ವಿಜಯ ಸಂಕೇಶ್ವರರ ಹೊಸ ಪತ್ರಿಕೆಯ ಸಾರಥಿ ಯಾರೆಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಹಿಂದೆಯೇ ಬರೆದಂತೆ ಉದಯವಾಣಿಯ ಮಾಜಿ ಸಂಪಾದಕ ತಿಮ್ಮಪ್ಟ ಭಟ್ಟರು ಸಂಕೇಶ್ವರರ ಭಾವಿ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ನೇಮಕಗೊಂಡಿದ್ದಾರೆ. ಇವತ್ತು ಹುಬ್ಬಳ್ಳಿಯಲ್ಲಿ ತಿಮ್ಮಪ್ಪಭಟ್ಟರು ಹೊಸ ಪತ್ರಿಕೆಯ ಚಾರ್ಜು ತೆಗೆದುಕೊಂಡಿದ್ದಾರೆ. ಹುಬ್ಬಳ್ಳಿಯ ವಿಆರ್‌ಎಲ್ ಕಚೇರಿಯಲ್ಲಿ ಔಪಚಾರಿಕ ಸಭೆಯಲ್ಲಿ ಭಟ್ಟರು ಹೊಸ ಜವಾಬ್ದಾರಿಯನ್ನು ಪಡೆಯುವುದರೊಂದಿಗೆ ಸಂಕೇಶ್ವರರ ಹೊಸ ಸಾಹಸಕ್ಕೆ ಅಧಿಕೃತ ಚಾಲನೆ ದೊರೆತಂತಾಗಿದೆ.

ಈಗ್ಗೆ ಸರಿಸುಮಾರು ಮೂರು ವಾರಗಳ ಹಿಂದೆ ಸಂಕೇಶ್ವರರ ಹೊಸ ಪತ್ರಿಕೆಯ ಸಾರಥಿ ಯಾರು ಎಂಬ ಲೇಖನದಲ್ಲಿ (ಮೇ ೨೭) ತಿಮ್ಮಪ್ಪಭಟ್ಟರು ಪತ್ರಿಕೆಯಲ್ಲಿ ಇರುತ್ತಾರೆ ಎಂಬುದನ್ನು ಖಚಿತಪಡಿಸಿದ್ದೆವು. ಅದರಂತೆಯೇ ಅವರು ಹೊಸ ಪತ್ರಿಕೆ ಸಾರಥ್ಯ ವಹಿಸಿಕೊಂಡಿದ್ದಾರೆ.

ಪತ್ರಿಕೆಯ ಹೆಸರು ಏನು ಎಂಬುದಿನ್ನೂ ಬಹಿರಂಗಗೊಂಡಿಲ್ಲ. ಆನಂದ ಕರ್ನಾಟಕ ಎಂಬ ಹೆಸರು ಹೆಚ್ಚು ಓಡುತ್ತಿರುವುದಂತೂ ನಿಜ. ಈ ಟೈಟಲನ್ನು ರಿಜಿಸ್ಟರ್ ಮಾಡಿಕೊಂಡವರು ಆನಂದ್ ಸಿಂಗ್; ಹೊಸಪೇಟೆಯ ಶಾಸಕ. ಇವರಿಂದ ಈಗಾಗಲೇ ಟೈಟಲ್ ಖರೀದಿಸಲಾಗಿದೆ ಎಂಬ ಮಾತುಗಳೂ ಇವೆ. ಇದು ಆನಂದ ಕರ್ನಾಟಕವಾಗುತ್ತಾ ಅಥವಾ ಸಂಕೇಶ್ವರರು ಹೊಸ ಹೆಸರು ಹುಡುಕುತ್ತಾರಾ ಕಾದು ನೋಡಬೇಕು.

ಸದ್ಯಕ್ಕೆ ಹೊಸ ಪತ್ರಿಕೆ ನೇತೃತ್ವ ವಹಿಸಿರುವ ತಿಮ್ಮಪ್ಪ ಭಟ್ಟರು ಹೊಸತನ್ನು ಕೊಡಲಿ. ಕನ್ನಡ ಪತ್ರಿಕೆಗಳು ಹೆಡ್ಡಿಂಗು ಕೊಡುವುದರಲ್ಲಿ ತೋರುತ್ತಿರುವ ಪೈಪೋಟಿಯನ್ನು ಸುದ್ದಿಯ ಗುಣಮಟ್ಟಕ್ಕೂ ವಿಸ್ತರಿಸಿದೇ ಇರುವುದು ಬೇಸರದ ವಿಷಯ. ಇಂಥ ಸಂದರ್ಭದಲ್ಲಿ ಕನ್ನಡಿಗರ ಒಟ್ಟು ಆಶೋತ್ತರಗಳನ್ನು ಧ್ವನಿಸುವ ಪತ್ರಿಕೆಯನ್ನು ಭಟ್ಟರು ರೂಪಿಸುವಂತಾಗಲಿ. ಹೊಸ ಪತ್ರಿಕೆ ಬಡವರ, ನೊಂದವರ, ನಿರ್ಲಕ್ಷಿತರ ಪರವಾಗಿ ಧ್ವನಿ ಎತ್ತಲಿ. ಇದು ನಮ್ಮ ಆಶಯ.

ವಿಜಯ ಸಂಕೇಶ್ವರರಿಗೂ, ತಿಮ್ಮಪ್ಪ ಭಟ್ಟರಿಗೂ ಹಾರ್ದಿಕ ಅಭಿನಂದನೆಗಳು.
0 komentar

Blog Archive