ಭ್ರಷ್ಟಾಚಾರ ವಿರುದ್ಧ ಬಾಬಾ ರಾಮದೇವ ಎಂಬುವವರು ಈಗ ಕತ್ತಿ ಝಳಪಿಸುತ್ತಿದ್ದಾರೆ. ದೆಹಲಿಯ ರಾಮಲೀಲಾ ಮೈದಾನದಲ್ಲಿ ನಾಳೆಯಿಂದ ಅವರ ಉಪವಾಸ ಸತ್ಯಾಗ್ರಹ ಶುರು. ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣವನ್ನು ಮುಟ್ಟುಗೋಲು ಹಾಕಿಕೊಂಡು ವಾಪಾಸು ತರಬೇಕು ಎಂಬುದು ಅವರ ಬೇಡಿಕೆ.

ಭ್ರಷ್ಟಾಚಾರ ವಿರೋಧಿಸುವುದು ಈಗೀಗ ಒಂದು ಫ್ಯಾಷನ್. ಭ್ರಷ್ಟಾಚಾರ ವಿರೋಧಿ ಹೋರಾಟಗಳನ್ನು ಬೆಂಬಲಿಸುವವರ ಪೈಕಿ ಸಾಕಷ್ಟು ಮಂದಿಗೆ ತಮ್ಮ ಕಳಂಕಗಳನ್ನು ತೊಳೆದುಕೊಳ್ಳುವ ಆತುರ. ಅಣ್ಣಾ ಹಜಾರೆ ಹೋರಾಟಕ್ಕೆ ವ್ಯಕ್ತವಾದ ಸಾರ್ವತ್ರಿಕ ಬೆಂಬಲವನ್ನು ಗಮನಿಸಿದ ಮೇಲೆ ಇಂಥದ್ದೇ ಬೆಂಬಲದ ನಿರೀಕ್ಷೆಯಲ್ಲಿ ರಾಮದೇವ ಉಪವಾಸಕ್ಕೆ ಕೂರುತ್ತಿದ್ದಾರೆ.

ರಾಮದೇವ ಅವರ ಚಳವಳಿಯ ಹಿನ್ನೆಲೆಯಲ್ಲಿ ಕಪ್ಪು ಹಣ ವಾಪಾಸು ಬಂದರೆ ದೇಶದ ಸಾಲವೆಲ್ಲ ತೀರಿಹೋಗುತ್ತೆ, ಐದು ವರ್ಷ ಪುಗಸಟ್ಟೆ ಪೆಟ್ರೋಲು ಕೊಡಬಹುದು, ಜನರು ಮಾಡಿದ ಸಾಲವನ್ನೆಲ್ಲ ಮನ್ನಾ ಮಾಡಬಹುದು, ಇತ್ಯಾದಿ ಇತ್ಯಾದಿ ತರ್ಕಗಳು ಹುಟ್ಟಿಕೊಂಡಿವೆ. ಮೊಬೈಲುಗಳ ಮೆಸೇಜು ಬಾಕ್ಸು, ಇ-ಮೇಲ್, ಟ್ವಿಟರ್, ಫೇಸ್‌ಬುಕ್, ಆರ್ಕುಟ್‌ಗಳಲ್ಲಿ ಈಗ ಇದೇ ಚರ್ಚೆ.

ಬಾಬಾ ರಾಮದೇವ್ ಉಪವಾಸ ಸತ್ಯಾಗ್ರಹ ಮಾಡದಂತೆ ಕೇಂದ್ರ ಸರ್ಕಾರ ತನ್ನ ವಿಶೇಷ ಪ್ರಯತ್ನಗಳನ್ನು ಮಾಡುತ್ತಿರುವುದು, ಮಂತ್ರಿ ಮಂಡಲದ ಸದಸ್ಯರನ್ನು ವಿಮಾನ ನಿಲ್ದಾಣಕ್ಕೆ ಓಡಿಸಿ ಬಾಬಾ ಅವರೊಂದಿಗೆ ಮಾತುಕತೆ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದು, ಬಾಬಾ ಹೈಟೆಕ್ ಪೆಂಡಾಲಿನಲ್ಲಿ ಸತ್ಯಾಗ್ರಹ ನಡೆಸಲು ಅಣಿಯಾಗುತ್ತಿರುವುದು ಇದೆಲ್ಲವೂ ನಮ್ಮ ಮಾಧ್ಯಮಗಳಲ್ಲಿ ಹಾಟ್ ಹಾಟ್ ಸುದ್ದಿಗಳು. ಹಗರಣಗಳಲ್ಲಿ ಮುಳುಗೇಳುತ್ತಿರುವ ಕೇಂದ್ರ ಸರ್ಕಾರವನ್ನು ಯೋಗ ಕಲಿಸುವ ಗುರು, ಔಷಧಿ ಮಾರುವ ವ್ಯಾಪಾರಿಯೊಬ್ಬರು ಹೆದರಿಸುವಂತಾಗಿದೆ.

ಯಾಕೆ ರಾಮದೇವ್ ಉಪವಾಸ ಇಷ್ಟು ದೊಡ್ಡಮಟ್ಟದ ಪ್ರಚಾರ ಗಿಟ್ಟಿಸುತ್ತಿದೆ? ಯಾಕೆ ಕೇಂದ್ರ ಸರ್ಕಾರ ಇಷ್ಟೊಂದು ಹೆದರಿ ರಾಜಿಕಬೂಲಿಗೆ ಪ್ರಯತ್ನಿಸುತ್ತಿದೆ? ಅಣ್ಣಾ ಹಜಾರೆ ಸತ್ಯಾಗ್ರಹಕ್ಕೆ ದಕ್ಕಿದ ಬೆಂಬಲವೇ ರಾಮದೇವ್ ಸತ್ಯಾಗ್ರಹಕ್ಕೂ ದೊರೆಯುತ್ತದೆಯೇ? ಕೇಂದ್ರ ಸರ್ಕಾರ ಮುಂದೇನು ಮಾಡುತ್ತದೆ? ಇವೆಲ್ಲ ಕಾಲವೇ ಉತ್ತರಿಸಬೇಕಾದ ಪ್ರಶ್ನೆಗಳು.

ಬಾಬಾ ರಾಮದೇವ್ ಇತ್ತೀಚಿಗೆ ಬೆಂಗಳೂರಿಗೂ ಬಂದಿದ್ದರು. ಹಾಗೆ ಬಂದವರನ್ನು ಬೆಂಗಳೂರು ಪ್ರೆಸ್ ಕ್ಲಬ್ ಮಾಧ್ಯಮ ಸಂವಾದಕ್ಕೂ ಆಹ್ವಾನಿಸಿತ್ತು. ಸಂವಾದದ ಸಂದರ್ಭದಲ್ಲಿ ಬಿಸಿಬಿಸಿ ಪ್ರಶ್ನೋತ್ತರಗಳೂ ನಡೆದಿದ್ದವು. ಆ ಬಗ್ಗೆ ಪ್ರಜಾವಾಣಿ ಮತ್ತಿತರ ಪತ್ರಿಕೆಗಳಲ್ಲೂ ವರದಿಯಾಗಿತ್ತು. ಅದನ್ನು ಸ್ವಲ್ಪ ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ.

ತಾವು ಕ್ಯಾನ್ಸರ್, ಏಡ್ಸ್ ಸೇರಿದಂತೆ ಎಲ್ಲ ಖಾಯಿಲೆಗಳನ್ನೂ ಗುಣಪಡಿಸಿರುವುದಾಗಿ ರಾಮದೇವ್ ಈ ಸಂವಾದದಲ್ಲಿ ಘೋಷಿಸಿಕೊಂಡರು. ಪತ್ರಕರ್ತರಿಂದ ತೂರಿ ಬಂದ ಪ್ರಶ್ನೆ: ಸಾಯಿಬಾಬಾ ಅವರ ಮೂತ್ರಪಿಂಡದ ಖಾಯಿಲೆಯನ್ನು ವಾಸಿ ಮಾಡಬಹುದಲ್ಲ?

ಪ್ರಶ್ನೆಗೆ ಏನೂ ಉತ್ತರಿಸಲು ತೋಚದೆ ಸುಮ್ಮನಿದ್ದ ರಾಮದೇವ ನಾನು ಮೊದಲೇ ಅವರನ್ನು ಭೇಟಿ ಮಾಡಿದ್ದರೆ ಪ್ರಯತ್ನ ಮಾಡುತ್ತಿದ್ದೆ ಎಂದು ನುಣುಚಿಕೊಂಡರು.

ಮಾತನಾಡುವಾಗ ರಾಮದೇವ್ ಒಂದು ಅಭಿಪ್ರಾಯವನ್ನು ಹೇಳಿದ್ದರು. ಮೈ ಯೇ ನಹೀ ಮಾನ್ತಾ ಹೂಂ ಕಿ ಭಾರತ್ ಏಕ್ ಸೆಕ್ಯುಲರ್ ದೇಶ್ ಹೈ. ಮೈ ಯೆ ಮಾನ್ತಾ ಹೂಂ ಕಿ ಭಾರತ್ ಆಧ್ಯಾತ್ಮಿಕ್ ದೇಶ್ ಹೈ. (ನಾನು ಈ ದೇಶವನ್ನು ಜಾತ್ಯತೀತ ರಾಷ್ಟ್ರ ಎಂದು ಒಪ್ಪುವುದಿಲ್ಲ, ಭಾರತವನ್ನು ಆಧ್ಯಾತ್ಮಿಕ ರಾಷ್ಟ್ರ ಎಂದು ಕರೆಯಲು ಬಯಸುತ್ತೇನೆ)

ಪತ್ರಕರ್ತರಿಂದ ತೂರಿ ಬಂದ ಪ್ರಶ್ನೆ: ನೀವು ಸಂವಿಧಾನ ವಿರೋಧಿಯೇ?

ಅಲ್ಲ, ನಾನೆಲ್ಲಿ ಹಾಗೆ ಹೇಳಿದೆ?

ಭಾರತ ಜಾತ್ಯತೀತ ರಾಷ್ಟ್ರವೆಂದು ಸಂವಿಧಾನ ಹೇಳುತ್ತದೆ. ನೀವು ಅದನ್ನು ಒಪ್ಪೋದಿಲ್ಲವೆನ್ನುತ್ತೀರಿ. ಹಾಗಿದ್ದ ಮೇಲೆ ನೀವು ಸಂವಿಧಾನ ವಿರೋಧಿಯಾಗುವುದಿಲ್ಲವೆ?

ಸಂವಿಧಾನವನ್ನು ನಾವು ಆಗಾಗ ತಿದ್ದುಪಡಿ ಮಾಡುವುದಿಲ್ಲವೆ?

ಹೌದು, ಮಾಡುತ್ತೇವೆ. ಆದರೆ ಭಾರತ ಜಾತ್ಯತೀತ ರಾಷ್ಟ್ರವೆಂಬುದು ಸಂವಿಧಾನದ ಮೂಲ ಆಶಯ. ಅದನ್ನು ಬದಲಾಯಿಸುವುದು ಸಾಧ್ಯವಿಲ್ಲ. ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ, ಪ್ರಜಾತಾಂತ್ರಿಕ ಗಣರಾಜ್ಯ ಎಂದು ಸಂವಿಧಾನ ಘೋಷಿಸುತ್ತದೆ. ಇದೇ ಸಂವಿಧಾನದ ಮೂಲಮಂತ್ರ. ಅದನ್ನೇ ನೀವು ಒಪ್ಪೋದಿಲ್ಲ ಅಂತೀರಲ್ಲ?

ಹಾಗಲ್ಲ, ಭಾರತ ಆಧ್ಯಾತ್ಮಿಕ ರಾಷ್ಟ್ರವಾಗದಿದ್ದರೆ, ನಾಸ್ತಿಕ ದೇಶವಾಗುವ ಅಪಾಯವಿದೆ.

ನಾಸ್ತಿಕರಾಗಿರುವುದು ತಪ್ಪೆ? ಜಗತ್ತಿನ ಶ್ರೇಷ್ಠ ನಾಸ್ತಿಕರಲ್ಲೊಬ್ಬನಾದ ಚಾರ್ವಾಕ ಈ ದೇಶವನೇ ಎಂಬುದು ನಿಮಗೆ ಗೊತ್ತಿಲ್ಲವೆ?

ರಾಮದೇವ ನಿರುತ್ತರ.

ಭ್ರಷ್ಟಾಚಾರದ ವಿರುದ್ಧ ನಿಮ್ಮ ಸಮರ ನಡೆಯುತ್ತಿದೆ. ನೀವು ಬೆಂಗಳೂರಿಗೆ ಬಂದಿದ್ದೀರಿ. ಕರ್ನಾಟಕದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ದೇಶದಲ್ಲೇ ನಂ.೧ ಸ್ಥಾನ ಕರ್ನಾಟಕಕ್ಕೆ. ಹೀಗಿರುವಾಗ ಕರ್ನಾಟಕದಲ್ಲಿ ನಡೆಯುತ್ತಿರುವ, ಸರ್ಕಾರವೇ ನಡೆಸುತ್ತಿರುವ ಭ್ರಷ್ಟಾಚಾರದ ಬಗ್ಗೆ ನಿಮ್ಮ ಅಭಿಪ್ರಾಯ?

ನಾನು ಎಲ್ಲ ರೀತಿಯ, ಎಲ್ಲ ಪಕ್ಷಗಳ ಭ್ರಷ್ಟಾಚಾರದ ವಿರೋಧಿ. ಕರ್ನಾಟಕದ ಕುರಿತು ವಿಶೇಷ ಟಿಪ್ಪಣಿಯನ್ನೇನೂ ನಾನು ಹೇಳುವುದಿಲ್ಲ.

ಮಠ-ಮಾನ್ಯಗಳಲ್ಲೇ ಇವತ್ತು ಕಪ್ಪು ಹಣ ತುಂಬಿಕೊಂಡಿದೆ. ಕಪ್ಪು ಹಣ ಇರುವವರಿಗೆ ಮಠಗಳೇ ತಮ್ಮ ಹಣ ಅಡಗಿಸಲು ಸುರಕ್ಷಿತ ತಾಣಗಳಾಗಿವೆ. ಈ ಬಗ್ಗೆ ನೀವೇನು ಹೇಳುತ್ತೀರಾ?

ರಾಮದೇವ ನಿರುತ್ತರ.

ನೀವು ಭಾರತ ಆಧ್ಯಾತ್ಮಿಕ ದೇಶ ಎನ್ನುತ್ತೀರಿ. ಭ್ರಷ್ಟಾಚಾರ ನಿರ್ಮೂಲನೆಗೆ ಅಧ್ಯಾತ್ಮದ ಬಳಿ ಪರಿಹಾರವಿಲ್ಲವೆ? ನಿಮ್ಮ ಆಧ್ಯಾತ್ಮಿಕ ಬೋಧನೆಗಳಿಂದ ಭ್ರಷ್ಟಾಚಾರಿಗಳನ್ನೇಕೆ ಬದಲಾಯಿಸಬಾರದು?

ರಾಮದೇವ ನಿರುತ್ತರ.

ನಾನು ವಿವಾದಕ್ಕೆ ಸಿಲುಕಿಕೊಳ್ಳಲು ಬಯಸುವುದಿಲ್ಲ ಎಂದು ಹೇಳಿ ರಾಮದೇವ ಮಾಧ್ಯಮಗೋಷ್ಠಿ ಮುಗಿಸುತ್ತಾರೆ.

ಇವರು ಬಾಬಾ ರಾಮದೇವ. ನಾನು ಇಷ್ಟು ಕೋಟಿ ಜನರಿಗೆ ಯೋಗ ಹೇಳಿಕೊಟ್ಟಿದ್ದೇನೆ. ಇಷ್ಟು ಕೋಟಿ ಜನರಿಗೆ ಚಿಕಿತ್ಸೆ ನೀಡಿದ್ದೇನೆ. ಇಷ್ಟು ಕೋಟಿ ಜನರಿಗೆ ನನ್ನ ಸೇವೆ ತಲುಪಿದೆ. ಹೀಗೆ ರಾಮದೇವ ಮಾತಾಡುವುದೆಲ್ಲ ಕೋಟಿಗಳ ಲೆಕ್ಕದಲ್ಲಿ. ಇವತ್ತಿನ ಕನ್ನಡಪ್ರಭದಲ್ಲಿ ಪ್ರಕಟವಾಗಿರುವ ರಾಮದೇವ ಅವರ ಸಂದರ್ಶನದಲ್ಲಿ ತಮ್ಮ ಸಂಸ್ಥೆಯ ವಾರ್ಷಿಕ ವಹಿವಾಟು ೧೧೦೦ ಕೋಟಿ ರೂ.ಗಳೆಂದು ಹೇಳಿಕೊಂಡಿದ್ದಾರೆ. ಇಷ್ಟೊಂದು ಹಣ ಕೆಲವೇ ವರ್ಷಗಳಲ್ಲಿ ಹೇಗೆ ಬಂತು ಎಂದು ಜನರು ಪ್ರಶ್ನಿಸುವುದು ಸ್ವಾಭಾವಿಕವೇ ಹೌದು. ಒಂದು ಜಾತಿ ಪ್ರಮಾಣ ಪತ್ರ ಮಾಡಿಸುವುದಕ್ಕೇ ಲಂಚ ಕೊಡಬೇಕಾದ ಪರಿಸ್ಥಿತಿಯಿರುವ ಈ ದೇಶದಲ್ಲಿ ಬಾಬಾ ಅವರು ಇಷ್ಟೊಂದು ದೊಡ್ಡ ವಹಿವಾಟು ಮಾಡುವ ಸಂದರ್ಭದಲ್ಲಿ ಯಾರ ಕೈಯನ್ನೂ ಬೆಚ್ಚಗೆ ಮಾಡಿಲ್ಲವೆಂದು ನಂಬುವುದು ಹೇಗೆ ಎಂದು ಜನಸಾಮಾನ್ಯರು ಕೇಳುವುದೂ ಸಹಜವೇ ತಾನೆ?

ರಾಮದೇವರು ನಿಜವಾಗಿಯೂ ಕ್ಯಾನ್ಸರ್‌ಗೆ, ಏಡ್ಸ್‌ಗೆ ಔಷಧ ಕಂಡುಹಿಡಿದಿದ್ದರೆ ಅದನ್ನು ಸಾಬೀತುಪಡಿಸಿ, ದೇಶದ ಎಲ್ಲ ಕ್ಯಾನ್ಸರ್, ಏಡ್ಸ್ ಆಸ್ಪತ್ರೆಗಳಲ್ಲಿ ಸಾಯುತ್ತ ಬಿದ್ದಿರುವ ಲಕ್ಷಾಂತರ ರೋಗಿಗಳನ್ನೇಕೆ ಗುಣಪಡಿಸಬಾರದು? ಇದೊಂದನ್ನು ಮಾಡಿದರೆ ಇಡೀ ದೇಶ ಮತ್ತು ಮುಂದಿನ ಪೀಳಿಗೆ ರಾಮದೇವ ಅವರಿಗೆ ಋಣಿಗಳಾಗಿ ಇರುವುದಿಲ್ಲವೆ?

ರಾಮದೇವರಿಗೆ ಈಗಾಗಲೇ ಬಿಜೆಪಿ, ಆರ್‌ಎಸ್‌ಎಸ್, ಅಣ್ಣಾ ಹಜಾರೆ ಹೀಗೆ ಹಲವು ವಲಯಗಳಿಂದ ಬೆಂಬಲ ಹರಿದುಬಂದಿದೆ. ನಾಳೆ ಕಾಂಗ್ರೆಸ್ಸೋ, ಜೆಡಿಎಸ್ಸೋ ಇನ್ನೊಂದೋ ಬೆಂಬಲ ಕೊಡಬಹುದು. ಸತ್ಯಾಗ್ರಹ ದೊಡ್ಡ ಮಟ್ಟದಲ್ಲಿ ನಡೆಯಲೂ ಬಹುದು. ಹೊಸ ರಾಜಕೀಯ ಪಕ್ಷ ರಚಿಸಲು ತುದಿಗಾಲಲ್ಲಿ ನಿಂತಿರುವ ರಾಮದೇವರಿಗೆ ಇದೊಂದು ದೊಡ್ಡ ಮಟ್ಟದ ಲಾಂಚಿಂಗ್ ಪ್ಯಾಡ್ ಕೂಡ ಆಗಬಹುದು.

ಆದರೆ ನಮ್ಮ ಪ್ರಶ್ನೆ ಸರಳವಾಗಿದೆ. ರಾಮದೇವ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು. ಅಧ್ಯಾತ್ಮ ಜನರ ಜೀವನ ದೃಷ್ಟಿ, ವಿಧಾನವನ್ನು ಬದಲಿಸಬೇಕು. ಮಾನವೀಯತೆಯನ್ನು ಬೋಧಿಸಬೇಕು. ದೇಶದಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ. ಸಾಮಾಜಿಕ ಶ್ರೇಣೀಕರಣದಿಂದ ದೇಶದ ಅಂತಃಸತ್ವವೇ ನಾಶವಾಗಿದೆ. ಎಲ್ಲರಿಗೂ ನೀರು-ನೆರಳು ಕೊಡಬೇಕಿದ್ದ ಧರ್ಮವೇ ಜನರನ್ನು ಶೋಷಿಸುವ ಸಲಕರಣೆಯಾಗಿದೆ. ಬಡತನ, ರೋಗರುಜಿನದಿಂದ ಜನ ನರಳುತ್ತಿದ್ದಾರೆ. ಅಭಿವೃದ್ಧಿಯ ಹೆಸರಲ್ಲಿ ಅಮಾಯಕ ಜನರು ಬೀದಿಪಾಲಾಗಿದ್ದಾರೆ. ರೈತರು-ಕೂಲಿಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭಾರತವನ್ನು ಆಧ್ಯಾತ್ಮಿಕ ರಾಷ್ಟ್ರವೆಂದು ಘೋಷಿಸುವ ರಾಮದೇವ ಭಾರತದ ಹೀನ ಸಾಮಾಜಿಕ ವ್ಯವಸ್ಥೆಯನ್ನು ಬದಲಿಸಲು ಏನನ್ನಾದರೂ ಮಾಡಿದ್ದಾರೆಯೇ? ಅಧ್ಯಾತ್ಮ ಜೀವಿಗಳ ಮೊದಲ ಕರ್ತವ್ಯವೇ ಸಮಾಜದ ಇಂಥ ಹೀನಾತಿಹೀನ ಕೊಳಕುಗಳನ್ನು ನಿರ್ಮೂಲನೆ ಮಾಡುವುದಲ್ಲವೆ?

ಅಷ್ಟಕ್ಕೂ ಸಂವಿಧಾನದ ಮೂಲತತ್ತ್ವವನ್ನೇ ಒಪ್ಪದ ಇಂಥ ಮನುಷ್ಯರು ಪ್ರಜಾಪ್ರಭುತ್ವ ದೇಶದಲ್ಲಿ ಸತ್ಯಾಗ್ರಹ ನಡೆಸುತ್ತಾರೆ ಎನ್ನುವುದೇ ಅಪಹಾಸ್ಯದ ವಿಷಯ.

ಸ್ವಾಮಿಗಳು, ಸಂನ್ಯಾಸಿಗಳು, ಧರ್ಮಗುರುಗಳು ತಮ್ಮನ್ನು ದೇಶಕ್ಕಿಂತ, ದೇಶದ ಸಂವಿಧಾನಕ್ಕಿಂತ, ಪ್ರಜಾಪ್ರಭುತ್ವ ವ್ಯವಸ್ಥೆಗಿಂತ ದೊಡ್ಡವರೆಂದು ಭಾವಿಸಿರುತ್ತಾರೆ, ಅಥವಾ ಹಾಗೆ ಭಾವಿಸಿದಂತೆ ವರ್ತಿಸುತ್ತಾರೆ. ಅದಕ್ಕಾಗಿಯೇ ಅವರು ಕಿರೀಟ, ಪಲ್ಲಕ್ಕಿ, ಸಿಂಹಾಸನಗಳಲ್ಲೇ ಮುಳುಗಿ ಕೊಳೆತು ಹೋಗಿದ್ದಾರೆ. ರಾಮದೇವ ತನ್ನನ್ನು ತಾನು ಸರಳ ಎಂದು ಹೇಳಿಕೊಂಡರೂ ಸ್ವಾಮಿತ್ವದ ಅಹಂ ಕಳೆದುಕೊಂಡ ಹಾಗೆ ಕಾಣುತ್ತಿಲ್ಲ. ಹೀಗಾಗಿಯೇ ದೇಶದ ಸಂವಿಧಾನದ ಮೂಲ ಅಂಶವನ್ನೇ ತಾನು ಒಪ್ಪುವುದಿಲ್ಲ ಎಂಬ ಹೇಳಿಕೆ ನೀಡುತ್ತಾರೆ.

೮೦೦ ಭಾಷೆಗಳಿರುವ, ೨೨ ಅಧಿಕೃತ ಭಾಷೆಗಳಿರುವ ಈ ಭಾಷಾ ವೈವಿಧ್ಯದ ದೇಶದಲ್ಲಿ ಹಿಂದಿಯನ್ನು ಜಪಾನಿ ಮತ್ತು ಚೀನೀ ಭಾಷೆಯ ಹಾಗೆ ದೇಶದಾದ್ಯಂತ ಬೆಳೆಸಬೇಕು ಎಂದು ರಾಮದೇವ ಹಗುರವಾಗಿ, ಬಾಲಿಷವಾಗಿ ಮಾತನಾಡುತ್ತಾರೆ. ದೇಶದ ಬಹುಭಾಷಾ, ಬಹುಸಂಸ್ಕೃತಿಯ ವಿನ್ಯಾಸವೇ ಗೊತ್ತಿಲ್ಲದ, ಸಂವಿಧಾನವನ್ನೂ ಒಪ್ಪದ ಇಂಥವರು ಸತ್ಯಾಗ್ರಹಕ್ಕೆ ಇಳಿದರೆ, ನಮ್ಮ ಮಾಧ್ಯಮಗಳು ವೈಭವೀಕರಿಸಿ ದೊಡ್ಡಮಟ್ಟದ ಪ್ರಚಾರ ನೀಡುತ್ತವೆ. ಜನಪರವಾದ ಇತರ ಚಳವಳಿಗಳಿಗೂ ನಮ್ಮ ಮೀಡಿಯಾ ಇದೇ ರೀತಿ ಪ್ರಚಾರ ನೀಡಿದ್ದಿದೆಯೇ?

ಇಂಥವರ ಸೊ ಕಾಲ್ಡ್ ಸತ್ಯಾಗ್ರಹವನ್ನು ಬೆಂಬಲಿಸಬೇಕೆ? ನಿರ್ಧಾರ ಭಾರತೀಯರದ್ದು.
0 komentar

Blog Archive