ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ೧೫ ಭ್ರಷ್ಟಾಚಾರದ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ನೈತಿಕ ಜವಾಬ್ದಾರಿ ಹೊತ್ತು ಯಡಿಯೂರಪ್ಪ ರಾಜೀನಾಮೆ ನೀಡಬೇಕೆ ಎಂಬ ಪ್ರಶ್ನೆ ಇಟ್ಟುಕೊಂಡು ಈ ವಾರದ ಸಮೀಕ್ಷೆ ನಡೆಸಿದ್ದೆವು. ರಾಜೀನಾಮೆ ನೀಡಬೇಕು, ರಾಜೀನಾಮೆ ನೀಡಬಾರದು, ಏನೂ ಹೇಳಲು ಸಾಧ್ಯವಾಗುತ್ತಿಲ್ಲ ಎಂಬ ಮೂರು ಉತ್ತರಗಳನ್ನು ಆಯ್ಕೆಗೆ ನೀಡಲಾಗಿತ್ತು. ಈ ಸಮೀಕ್ಷೆಯಲ್ಲಿ ಮತ ಚಲಾಯಿಸಿದವರು ಒಟ್ಟು ೧೪೯ ಮಂದಿ. ಈ ಪೈಕಿ ೧೧೧ ಮಂದಿ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಮತ ಚಲಾಯಿಸಿದ್ದಾರೆ. ೩೬ ಮಂದಿ ರಾಜೀನಾಮೆ ನೀಡಬಾರದು ಎಂದಿದ್ದಾರೆ. ಏನೂ ಹೇಳಲು ಸಾಧ್ಯವಾಗುತ್ತಿಲ್ಲ ಎಂದವರು ಇಬ್ಬರು ಮಾತ್ರ

ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದವರು ಶೇ.೭೪ರಷ್ಟು ಮಂದಿಯಾದರೆ, ಬೇಡ ಎಂದವರು ಶೇ.೨೪ರಷ್ಟು ಜನರು. ಇನ್ನು ಏನೂ ಹೇಳಲು ಸಾಧ್ಯವಾಗುತ್ತಿಲ್ಲ ಎಂದವರು ಶೇ.೧ರಷ್ಟು ಮಾತ್ರ.

ಮತ ಚಲಾಯಿಸಿದ ಎಲ್ಲ ೧೪೯ ಓದುಗರಿಗೂ ಕೃತಜ್ಞತೆಗಳು.

ಮುಂದಿನ ಸಮೀಕ್ಷೆ ಪ್ರಜಾವಾಣಿ ಪತ್ರಿಕೆಯನ್ನು ಕುರಿತದ್ದಾಗಿದೆ. ಪ್ರಜಾವಾಣಿ ಕನ್ನಡದ ಶ್ರೇಷ್ಠ ದಿನಪತ್ರಿಕೆ. ಜಾತ್ಯತೀತ ಮೌಲ್ಯಗಳನ್ನು, ಧಾರ್ಮಿಕ ಸಹಿಷ್ಣುತೆಯನ್ನು ಎತ್ತಿಹಿಡಿಯುತ್ತಲೇ ಎಲ್ಲ ಸಾಮಾಜಿಕ ಅನಾಚಾರಗಳ ವಿರುದ್ಧವೂ ಧ್ವನಿಯೆತ್ತುತ್ತಲೇ ಬಂದ ಪತ್ರಿಕೆ. ಕನ್ನಡಿಗರ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಾಗಿರುವ ಪ್ರಜಾವಾಣಿ ಜನಪರ ಮೌಲ್ಯಗಳನ್ನು ಕಾಪಾಡಿಕೊಂಡೇ ಬಂದಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಯಾಕೋ ಏನೋ ಪತ್ರಿಕೆಯ ಸಂಪಾದಕೀಯ ನೀತಿ ಕೊಂಚ ಸಡಿಲವಾದಂತೆ ಕಾಣುತ್ತಿದೆ. ಸಂಪಾದಕೀಯ ಬ್ಲಾಗ್‌ನಲ್ಲಿ ನಾವು ಸಾಕ್ಷಿ ಸಮೇತ ಈ ಅಂಶಗಳನ್ನು ಬಹಿರಂಗಪಡಿಸಿದ್ದೇವೆ.

ಪ್ರಜಾವಾಣಿ ತನ್ನ ಹಳೆಯ ಜನಪರ, ಪ್ರಗತಿಪರ, ಜೀವಪರ ಸಿದ್ಧಾಂತಗಳನ್ನೇ ಮುಂದುವರೆಸಬೇಕೆ? ಅಥವಾ ಬೇರೆ ಆದ್ಯತೆಗಳಿಗಾಗಿ ತಾನು ಕಾಪಾಡಿಕೊಂಡ ಮೌಲ್ಯಗಳನ್ನು ಬಿಟ್ಟು ಹೊಸ ನಿಲುವನ್ನು ತಾಳಬೇಕೆ? ಓದುಗರಿಗೆ ಬೇಕಾಗಿರುವುದು ಹಳೆಯ ಪ್ರಜಾವಾಣಿಯೋ? ಅಥವಾ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸರೂಪದ ಪ್ರಜಾವಾಣಿಯೋ?

ಅಷ್ಟಕ್ಕೂ ಪ್ರಜಾವಾಣಿ ಸಂಪಾದಕೀಯ ಧೋರಣೆ ಬದಲಾಗಿದೆ ಮತ್ತು ಆಳುವ ಸರ್ಕಾರದ ಪರವಾಗಿದೆ ಎಂದು ನಿಮಗನ್ನಿಸುತ್ತದೆಯೇ?

ಇದು ನಮ್ಮ ಪ್ರಶ್ನೆ.

ಹೌದು, ಇಲ್ಲ, ಗೊತ್ತಿಲ್ಲ ಎಂಬ ಮೂರು ಉತ್ತರಗಳು ನಿಮ್ಮ ಮುಂದೆ. ದಯಮಾಡಿ ಓಟ್ ಮಾಡಿ.
0 komentar

Blog Archive