ಪ್ರಳಯಾಂತಕ ಜ್ಯೋತಿಷಿ ನರೇಂದ್ರ ಬಾಬು ಶರ್ಮ ಮತ್ತೆ ಜೀ ಟಿವಿಯಲ್ಲಿ ಹಾಜರಾಗಿದ್ದಾರೆ. ಇಷ್ಟು ದಿನಗಳ ಕಾಲ ನರೇಂದ್ರ ಶರ್ಮ ಅವರ ಹಳೆಯ ಎಪಿಸೋಡುಗಳನ್ನೇ ತೋರಿಸಲಾಗುತ್ತಿತ್ತು. ಇವತ್ತು ಮತ್ತೆ ಲೈವ್ ಕಾರ್ಯಕ್ರಮ ಪ್ರಸಾರವಾಗಿದೆ.
ನರೇಂದ್ರ ಶರ್ಮ ಬದಲಾಗಿ ಬನಶಂಕರಿ ದೇಗುಲದ ಅರ್ಚಕ ಆನಂದ್ ಗುರೂಜಿ ಎಂಬುವವರ ಕಾರ್ಯಕ್ರಮ ಪ್ರಸಾರವಾಗುತ್ತದೆ ಎಂಬ ಮಾಹಿತಿಯಿತ್ತು. ಆನಂದ್ ಗುರೂಜಿಯ ಕಾರ್ಯಕ್ರಮ ಭಾನುವಾರಗಳಂದು ಪ್ರಸಾರವಾಗುತ್ತಿದೆ. ಧರ್ಮ ದರ್ಪಣ ಎಂಬ ಈ ಕಾರ್ಯಕ್ರಮದಲ್ಲಿ ಕೈಯಲ್ಲಿ ಪಾದರಸ ಕೊಟ್ಟು ಭವಿಷ್ಯ ಹೇಳುವ ಹೊಸ ಟೆಕ್ನಿಕ್ಕು ಪ್ರಯೋಗಿಸಲಾಗುತ್ತಿದೆ. ಒಟ್ಟಾರೆ ಈಗ ಜೀ ಟಿವಿಯಲ್ಲಿ ಡಬ್ಬಲ್ ಧಮಾಕ. ಅತ್ತ ಆನಂದ ಗುರೂಜಿ, ಇತ್ತ ನರೇಂದ್ರ ಗುರೂಜಿ. ಜೀ ಟಿವಿ ಉದ್ಧಾರವಾಗುವುದಕ್ಕೆ ಇನ್ನೇನು ಬೇಕು?
ಹಾಗೆ ನೋಡಿದರೆ ನರೇಂದ್ರ ಶರ್ಮ ಅವರಷ್ಟೇ ಅಪಾಯಕಾರಿಯಾಗಿ ಇತರ ಚಾನಲ್ ಗಳ ಜ್ಯೋತಿಷಿಗಳೂ ಬೆಳೆಯುತ್ತಿದ್ದಾರೆ. ಮನಸ್ಸಿಗೆ ಬಂದದ್ದನ್ನು ಹೇಳುವ ಇವರಿಗೆ ಲಂಗುಲಗಾಮು ಏನೂ ಇಲ್ಲದಂತಾಗಿದೆ.
ಚಂದ್ರಗ್ರಹಣದ ಕುರಿತಾಗಿ ನಿನ್ನೆ ಸುವರ್ಣ ನ್ಯೂಸ್‌ನಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ, ಸೋಮಯಾಜಿ ಹೇಳಿದ್ದನ್ನು ನೀವು ಕೇಳಿರಬಹುದು. ಚಂದ್ರಗ್ರಹಣದ ಪರಿಣಾಮವಾಗಿ ರಾಜ್ಯದಲ್ಲಿ ಕೋಮುಗಲಭೆ ನಡೆಯುತ್ತದಂತೆ. ಪತ್ರಕರ್ತರ ಮೇಲೆ ಹಲ್ಲೆಗಳು ನಡೆಯುತ್ತವಂತೆ. ಒಬ್ಬ ಪತ್ರಕರ್ತ ಕೊಲೆಯೂ ಆಗುತ್ತಾನಂತೆ. ಅಂದ ಹಾಗೆ ಕೊಲೆಯಾಗುವ ಪತ್ರಕರ್ತ ಯಾರು ಎಂಬುದನ್ನೂ ಈತ ಮೊದಲೇ ಹೇಳಿದರೆ ಆತನ ಸಮಾಧಿಯನ್ನೂ ಈಗಲೇ ನಿರ್ಮಿಸಿಬಿಡಬಹುದಿತ್ತು, ಶ್ರದ್ಧಾಂಜಲಿ ಸಭೆಗಳಿಗೂ ಈಗಲೇ ತಯಾರಿ ನಡೆಸಬಹುದಿತ್ತು. ಇವರು ಜ್ಯೋತಿಷಿಗಳಲ್ಲ, ಸ್ಯಾಡಿಸ್ಟ್‌ಗಳು ಎನಿಸುವುದಿಲ್ಲವೇ ನಿಮಗೆ?ನಿನ್ನೆಯ ಬದುಕು ಜಟಕಾ ಬಂಡಿ ಕಾರ್ಯಕ್ರಮದಲ್ಲಿ ಡಿವೈನ್ ಹೀಲಿಂಗ್ ಮಾಡುತ್ತೇನೆಂದು ಹೇಳಿಕೊಳ್ಳುವ ಗುರೂಜಿಯೊಬ್ಬನನ್ನು ಪ್ರಮೋಟ್ ಮಾಡುವ ಕಸರತ್ತು ನಡೆಸಲಾಯಿತು. ಹಿಂದೆ ನರೇಂದ್ರ ಶರ್ಮ ಜತೆ ನಡೆಸಿದ ಸಂವಾದದ ಸಂದರ್ಭದಲ್ಲಿ ಉಪಯೋಗಿಸಿದ ತಂತ್ರವನ್ನೇ ನಿನ್ನೆಯ ಕಾರ್ಯಕ್ರಮದಲ್ಲೂ ಹೆಣೆಯಲಾಗಿತ್ತು. ಮೊದಲು ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರ ಪುತ್ರ ಪಚ್ಚೆಯನ್ನು ಮಾತನಾಡಿಸಿ ಗುರೂಜಿಯ ಠೊಳ್ಳುತನವನ್ನು ಬಹಿರಂಗಪಡಿಸಲಾಯಿತು. ನಂಜುಂಡಸ್ವಾಮಿಯವರ ಕಡೆದಿನಗಳಲ್ಲಿ ಇದೇ ಗುರೂಜಿಯಿಂದ ದೈವಿಕ ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಆದರೆ ಪ್ರೊಫೆಸರ್ ಬದುಕುಳಿಯಲಿಲ್ಲ. ಪಚ್ಚೆ ಖಾರವಾಗಿಯೇ ಮಾತನಾಡಿದರು. ಅಧ್ಯಾತ್ಮ ಪ್ರವಚನ ಮಾಡಿಕೊಂಡಿರಿ, ಚಿಕಿತ್ಸೆ ಮಾಡುತ್ತೇನೆಂದು ನಂಬಿಸಿ ಯಾರನ್ನೂ ಮೋಸ ಮಾಡಬೇಡಿ ಎಂದು ಹೇಳಿದರು.
ಆಮೇಲೆ ಮಾಳವಿಕಾ ಅವರ ರಿಯಲ್ ಶೋ ಆರಂಭವಾಯಿತು. ನಾಲ್ಕೈದು ಮಂದಿಯನ್ನು ಮಾತನಾಡಿಸಿ ಅವರ ಖಾಯಿಲೆಗಳೆಲ್ಲವೂ ಗುಣವಾಗಿದೆ ಎಂದು ಹೇಳಿಸಲಾಯಿತು. ಒಬ್ಬಳಿಗೆ ಬಿದ್ದು ಹೋದ ಕೈ ಕಾಲುಗಳು ಬಂದಿದ್ದವು. ಮತ್ತೊಬ್ಬನಿಗೆ ಡಯಾಬಿಟಿಸ್ ಕಣ್ಮರೆಯಾಗಿತ್ತು. ಕಡೆಗೆ ಮಾಳವಿಕಾ ಕೊಟ್ಟ ಫೈನಲ್ ಜಡ್ಜ್‌ಮೆಂಟ್: ಪೇಶೆಂಟ್ ಸತ್ತೋದ್ರು ಅಂತ ನಾವು ಯಾವುದಾದರೂ ಆಸ್ಪತ್ರೆಗೆ ಹೋಗೋದು ಬಿಡ್ತೀವಾ? ಹಾಗೆ ಇದೂನು.
ಗುರೂಜಿ ಕ್ಯಾನ್ಸರ್, ಎಚ್.ಐ.ವಿ. ಇತ್ಯಾದಿ ಎಲ್ಲಾ ಖಾಯಿಲೆಗಳನ್ನೂ ವಾಸಿ ಮಾಡುತ್ತಾರಂತೆ. ಬೇಕಿದ್ದರೆ ಹತ್ತು ಜನ ರೋಗಿಗಳನ್ನು ನೀವೇ ನನಗೆ ಕೊಡಿ. ಎಪ್ಪತ್ತು ಪರ್ಸೆಂಟ್ ರಿಸಲ್ಟ್ ಕೊಡಲಿಲ್ಲವೆಂದರೆ ಬೀದಿಯಲ್ಲಿ ನಿಲ್ಲಿಸಿ ಕಲ್ಲಿನಲ್ಲಿ ಹೊಡೆದು ನನ್ನನ್ನು ಸಾಯಿಸಿ ಎಂದು ಅವರು ಸವಾಲು ಹಾಕಿದರು. ಹತ್ತು ಲಕ್ಷ ರೂಪಾಯಿ ಬೆಟ್ ಬೇಕಾದರೆ ಕಟ್ಟುತ್ತೇನೆ ಎಂದು ಹೇಳಿಕೊಂಡರು. ಒಟ್ಟಾರೆ ಈ ಗುರೂಜಿಗೆ ಜೀ ಟಿವಿಯಲ್ಲಿ ಫುಲ್ ಜಾಹೀರಾತು. ಜಾಹೀರಾತು ದರ ಎಷ್ಟು ಎಂದು ಮಾತ್ರ ಕೇಳಬೇಡಿ.
![]() |
| ಆನಂದ್ ಗುರೂಜಿ |
ಇದನ್ನು ಹೊರತುಪಡಿಸಿ ಜಟಕಾ ಬಂಡಿಯನ್ನು ಓಡಿಸುವುದು ಪ್ರಳಯಾಂತಕ ಜ್ಯೋತಿಷಿಗಳನ್ನಿಟ್ಟುಕೊಂಡು. ನರೇಂದ್ರ ಶರ್ಮ, ಆನಂದ್ ಗುರೂಜಿ ಮತ್ತೀಗ ಡಿವೈನ್ ಹೀಲಿಂಗ್ ಗುರೂಜಿ. ಎಲ್ಲದರಲ್ಲೂ ಅತ್ತಂಗೆ ಮಾಡು, ಹೊಡೆದಂತೆ ಮಾಡುತ್ತೇನೆ ಎಂಬ ವಿಕಾರ ತಂತ್ರಗಳು. ಕಪಟ ಜ್ಯೋತಿಷಿಗಳನ್ನು ಪ್ರಮೋಟ್ ಮಾಡುವುದೊಂದೇ ಕಾರ್ಯಕ್ರಮಗಳ ಗುರಿ.
ಕನ್ನಡ ಚಾನಲ್‌ಗಳು ದುರಾಸೆಗೆ ಬಿದ್ದಿವೆ. ಜನರಿಗೆ ಸುಳ್ಳು ಹೇಳಾದರೂ ಸರಿ, ಭೀತಿ ಹುಟ್ಟಿಸಿಯಾದರೂ ಸರಿ ಹಣ ದೋಚುವುದೊಂದೇ ಅವುಗಳ ಕಾಯಕವಾಗಿದೆ. ಯಾರು ಎಷ್ಟೇ ಏನೇ ಹೇಳಿದರೂ ಈ ಚಾನಲ್‌ಗಳು ಸುಧಾರಿಸುವುದಿಲ್ಲ. ಕೊಳಚೆಯಲ್ಲೇ ಬಿದ್ದು ಸಾಯುತ್ತೇವೆ ಎನ್ನುವ ಹಂದಿಗಳನ್ನು ತಂದು ಬೀದಿಗೆ ಬಿಟ್ಟರೂ ಅವರು ಮತ್ತೆ ಕೊಳಚೆ ಹುಡುಕಿಕೊಂಡೇ ಹೋಗುತ್ತವೆ.
ಈ ಹಂದಿಗಳ ಹಾವಳಿಯನ್ನು ನಿಯಂತ್ರಿಸುವುದು ಹೇಗೆ? ಯಾರು?


发表评论