ಸೋಷಿಯಲ್ ನೆಟ್ ವರ್ಕ್ ಸೈಟುಗಳಲ್ಲಿ ಇರುವ ಅತಿಯಾದ ಸ್ವಾತಂತ್ರ್ಯವನ್ನು ಸ್ವೇಚ್ಛೆಯನ್ನಾಗಿ ಬಳಸಿಕೊಳ್ಳುವವರ ಸಂಖ್ಯೆಗೇನು ಕೊರತೆಯಿಲ್ಲ. ಕೊಳಕರು ಇಲ್ಲಿ ಸುಲಭವಾಗಿ ಬಯಲಾಗುತ್ತಾರೆ. ಯಾಕೆಂದರೆ ಕೊಳಕನ್ನು ಹಾಗೆ ಮುಚ್ಚಿಟ್ಟುಕೊಳ್ಳುವುದು, ಹತ್ತಿಕ್ಕಿಕೊಳ್ಳುವುದು ಕಷ್ಟದ ಕೆಲಸ. ಬಾಬಾ ರಾಮದೇವರ ಮ್ಯಾಚ್ ಫಿಕ್ಸಿಂಗ್ ಸತ್ಯಾಗ್ರಹದ ಕುರಿತು ಬರೆದ ನಂತರ ನಮ್ಮ ಫೇಸ್‌ಬುಕ್‌ನಲ್ಲೂ ಇಂಥವರು ಕೊಳಕರು ತಮ್ಮ ಹುಳುಕುಗಳನ್ನೆಲ್ಲ ಪ್ರದರ್ಶಿಸಿದರು. ಅನಿವಾರ್ಯವಾಗಿ ಕನಿಷ್ಠ ೧೦ ಜನರನ್ನು ಬ್ಲಾಕ್ ಮಾಡಿ ದೂರವಿಡಬೇಕಾಯಿತು.
ಯಾಕೆ ಈ ಪ್ರಸ್ತಾಪ ಮಾಡಬೇಕಾಯಿತು ಎಂದರೆ, ಮೂಲತಃ ಚಂಡಿಗಢದವನಾಗಿದ್ದು ಸದ್ಯ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ರಾಬಿನ್ ಚುಗ್ ಎಂಬಾತ ತನ್ನ ಫೇಸ್‌ಬುಕ್‌ನಲ್ಲಿ ಕನ್ನಡ ಕಲಿಕೆ ಕಡ್ಡಾಯ ಪ್ರಸ್ತಾಪಕ್ಕೆ ಫಕ್ ಆಫ್ ಎಂದು ಬರೆದುಕೊಂಡು ಫಜೀತಿಗೆ ಸಿಲುಕಿದ್ದಾನೆ.ಇದನ್ನು ಶುರು ಮಾಡಿದವರು ಬೆಂಗಳೂರು ಮಿರರ್ ಎಂಬ ಪತ್ರಿಕೆಯೋರು. ಇತ್ತೀಚಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದರು. ಪರಭಾಷಿಗರು ಕಡ್ಡಾಯವಾಗಿ ಕನ್ನಡ ಕಲಿತುಕೊಳ್ಳುವಂಥ ಕಾನೂನೊಂದನ್ನು ರೂಪಿಸಬೇಕು ಎಂಬ ಅಂಶವೂ ವರದಿಯಲ್ಲಿತ್ತು. ಈ ವರದಿಯನ್ನು ಕುರಿತಾಗಿ ಮಿರರ್ ವರದಿಯೊಂದನ್ನು ಪ್ರಕಟಿಸಿತು.
ಇಂಗ್ಲಿಷ್ ಪತ್ರಿಕೆಗಳಿಗೆ ಪರಭಾಷಾ ಓದುಗರನ್ನು ಓಲೈಸುವ ವಿಚಿತ್ರ ಖಾಯಿಲೆ ಮೊದಲಿನಿಂದಲೂ ಇದೆ. ಪರಭಾಷಿಗರನ್ನು ಓಲೈಸಲು ಕನ್ನಡಿಗರನ್ನು ಹಣಿಯುವ ಅವಕಾಶವನ್ನು ಈ ಪತ್ರಿಕೆಗಳು ಯಾವತ್ತೂ ಕಳೆದುಕೊಂಡೇ ಇಲ್ಲ. ಟೈಮ್ಸ್ ಆಫ್ ಇಂಡಿಯಾ ಮೊದಲಿನಿಂದಲೂ ಇದನ್ನು ಮಾಡುತ್ತಲೇ ಬಂದಿದೆ. ಹಿರಿಯಣ್ಣನ ಚಾಳಿ ಮನೆ ಮಕ್ಕಳಿಗೆಲ್ಲ ಬಂದಿದೆ. ಮಿರರ್ ಕೂಡ ಅದನ್ನೇ ಮಾಡಲು ಹೋಗಿದೆ.
ವರದಿಯ ಇತರ ಅಂಶಗಳಿಗಿಂತ ಮಿರರ್ ಹೆಚ್ಚು ಒತ್ತು ನೀಡಿರುವುದು ಈ ಕನ್ನಡ ಕಲಿಕೆಯ ಪ್ರಸ್ತಾಪಕ್ಕೆ. ಈ ಮೂಲಕ ಬೆಂಗಳೂರಿನಲ್ಲಿರುವ ಪರಭಾಷಿಗರನ್ನು ಪ್ರಚೋದಿಸುವ ಉದ್ದೇಶ ಮಿರರ್‌ಗೆ ಇತ್ತಾ, ಗೊತ್ತಿಲ್ಲ. ಆದರೆ ಬೆಂಗಳೂರು ಮಿರರ್‌ನ ಆನ್‌ಲೈನ್ ಆವೃತ್ತಿಯಲ್ಲಿ ಪ್ರಕಟವಾಗಿರುವ ಕಮೆಂಟುಗಳನ್ನು ನೋಡಿದರೆ ಈ ಉದ್ದೇಶ ಇದ್ದಿರಬೇಕು ಎಂಬುದು ಸ್ಪಷ್ಟವಾಗಿದೆ. ಕೆಲವು ಕನ್ನಡ ಪರ ಅಂತರ್ಜಾಲಿಗರ ಪ್ರಕಾರ ಕನ್ನಡಿಗರನ್ನು ನಿಂದಿಸುವ ಕಮೆಂಟುಗಳನ್ನು ಹಾಗೆ ಬಿಟ್ಟಿರುವ ಪತ್ರಿಕೆ, ಕನ್ನಡಿಗರ ಪ್ರತಿಕ್ರಿಯೆಗಳಿಗೆ ಕತ್ತರಿ ಆಡಿಸಿದೆ.
ಅಲ್ಲಿ ಕಮೆಂಟು ಮಾಡಿರುವವರು, ಮಿರರ್‌ನಂಥ ಪತ್ರಿಕೆಗಳ ಪತ್ರಕರ್ತರು ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಹೊರರಾಜ್ಯಗಳಿಂದ ಇಲ್ಲಿ ಬಂದು ನೆಲೆ ನಿಂತವರು ಕನ್ನಡ ಭಾಷೆ ಕಲಿತು ಇಲ್ಲಿಯವರೊಂದಿಗೆ ಬೆರೆಯಬೇಕು ಎಂದು ಅಪೇಕ್ಷಿಸುವುದು ಅಪರಾಧವೂ ಅಲ್ಲ, ಅನೈತಿಕವೂ ಅಲ್ಲ. ಭಾರತ ಒಂದು ಗಣರಾಜ್ಯ ಎಂಬುದನ್ನು ಮೊದಲು ಒಪ್ಪಿಕೊಳ್ಳಬೇಕು. ಯಾರು ಬೇಕಾದರೂ ಎಲ್ಲಾದರೂ ಬದುಕಬಹುದು ಎಂಬುದು ಸಂವಿಧಾನ ಕೊಟ್ಟಿರುವ ಸ್ವಾತಂತ್ರ್ಯ. ಯಾರು, ಎಲ್ಲಿ, ಹೇಗೆ ಬೇಕಾದರೂ ಬದುಕಬಹುದು ಎಂದು ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿಲ್ಲ.
ಕನ್ನಡಿಗರಿಗೆ ಅಗತ್ಯವಿಲ್ಲದ ಹಿಂದಿ ಭಾಷೆಯನ್ನು ಕನ್ನಡಿಗರು ಕಡ್ಡಾಯವಾಗಿ ಕಲಿಯುತ್ತಿದ್ದಾರೆ. ಯಾವುದೋ ರಾಜ್ಯದ ಒಂದು ಭಾಷೆಯನ್ನು ನಾವು ತ್ರಿಭಾಷಾ ಸೂತ್ರ ಒಪ್ಪಿಕೊಂಡ ಒಂದೇ ಕಾರಣಕ್ಕೆ ಕಡ್ಡಾಯವಾಗಿ ಕಲಿಯುತ್ತಿರುವಾಗ, ಹೊರ ರಾಜ್ಯಗಳಿಂದ ಬಂದವರು ಕನ್ನಡ ಕಲಿಯಲಿ ಎಂದರೆ ಯಾಕೆ ಇಂಗ್ಲಿಷ್ ಪತ್ರಿಕೆಗಳು ಎಗರಾಡುತ್ತವೆ? ಕನ್ನಡಿಗರ ಮೇಲೆ ನಡೆಯುತ್ತಿರುವ ಹಿಂದಿ ಹೇರಿಕೆಯನ್ನು ಇದೇ ಇಂಗ್ಲಿಷ್ ಪತ್ರಿಕೆಗಳು ಯಾಕೆ ಪ್ರಶ್ನಿಸುವುದಿಲ್ಲ? ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಏನನ್ನೇ ಮಾಡಿದರೂ ಇಂಗ್ಲಿಷ್ ಪತ್ರಿಕೆಗಳಿಗೆ ಅದು ಅಪ್ರಿಯವಾಗಿ ಕಾಣುತ್ತದೆ. ಯಾಕೆ ಇಂಥ ನಿಲುವು? ಏನಿದರ ಮರ್ಮ.
ಕನ್ನಡಿಗರು ಉದಾರವಾಗಿ ಹೊರಗಿನಿಂದ ಬಂದವರ ಭಾಷೆಗಳನ್ನು ಕಲಿಯುತ್ತಿರುವಾಗ, ಹೊರಗಿನಿಂದ ಬಂದವರು ಇಲ್ಲಿನ ಭಾಷೆಯನ್ನು ಕಲಿಯಬಾರದೇ? ತಮಿಳುನಾಡಿನಂಥ ರಾಜ್ಯಗಳಲ್ಲೂ ಉತ್ತರ ಭಾರತೀಯರು ತಮಿಳು ಕಲಿಯದೆ ಬದುಕಬಲ್ಲರೆ? ನಿಜ, ಭಾಷೆಯನ್ನು ಯಾರ ಮೇಲೂ ಹೇರಲಾಗದು. ಕಡ್ಡಾಯಗೊಳಿಸುವುದರಿಂದ ಸಮಸ್ಯೆ ಬಗೆ ಹರಿದೀತೆಂದೂ ಸಹ ಹೇಳುವಂತಿಲ್ಲ. ಆದರೆ ಈಗ ಇಂಗ್ಲಿಷ್ ಮೀಡಿಯಾ ಎಬ್ಬಿಸಿರುವ ಹುಯಿಲು ಪರಭಾಷಿಗರು ಕನ್ನಡ ಕಲಿಯಬೇಕೆಂದು ಹೇಳಲೇಬಾರದೆಂದು ನಿರ್ದೇಶಿಸುವಂತಿದೆ.
ಇಂಥ ಸಂದರ್ಭದಲ್ಲಿ ರಾಬಿನ್ ಚುಗ್ ತರಹದವರು ಎದ್ದು ನಿಲ್ಲುತ್ತಾರೆ. ಹಿಂದೆ ಸಾಸ್ಕೆನ್ ಎಂಬ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕನ್ನಡವನ್ನು ಗೇಲಿ ಮಾಡುವ ನಕಲಿ ರಾಷ್ಟ್ರಗೀತೆ ಬರೆದು, ಅದನ್ನು ಕನ್ನಡಿಗರಿಂದ ಹಾಡಿಸಿ ವಿಕೃತ ಖುಷಿ ಅನುಭವಿಸುತ್ತಿದ್ದ ವಿದೇಶೀಯನೊಬ್ಬ ಕನ್ನಡಿಗರ ಪ್ರತಿಭಟನೆಯಿಂದ ವಾಪಾಸು ಅವನ ದೇಶಕ್ಕೆ ಹೋಗಬೇಕಾಯಿತು. ಕನ್ನಡಿಗರ ಹಾಗು ದಕ್ಷಿಣ ಭಾರತೀಯರ ಆಚಾರ-ವಿಚಾರಗಳ ಕುರಿತು ಗೇಲಿ ಮಾಡಿದ್ದ ಇನ್ನೊಬ್ಬ ಟೆಕಿಯೊಬ್ಬ ತನ್ನ ರೇಸಿಸ್ಟ್ ನಿಲುವುಗಳಿಗಾಗಿ ಹೊರಹೋಗಬೇಕಾಯಿತು.
ಈಗ ರಾಬಿನ್ ಚುಗ್ ಸರದಿ.
发表评论