ಕಾಂಗ್ರೆಸ್ ಪಕ್ಷ ತನ್ನ ಗೋರಿಯನ್ನು ತಾನೇ ತೋಡಿಕೊಂಡಿದೆ. ಇನ್ನು ಅದರಲ್ಲಿ ಇಳಿದು ಶಾಶ್ವತವಾಗಿ ಮಲಗಿಕೊಳ್ಳುವುದೊಂದೇ ಅದಕ್ಕೆ ಬಾಕಿ ಉಳಿದಿರುವುದು.

ಬಾಬಾ ರಾಮದೇವ ಮತ್ತವರ ಸಂಗಡಿಗರು ನಡೆಸುತ್ತಿದ್ದ ಚಳವಳಿಯ ಪೆಂಡಾಲಿಗೆ ರಾತ್ರೋರಾತ್ರಿ ಸಾವಿರಾರು ಪೊಲೀಸರನ್ನು ನುಗ್ಗಿಸಿ ನಡೆಸಿದ ಸರ್ಕಾರದ ಕಾರ್ಯಾಚರಣೆ ಅಮಾನುಷ. ಈಗಾಗಲೇ ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಿ, ಕೇಂದ್ರ ಸರ್ಕಾರಕ್ಕೆ ನೋಟೀಸು ಕೊಟ್ಟೂ ಆಗಿದೆ. ಇಷ್ಟಾದರೂ ಅಮಾನವೀಯ ಕಾರ್ಯಾಚರಣೆಯನ್ನು ಸಮರ್ಥಿಸಿಕೊಳ್ಳುವುದು ಬೇಜಬ್ದಾರಿತನ ಎಂದು ಕಾಂಗ್ರೆಸ್ ಮುಖಂಡರಿಗೆ ಅನ್ನಿಸದಿರುವುದೇ ಆಶ್ಚರ್ಯ.

ಪೊಲೀಸು, ಮಿಲಿಟರಿ ಕಾರ್ಯಾಚರಣೆಗಳು ಎಲ್ಲೇ ನಡೆದರೂ ಹೀಗೇ ಇರುತ್ತವೆ. ಹಾವೇರಿ ಗೋಲಿಬಾರ್‌ನಲ್ಲಿ ಇಬ್ಬರು ರೈತರನ್ನು ಸುಟ್ಟು ಕೊಂದ ಪ್ರಕರಣದಿಂದ ಹಿಡಿದು, ಮಣಿಪುರದಲ್ಲಿ ಅಮಾಯಕ ಯುವತಿ ಮನೋರಮಾ ದೇವಿಯನ್ನು ರಾತ್ರಿ ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಗುಂಡಿಟ್ಟುಕೊಂಡ ನಮ್ಮದೇ ಮಿಲಿಟರಿಯ ಕ್ರೌರ್ಯದವರೆಗೆ ಈ ಎಲ್ಲ ಕಾರ್ಯಾಚರಣೆಗಳು ಒಂದೇ ತೆರನಾದದ್ದು. ಇಂಥ ಕಾರ್ಯಾಚರಣೆಗಳಿಗೆ ಮಾನವೀಯತೆಯೆಂಬುದೇ ಇರುವುದಿಲ್ಲ. ತಾವು ಲಾಠಿಯಿಂದ, ಬೂಟಿನಿಂದ ಕಡೆಗೆ ಬಂದೂಕಿನಿಂದ ಹೊಡೆಯುತ್ತಿರುವುದು ಮಹಿಳೆಯರಿಗೋ, ಮಕ್ಕಳಿಗೋ, ವೃದ್ಧರಿಗೋ ಎಂಬುದು ಪೊಲೀಸರಿಗೆ ಮುಖ್ಯವಲ್ಲ. ರಾಮಲೀಲಾ ಮೈದಾನದಲ್ಲಿ ನಡೆದ ಅನಾಹುತದಲ್ಲಿ ಯಾರೂ ಪ್ರಾಣ ಕಳೆದುಕೊಂಡಿಲ್ಲ. ಅಷ್ಟರ ಮಟ್ಟಿಗೆ ದೆಹಲಿ ಪೊಲೀಸರು ಸಂಯಮ ವಹಿಸಿರುವುದೇ ಒಂದು ಪವಾಡ.

ರಾಮಲೀಲಾ ಮೈದಾನದಲ್ಲಿ ಯೋಗ ಶಿಬಿರಕ್ಕೆ ಅನುಮತಿ ಪಡೆಯಲಾಗಿತ್ತು, ಚಳವಳಿಗಲ್ಲ. ಹೀಗಾಗಿ ರಾಮದೇವ ಸತ್ಯಾಗ್ರಹವನ್ನು ಕೊನೆಗೊಳಿಸಬೇಕಾಯಿತು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಹೇಳಿಕೊಂಡರು. ರಾಮದೇವ ಅಲ್ಲಿ ಸತ್ಯಾಗ್ರಹ ನಡೆಸಲು ಹೊರಟಿದ್ದು ಸರ್ಕಾರಕ್ಕೆ ಗೊತ್ತಿರಲಿಲ್ಲವೇ? ಗೊತ್ತಿದ್ದರೆ ಒಂದು ದಿನ ಸತ್ಯಾಗ್ರಹಕ್ಕೆ ಅವಕಾಶ ನೀಡಿದ್ದು ಯಾಕೆ ಎಂದರೆ ಅವರ ಬಳಿ ಉತ್ತರವಿಲ್ಲ. ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ, ಬೇಕಿದ್ದರೆ ಜಂತರ್ ಮಂತರ್‌ನಲ್ಲಿ ಮಾಡಿ ಎಂದು ಮೊದಲೇ ಹೇಳಬಹುದಿತ್ತಲ್ಲವೇ?

ಹಾಗೆ ನೋಡಿದರೆ ಇಂಥ ತಾಂತ್ರಿಕ ಕಾರಣಗಳನ್ನು ಒಡ್ಡಿ ಉಪವಾಸ ನಿಲ್ಲಿಸಿದೆವು ಎಂದು ಹೇಳಿಕೊಳ್ಳುವುದೇ ಕಪಟ. ಬೆಂಗಳೂರು ಪೊಲೀರು ನಗರದಲ್ಲಿ ಪ್ರತಿಭಟನೆ ನಡೆಸುವ ಸಂಘ-ಸಂಸ್ಥೆಗಳಿಗೆ ಒಂದು ನಿಯಮಾವಳಿಗಳನ್ನು ರೂಪಿಸಿದ್ದಾರೆ. ಅದನ್ನು ಒಪ್ಪಿದವರಿಗೆ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಲಾಗುತ್ತದೆ. ಈ ನಿಯಮಾವಳಿಗಳನ್ನು ಗಮನಿಸಿದರೆ, ಯಾವ ಸಂಘಟನೆಯೂ ಪ್ರತಿಭಟನೆಯೇ ಮಾಡುವಂತಿಲ್ಲ. ಪ್ರತಿಭಟನೆ ಮಾಡಿದವರ ಮೇಲೆ ಒಂದಲ್ಲ ಒಂದು ಕಾರಣ ಕೊಟ್ಟು ಮೊಕದ್ದಮೆ ಹೂಡಲು ಅವಕಾಶ ಇದ್ದೇ ಇರುತ್ತದೆ. ಹಾಗೆ ಮಾಡುವುದು ಸರಿಯೇ? ಸತ್ಯಾಗ್ರಹ ಕೊನೆಗೊಳಿಸಲು ನೀವು ಕೊಡುವ ಸಮರ್ಥನೆಯಾದರೂ ಗಟ್ಟಿಯಾಗಿರಬಾರದೆ?

ಕಾಂಗ್ರೆಸ್ ಮುಖಂಡರು ಬಾಬಾ ರಾಮದೇವ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಮಾಡಿದ್ದಾರೆ. ಈ ಆರೋಪಗಳಲ್ಲಿ ಕೆಲವು ಅಥವಾ ಎಲ್ಲವೂ ನಿಜವೇ ಆಗಿರಬಹುದು ಎಂದಿಟ್ಟುಕೊಳ್ಳೋಣ. ಯಾಕೆ ಇಷ್ಟು ದಿನಗಳಾದರೂ ರಾಮದೇವ ವಿರುದ್ಧ ಒಂದು ತನಿಖೆ ಮಾಡಲು ಇವರಿಗೆ ಸಾಧ್ಯವಾಗಲಿಲ್ಲ? ರಾಮದೇವ ಮಾತ್ರವಲ್ಲ ದೇಶದ ಧರ್ಮಗುರುಗಳು ಆದಾಯ ತೆರಿಗೆ ವಿನಾಯಿತಿ ಪಡೆದು ಬಿಜಿನೆಸ್ ನಡೆಸುತ್ತಿರುವುದು, ಸಾವಿರಾರು ಕೋಟಿ ರೂಪಾಯಿ ಕೂಡಿಟ್ಟುಕೊಂಡಿರುವುದು ಸರ್ಕಾರಕ್ಕೆ ಗೊತ್ತಿಲ್ಲವೇ? ಸರ್ಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಒಬ್ಬ ರಾಮದೇವ ತಿರುಗಿಬಿದ್ದಾಗ ಮಾತ್ರ ಇದೆಲ್ಲ ನೆನಪಾಗುತ್ತದೆಯೇ? ಈಗಲೂ ಕಾಲ ಮಿಂಚಿಲ್ಲ, ವ್ಯಾಪಾರ ವಹಿವಾಟು ನಡೆಸುವ ಎಲ್ಲ ಧಾರ್ಮಿಕ ಸಂಸ್ಥೆಗಳನ್ನು ಆದಾಯ ತೆರಿಗೆ ವ್ಯಾಪ್ತಿಯಡಿ ತರುವ ತಾಕತ್ತು ಡಾ.ಮನಮೋಹನ ಸಿಂಗ್ ಸರ್ಕಾರಕ್ಕಿದೆಯೇ?

ರಾಮದೇವರು ಕಪ್ಪುಹಣದ ವಿರುದ್ಧ ತೀವ್ರವಾಗಿ ಮಾತನಾಡಲು ಆರಂಭಿಸಿದ್ದು ಜನವರಿ ತಿಂಗಳಿನಿಂದ. ಕಪ್ಪುಹಣದ ಕುರಿತು ಸರಿಯಾದ ನಿರ್ಧಾರವನ್ನೇ ಕೈಗೊಳ್ಳದ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಸಹ ವಾಗ್ದಾಳಿ ನಡೆಸಿತ್ತು. ಕಳೆದ ಚುನಾವಣೆ ಪೂರ್ವದಲ್ಲೇ ಬಿಜಪಿ ನೇತಾರ ಎಲ್.ಕೆ.ಅಡ್ವಾನಿ ಕಪ್ಪುಹಣದ ಪ್ರಸ್ತಾಪ ಮಾಡಿದ್ದರು. ಈಗ ರಾಮದೇವ ಎದುರು ಮಂಡಿಯೂರಿ ನಿಂತು ಕಪ್ಪುಹಣ ವಾಪಾಸು ತರುವ ಸಂಬಂಧ ಕಾನೂನು ರಚಿಸುತ್ತೇವೆ ಎಂದು ಹೇಳಿದ ಕೇಂದ್ರ ಸರ್ಕಾರ ಇzನ್ನು ಮೊದಲೇ ಮಾಡಿದ್ದರೆ ಗಂಟೇನು ಹೋಗುತ್ತಿತ್ತು?

೨ಜಿ ಹಗರಣ, ಕಾಮನ್ವೆಲ್ತ್ ಹಗರಣಗಳಿಂದ ಹಿಡಿದು ಇತ್ತೀಚಿನ ದಯಾನಿಧಿ ಮಾರನ್ ಬಿಎಸ್‌ಎನ್‌ಎಲ್ ಹಗರಗಳವರೆಗೆ ಕಳಂಕಗಳನ್ನೇ ಹೊತ್ತುಕೊಂಡಿರುವ ಯುಪಿಎ ಸರ್ಕಾರಕ್ಕೆ ಆಡಳಿತದಲ್ಲಿ ಬಿಗಿ ತರುವ ಮನಸ್ಸಿಲ್ಲದೆ ಜಡ್ಡುಬಿದ್ದಿದೆ. ಸಂಸದೀಯ ಪ್ರಜಾಸತ್ತೆಯನ್ನು ರಕ್ಷಿಸುವ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದೆ. ಇಲ್ಲದಿದ್ದಲ್ಲಿ ಪ್ರಣಬ್ ಮುಖರ್ಜಿಯಂಥ ಹಿರಿಯ ಸಚಿವರನ್ನೂ ಸೇರಿದಂತೆ ನಾಲ್ಕು ಕ್ಯಾಬಿನೆಟ್ ಸಚಿವರನ್ನು ರಾಮದೇವ ಅವರ ಜತೆಗೆ ಸಂಧಾನಕ್ಕೆಂದು ವಿಮಾನ ನಿಲ್ದಾಣಕ್ಕೆ ಕಳುಹಿಸುತ್ತಿರಲಿಲ್ಲ.

****

ಇಡೀ ಪ್ರಹಸನದ ಲಾಭ ಪಡೆದುಕೊಳ್ಳುತ್ತಿರುವುದು ಭಾರತೀಯ ಜನತಾ ಪಕ್ಷ. ಅದಕ್ಕೆ ಈಗ ನಾಯಕರ ಕೊರತೆ. ಇರುವ ನಾಯಕರಲ್ಲೇ ಕಚ್ಚಾಟ. ನರೇಂದ್ರ ಮೋದಿಯನ್ನು ಇತರ ಮಿತ್ರಪಕ್ಷಗಳು ಒಪ್ಪಿಕೊಳ್ಳುವುದಿಲ್ಲ. ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ ದೇಶವ್ಯಾಪಿ ಆಂದೋಲನ ನಡೆಸುವ, ಜನಜಾಗೃತಿ ಮೂಡಿಸುವ ಅವಕಾಶ ಆ ಪಕ್ಷಕ್ಕಿತ್ತು. ಆದರೆ ಕರ್ನಾಟಕದಲ್ಲಿ ಅವರ ಪಕ್ಷದ ಆಡಳಿತವೇ ದೇಶದ ನಂ. ೧ ಭ್ರಷ್ಟಾಚಾರವನ್ನು ನಡೆಸುತ್ತಿದೆ. ಭ್ರಷ್ಟ ಮುಖ್ಯಮಂತ್ರಿಯನ್ನು ಕಿತ್ತುಹಾಕುವ ಧೈರ್ಯ ಬಿಜೆಪಿ ಹೈಕಮಾಂಡ್‌ಗೆ ಇಲ್ಲ. ಕರ್ನಾಟಕದ ವಿದ್ಯಮಾನ ನನಗೆ ಸಮಾಧಾನ ತಂದಿಲ್ಲ ಎಂದು ಎಲ್.ಕೆ.ಅಡ್ವಾನಿ ಹೇಳಿಕೊಂಡರೂ ಅವರಿಂದ ಏನೂ ಮಾಡಲಾಗುತ್ತಿಲ್ಲ. ಯಡಿಯೂರಪ್ಪ ತಂದು ಸುರಿಯುವ ಪಾರ್ಟಿ ಫಂಡು ಕಪ್ಪೋ ಬಿಳಿಯೋ ನೋಡದೆ ತಬ್ಬಿಕೊಳ್ಳುವ ನಿತಿನ್ ಗಡ್ಕರಿ ಮಾತ್ರ ಕರ್ನಾಟಕದಲ್ಲಿ ಅತ್ಯುತ್ತಮ ಸರ್ಕಾರವಿದೆ ಎಂದು ಮಾತನಾಡಿ ಅಪಹಾಸ್ಯಕ್ಕೆ ಈಡಾಗುತ್ತಿದ್ದಾರೆ.

ಇಂಥ ಸಂದರ್ಭದಲ್ಲಿ ಅವರಿಗೆ ದೊರಕಿದ್ದು ಬಾಬಾ ರಾಮದೇವ. ಭ್ರಷ್ಟಾಚಾರದ ವಿರುದ್ಧ ಜನರು ಹೇಗೂ ಸಿಟ್ಟಿಗೆದ್ದಿದ್ದಾರೆ. ರಾಜಕೀಯ ಪಕ್ಷವಾಗಿ ಇದನ್ನು ವಿರೋಧಿಸಿದರೆ ಯಡಿಯೂರಪ್ಪ ತರಹದವರು ಮೊಸರಲ್ಲಿ ಕಲ್ಲಾಗುತ್ತಾರೆ. ಹೀಗಾಗಿ ರಾಮದೇವರೇ ಇದಕ್ಕೆ ಸೂಕ್ತ ಎಂದು ಬಿಜೆಪಿಗೆ ಅನಿಸಿರಬಹುದು. ರಾಮದೇವರ ಬೆನ್ನಿಗೆ ನಿಂತುಬಿಟ್ಟಿತು.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕಪ್ಪು ಹಣ ತರುವ ವಿಷಯ ಅಡ್ವಾನಿ ತಲೆಗೇಕೆ ಹೊಳೆದಿರಲಿಲ್ಲ? ಅಥವಾ ಆ ಪಕ್ಷದವರೂ ಎಂದೂ ಆ ವಿಷಯವನ್ನು ಎತ್ತದೇ ಇರಲು ಕಾರಣವೇನು? ಕಪ್ಪು ಹಣದ ಸಮಸ್ಯೆ ನಿನ್ನೆ ಮೊನ್ನೆ ಸೃಷ್ಟಿಯಾಗಿದ್ದೇನಲ್ಲ. ಆಗ ಯಾಕೆ ಇವರು ಸುಮ್ಮನಿದ್ದರು?

ಒಂದೆಡೆ ಯುಪಿಎ ತನ್ನ ಸ್ವಯಂಕೃತಾಪರಾಧದಿಂದ ಜನಬೆಂಬಲ ಕಳೆದುಕೊಳ್ಳುತ್ತಿದ್ದರೆ, ಆ ಬೆಂಬಲವನ್ನು ತನ್ನ ಕಡೆಗೆ ವಾಲಿಸಿಕೊಳ್ಳುವ ಯಾವ ಶಕ್ತಿಯೂ ಬಿಜಪಿ ನಾಯಕರಲ್ಲಿರಲಿಲ್ಲ. ಹೀಗಾಗಿ ಅವರಿಗೆ ರಾಮಜನ್ಮಭೂಮಿಯಂಥ ಹೊಸ ವಿವಾದ ಬೇಕಾಗಿತ್ತು. ಒಲಿದು ಬಂದಿದ್ದು ರಾಮದೇವ. ಜೈ ಶ್ರೀರಾಂ.

ಭ್ರಷ್ಟಾಚಾರ, ಕಪ್ಪು ಹಣದ ಬಗ್ಗೆ ಬಿಜೆಪಿಗೆ ಅಷ್ಟೊಂದು ಸಿಟ್ಟಿದ್ದರೆ ಮೊದಲು ಕರ್ನಾಟಕದ ಯಡಿಯೂರಪ್ಪ ಸರ್ಕಾರವನ್ನು ಕಿತ್ತೊಗೆಯುವ ಪ್ರಾಮಾಣಿಕತೆಯನ್ನು ತೋರಬೇಕು. ತಮ್ಮ ಪಾರ್ಟಿ ಫಂಡ್‌ಗೆ ಯಾರಿಂದಲೂ ಕಪ್ಪುಹಣವನ್ನು ಸ್ವೀಕರಿಸುವುದಿಲ್ಲ ಎಂದು ಪ್ರಮಾಣ ಮಾಡಬೇಕು. ತನ್ನ ಪಕ್ಷಕ್ಕೆ ಹಣ ಕೊಡುವವರ ಪಟ್ಟಿಯನ್ನು ಆಯಾ ಕಾಲಕ್ಕೆ ಬಿಡುಗಡೆ ಮಾಡಬೇಕು. ಇದು ಬಿಜೆಪಿಗೆ ಮಾತ್ರ ಅನ್ವಯಿಸುವ ಮಾತಲ್ಲ, ಎಡಪಕ್ಷಗಳೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಕಪ್ಪು ಹಣ ಸ್ವೀಕರಿಸುವುದಿಲ್ಲ ಎಂದು ಘೋಷಿಸುತ್ತವೆಯೇ?

****

ಇನ್ನು ಬಾಬಾ ರಾಮದೇವ. ಒಬ್ಬ ಚಳವಳಿಗಾರನಿಗೆ ಇರಬೇಕಾದ ಕಾಮನ್ ಸೆನ್ಸ್ ಇಲ್ಲದ ನಾಯಕ ಇವರು. ರಾಮಲೀಲಾ ಮೈದಾನದಲ್ಲಿ ರಾಮದೇವರು ನಡೆಸಿದ್ದು ಚಳವಳಿಯಲ್ಲ, ಹುಚ್ಚಾಟ.

ಚಳವಳಿಗೆ ಬೇಕಾದ್ದು ಎಸಿ, ಏರ್ ಕೂಲರ್‌ಗಳು, ಐಶಾರಾಮಿ ವ್ಯವಸ್ಥೆ ಅಲ್ಲ; ಸರ್ಕಾರದಿಂದ ಕಾರ್ಯಸಾಧುವಾದಂಥ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಜಾಣತನ ಎಂಬುದನ್ನು ಇವರು ಅರಿತಿರಲಿಲ್ಲ. ರಾಮದೇವರು ಇಟ್ಟ ಬೇಡಿಕೆಗಳೇ ಹಾಸ್ಯಾಸ್ಪದವಾಗಿದ್ದವು. ಪ್ರಧಾನಿಯನ್ನು ನೇರವಾಗಿ ಚುನಾಯಿಸಬೇಕು, ೫೦೦, ೧೦೦೦ ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಬೇಕು ಇತ್ಯಾದಿ ಕಾರ್ಯಸಾಧುವಲ್ಲದ ಬಾಲಿಷ ಬೇಡಿಕೆಗಳು. ಒಂದು ವೇಳೆ ಪ್ರಧಾನಿ ನೇರ ಆಯ್ಕೆಯ ಪ್ರಸ್ತಾಪವನ್ನು ಒಪ್ಪಿಕೊಳ್ಳುವುದಾದರೂ ಅದು ಚಳವಳಿಯ ವ್ಯಾಪ್ತಿಯ ವಿಷಯವಲ್ಲ, ಜನಪ್ರತಿನಿಧಿಗಳು ಒಟ್ಟಾರೆಯಾಗಿ ನಿರ್ಧರಿಸಬೇಕಾದ ವಿಷಯ. ಇಂಥ ಸಾಮಾನ್ಯ ಸಂಗತಿಗಳೂ ಗೊತ್ತಿಲ್ಲದ ಬಾಬಾ ಸತ್ಯಾಗ್ರಹಕ್ಕೆ ಕುಳಿತುಬಿಟ್ಟರು.

ಸರ್ಕಾರದ ಜತೆ ಮೊದಲೇ ಒಂದು ಸಂಧಾನಕ್ಕೆ ಬಂದು, ತನ್ನ ಒಪ್ಪಿಗೆ ಪತ್ರವನ್ನೂ ಕೊಟ್ಟು, ಸಂಜೆ ಐದು ಗಂಟೆಗೆ ಸತ್ಯಾಗ್ರಹ ಕೊನೆಗೊಳಿಸುವುದಾಗಿ ಹೇಳಿದ್ದ ರಾಮದೇವರು ತನಗೆ ಹರಿದು ಬಂದ ವ್ಯಾಪಕ ಬೆಂಬಲವನ್ನು ಕಂಡು ಮಾತುತಪ್ಪಿದರು. ಇಡೀ ಸತ್ಯಾಗ್ರಹವನ್ನು ಅಪ್ಪಟ ಬಾಲಿವುಡ್ ಸಿನಿಮಾ ಶೈಲಿಯಲ್ಲಿ ನಡೆಸುವ ಉದ್ದೇಶ ಅವರರಾಗಿತ್ತೇನೋ? ಹೀಗಾಗಿ ಅವರು ಸರ್ಕಾರದ ಜತೆಗಿನ ಸಂಧಾನದ ವಿಷಯವನ್ನು ತಮ್ಮ ಬೆಂಬಲಿಗರಿಗೂ ಹೇಳದೆ, ಅಮಾಯಕವಾಗಿ ನಂಬಿ ಬಂದ ಸಾವಿರಾರು ಸಂಖ್ಯೆಯ ಸತ್ಯಾಗ್ರಹಿಗಳಿಗೂ ಹೇಳದೆ ಸಸ್ಪೆನ್ಸ್ ಆಗಿಟ್ಟರು. ಪ್ರಹಸನ ನೋಡುವ ಜನರ ಕುತೂಹಲ ತಣಿದುಹೋದರೆ ಮುಂದಿನದ್ದರ ಕುರಿತು ಆಸಕ್ತಿ ಉಳಿದಿರುತ್ತದೆಯೇ?

ಚಳವಳಿಗಾರನಿಗೆ ತನ್ನ ಚಳವಳಿಯ ಉದ್ದೇಶ ಮತ್ತು ಗುರಿಗಳಷ್ಟೆ ಮುಖ್ಯವಾಗಿರಬೇಕೆ ಹೊರತು ತನಗೆ ಬೇಕಾದ ಹಾಗೆ ಚಳವಳಿಯನ್ನು ನಿರ್ದೇಶಿಸುವ ಕಲಾವಂತಿಕೆಯಲ್ಲ. ಚಳವಳಿ ನಟನೆಯೂ ಅಲ್ಲ, ಚಳವಳಿಗಾರ ನಟನೂ ಅಲ್ಲ. ಇಂಥ ನಾಟಕಗಳನ್ನು ನಡೆದರೆ ಅದನ್ನು ಚಳವಳಿ ಎನ್ನುವುದೂ ಕಷ್ಟ.

ತಾವು ಸರ್ಕಾರಕ್ಕೆ ಬರೆದುಕೊಟ್ಟ ಪತ್ರವನ್ನು ಸಚಿವ ಕಪಿಲ್ ಸಿಬಲ್ ಬಹಿರಂಗಗೊಳಿಸಿದರು ಎಂಬ ಕಾರಣಕ್ಕೆ ರಾಮದೇವರು ಸಿಟ್ಟಿಗೆದ್ದರು, ಚಂಡಿ ಹಿಡಿದರು. ಅಲ್ಲಿಗೆ ಕಪ್ಪುಹಣ ಸಂಬಂಧಿಸಿದ ಚಳವಳಿ ಸರ್ಕಾರ ಮತ್ತು ರಾಮದೇವರ ನಡುವಿನ ಇಗೋ ಸಂಘರ್ಷವಾಗಿ ಮಾರ್ಪಾಡಾಗಿಹೋಯಿತು. ಸರ್ಕಾರದ ಪತ್ರ ನನ್ನ ಕೈ ಸೇರಲಿ, ಆಮೇಲೆ ಸತ್ಯಾಗ್ರಹ ಮುಗಿಸುತ್ತೇನೆ ಎಂದು ಮೀಡಿಯಾಗಳ ಸಮ್ಮುಖದಲ್ಲಿ ಸಂಜೆ ಹೊತ್ತಿಗೆಲ್ಲ ರಾಮದೇವರು ಹೇಳಿದರು. ಪತ್ರ ಕೈ ಸೇರಿದ ಮೇಲೂ ರಾಮದೇವರು ಎದ್ದೇಳುವ ಮನಸ್ಸು ಮಾಡಲಿಲ್ಲ.

ರಾಮದೇವರಿಗೆ ತಮ್ಮ ಶೋ ಇನ್ನೊಂದು ದಿನ ಮುಂದುವರೆಸುವ ಆಸೆಯಿತ್ತೇನೋ? ಜಗತ್ತಿನ ಮಾಧ್ಯಮಗಳೆಲ್ಲವೂ ರಾಮದೇವರನ್ನು ಲೈವ್ ಟೆಲಿಕಾಸ್ಟ್‌ನಲ್ಲಿ ತೋರಿಸುತ್ತಿದ್ದವು. ರಾಮದೇವರ ರಾಜಕೀಯ ಉದ್ದೇಶಗಳಿಗೆ ಇದಕ್ಕಿಂತ ದೊಡ್ಡ ಜಾಹೀರಾತು ಬೇಕಿತ್ತೆ? ರಾಮದೇವರನ್ನು ಬೇರೆ ಶಕ್ತಿಗಳೂ ನಿಯಂತ್ರಿಸುತ್ತಿದ್ದವೇನೋ? ಅವುಗಳನ್ನು ಮೀರಿ ನಿರ್ಧಾರ ಕೈಗೊಳ್ಳುವ ಶಕ್ತಿಯನ್ನೂ ಅವರು ಕಳೆದುಕೊಂಡಿದ್ದಿರಬೇಕು. ನಾಳೆ ಮಾಡಬೇಕಾದ ಘನಘೋರ ಭಾಷಣದ ಸಿದ್ಧತೆಗಳನ್ನು ಮನಸ್ಸಿನಲ್ಲೇ ಮಾಡಿಕೊಳ್ಳುತ್ತ ಅವರು ಮಲಗಿದರು, ಪೊಲೀಸರು ಬಂದು ಸುತ್ತುವರೆದರು.

ಪೊಲೀಸರು ತಮ್ಮನ್ನು ಬಂಧಿಸಲು ಬಂದಾಗಲಾದರೂ ರಾಮದೇವರು ಸೆನ್ಸಿಬಲ್ ಆಗಿ ನಡೆದುಕೊಳ್ಳಬಹುದಿತ್ತು. ಪ್ರಾಯಶಃ ದೇಶದ ಯಾವುದೇ ಚಳವಳಿಗಾರನೂ ಪೊಲೀಸರ ಜತೆ ರಾಮದೇವರು ಆಡಿದ ಆಟಗಳಂಥದ್ದನ್ನು ಆಡಿರಲಾರರು. ಸತ್ಯಾಗ್ರಹಿಗಳು ಮಾಡುವ ಕೆಲಸ ಇದಲ್ಲ. ಪೊಲೀಸರು ತಮ್ಮನ್ನು ಬಂಧಿಸಲು ಬಂದಿದ್ದಾರೆ ಎಂಬುದು ಖಚಿತವಾಗುತ್ತಿದ್ದಂತೆ ಬಂಧನಕ್ಕೆ ಒಳಗಾಗಲು ಅವರು ಸಿದ್ಧರಾಗಬೇಕಿತ್ತು. ಬಂಧನ, ಜೈಲು ಇತ್ಯಾದಿಗಳು ಚಳವಳಿಗಾರರಿಗೆ ಹೊಸತೇನೂ ಅಲ್ಲ. ಅದೂ ಸಹ ಪ್ರತಿಭಟನೆಯ ಒಂದು ಭಾಗವೇ.

ರಾಮದೇವರು ಹಾಗೆ ಮಾಡಲಿಲ್ಲ. ಪೊಲೀಸರಿಂದ ತಪ್ಪಿಸಿಕೊಳ್ಳಲು ಬಯಸಿದರು. ಮಹಿಳೆಯರ ವೇಷ ಧರಿಸಿ ಓಡಿಹೋಗುವ ವಿಚಿತ್ರ ತಂತ್ರವನ್ನು ಅನುಸರಿಸಿದರು. ಮೈದಾನದಲ್ಲಿ ಸಾವಿರಾರು ಜನ ಬೆಂಬಲಿಗರು ಇರುವಾಗ ಒಬ್ಬ ನಾಯಕ ಹೀಗೆ ಬೇಜವಾಬ್ದಾರಿಯಿಂದ ವರ್ತಿಸುವುದು ಎಷ್ಟು ಸರಿ? ಅದರಲ್ಲೂ ಮಹಿಳೆಯರು ಮಕ್ಕಳು ಇದ್ದ ಆ ಸ್ಥಳದಲ್ಲಿ ಜನರನ್ನು ಉದ್ರೇಕಿಸಿ, ಗೊಂದಲದಲ್ಲಿ ಕೆಡವಿ ಅವರು ಸಾಧಿಸಿದ್ದಾರೂ ಏನು?

ರಾಮದೇವರ ದುಡುಕು ನಿರ್ಧಾರಗಳಿಂದಾಗಿ, ಆತುರದ, ಅವಿವೇಕದ ನಡೆಗಳಿಂದಾಗಿ ಅಮಾಯಕ ಬಡಪಾಯಿ ಸತ್ಯಾಗ್ರಹಿಗಳು ಏಟು ತಿಂದರು. ಪೊಲೀಸರಿಗೆ ಸತ್ಯಾಗ್ರಹಿಗಳೂ ಒಂದೇ, ಕ್ರಿಮಿನಲ್‌ಗಳೂ ಒಂದೇ. ಎಲ್ಲರನ್ನೂ ಒಂದೇ ರೀತಿ ನೋಡುವ ವ್ಯವಸ್ಥೆ ಅದು. ಬಡಪಾಯಿಗಳು ಕಣ್ಣಲ್ಲಿ ಅಶ್ರುವಾಯು ತುಂಬಿಕೊಂಡು, ಮೈಮೇಲೆ ಲಾಠಿ ಏಟು ತಿಂದು ಪೊಲೀಸ್ ದೌರ್ಜನ್ಯವನ್ನು ಎದುರಿಸಬೇಕಾಯಿತು.

ಆ ಜನರು ಮುಂಜಾನೆಯವರೆಗೆ ಎಲ್ಲಿಗೆ ಹೋದರು? ಆ ಕೆಟ್ಟ ರಾತ್ರಿಯನ್ನು ಹೇಗೆ ಕಳೆದರು? ಯಾವ ರಸ್ತೆಗಳ ಮೇಲೆ ಮಲಗಿದರು? ಅವರ ನೋವಿಗೆ ಮುಲಾಮಾದರೂ ಎಲ್ಲಿದೆ?

ಬಾಬಾ ರಾಮದೇವರು ಈಗ ಒಂದು ಲಕ್ಷ ಜನರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದರು ಎಂದು ತಮ್ಮ ಮಾಮೂಲಿ ವರಸೆಯ ಲಕ್ಷ, ಕೋಟಿ ಲೆಕ್ಕದ ಮಾತುಗಳನ್ನು ಆಡಿ ಕಣ್ಣೀರಿಡುತ್ತಿದ್ದಾರೆ. ವಿಶೇಷ ವಿಮಾನದಲ್ಲಿ ಹರಿದ್ವಾರಕ್ಕೆ ತಂದುಬಿಟ್ಟ ಪೊಲೀಸರು ತಮ್ಮನ್ನು ಎನ್‌ಕೌಂಟರ್ ಮಾಡಿ ಸಾಯಿಸಲು ಸಂಚು ನಡೆಸುತ್ತಿದ್ದರು ಎಂದು ಬಡಬಡಿಸುತ್ತಿದ್ದಾರೆ. ಮತ್ತು ನಿರೀಕ್ಷಿತವಾಗಿಯೇ ಅವರು ಸೋನಿಯಾ ಗಾಂಧಿಯವರ ವಿದೇಶಿ ಮೂಲವನ್ನು ಕೆದಕಿ ಮಾತನಾಡಿದ್ದಾರೆ.

ಆ ರಾತ್ರಿ ಪೊಲೀಸರು ಬಂದಾಗಲೇ ಒಬ್ಬ ಚಳವಳಿ ನಾಯಕನಂತೆ ರಾಮದೇವರು ವರ್ತಿಸಿದ್ದರೆ ಈ ಅನಾಹುತ ನಡೆಯುತ್ತಿತ್ತೆ?

****

ದೇಶದ ಮಾಧ್ಯಮಗಳು ಇಡೀ ಪ್ರಕರಣವನ್ನು ನಿರ್ವಹಿಸಿದ ರೀತಿ ಅವಿವೇಕತನದ್ದು. ಇಡೀ ದಿನ ರಾಮಲೀಲ ಮೈದಾನದ ವಿದ್ಯಮಾನಗಳನ್ನು ಲೈವ್ ಆಗಿ ತೋರಿಸಿದ್ದು ಮುಠ್ಠಾಳತನ. ಮಾಧ್ಯಮಗಳಿಗೆ ಬಹುಶಃ ಸತ್ಯಾಗ್ರಹ ಒಂದೇ ದಿನಕ್ಕೆ ಮುಗಿಯುವುದು ಬೇಕಿರಲಿಲ್ಲ. ಇನ್ನೊಂದಿಷ್ಟು ದಿನ ಎಳೆದಾಡುವ, ಆಡಿದ ಮಾತುಗಳನ್ನೇ ಆಡುವ ಉತ್ಸಾಹ ಅವುಗಳಿಗೆ ಇದ್ದಿರಬೇಕು.

ದೇಶದಲ್ಲಿ ಸಾವಿರಾರು ಚಳವಳಿಗಳು, ಆಂದೋಲನಗಳು ನಡೆದಿವೆ. ಎಲ್ಲ ಸಂದರ್ಭದಲ್ಲೂ ಮೀಡಿಯಾ ಹೀಗೇ ವರ್ತಿಸಿದ್ದಿದೆಯೇ? ಯಾಕೆ ಮೀಡಿಯಾಗಳಿಗೆ ಮಧ್ಯಮ, ಮೇಲ್ಮಧ್ಯಮ ವರ್ಗದ ಜನತೆಯ ಸಮಸ್ಯೆಗಳು ಮಾತ್ರ ಮುಖ್ಯವಾಗುತ್ತವೆ? ಬಡವರ, ನಿರ್ಗತಿಕರ ಇಶ್ಯೂಗಳ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳುವುದಿಲ್ಲ? ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಪ್ರಚಾರ ಅಗತ್ಯ, ಅದನ್ನು ಒಪ್ಪಿಕೊಳ್ಳೋಣ. ಆದರೆ ಇತರ ಇಶ್ಯೂಗಳ ಬಗ್ಗೆ ಮೌನ ಯಾಕೆ?

****

ಭ್ರಷ್ಟಾಚಾರದಂಥ ವಿಷಯದ ಕುರಿತು ಮಾತನಾಡುವ ನೈತಿಕತೆಯನ್ನೂ ಹೊಂದಿಲ್ಲದ ಮೂರ್ಖ, ಧೂರ್ತ ಕಾಂಗ್ರೆಸ್, ಬಿಜೆಪಿಗಳು, ಇಂಥ ಸಂದರ್ಭದಲ್ಲೂ ಖಚಿತವಾಗಿ ಮಾತನಾಡಲು, ಜನರ ಆಂದೋಲನವನ್ನು ಕೈಗೆತ್ತಿಕೊಳ್ಳಲು ಅಶಕ್ತವಾಗಿರುವ ಎಡಬಿಡಂಗಿ ಎಡಪಕ್ಷಗಳು, ಅಪಕ್ಷ, ಅರಾಜಕ, ಅಪ್ರಬುದ್ಧ ಚಳವಳಿ ನಾಯಕರು, ಜವಾಬ್ದಾರಿ ಇಲ್ಲದ ಮೀಡಿಯಾ... ಎಲ್ಲವೂ ಸೇರಿ ಒಂದು ಇಂಡಿಯಾ ನಲುಗುತ್ತಿದೆ.

ನಾವು ಅಸಹಾಯಕ ಪ್ರೇಕ್ಷಕರು, ಎಲ್ಲರನ್ನೂ ಎಲ್ಲವನ್ನೂ ನೋಡಿ ಸುಮ್ಮನಿದ್ದೇವೆ.
0 komentar

Blog Archive