ನಮ್ಮ ನಿರೀಕ್ಷೆ ಹುಸಿಯಾಗಲಿಲ್ಲ. ಸಂವೇದನಾಶೀಲರಾದ ಸುರೇಶ್ ಕುಮಾರ್ ಅವರು ನಮ್ಮ ಬಹಿರಂಗ ಪತ್ರಕ್ಕೆ ಉತ್ತರಿಸಿದ್ದಾರೆ. ನಿನ್ನೆ ಪತ್ರವನ್ನು ಅವರಿಗೆ ಮೇಲ್ ಮಾಡಿದ ಕೆಲವೇ ಗಂಟೆಗಳಲ್ಲಿ ಸ್ಪಂದಿಸಿದ್ದಾರೆ. ಇದು ಅವರ ಸೌಜನ್ಯ ಮತ್ತು ಕಳಕಳಿಗೆ ಸಾಕ್ಷಿ. ನಗರಾಭಿವೃದ್ಧಿ ಸಚಿವರು ಕೆ.ಜಿ.ಎಫ್‌ಗೇ ತೆರಳಿ ಖುದ್ದು ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ. ಆದಷ್ಟು ಬೇಗ ಕೆಜಿಎಫ್‌ನ ಆ ಅಸಹಾಯಕ ಜನರಿಗೆ ನ್ಯಾಯ ದೊರಕಲಿ ಎಂದು ಆಶಿಸೋಣ.

ಸುರೇಶ್ ಕುಮಾರ್ ಅವರು ಬರೆದ ಪತ್ರ ಹೀಗಿದೆ.

ಪ್ರಿಯ ಸಂಪಾದಕರೆ


ನಿಮ್ಮ ಪತ್ರ ಓದಿದ್ದೇನೆ. ಮಲ ಹೊರುವ ಅನಿಷ್ಟ ಪದ್ದತಿಯನ್ನು ನಿಷೇಧಿಸಿರುವ ಬಗ್ಗೆ ನಾನು ಹೇಳಿರುವುದು  ನಿಜ. ಸರ್ಕಾರವೂ ಈ ಅಮಾನವೀಯ ಪದ್ದತಿಯ ನಿಷೇಧದ ಬಗ್ಗೆ ಗಂಭೀರ ಕ್ರಮಗಳನ್ನೇ ಕೈಗೊಂಡಿದೆ. ಆದರೂ ನಿಮ್ಮ ಇ- ಮೇಲ್ ನಲ್ಲಿ ವಿವರಿಸಿರುವ ಅಂಶಗಳು ನನ್ನನ್ನು ನಿಜಕ್ಕೂ ಚಿಂತೆಗೀಡು ಮಾಡಿದೆ. ನಾನು ಇಷ್ಟರಲ್ಲಿಯೇ ಕೆಜಿಎಫ್‌ನ ಈ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿಯನ್ನು ಅರಿಯುವ, ತಕ್ಷಣ ಪರಿಹಾರ ದೊರಕಿಸುವ ಪ್ರಯತ್ನ ಮಾಡುತ್ತೇನೆ. 


ನಿಮ್ಮ/ಅಧ್ಯಯನ ಕೈಗೊಂಡಿರುವ ಪರಿಣಿತರ ಸಂಪರ್ಕ ಸಂಖ್ಯೆ ನೀಡಿದಲ್ಲಿ ನಿಜಕ್ಕೂ ಉತ್ತಮವಾದೀತು. 


ಅದರಗಳೊಂದಿಗೆ


ಎಸ್ ಸುರೇಶ್ ಕುಮಾರ್

ದಯಾನಂದ್
ಕೆ.ಜಿ.ಎಫ್ ಮಾತ್ರವಲ್ಲ, ರಾಜ್ಯದ ವಿವಿಧ ಭಾಗಗಳಲ್ಲಿ ಇನ್ನೂ ಚಾಲ್ತಿಯಲ್ಲಿರುವ ಮಲಹೊರುವ ಪದ್ಧತಿ ಸಂಪೂರ್ಣ ತೊಲಗಬೇಕಿದೆ. ಸುರೇಶ್ ಕುಮಾರ್‌ರಂಥ ಸಚಿವರು ಈ ಬಗ್ಗೆ ಎಷ್ಟೇ ಕಾಳಜಿ ವಹಿಸಿದರೂ, ನಮ್ಮ ಅಧಿಕಾರಿಗಳು ಸುಳ್ಳು ಮಾಹಿತಿ ಕೊಡುತ್ತ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ದಯಾನಂದ್ ಮತ್ತು ಅವರ ತಂಡದವರ ಅಧ್ಯಯನದ ವಿವರಗಳು ಅನುಕೂಲಕ್ಕೆ ಬರಬಹುದು. ದಯಾನಂದ್ ಈಗಾಗಲೇ ಕೆ.ಜಿ.ಎಫ್‌ಗೆ ಸಂಬಂಧಿಸಿದ ಅಧ್ಯಯನ ವರದಿಯೊಂದನ್ನು ಸಿದ್ಧಪಡಿಸಿದ್ದಾರೆ. ಬೇರೆ ಬೇರೆ ಜಿಲ್ಲೆಗಳ ಮಾಹಿತಿಗಳನ್ನು ಸಚಿವರಿಗೆ ಒದಗಿಸುವ ಮೂಲಕ ಮಲ ಹೊರುವ ಪದ್ಧತಿ ಸಂಪೂರ್ಣ ಕಿತ್ತೊಗೆಯುವ, ಆ ಕಾಯಕ ನಡೆಸುತ್ತಿರುವವರಿಗೆ ಸೂಕ್ತ ಜೀವನೋಪಾಯ ಕಲ್ಪಿಸುವ ಕಾರ್ಯಕ್ಕಾಗಿ ಸಾಮಾಜಿಕ ಸಂಘಟನೆಗಳು ಮುಂದಾಗಬೇಕಿದೆ. ಸದ್ಯಕ್ಕಂತೂ ಸಚಿವರಿಗೆ ಸೂಕ್ತ ಮಾಹಿತಿ, ದಾಖಲೆಗಳನ್ನು ಒದಗಿಸುವ ಕಾರ್ಯ ಮಾಡಲಿದ್ದೇವೆ.

ಅಂದ ಹಾಗೆ ಬರುವ ಮಂಗಳವಾರವೇ (21-6-2011) ಸಚಿವರು ಕೆ.ಜಿ.ಎಫ್ ಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಪರಿಶೀಲಿಸಲಿದ್ದಾರೆ.

ಈ ಗಂಭೀರ ವಿದ್ಯಮಾನದ ಕುರಿತು ಬೆಳಕು ಚೆಲ್ಲಿದ ದಯಾನಂದ್ ಅವರಿಗೆ ಹಾಗು ಈ ಬಗ್ಗೆ ನಮ್ಮ ಪತ್ರಕ್ಕೆ ಶೀಘ್ರವಾಗಿ ಸ್ಪಂದಿಸಿದ ಸಚಿವ ಸುರೇಶ್ ಕುಮಾರ್ ರವರಿಗೆ ಸಂಪಾದಕೀಯ ತಂಡ ಹೃತ್ಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತದೆ.
0 komentar

Blog Archive