ಉದಯವಾಣಿಯ ಸಂಪಾದಕ ತಿಮ್ಮಪ್ಪ ಭಟ್ಟರು ಒಂದು ವಾರ ಕಾಲ ರಜೆ ಹಾಕಿ ಹೋಗಿದ್ದಾರೆ, ಮೊಬೈಲು ಸ್ವಿಚ್ ಆಫ್. ಹೀಗೆ ದಿಢೀರನೆ ರಜೆ ಹಾಕಿ ಹೋಗಿದ್ದಕ್ಕೆ ಕಾರಣ ಏನು ಎಂದು ಹುಡುಕಲು ಹೊರಟರೆ ಹೊಸಹೊಸ ಸುದ್ದಿಗಳು ಒಂದರ ಹಿಂದೆ ಒಂದರಂತೆ ಹೊರಬೀಳುತ್ತಿವೆ.

ವಾಸ್ತವವಾಗಿ ತಿಮ್ಮಪ್ಪ ಭಟ್ಟರನ್ನು ಉದಯವಾಣಿಗೆ ಕರೆತಂದಿದ್ದೇ ಹುಬ್ಬಳ್ಳಿ ಆವೃತ್ತಿ ನಿರ್ವಹಣೆಗೆ. ಅದೇ ಸಂದರ್ಭದಲ್ಲಿ ಡಾ.ಪೂರ್ಣಿಮ ಅವರು ರಾಜೀನಾಮೆ ನೀಡಿ ಹೊರಹೋದಾಗ ತಿಮ್ಮಪ್ಪ ಭಟ್ಟರನ್ನು ಉಸ್ತುವಾರಿ ಸಂಪಾದಕರನ್ನಾಗಿ ನೇಮಿಸಲಾಗಿತ್ತು. ಈಗ ಭಟ್ಟರನ್ನು ಹುಬ್ಬಳ್ಳಿ ಬ್ಯೂರೋಗೆ ಕಳುಹಿಸುವ ತಯಾರಿಗಳು ನಡೆದಿದೆ,

ಇನ್ನೂ ವಿಸ್ತ್ರತವಾಗಿ ಹೇಳುವುದಾದರೆ ಮೃದು ಸ್ವಭಾವದ ತಿಮ್ಮಪ್ಪ ಭಟ್ಟರಿಗೆ ಉದಯವಾಣಿಯಲ್ಲಿ ಸಂಪಾದಕರಿಗೆ ನೀಡುವ ಪೂರ್ಣ ಅಧಿಕಾರವನ್ನು ಕೊಟ್ಟೇ ಇರಲಿಲ್ಲ. ಎಲ್ಲವೂ ಡಿವಿಜಿಜನಲ್ ಮ್ಯಾನೇಜರ್ ಒಬ್ಬನ ಕೈಯಲ್ಲೇ ಇತ್ತು. ಸಂಪಾದಕೀಯ ವಿಭಾಗ ಹೊರತುಪಡಿಸಿ ಉಳಿದ ವಿಭಾಗಗಳ ಸಿಬ್ಬಂದಿಗೆ ರಜೆ ನೀಡುವ, ನಿರಾಕರಿಸುವ ಅಧಿಕಾರವನ್ನೂ ಭಟ್ಟರಿಗೆ ನೀಡಲಾಗಿರಲಿಲ್ಲ. ಹೀಗಾಗಿ ಯಾವುದೂ ಅವರ ಕಂಟ್ರೋಲ್‌ನಲ್ಲೇ ಇರಲಿಲ್ಲ. ಡಿಟಿಪಿ ಆಪರೇಟರ್‌ಗಳು ತಿಂಗಳುಗಟ್ಟಲೆ ರಜೆ ಹಾಕಿದರೂ ಕೇಳುವವರು ಇರಲಿಲ್ಲ. ಇದರಿಂದ ಭಟ್ಟರು ಮಾನಸಿಕವಾಗಿ ನೊಂದಿದ್ದರು ಎಂಬ ಮಾತುಗಳೂ ಇವೆ.

ಅಸಲಿ ಸುದ್ದಿ ಏನೆಂದರೆ ಜನವರಿ ೧೫ರೊಳಗೆ ಹಲವು ಕ್ಷಿಪ್ರ ಬೆಳವಣಿಗೆಗಳು ಘಟಿಸಲಿವೆ. ಇವುಗಳಿಗೆ ತಿಮ್ಮಪ್ಪ ಭಟ್ಟರ ವಾರದ ರಜೆಯೇ ಮುನ್ನುಡಿ ಬರೆದಿದೆ.

ತಿಮ್ಮಪ್ಪ ಭಟ್ಟರನ್ನು ಹುಬ್ಬಳ್ಳಿಗೆ ಕಳುಹಿಸಿದರೆ ಉದಯವಾಣಿಯ ಸಂಪಾದಕರಾಗುವವರ‍್ಯಾರು? ಲಭ್ಯ ಮಾಹಿತಿಗಳ ಪ್ರಕಾರ ಕನ್ನಡಪ್ರಭದಿಂದ ಶಿವಸುಬ್ರಹ್ಮಣ್ಯಂ ಹೊರಬಿದ್ದು ಉದಯವಾಣಿಯ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. ಅದರರ್ಥ ಕನ್ನಡಪ್ರಭದ ಸಂಪಾದಕ ಹುದ್ದೆಗೆ ಖಾಲಿಯಾಗಲಿದೆ. ಹೀಗೆ ಖಾಲಿಯಾಗುತ್ತಿರುವುದೇ ವಿಶ್ವೇಶ್ವರ ಭಟ್ಟರಿಗಾಗಿ ಎಂಬುದು ಬಲವಾಗಿ ಕೇಳಿಬರುತ್ತಿರುವ ಮಾಹಿತಿ.

ವಿಶ್ವೇಶ್ವರ ಭಟ್ಟರು ನಾನು ದಿನಗಳನ್ನು ಲೆಕ್ಕ ಹಾಕುತ್ತಿದ್ದೇನೆ ಎಂದು ಶರಶಯ್ಯೆಯಲ್ಲಿ ಮಲಗಿದ ಭೀಷ್ಮನ ಹಾಗೆ ತಮ್ಮ ವೆಬ್‌ಸೈಟಿನಲ್ಲಿ ಬರೆದುಕೊಂಡಿದ್ದಾರೆ. ಈಗಾಗಲೇ ಹತಾರಗಳನ್ನು ಸಿದ್ಧ ಮಾಡಿಕೊಟ್ಟುಕೊಂಡು, ತಮ್ಮ ವಿರೋಧಿಗಳಿಗೆ ಲೆಕ್ಕಾ ಚುಕ್ತಾ ಮಾಡುವ ಉತ್ಸಾಹದಲ್ಲಿರುವ ಭಟ್ಟರ  ಹೊಸ ಹುದ್ದೆ, ಸಂಸ್ಥೆ ಏನೆಂಬುದು ೧೫ನೇ ತಾರೀಖಿನೊಳಗೆ  ಬಹಿರಂಗವಾಗಲಿದೆ. ಹೊಸ ಹುದ್ದೆ ಕ್ವೀನ್ಸ್ ರೋಡಿನಲ್ಲೇ ಇರುತ್ತಾ, ಮಣಿಪಾಲ್ ಟವರ‍್ಸ್‌ನಲ್ಲಿ ಇರುತ್ತಾ ಕಾದು ನೋಡಬೇಕು.

ರಂಗನಾಥ್ ಮತ್ತವರ ಟೀಮು ಕನ್ನಡಪ್ರಭ ಬಿಟ್ಟು ಹೊರಹೋದಾಗ, ಇದ್ದ ಹುಡುಗರನ್ನೇ ಗುಡ್ಡೆ ಹಾಕಿಕೊಂಡು ಶ್ರದ್ಧೆಯಿಂದ ಪತ್ರಿಕೆಯನ್ನು ಬೆಳೆಸಿದವರು ಶಿವಸುಬ್ರಹ್ಮಣ್ಯಂ. ಇವರ ಅವಧಿಯಲ್ಲಿ ಪ್ರಸಾರಸಂಖ್ಯೆಯೂ ಹೆಚ್ಚಾಯಿತು. ಹೀಗಿರುವಾಗ ಹೊಸ ನಾಯಕನ ಅವಶ್ಯಕತೆ ಇತ್ತೆ? ಮ್ಯಾನೇಜ್‌ಮೆಂಟುಗಳು ಹೇಗೆ ಯೋಚಿಸುತ್ತವೋ ಬಲ್ಲವರ‍್ಯಾರು?

೧೫ರೊಳಗೆ ಬದಲಾವಣೆಗಳು ಆಗುವುದಂತೂ ದಿಟ. ಎಲ್ಲಿ ಹೇಗೆ ಎಂಬುದನ್ನು ಟ್ರಾಕ್ ಮಾಡುತ್ತಿರುತ್ತೇವೆ. ನಿಮ್ಮ ಗಮನಕ್ಕೆ ತರುತ್ತೇವೆ.
0 komentar

Blog Archive