ಬ್ಲಾಗ್ ಜಗತ್ತಿನ ತುಂಬ ಪತ್ರಿಕೋದ್ಯಮದ ವಾಚ್‌ಡಾಗ್‌ಗಳು ತುಂಬಿಕೊಳ್ಳುತ್ತಿದ್ದಾರೆ. ಕೆಲವರು ಹಿಂದೆಮುಂದೆ ನೋಡದೆ ಸ್ವಾರಸ್ಯಕರ ಗಾಸಿಪ್, ಅರೆಬರೆ ಮಾಹಿತಿ, ತಪ್ಪು ಅರ್ಥ ಕೊಡುವ ಸುದ್ದಿಗಳನ್ನೆಲ್ಲ ಪ್ರಕಟಿಸುತ್ತಿದ್ದಾರೆ. ಕೆಲವರು ಚೆನ್ನಾದ ವಿಶ್ಲೇಷಣೆ ನಡೆಸ್ತಿದ್ದರೂ ನಡುನಡುವೆ ಬಕೆಟ್ ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ. (ಬಕೆಟ್ ಈಗ ಸಖತ್ ಚಾಲ್ತಿಯಲ್ಲಿರುವ ಪದ. ಅದಕ್ಕೆ ಪರ್ಯಾಯ ಸಿಗ್ತಿಲ್ಲ). ಯಾರಿಗೂ ಇದರ ಪರಿಣಾಮದ ಅರಿವು ಇದ್ದ ಹಾಗಿಲ್ಲ. ಪತ್ರಿಕೆ, ವೆಬ್‌ಗಳಲ್ಲಿ ಬರುತ್ತಿರುವ ಸುದ್ದಿಗಳಿಂದಾಗಿ ಜರ್ನಲಿಸಮ್ ವಿದ್ಯಾರ್ಥಿಗಳು, ಅದರಲ್ಲೂ ಹೆಣ್ಣುಮಕ್ಕಳು ಇತ್ತ ತಲೆ ಹಾಕಲು ಹೆದರುವಂಥ ಮಾಹೋಲ್ ನಿರ್ಮಾಣವಾಗ್ತಿದೆ. ಇಷ್ಟು ದಿನ ಜನ ರಾಜಕಾರಣ ಅಂದರೆ ಮೂಗು ಮುರೀತಿದ್ದರು, ಇನ್ನು ಖಚಡಾ ಕೆಲಸಕ್ಕೆಲ್ಲ ಇದೇನು ಜರ್ನಲಿಸಮ್ಮಾ ಅಂತ ಕೇಳುವ ಕಾಲವೂ ಬರಬಹುದು.

ಹೀಗಂತ ಬರೆದಿದ್ದವರು ಲೇಖಕಿ, ಪತ್ರಕರ್ತೆ ಚೇತನಾ ತೀರ್ಥಹಳ್ಳಿ. (ತಸ್ಲೀಮಾ ನಸ್ರೀನ್, ಜೆಪಿ, ಚೇತನಾ ತೀರ್ಥಹಳ್ಳಿ ಮತ್ತು ಒಂದು ವಿವಾದ ಪೋಸ್ಟ್ ನೋಡಿ)

ಮಾಧ್ಯಮರಂಗಕ್ಕೆ ಹೊಸಹುರುಪಿನ ಯುವಕ-ಯುವತಿಯರು ಹೆಚ್ಚುಹೆಚ್ಚಾಗಿ ತೊಡಗಿಸಿಕೊಳ್ಳಬೇಕೆಂಬುದು ನಮ್ಮ ಬಯಕೆ. ಈ ಯುವಕ-ಯುವತಿಯರಿಗೆ ಜನಪರ ಕಾಳಜಿಗಳಿರಬೇಕು ಎಂಬುದು ನಮ್ಮ ಬೇಡಿಕೆ. ಹೀಗಾಗಿ ಯಾವುದನ್ನೂ ಅತಿರಂಜಿಸದೆ, ಯಾರನ್ನೂ ವೈಯಕ್ತಿಕ ತೇಜೋವಧೆ ಮಾಡದೆ, ಇಶ್ಯೂ ಬೇಸ್ಡ್ ಆಗಿಯೇ ಈ ಬ್ಲಾಗ್ ನಡೆಸಿಕೊಂಡು ಹೋಗುತ್ತಿದ್ದೇವೆ. ನಮ್ಮಿಂದ ತಪ್ಪಾದರೆ, ದಯವಿಟ್ಟು ಹೇಳಿ. ಮಾಧ್ಯಮ ರಂಗವೂ ಚರ್ಚೆ, ಟೀಕೆಗಳಿಂದ ಹೊರತಾಗಿರಬಾರದು ಎಂಬುದಷ್ಟೆ ನಮ್ಮ ಉದ್ದೇಶ. ಒಂದು ವೇಳೆ ಈ ಬ್ಲಾಗ್ ಮಾಧ್ಯಮದ ಒಟ್ಟಾರೆ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ನಿಮಗನ್ನಿಸಿದರೆ ಯಾವುದೇ ಸಂದರ್ಭದಲ್ಲಿ ಇದನ್ನು ನಿಲ್ಲಿಸಿಬಿಡಲೂ ನಾವು ಸಿದ್ಧ.

ಯಾಕೆ ಇದೆನ್ನೆಲ್ಲ ಹೇಳಿದೆವೆಂದರೆ ಒಂದು ಆಘಾತಕಾರಿ ಸುದ್ದಿ ಹೊರಬಂದಿದೆ. ಇದನ್ನು ಇಲ್ಲಿ ಹೇಳದೆ ಬೇರೆ ನಿರ್ವಾಹವಿಲ್ಲ. ಪ್ರಮುಖ ಪತ್ರಿಕೆಯೊಂದರ ಬ್ಯೂರೋ ಮುಖ್ಯಸ್ಥರಿಂದ ನಿನ್ನೆ ರಾಜೀನಾಮೆ ಪಡೆದು ಹೊರಹಾಕಲಾಗಿದೆ.  ಆತ ತನ್ನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಯೊಬ್ಬರಿಗೆ ಅಶ್ಲೀಲ ಇ-ಮೇಲ್ ಕಳುಹಿಸಿದ್ದು ಇದಕ್ಕೆ ಕಾರಣ. ಈ ಇ-ಮೇಲ್ ಅನ್ನು ನೇರವಾಗಿ ಪತ್ರಿಕೆಯ ಸಂಪಾದಕರಿಗೆ ರವಾನಿಸಿದ ದಿಟ್ಟ ಮಹಿಳೆ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಸಂಪಾದಕರೂ ಹಿಂದೆಮುಂದೆ ನೋಡದೆ ಬ್ಯೂರೋ ಮುಖ್ಯಸ್ಥರನ್ನು ಸೇವೆಯಿಂದ ಕಿತ್ತು ಹಾಕುವ ನಿರ್ಧಾರ ತೆಗೆದುಕೊಂಡಿದ್ದಾರೆ. ಕಡೆಗೆ ಬ್ಯೂರೋ ಮುಖ್ಯಸ್ಥನ ಮನವಿಯ ಮೇರೆಗೆ ಆತನಿಂದ ರಾಜೀನಾಮೆ ಪಡೆದು ಸಾಗಹಾಕಲಾಗಿದೆ.

ಈ ಬ್ಯೂರೋ ಮುಖ್ಯಸ್ಥರ ಮೇಲೆ ಆರೋಪಗಳ ಮಹಾಪೂರವೇ ಹಿಂದಿನಿಂದಲೇ ಇದ್ದವು. ಆದರೂ ಆತನನ್ನು ಕಾಣದ ಕೈಗಳು ರಕ್ಷಿಸುತ್ತಲೇ ಬಂದಿದ್ದವು. ಈತನ ವಿರುದ್ಧದ ಆರೋಪಗಳ ಕುರಿತು ಹಿಂದೆ ಸಂಪಾದಕೀಯದಲ್ಲೂ ತಾವು ಓದಿರುತ್ತೀರಿ. ದೂರು ಕೊಟ್ಟ ಮಹಿಳೆಯ ಹೆಸರು ಬಹಿರಂಗವಾಗಬಾರದು ಎಂಬ ಕಾರಣಕ್ಕೆ ಇಡೀ ಘಟನೆಯ ಸಂಸ್ಥೆ, ವ್ಯಕ್ತಿಗಳ ಹೆಸರನ್ನು ನಾವು ಇಲ್ಲಿ ಕಾಣಿಸುತ್ತಿಲ್ಲ.

ಇದು ಕೇವಲ ಒಂದು ಅಶ್ಲೀಲ ಇ-ಮೇಲ್‌ನಿಂದ ಆಗಿರುವ ರಾದ್ಧಾಂತದಂತೆ ಕಾಣುತ್ತಿಲ್ಲ. ನೊಂದ ಮಹಿಳೆ ಲೈಂಗಿಕ ಕಿರುಕುಳದ ದೂರನ್ನೂ ನೀಡಿದ್ದಾರೆ ಎಂಬ ಮಾಹಿತಿಯಿದೆ. ಇದು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವ ಎಲ್ಲ ಸಾಧ್ಯತೆಗಳೂ ಇದ್ದಿದ್ದರಿಂದಾಗಿ ಪತ್ರಿಕಾ ಸಂಸ್ಥೆ ಆತುರಾತುರವಾಗಿ ಕ್ರಮ ಕೈಗೊಂಡಿದೆ. ಪತ್ರಕರ್ತ ದೊಡ್ಡ ಶಿಕ್ಷೆಯಿಂದ ಪಾರಾಗಿ ಚಿಕ್ಕ ಶಿಕ್ಷೆ ಅನುಭವಿಸಿದ್ದಾನೆ.

ಇದು ಒಂದು ಘಟನೆ ಮಾತ್ರವಲ್ಲ. ಇಂಥದ್ದು ಅಲ್ಲಲ್ಲಿ, ಆಗಾಗ ನಡೆಯುತ್ತಲೇ ಇವೆ. ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಸುದ್ದಿಸಂಪಾದಕರೊಬ್ಬರು ತಮ್ಮ ಅಧೀನ ಮಹಿಳಾ ಸಿಬ್ಬಂದಿಗೆ ಮದುವೆಯಾಗು ಎಂದು ಪೀಡಿಸಿದ ಪರಿಣಾಮ ಇತ್ತೀಚಿಗೆ ಆಕೆ ಪತ್ರಿಕೆಯನ್ನೇ ತೊರೆದುಹೋದರು. ದೊಡ್ಡ ಸ್ಥಾನದಲ್ಲಿ ಕುಳಿತ ಕೆಲ ಕೀಚಕ ಪತ್ರಕರ್ತರು ತಮ್ಮ ಕೈಕೆಳಗಿನ ಮಹಿಳೆಯರನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಆದರೆ ಇದ್ಯಾವುದೂ ಸುದ್ದಿಯಾಗುವುದಿಲ್ಲ. ಯಾಕೆಂದರೆ ಸುದ್ದಿ ಮಾಡುವವರೇ ಇಲ್ಲಿ ಆರೋಪಿಗಳು.

ನಿಜ, ಇದು ಕೇವಲ ಮಾಧ್ಯಮರಂಗದ ಸಮಸ್ಯೆ ಮಾತ್ರವಲ್ಲ. ಉದ್ಯೋಗಸ್ಥ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಇಂಥ ಕಿರುಕುಳಗಳನ್ನು ಅನುಭವಿಸುತ್ತಿದ್ದಾರೆ. ಇಂಥ ಕೀಚಕರನ್ನು ಎದುರಿಸುವ ಧೈರ್ಯ, ಸಾಮರ್ಥ್ಯವನ್ನು ಮಹಿಳೆಯರು ಬೆಳೆಸಿಕೊಳ್ಳಲೇಬೇಕು. ಈ ಪ್ರಕರಣದಲ್ಲಿ ಆದಂತೆ ಇಂಥವರನ್ನು ಮನೆಗೆ, ಜೈಲಿಗೆ ಅಟ್ಟುವ ಸಾಹಸವನ್ನು ತೋರಬೇಕಿದೆ.

ಹಾಗಂತ ಇಡೀ ಮಾಧ್ಯಮರಂಗದವೇ ಇಂಥ ಕೀಚಕರಿಂದ ತುಂಬಿದೆ ಎಂದು ಯಾರೂ ಭಾವಿಸಬೇಕಿಲ್ಲ. ಕೀಚಕ ಸಂತಾನ ಎಲ್ಲೆಡೆ ಇರುವಂತೆ ಇಲ್ಲೂ ಇವೆ ಎಂಬುದನ್ನಷ್ಟೆ ನಾವಿಲ್ಲಿ ಗ್ರಹಿಸಬೇಕಾಗಿದೆ. ಕನಿಷ್ಠ ಪಕ್ಷ ಇಂಥ ಆರೋಪಗಳನ್ನು ಹೊತ್ತಿರುವ ಪತ್ರಕರ್ತರನ್ನು ಆತನ ಅರ್ಹತೆ, ಅನುಭವ, ಸಾಮರ್ಥ್ಯ ಇತ್ಯಾದಿ ಯಾವುದನ್ನೂ ಪರಿಗಣಿಸದೆ ಇತರ ಸಂಸ್ಥೆಗಳು ಮತ್ತೆ ಕೆಲಸ ಕೊಡಲು ಹೋಗದಿರಲಿ ಎಂಬುದು ನಮ್ಮ ಆಶಯ. ಚೇತನಾ ಅವರು ಹೇಳಿದಂತೆ ಹೆಣ್ಣುಮಕ್ಕಳು ಇತ್ತ ತಲೆಹಾಕದಂತಹ ಮಾಹೋಲ್ ನಿರ್ಮಾಣವಾಗುವುದು ಬೇಡ.

ಇದನ್ನು ಬರೆಯುತ್ತಿರುವ ಈ ಸಂದರ್ಭದಲ್ಲಿ ಮನಸ್ಸಿಗೆ ಕಸಿವಿಸಿ, ವಿಷಾದ. ಇಂಥ ಪ್ರಕರಣಗಳ ಸಂದರ್ಭದಲ್ಲಿ ಮಾಧ್ಯಮ ಸಂಸ್ಥೆಗಳು ಜೀರೋ ಟಾಲರೆನ್ಸ್ ಇಟ್ಟುಕೊಳ್ಳಲಿ. ಇಂಥ ವರದಿಗಳನ್ನು ಬರೆಯುವ ಸಂದರ್ಭ ಮತ್ತೆಂದೂ ನಮಗೆ ಒದಗಿಬರದಿರಲಿ. ಒಬ್ಬ ಕೀಚಕ ತೊಲಗಿದ್ದಾನೆ, ಉಳಿದವರೂ ತೊಲಗಲಿ.
0 komentar

Blog Archive