ದೃಶ್ಯ-೧

ನಿತ್ಯಾನಂದನ ಸಿಡಿ ಬಿಡುಗಡೆಯಾಗಿದೆ. ಟೀವಿಗಳಲ್ಲಿ ಒಂದೇ ಸಮನೆ ನಿತ್ಯಾನಂದ-ರಂಜಿತಾ ಇರುವ ಹಾಟ್ ದೃಶ್ಯಗಳು ಪ್ರಸಾರವಾಗುತ್ತಿವೆ. ಬಿಡದಿ ಸಮೀಪ ಇರುವ ನಿತ್ಯಾನಂದನ ಆಶ್ರಮದ ಎದುರು ಸ್ಥಳೀಯರ ಪ್ರತಿಭಟನೆ. ಈ ಸಂದರ್ಭದಲ್ಲಿ ಒಂದು ಸಂಘಟನೆಯ ಮುಖಂಡರನ್ನು ಕರೆದು ಕೆಲ ಟಿವಿ ವರದಿಗಾರರು, ಛಾಯಾಗ್ರಾಹಕರು ಮಾತನಾಡುತ್ತಾರೆ. ನೋಡಿ, ನೀವು ಸುಮ್ಮನೆ ಧರಣಿ ಕೂತ್ರೆ ಸುದ್ದಿಯಾಗಲ್ಲ. ಅಲ್ಲಿ ಕಾಣುತ್ತಿದೆಯಲ್ಲ ನಿತ್ಯಾನಂದನ ಕಟೌಟು, ವಿನೈಲು ಅದಕ್ಕೆ ಬೆಂಕಿ ಹಾಕಿ. ಆಶ್ರಮದ ಬಾಗಿಲು ಒಡೆಯಿರಿ ಎಂದು ಹೇಳುತ್ತಾರೆ.

ಸಂಘಟನೆಯ ಕಾರ್ಯಕರ್ತರು ಸುಮ್ಮನೆ ಇದ್ದಾರೆಯೇ? ಹೋಗಿ ಬೆಂಕಿ ಹಚ್ಚಿದರು. ಒಳ್ಳೆ ವಿಜುಯಲ್ ಸಿಕ್ಕಿದ ಖುಷಿಯಲ್ಲಿ ಟಿವಿ ಸಿಬ್ಬಂದಿ ಹೊರಟು ಹೋದರು.

ತನಿಖೆ ಮಾಡಿದ ಡಿವೈಎಸ್‌ಪಿಗೆ ಸಿಕ್ಕಿ ಬಿದ್ದ ಹುಡುಗರು ಹೇಳಿದ ಕಥೆ ಇದು. ನಾವು ಸುಮ್ನೆ ಧರಣಿ ಮಾಡಣಾ ಅಂತಿದ್ವಿ ಸಾ, ಟಿವಿಯವರು ಹೇಳಿಕೊಟ್ಟರು. ಅದಕ್ಕೆ ಬೆಂಕಿ ಹಾಕಿದ್ವು ಎಂದು ಹೇಳಿದರು.

ದೃಶ್ಯ-೨

ಇನ್ನೊಂದು ಸಂಘಟನೆಯ ಕಾರ್ಯಕರ್ತರು ಗಾಂಧಿನಗರದ ಮಹಾರಾಷ್ಟ್ರ ಬ್ಯಾಂಕ್ ಎದುರು ಪ್ರತಿಭಟನೆ ಮಾಡುತ್ತಿದ್ದರು. ಸುಮಾರು ೫೦ ಜನ ಕಾರ್ಯಕರ್ತರು ಇದ್ದರು. ಟಿವಿ ಛಾಯಾಗ್ರಾಹಕರು ಹಾಜರಾದರು. ಅವರಲ್ಲಿ ಒಬ್ಬ ಏನ್ ಗುರು, ಸುಮ್ನೆ ಧರಣಿ ಅಂದ್ರೆ ಪಿಕ್ಚರ್ ಆಗಲ್ಲ, ನಾವು ಬೇರೆ ಅಸೈನುಮೆಂಟಿಗೆ ಹೋಗಬೇಕು. ಒಂದೆರಡು ಕಲ್ಲು ಒಗೀರಿ, ಪಿಕ್ಚರ್ ಆಯ್ತದೆ ಎಂದು ಕಾರ್ಯಕರ್ತರಿಗೆ ಹೇಳಿದ.

ಕೇಳಬೇಕೆ, ಕಾರ್ಯಕರ್ತರು ಎರಡು ಕಲ್ಲು ಒಗೆದರು ಅಷ್ಟೆ, ಪೊಲೀಸರು ಕಾರ್ಯಕರ್ತರನ್ನು ಹಿಡಿದು ಚಚ್ಚಿದ್ದೇ ಚಚ್ಚಿದ್ದು. ಬಟ್ಟೆ ಬಿಚ್ಚಿ ಬೀದಿಯಲ್ಲೇ ಥಳಿಸಲಾಯಿತು. ಕಾರ್ಯಕರ್ತರ ಮೇಲೆ ಕೇಸಿನ ಮೇಲೆ ಕೇಸು.

ಮಾರನೇ ದಿನ ಪತ್ರಿಕೆಗಳಲ್ಲಿ ಪೊಲೀಸರು ಕಾರ್ಯಕರ್ತರನ್ನು ಹೊಡೆಯುತ್ತಿರುವ ಬೊಂಬಾಟ್ ಫೋಟೋಗಳು. ಫೋಟೋಗ್ರಾಫರುಗಳಿಗೆ ಖುಷಿಯೋ ಖುಷಿ.

ದೃಶ್ಯ-೩

ಬೀದರ್ ಪ್ರವಾಸದಲ್ಲಿದ್ದ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ್ ಅವರಿಗೆ ಮನವಿ ಪತ್ರ ಕೊಡುವ ಸೋಗಿನಲ್ಲಿ ಬಂದ ಸಂಘಟನೆಯ ಮುಖಂಡರು ಏಕಾಏಕಿ ಮಸಿ ಬಳಿದರು. ಸಜ್ಜನ ರಾಜಕಾರಣಿಗೆ ಬೆಲ್ಲದ್‌ಗೆ ಮಸಿ ಬಳಿದ ಪ್ರಕರಣ ಕುರಿತಂತೆ ಸಾಕಷ್ಟು ವಿರೋಧಗಳು ವ್ಯಕ್ತವಾದವು. ಹಲವೆಡೆ ಪ್ರತಿಭಟನೆಗಳು ನಡೆದವು.

ಪೊಲೀಸರು ತನಿಖೆ ಶುರು ಮಾಡಿದರು. ಮಸಿ ಬಳಿದ ಕೃತ್ಯದ ಹಿಂದೆ ಟಿವಿ ವರದಿಗಾರನ ಕೈವಾಡವೂ ಇದೆ ಎಂದು ಆರೋಪಿಸಿದರು. ಮಾತ್ರವಲ್ಲ, ಆ ವರದಿಗಾರನನ್ನೂ ಬಂಧಿಸಿದರು. ಸಂಘಟನೆಯವರು ಮತ್ತು ವರದಿಗಾರ ಕೂಡಿಯೇ ಈ ಸಂಚು ರೂಪಿಸಿದ್ದು ಎಂಬುದು ಪೊಲೀಸರ ಹೇಳಿಕೆ.

ಇಂಥ ದೃಶ್ಯಗಳು ನೂರಾರು ಇವೆ. ಕೆಲವನ್ನು ಮಾತ್ರ ಪ್ರಾತಿನಿಧಿಕವಾಗಿ ಹೇಳಿದ್ದೇವೆ. ಪ್ರತಿಭಟನೆ ಮಾಡುವವರ ಕೈಗೆ ವಿಷಯ ಬಾಟಲಿ ಕೊಟ್ಟು, ನೇಣಿನ ಕುಣಿಕೆ ಕೊಟ್ಟು ದೃಶ್ಯಗಳನ್ನು ಸೆರೆ ಹಿಡಿಯುವ ಪತ್ರಕರ್ತರೂ ಇದ್ದಾರೆ. ಸಾವಿನ ಮನೆಯಲ್ಲಿ ನಿಂತು ಸ್ವಲ್ಪ ಜೋರಾಗಿ ಅಳ್ರೀ ಎಂದು ಹೇಳಿ ಚಿತ್ರೀಕರಿಸಿಕೊಳ್ಳುವವರೂ ಇದ್ದಾರೆ.

ಪತ್ರಕರ್ತರಿಗೆ ಸಾಮಾಜಿಕ ಜವಾಬ್ದಾರಿಗಳು ಇಲ್ಲದೇ ಇದ್ದಾಗ ಇಂಥವೆಲ್ಲ ನಡೆಯುತ್ತವೆ. ನ್ಯೂಸ್ ಚಾನೆಲ್‌ಗಳ ಸಮರದಿಂದಾಗಿ, ಪತ್ರಕರ್ತರು ತಮಗೆ ಬೇಕಾದ ವಿಜುಯಲ್‌ಗಾಗಿ ಸುದ್ದಿಗಳನ್ನು ಸೃಷ್ಟಿಸುತ್ತಾರೆ, ಸುದ್ದಿಗಳನ್ನು ತಮಗೆ ಬೇಕಾದ ಹಾಗೆ ರೂಪಿಸಿಕೊಳ್ಳುತ್ತಾರೆ.

ಹೊಸದಾಗಿ ಬಂದು ಕೆಲಸಕ್ಕೆ ಸೇರಿಕೊಳ್ಳುವ ಹುಡುಗ ಹುಡುಗಿಯರಿಗೆ ನಮ್ಮ ಸಾಮಾಜಿಕ ವ್ಯವಸ್ಥೆಯ ಆಳ-ಅಗಲ ಗೊತ್ತಿರುವುದಿಲ್ಲ. ಅವರಿಗೇನಿದ್ದರೂ ಎಕ್ಸ್‌ಕ್ಲೂಸಿವ್ ಸುದ್ದಿಯೊಂದನ್ನು ಬ್ರೇಕ್ ಮಾಡುವ ಆತುರವಿರುತ್ತದೆ ಅಷ್ಟೆ. ಅವರ ಸೀನಿಯರ್‌ಗಳೂ ಅದನ್ನೇ ಹೇಳಿ ಅವರನ್ನು ಅಸೈನ್‌ಮೆಂಟಿಗೆ ಅಟ್ಟಿರುತ್ತಾರೆ. ಊರು ಹಾಳಾದರೆ ಅವರಿಗೇನು, ರೋಚಕ ವಿಜುಯಲ್ ಸಿಕ್ಕರೆ ಸಾಕು.

ಪೊಲೀಸರೂ ಸಹ ಆಗಾಗ ಇಂಥ ಪತ್ರಕರ್ತರನ್ನು ಪಳಗಿಸಲು ಯತ್ನಿಸಿದ ಉದಾಹರಣೆಗಳು ಇವೆ. ಆದರೆ ಪತ್ರಕರ್ತರನ್ನು ಎದುರುಹಾಕಿಕೊಳ್ಳುವುದು ಪೊಲೀಸರಿಗೂ ಅಸಾಧ್ಯ. ಅಪರಾಧ ಪ್ರಕರಣ ನಡೆಯುವಾಗ ನಮಗೆ ಅದನ್ನು ತಿಳಿಸಿ, ಇಲ್ಲದಿದ್ದರೆ ಅದು ನಿಮ್ಮ ಅಪರಾಧವಾಗುತ್ತದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಶಂಕರ ಬಿದರಿ ಪತ್ರಕರ್ತರಿಗೆ ತಾಕೀತು ಮಾಡಿದ ನೆನಪು. ಆದರೆ ನಮ್ಮ ಸೋರ್ಸ್‌ಗಳನ್ನು ನಾವು ಹೇಗೆ ಬಿಟ್ಟುಕೊಡಲು ಸಾಧ್ಯ ಎಂಬುದು ಪತ್ರಕರ್ತರ ಪ್ರಶ್ನೆ. ಪೊಲೀಸರ ನಿಯಂತ್ರಣಕ್ಕೆ ಪತ್ರಕರ್ತರು ಸಿಲುಕಿಕೊಂಡರೆ ಅದರಿಂದ ಅನಾಹುತಗಳೇ ಜರುಗುತ್ತವೆ, ಅದು ನ್ಯಾಯಸಮ್ಮತವಲ್ಲ ಎಂಬುದೇನೋ ನಿಜ.

ಆದರೆ ಸುದ್ದಿ ಹಸಿವೆಯ ಪತ್ರಕರ್ತರು ನಡೆಸುವ ಅನಾಹುತಗಳಿಗೆ ಯಾರು ಜವಾಬ್ದಾರಿಯಾಗುತ್ತಾರೆ?
0 komentar

Blog Archive