ದೃಶ್ಯ-೧

ಅತ್ತ ವಿಶ್ವೇಶ್ವರ ಭಟ್ಟರು ಧೂಳಿನಿಂದ ಎದ್ದು ಬರಲು ಕಾತರಿಸುತ್ತಿದ್ದರೆ, ಇತ್ತ ಮತ್ತೊಂದು ಪತ್ರಿಕೆಯ ಬ್ಯೂರೋ ಮುಖ್ಯಸ್ಥರಾಗಿರುವ ಇನ್ನೊಬ್ಬ ಭಟ್ಟರು ಸೂರ್ಯ ಉದಯವಾಗುತ್ತಿದ್ದಂತೆ ಕಚೇರಿಗೆ ಬಂದು ಆತಂಕ-ಗಾಬರಿಯಿಂದ ತಮ್ಮ ಛೇಂಬರಿನಲ್ಲಿ ಕುಳಿತಿದ್ದಾರೆ.

ಒಳಗೆ ಬಂದ ಆಫೀಸ್ ಬಾಯ್ ಸರ್ರಾ, ಸಂಪಾದಕೀಯಾ ಓದಿದಿರೇನ್ರೀ ಎಂದು ರಾಗವಾಗಿ ಕೇಳುತ್ತಾನೆ. ಭಟ್ಟರು ಕೋಪದಿಂದ ಮಿಡುಕುತ್ತ ‘ಏಯ್ ತಲೆಹರಟೆ, ತೊಲಗು ಶನಿ ಎಂದು ಅಬ್ಬರಿಸುತ್ತಾರೆ.

ಅಲ್ರೀ ಸಾಹೇಬ್ರಾ ನಾನು ನಮ್ಮ ಪತ್ರಿಕೆಯ ಸಂಪಾದಕೀಯ ಓದಿದ್ರಾ ಅಂತ ಕೇಳಿದ್ರೆ, ಕೋಪ ಯಾಕ್ ಮಾಡ್ಕೊಳ್ಳಾಕ್ ಹತ್ತೀರಿ. ಯಾಕೋ ನಮ್ ನಸೀಬೇ ಸೀದಾ ಇಲ್ ಬಿಡ್ರೀ.. ಎಂದು ವಟಗುಟ್ಟುತ್ತಾನೆ.

ಆಯ್ತು ನೀನು ಮೊದಲು ಹೋಗು ಮಾರಾಯ ಎಂದು ಭಟ್ಟರು ಸಿಡಿಸಿಡಿ ಎನ್ನುತ್ತಾರೆ. ಆಫೀಸ್ ಬಾಯ್ ಒಳಗಿಂದೊಳಗೆ ನಗುತ್ತಾ ಹೊರಟು ಹೋಗುತ್ತಾನೆ.

ಚಿಂತಾಮಗ್ನರಾದ ಭಟ್ಟರು ಇದೆಂಥ ಕಥೆ ಆಗಿಹೋಯ್ತು ಅಂತ ತಲೆಕೆಡಿಸಿಕೊಂಡು, ತನ್ನ ನಿಷ್ಠಾವಂತ ವರದಿಗಾರನನ್ನು ಛೇಂಬರಿಗೆ ಕರೆಸಿಕೊಳ್ಳುತ್ತಾರೆ. ನೋಡ್ರೀ ಇವರೇ, ನಮ್ಮ ಆಫೀಸಿನಲ್ಲಿ ಈ ಬ್ಲಾಗ್‌ಗಳನ್ನು ಓದದಂತೆ ಮಾಡಬೇಕು. ಯಾರಾದರೂ ಕಂಪ್ಯೂಟರ್ ತಜ್ಞರನ್ನು ಕರೆಸಿ ಎಂದು ಆಜ್ಞಾಪಿಸುತ್ತಾರೆ.

ಆಫೀಸಿನವರ ಮೇಲೆ ಒಂದು ಕಣ್ಣು ಇಡ್ರೀ. ಹೆಡ್ಡಾಫೀಸಿಗೆ ಯಾರು ಯಾರು ಫೋನ್ ಮಾಡ್ತಾರೆ ನೋಡ್ಕೊಳ್ಳಿ. ನಮ್ಮವರೇ ನಮಗೆ ಶತ್ರುಗಳಾಗಿದ್ದಾರೆ ಎಂದು ಗೊಣಗುತ್ತಿದ್ದಂತೆ ನಿಷ್ಠಾವಂತ ವರದಿಗಾರ ಅಯ್ಯೋ ಶಂಕರ, ನಮ್ಮ ಸಾಹೇಬ್ರಿಗೆ ಇದೇನು ಆಗಿ ಹೋಯ್ತು ಎಂದು ಪರಶಿವನ ಧ್ಯಾನ ಮಾಡುತ್ತ ಹೊರಬೀಳುತ್ತಾನೆ.

ದೃಶ್ಯ-೨

ಸಂಪಾದಕರು ಶಾಂತ ಮುಖಭಾವದಲ್ಲಿ ಕುಳಿತಿದ್ದರೂ, ಒಳಗೆ ಕುದಿಯುತ್ತಿದ್ದಾರೆ. ಛೇಂಬರಿನೊಳಗೆ ಸಹ ಸಂಪಾದಕರ ಪ್ರವೇಶವಾಗುತ್ತದೆ.

ಏನ್ರೀ ಇದು ಕರ್ಮ ನಿಮ್ಮ ಬ್ಯೂರ್ ಚೀಫ್‌ದು. ಮೊದಲು ಕಿತ್ತು ಹಾಕ್ರೀ ಅವನನ್ನು. ಬರೀ ಕಂಪ್ಲೇಂಟೇ ಆಯ್ತು. ತುಮಕೂರಿನಲ್ಲಿ ಇದ್ದಾಗ್ಲೂ ಕಂಪ್ಲೇಂಟು, ಹುಬ್ಬಳ್ಳಿಯಲ್ಲಿ ಇದ್ದಾಗ್ಲೂ ಕಂಪ್ಲೇಂಟು. ಈಗ ನೋಡಿ ಹೀಗೆ ಮಾಡಿಕೊಂಡು ಕೂತಿದ್ದಾನೆ ಎಂದು ಸಂಪಾದಕರು ಕೋಪದಲ್ಲಿ ಹೇಳುತ್ತಾರೆ.

ಅದು ಹಾಗಲ್ಲ ಸರ್, ನಂಗೂ ಅವನ ಮೇಲೆ ಅನುಮಾನ ಇತ್ತು. ಆದ್ರೆ ಏನು ಮಾಡೋದು ಸರ್, ಅವನನ್ನು ಈಗ ಕಿತ್ತು ಹಾಕೋದು ಕಷ್ಟ ಸರ್ ಎಂದು ಸಹಸಂಪಾದಕರು ಸಮಾಧಾನಪಡಿಸಲು ಯತ್ನಿಸುತ್ತಾರೆ. ನೋಡಿದ್ರೇನ್ರೀ, ನಿನ್ನೆ ಪ್ರೆಸ್‌ಕ್ಲಬ್ ಕಾರ್ಯಕ್ರಮದಲ್ಲಿ ಕೃಷ್ಣಪ್ರಸಾದ್ ಹೇಳಿದ್ದು. ಪತ್ರಕರ್ತರು ಭ್ರಷ್ಟರಾಗಬಾರದು ಕಣ್ರೀ ಎಂದು ಸ್ವಲ್ಪ ಸಮಾಧಾನದ ಧಾಟಿಯಲ್ಲಿ ಸಂಪಾದಕರು ಹೇಳುತ್ತಾರೆ.

ಸಿಕ್ಕಿದ್ದೇ ಛಾನ್ಸು ಎಂದುಕೊಂಡು ಸಹಸಂಪಾದಕರು ನಿರರ್ಗಳವಾಗಿ ಮಾತನಾಡುತ್ತಾರೆ. ಹೌದು ಸರ್, ನಾನೂ ಹೋಗಿದ್ದೆ ಪ್ರೆಸ್‌ಕ್ಲಬ್ ಕಾರ್ಯಕ್ರಮಕ್ಕೆ. ಕೃಷ್ಣಪ್ರಸಾದ್ ಹೇಳಿದ್ದನ್ನು ಕೇಳಿಸಿಕೊಂಡೆ. ಆದರೆ ಏನು ಮಾಡೋದು, ಇವನೊಬ್ಬನ ಸಮಸ್ಯೆ ಅಲ್ಲ ಸರ್ ಇದು. ಪತ್ರಕರ್ತರೆಲ್ಲ ಹರ‍್ಕೊಂಡು ತಿನ್ನೋ ನಾಯಿಗಳಾಗಿದ್ದಾರೆ. ಹಂಗಂತ ನಾಯಿಗಳನ್ನು ಲಘುವಾಗಿ ಕಾಣುವ ಹಾಗಿಲ್ಲ. ಪ್ರಾಣಿ ದಯಾ ಸಂಘದವರ ಕಾಟ. ಸಂಘದವರ ಕಥೆ ಹಾಗಿರಲಿ, ನಾಯಿಗಳ ತಂಟೆಗೆ ಹೋದರೆ ನಮ್ಮ ಲಂಕೇಶ್ ಪತ್ರಿಕೆ ವರದಿಗಾರ ರಾ.ಸೋಮನಾಥ್ ಅಂಥವರೇ ಸುಮ್ಮನಿರಲ್ಲ... ಈ ಬ್ಲಾಗ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳೋದು ಬೇಡ ಸರ್. ಮಾಡೋದಕ್ಕೆ ಕೆಲಸವಿಲ್ಲದೋರು ಅವರು. ಬರೆಯೋರು ಬರೆದುಕೊಳ್ತಾರೆ ಬಿಡಿ ಸರ್. ಎಷ್ಟು ಸಮಸ್ಯೆ ಇದೆ ರಾಜ್ಯದಲ್ಲಿ. ರಸ್ತೆಗಳು ಕೆಟ್ಟುಹೋಗಿವೆ. ರಿಪೇರಿ ಮಾಡೋರು ಗತಿಯಿಲ್ಲ. ಅದರ ಬಗ್ಗೆ ಯಾರೂ ಬರೆಯಲ್ಲ. ಈ ಮಧ್ಯೆ ನೋಡಿ, ಈ ನಾಯಿಗಳ ಕಾಟ. ಆದರೂ ಏನು ಮಾಡೋದು ಸರ್, ನಾವು ಈ ನಾಯಿಗಳ ಜತೆಯೇ ಬದುಕುಬೇಕು ಎಂದು ಏನೇನೋ ಮಾತನಾಡಲು ಶುರು ಮಾಡುತ್ತಾರೆ.

ಸಹಸಂಪಾದಕರ ಮಾತು ಕೇಳಿ ಸಿಟ್ಟಿಗೆದ್ದ ಸಂಪಾದಕರು ಏನ್ರೀ ನೀವು ನಾಯಿಗಳ ಬಗ್ಗೆ ಮಾತಾಡ್ತಾ ಇದ್ದೀರೋ, ಪತ್ರಕರ್ತರ ಬಗ್ಗೆ ಮಾತಾಡ್ತಾ ಇದ್ದೀರೋ. ಪೂರ್ತಿ ಕನ್‌ಫ್ಯೂಷನ್ ಮಾಡ್ತಿದ್ದೀರಲ್ರೀ ಎಂದು ಸಿಡುಕುತ್ತಾರೆ.

ಸಂಪಾದಕರ ಕೋಪವನ್ನು ಕಂಡು ಬೆದರಿದ ಸಹಸಂಪಾದಕರು, ಇಲ್ಲ ಬಿಡಿ ಸರ್, ಕ್ರಮ ಕೈಗೊಳ್ಳೋಣ, ಇವತ್ತೇ ನೋಟಿಸ್ ಕಳಿಸೋಣ ಬಿಡಿ. ಆದ್ರೂ ಸರ್, ನಮ್ ಪತ್ರಿಕೋದ್ಯಮ ಕೆಟ್ಟೋಯ್ತು ಸರ್. ನಾವು ಎಂಥೆಂಥವರನ್ನು ನೋಡಿದ್ವಿ. ಏನ್ ಸರ್ ಈಗಿನ ಹುಡುಗ್ರು. ಎಥಿಕ್ಸ್ ಇಲ್ಲ, ಮೊರಾಲಿಟಿ ಇಲ್ಲ ಎಂದು ಏನೇನೋ ಹೇಳಲಾರಂಭಿಸಿದರು.

ಅವರು ಹೇಳಿದ್ದು ಏನೇನೂ ಅರ್ಥವಾಗದೇ ಹೋದಾಗ ಆಯ್ತು ಬಿಡ್ರೀ, ಮೊದಲು ನೋಟಿಸ್ ಕಳಿಸಿ ಎಂದ ಸಂಪಾದಕರು ಮತ್ತೆ ಶಾಂತಚಿತ್ತದಿಂದ, ಮುಂದಿನ ಒಲಿಂಪಿಕ್ಸ್‌ಗೆ ಹೋಗುವ ಕುರಿತು ಆಲೋಚನಾಮಗ್ನರಾಗುತ್ತಾರೆ.

ಸಹಸಂಪಾದಕರು ಹೊರಗೆ ಬಂದು ಬೆವರು ಒರೆಸಿಕೊಳ್ಳುತ್ತ ನೋಟೀಸು ಟೈಪು ಮಾಡಿಸುತ್ತ ಕುಳಿತುಕೊಳ್ಳುತ್ತಾರೆ.

(ಈ ಪುಟ್ಟ ದೃಶ್ಯಗಳ ಎಲ್ಲಾ ಪಾತ್ರಗಳು, ಚರ್ಚೆಗಳು ಶ್ರೀ ನಂದೀಶ್ವರನ ಮೇಲೆ ಆಣೆಯಾಗಲೂ ಕಾಲ್ಪನಿಕ. ಏನಾದರೂ ಹೋಲಿಕೆ ಕಂಡರೆ ಅದು ಕಾಕತಾಳೀಯ-ಸಂ)
0 komentar

Blog Archive