್ತಿಗೂ ಅರಳುವ ಹೂವುಗಳೇ ಆಲಿಸಿರಿ ಎಂಬುದು ತನ್ನ ಮಾಧುರ್ಯದಿಂದ ಕೇಳುಗರಿಗೆ ಮುದ ನೀಡುತ್ತಿದೆ. ಅದೇನೆ ಇರಲಿ, ನಮ್ಮ ತಕರಾರಿರುವುದು ಈ ಹಾಡಿನ ಹುಟ್ಟಿನ ಕುರಿತು ಬರೆದ ಅಂಕಣದ ಮಾಹಿತಿಯ ಬಗ್ಗೆ. ಕನ್ನಡದಲ್ಲಿ ಈ ಹಾಡಿನ ಸಾಹಿತ್ಯ ಬರೆದವರು ಕೆ.ಕಲ್ಯಾಣ್. ಈ ಕುರಿತು ಆರ್. ಮಣಿಕಾಂತ್ ತಮ್ಮ ಅಂಕಣದಲ್ಲಿ ವಿವರವಾಗಿ ಪ್ರಸ್ತಾಪಿಸಿದ್ದಾರೆ. ಅದರ ಕೆಲವು ಸಾಲುಗಳು ಹೀಗಿವೆ..
ಎ.ಆರ್.ಮಣಿಕಾಂತ್

ಆ ವೇಳೆಗೆ ನನಗೆ ಕಾನ್ಫಿಡೆನ್ಸ್ ಬಂದಿತ್ತು. ಚಿಕ್ಕ ಚಿಕ್ಕ ಬೇಸರಕ್ಕೂ ಕಂಗಾಲಾಗುವ ದುಃಖಿಸುವ ಜನರನ್ನು ಸಂತೈಸಬೇಕು. ಅವರ ಬದುಕಿನೆಡೆಗೆ ತಿರುಗಿ ನೋಡುವಂಥ ಸ್ಫೂರ್ತಿ ತುಂಬಬೇಕು ಎಂದು ಯೋಚಿಸಿ ಎರಡನೇ ಚರಣವನ್ನು ಬರೆದೆ. ನನ್ನ ಸಂತೋಷ ಏನೆಂದರೆ ತಮಿಳುನಲ್ಲಿ ಹಾಡು ಬರೆದಿರುವ ವಿಜಯ್‌ರವರು ನನ್ನ ಬಳಿ ಬಂದು ತಮಿಳಿಗಿಂತ ನನ್ನ ಹಾಡೆ ಚೆನ್ನಾಗಿದೆ ಅಂದರು. ಅದು ನಾನು ಧನ್ಯತೆ ಅನುಭವಿಸಿದ ಕ್ಷಣ..ಇಷ್ಟು ಹೇಳಿ ಮೌನವಾದರು ಕಲ್ಯಾಣ್.

ಹೀಗಂತ ಮಣಿಕಾಂತ್ ಬರೆಯುತ್ತಾರೆ. ಬಹುಶಃ ಈ ಹಾಡಿನ ಹಿನ್ನೆಲೆ ಗೊತ್ತಿಲ್ಲದಿದ್ದರೆ ನಾವು ಕೂಡ ಓದಿ ಎಲ್ಲರಂತೆ ಮೌನವಾಗುತ್ತಿದ್ದೆವೇನೊ, ಆದರೆ ತಮಿಳು ಗೊತ್ತಿರುವವರಿಗೆ ಮಣಿಕಾಂತ್‌ರಿಗೆ  ಕೆ.ಕಲ್ಯಾಣ್ ಹಸಿ ಹಸಿ ಸುಳ್ಳುಗಳನ್ನು ಪೋಣಿಸಿ ಕನ್ನಡದ ಓದುಗರಿಗೆ ಮೋಸ ಮಾಡುತ್ತಿರುವುದು ಅರ್ಥವಾದ ಮೇಲೆ ಇದನ್ನು ಬರೆಯದಿರಲು ಆಗಲಿಲ್ಲ. ಇಲ್ಲಿ ಕಲ್ಯಾಣ್ ತಮ್ಮ ಪ್ರತಿಭೆಯ ಬಗ್ಗೆ ಸ್ವಪ್ರಶಂಸೆಗಿಳಿಯುವಷ್ಟು ಈ ಹಾಡಿಗಾಗಿ ಅವರು ಕಷ್ಟಪಟ್ಟಿಲ್ಲ. ಏಕೆಂದರೆ ಅರಳುವ ಹೂವುಗಳೇ ಹಾಡಿನ ಬರವಣಿಗೆಗೆ ಅವರೇ ಹೇಳಿಕೊಂಡಿರುವಂತೆ ಎಲ್ಲಿಯೂ ಅವರು ಕಷ್ಟಪಟ್ಟಿಲ್ಲ. ಬದಲಾಗಿ ತಮಿಳಿನ ಯುವ ಬರಹಗಾರ ಪಿ.ವಿಜಯ್ ಬರೆದಿರುವ ಮೂಲ ಹಾಡಿನ ಪದಪದಗಳನ್ನೇ ಎತ್ತಿಕೊಂಡು ಬಂದು ಹಿಂದೆ ಮುಂದೆ ಜೋಡಿಸಿರುವುದು ಈ ಎರಡೂ ಹಾಡು ಕೇಳಿದವರಿಗೆ ಅರ್ಥವಾಗುವ ಸತ್ಯ. ಈ ಕುರಿತು ಮಾತು ಮುಂದುವರೆಸುವ ಮುನ್ನ ಕೆಲವು ಮಾಹಿತಿಗಳು ಇಲ್ಲಿವೆ.

ಅರಳುವ ಹೂವುಗಳೇ ಹಾಡಿನ ಮೊದಲ ಪಲ್ಲವಿಗೆ ಬಂದರೆ..
ತಮಿಳು ಹಾಡು - ಒವ್ವ್ವೊರು ಪೂಕ್ಕಳುಮೇ ಸೊಲ್‌ಗಿರದೇ.. ವಾಳ್ವೆನ್ರಾಲ್ ಪೋರಾಡುಂ ಪೋರ್ಕಳಮೇ.. ಒವ್ವೊರು ವಿಡಿಯಲುಮೇ ಸೊಲ್ಗಿರದೇ.. ಇರವಾನಾಲ್ ಪಗಲ್ ಒನ್ರು ವಂದಿಡುಮೇ
ಕನ್ನಡ ಅನುವಾದ -  ಒಂದೊಂದು ಹೂಗಳೂ ಹೇಳುತ್ತಿವೆ, ಬಾಳೊಂದು ಹೋರಾಟದ ಭೂಮಿ, ಒಂದೊಂದು ಬೆಳಕಿನ ಕಿರಣವೂ ಹೇಳುತ್ತಿದೆ, ಕತ್ತಲೆ ಮುಗಿದ ಮೇಲೆ ಹಗಲು ಬಂದೇ ಬರುತ್ತದೆ
ಕಲ್ಯಾಣ್ ರಚನೆ - ಅರಳುವ ಹೂವುಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ, ಬೆಳಕಿನ ಕಿರಣಗಳೇ ಬಣ್ಣಿಸಿರಿ, ಇರುಳ ಹಿಂದೆ ಬೆಳಕುಂಟು ತೋರಿಸಿರಿ.

ಎರಡನೆ ಪಲ್ಲವಿಗೆ ಬಂದರೆ..
ತಮಿಳು ಹಾಡು - ನಂಬಿಕೈ ಎನ್ಬದು ವೇಂಡುಂ ನಮ್ ವಾಳ್ವಿಲ್.. ಲಚ್ಚಿಯಂ ನಿಚ್ಚಯಂ ವೆಲ್ಲುಂ ಒರು ನಾಳಿಲ್.. ಮನಮೇ ಓ ಮನಮೇ ನೀ ಮಾರಿ ವಿಡು..
ಕನ್ನಡ ಅನುವಾದ - ನಂಬಿಕೆ ಎಂಬುದು ಬೇಕು ನಮ್ಮ ಬದುಕಲಿ, ಲಕ್ಷ್ಯ ಯಾವತ್ತಿದ್ದರೂ ಗೆಲ್ಲುತ್ತದೆ.. ಮನಸೇ ಓ ಮನಸೇ ನೀ ಬದಲಾಗು
ವಿಜಯ್
ಕಲ್ಯಾಣ್ ರಚನೆ - ನಾಳೆಯ ನಂಬಿಕೆಯಿರಲಿ ನಮ್ಮ ಬಾಳಲಿ, ಗೆಲ್ಲುವ ಭರವಸೆಯೊಂದೇ ಗುರಿಯಾಗಲಿ, ಮನವೇ ಓ ಮನವೇ ನೀ ಬದಲಾಗು..

ಹೀಗೆ ಒಂದೆರಡು ಪದಗಳನ್ನು ಹೊರತುಪಡಿಸಿ ಉಳಿದಂತೆ ಇಡೀ ಹಾಡಿನ ಸಾಲುಸಾಲುಗಳನ್ನೇ ಎಗರಿಸಿಕೊಂಡು ಬರೆದಿರುವ ಹಾಡಿನ ರಚನೆಗಾಗಿ ನಾನು ಎಷ್ಟೆಲ್ಲ ಕಷ್ಟಪಟ್ಟೆ ಎಂದು ಕಲ್ಯಾಣ್ ಹೇಳಿದರೆ ಓದುಗರು ನಂಬುವುದು ಹೇಗೆ?

ಇಲ್ಲಿರುವ ತಮಿಳಿನ ಪದಪದಗಳಿಗೆ ಕನ್ನಡದ ಅನುವಾದ ಮಾಡಿದರೆ ಕೆ. ಕಲ್ಯಾಣ್ ಅವರ ಅರಳುವ ಹೂವುಗಳೇ.. ಹಾಡು ಹುಟ್ಟುತ್ತದೆ. ಕನ್ನಡದ ಕೆಲವೇ ಉತ್ತಮ ಸಿನಿಮಾ ಸಾಹಿತಿಗಳ ಸಾಲಿನಲ್ಲಿ ಕೆ. ಕಲ್ಯಾಣ್ ಕೂಡ ಒಬ್ಬರು. ಈ ಹಿಂದೆ ಯಜಮಾನ ಚಿತ್ರದ ಹಾಡುಗಳನ್ನು ಇದೇ ಕಲ್ಯಾಣ್ ಕನ್ನಡದ ತರ್ಜುಮೆ ಮಾಡಿದ್ದರು. ಕಾದಲ್ ವೆನ್ನಿಲಾ ಕೈಯಿಲ್ ಸೇರುಮಾ ಸೊಲ್ಲುಂ ಪೂಂಗಾಟ್ರೆ ಎಂಬ ಹಾಡನ್ನು ಪ್ರೇಮಚಂದ್ರಮ ಕೈಗೆ ಸಿಗುವುದೇ ಹೇಳೆ ತಂಗಾಳಿಯೆಂದೂ ನದಿಕರೈ ಮಳಲ್ ಮೀದು.. ಉನ್ ಪೆಯರ್ ನಾನ್ ಎಳುದ, ಮಳಲ್ ಎಲ್ಲಾಂ ಪೊನ್ನಾಯ್ ಪೋಲ ಮಾಯಮೆನ್ನ ಎಂಬುದನ್ನು ಕಾವೇರಿ ತೀರದಲಿ ಬರದೆನು ನಿನ್ ಹೆಸರ, ಮರಳೆಲ್ಲ ಹೊನ್ನಾಯ್ತು ಯಾವ ಮಾಯೆ  ಎಂದು ಸಾರಾಸಗಟಾಗಿ ಕದಿಯುವುದನ್ನು ಬದಿಗಿಟ್ಟು ನೋಡಿದರೆ ಅವರೊಬ್ಬ ಉತ್ತಮ ಬರಹಗಾರ. ಆದರೆ ಅವರ ಅದೆಷ್ಟೊ ಉತ್ತಮ ಸಾಹಿತ್ಯಗಳನ್ನು ಗೌರವಿಸುವವರಿಗೂ ಕಲ್ಯಾಣ್ ಪಬ್ಲಿಸಿಟಿಗಾಗಿ ಬೇರ‍್ಯಾರೊ ಬರೆದದ್ದನ್ನು ನಾನೇ ಹೊಳೆಯಿಸಿಕೊಂಡು, ಅನುಭವಿಸಿಕೊಂಡು ಬರೆದೆ ಎಂದು ಹೇಳಿಕೊಂಡರೆ ಅಸಹ್ಯ ಅಂತ ಅನ್ನಿಸುತ್ತದೆ.

ಕೆ. ಕಲ್ಯಾಣ್ ಎಲ್ಲಾ ಹಾಡುಗಳನ್ನೂ ಎಗರಿಸುತ್ತಾರೋ, ಅಥವಾ ತಮಿಳಿನ ಗೀತರಚನೆಕಾರ ಪಿ. ವಿಜಯ್‌ರ ಹಾಡುಗಳನ್ನು ಮಾತ್ರ ಎಗರಿಸುತ್ತಾರೋ ಗೊಂದಲಕಾರಿ ವಿಷಯ. ಏಕೆಂದರೆ ಪಿ.ವಿಜಯ್ ಬರೆದ ಹಾಡುಗಳಿರುವ ಚಿತ್ರ ಕನ್ನಡಕ್ಕೆ ರೀಮೇಕಾದರೆ ಅದಕ್ಕೆ ಕೆ. ಕಲ್ಯಾಣೇ ಹಾಡು ಬರೆಯುತ್ತಾರೆ, ಮತ್ತು ವಿಜಯ್‌ರ ಪದಗಳನ್ನು ಕನ್ನಡದಲ್ಲಿ ಅತ್ತಿತ್ತ ಸರಿಸಿ ತಮ್ಮ ಹೆಸರು ಹಾಕಿಕೊಳ್ಳುತ್ತಾರೆ. ಇದು ಹಲವು ಹಾಡುಗಳಲ್ಲಿ ಸಾಬೀತೂ ಸಹ ಆಗಿದೆ. ೧೯೯೬ರಿಂದ ಸಿನಿಮಾಗಳಿಗೆ ಹಾಡು ಬರೆಯುತ್ತಿರುವ ತಮಿಳುನಾಡಿನ ಕೊಯಮತ್ತೂರಿನ ಪಿ.ವಿಜಯ್ ತಮಿಳಿನ ಸುಪ್ರಸಿದ್ದ ಯುವ ಗೀತರಚನೆಕಾರರಲ್ಲಿ ಒಬ್ಬರು. ರಜನೀಕಾಂತರ ಶಿವಾಜಿ ಮತ್ತು ಇತ್ತೀಚಿನ ಎಂಧಿರನ್ ಚಿತ್ರದಲ್ಲಿಯೂ ವಿಜಯ್ ಬರೆದ ಗೀತೆಗಳಿವೆ. ಆಟೋಗ್ರಾಫ್ ಚಿತ್ರಕ್ಕೆ ಬರೆದ ಒವ್ವೊರು ಪೂಕ್ಕಳುಮೇ ಹಾಡಿಗೆ ೨೦೦೪ರಲ್ಲಿ ಉತ್ತಮ ಗೀತರಚನೆಗಾಗಿ ಇರುವ ರಾಷ್ಟ್ರಪ್ರಶಸ್ತಿಯನ್ನೂ ಇವರು ಪಡೆದಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಗೀತೆಯೊಂದನ್ನು ಈ ಮಟ್ಟಕ್ಕೆ ಹಿಂದುಮುಂದು ಮಾಡಿ ಶ್ರಮವೇ ಇಲ್ಲದ ಬರೆದ ಹಾಡೊಂದನ್ನು ಹಾಗೆ ಬರೆದೆ ಹೀಗೆ ಬರೆದೆ ಎಂದು ಮಣಿಕಾಂತರ ಮುಂದೆ ಅಲವತ್ತುಕೊಂಡಿರುವ ಕಲ್ಯಾಣ್‌ರ ಪ್ರಯತ್ನ ಹಾಸ್ಯಾಸ್ಪದವೆನಿಸುತ್ತದೆ.

ಕೆ.ಕಲ್ಯಾಣ್
ಹಾಡು ಹುಟ್ಟಿದ ಸಮಯ ಎಂಬ ಉತ್ತಮ ಪರಿಕಲ್ಪನೆಯ ಅಂಕಣವನ್ನು ಪರಿಚಯಿಸಿದವರು ವಿಜಯಕರ್ನಾಟಕದ ಮಣಿಕಾಂತ್. ಅವರ ಬರವಣಿಗೆ, ಆಲೋಚನೆ ಕುರಿತು ಎಲ್ಲರಿಗೂ ಗೌರವವಿದೆ. ಆದರೆ ರಂಗಿನ ಲೋಕದ ಸಿನಿಮಾ ಮಂದಿ ಹೇಳಿದ್ದೆಲ್ಲವೂ ಸತ್ಯವಾಗಿರಲಾರದು ಎಂಬ ಸತ್ಯವೂ ಅವರಿಗೆ ಗೊತ್ತಿರಲಿ. ಎಲ್ಲರೂ ಇಷ್ಟಪಡುವಂತಹ ಮಣಿಕಾಂತ್‌ರ ಹಾಡು ಹುಟ್ಟಿದ ಸಮಯ ಅಂಕಣ  ಕಲ್ಯಾಣ್‌ರಂತಹವರ ಸುಳ್ಳುಗಳ ಹಂಗಿಲ್ಲದೆ ಯಶಸ್ವಿಯಾಗಿ ಮುಂದುವರೆಯಲಿ, ಯುವ ಬರಹಗಾರರಿಗೆ ಪ್ರೊತ್ಸಾಹ ಅಬಾಧಿತವಾಗಿರಲಿ, ಪುನಃ ಪುನಃ ನೋಡಿದರೂ ನಿನ್ನ ವಿನಃ ಏನಿಲ್ಲ ಎಂದು ಒಂದು ಕಾಲದಲ್ಲಿ ಅದ್ಭುತವಾದ ಸಾಲುಗಳನ್ನು ಬರೆಯುತ್ತಿದ್ದ ಕಲ್ಯಾಣ್‌ರಿಗೆ ಅವರ ಮೊದಲ ದಿನಗಳ ಬರವಣಿಗೆಯ ಬಿಸುಪು ಇನ್ನಾದರೂ ಮರುಕಳಿಸಲಿ.

-ಒಬ್ಬ ಕೇಳುಗ, ಓದುಗ
0 komentar

Blog Archive