ಶೀಘ್ರದಲ್ಲೇ ನಿಮಗೆ ಸಿಗಲಿದೆ ಸಿಹಿ ಸುದ್ದಿ.. ಏನಿರಬಹುದೆಂಬ ಕುತೂಹಲ ನಿಮ್ಮಲ್ಲಿರಬಹುದು. ಕೆಲವೇ ಕೆಲವು ದಿನಗಳಲ್ಲಿ ನಿಮಗೊಂದು ಸಿಹಿ ಸುದ್ದಿ ಸಿಗಲಿದೆ. ಅಲ್ಲಿಯ ತನಕ ನಿರೀಕ್ಷೆಯಲ್ಲಿರುತ್ತೀರಾ ತಾನೆ?

ಹೀಗಂತ ತಮ್ಮ ಅಭಿಮಾನಿ ಸಮೂಹವನ್ನು ತುದಿಗಾಲಲ್ಲಿ ನಿಲ್ಲಿಸಿರೋರು ವಿಜಯ ಕರ್ನಾಟಕದ ಮಾಜಿ ಸಂಪಾದಕ ವಿಶ್ವೇಶ್ವರಭಟ್ಟರು.

ವಿಜಯ ಕರ್ನಾಟಕದಿಂದ ಹೊರಬಂದಾಗ ಅವರೊಂದು ಸಂದೇಶ ಕೊಟ್ಟಿದ್ದರು. ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರವಾಸ ಹೋಗ್ತಾ ಇದ್ದೇನೆ ಎಂದು ಹೇಳಿಕೊಂಡಿದ್ದರು.

ಈಗ ಅವರು ತಮ್ಮ ವೆಬ್‌ಸೈಟ್‌ನ ಮೂಲಕ ಹೇಳಲು ಹೊರಟಿರುವ ಸಿಹಿಸುದ್ದಿಗೂ ವಿದೇಶ ಪ್ರವಾಸಕ್ಕೂ ಏನೇನೂ ಸಂಬಂಧವಿರುವುದಿಲ್ಲ ಎಂಬುದು ಅಭಿಮಾನಿ ಸಮೂಹದ ಅಂಬೋಣ. ಅರ್ಥಾತ್ ಭಟ್ಟರು ತಮ್ಮ ಹೊಸ ಸಾಹಸವನ್ನು ಇನ್ನೇನು ಕೆಲವೇ ದಿನಗಳಲ್ಲಿ ಘೋಷಿಸಲಿದ್ದಾರೆ ಮತ್ತು ಈ ಸಾಹಸ ಭಾರತದ ಅದರಲ್ಲೂ ಕರ್ನಾಟಕದ ನೆಲದಲ್ಲಿಯೇ ನಡೆಯಲಿದೆ. ಹೀಗಾಗಿ ಭಟ್ಟರ ಉನ್ನತ ಶಿಕ್ಷಣದ ಕಥೆಯನ್ನು ಕಿವಿ ಮೇಲೆ ಹೂವು ಎಂದು ಕಿಚಾಯಿಸಿದವರು ಮೀಸೆ ಮರೆಯಲ್ಲಿ ನಕ್ಕು ಖುಷಿಪಡಬಹುದು.

ವಿಶ್ವೇಶ್ವರ ಭಟ್ಟರ ಆಪ್ತಮಿತ್ರ ರವಿ ಬೆಳಗೆರೆಯವರು ತಮ್ಮ ಹಾಯ್ ಬೆಂಗಳೂರಿನಲ್ಲಿ ಭಟ್ಟರ ಹೊಸ ಪತ್ರಿಕೆಯ ಹೆಸರು ವಿಶ್ವ ಕರ್ನಾಟಕ ಇರಬಹುದು ಎಂದು ಹೇಳಿದ್ದಾರೆ. ಇತ್ತೀಚಿಗೆ ಭಟ್ಟರಿಗೂ ರವಿಗೂ ಕೆಮಿಸ್ಟ್ರಿ ಹೊಂದುತ್ತಿಲ್ಲ ಎಂಬುದನ್ನು ಸತತ ಮೂರು ಹಾಯ್ ಸಂಚಿಕೆಗಳಲ್ಲಿ ಭಟ್ಟರ ವಿರುದ್ಧವಾಗಿ ಪ್ರಕಟವಾಗುತ್ತಿರುವ ವರದಿಗಳೇ ಹೇಳುತ್ತವೆ. ಹೀಗಾಗಿ ರವಿ ಊಹೆ ಮೇಲೆ ಹೇಳಿರಬಹುದು ಎನ್ನಲಾಗುತ್ತಿದೆ. ಆದರೆ ವಿಶ್ವ ಕರ್ನಾಟಕ ಎಂಬ ಟೈಟಲ್ ರಿಜಿಸ್ಟರ್ ಆಗದೇ ಇರುವುದರಿಂದ ಭಟ್ಟರಿಗೆ ಈ ಟೈಟಲ್ ಸರಿಹೊಂದುವುದಾದರೆ ಅದನ್ನು ಟ್ರೈ ಮಾಡಬಹುದು ಎಂಬ ಪರೋಕ್ಷ ಸೂಚನೆಯನ್ನೂ ರವಿ ಕೊಟ್ಟಿರಬಹುದು.
ಭಟ್ಟರ ರಾಜರಾಜೇಶ್ವರಿ ನಗರದ ನಿವಾಸದಲ್ಲೇ ಇನ್ನೂ ಹುಟ್ಟಬೇಕಿರುವ ಪತ್ರಿಕೆಯ ಸಂಪಾದಕೀಯ ಸಭೆಗಳು ಭರದಿಂದ ನಡೆಯುತ್ತಿವೆ ಎಂಬ ಅಧಿಕೃತ ಮಾಹಿತಿಗಳಂತೂ ಇವೆ. ಪತ್ರಿಕೆಯ ಭಾವಿ ವರದಿಗಾರರು, ಉಪಸಂಪಾದಕರು ಈ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಟ್ಟರ ವಿಜಯ ಕರ್ನಾಟಕ ಎಕ್ಸಿಟ್‌ಗೆ ಮೂಲ ಕಾರಣಕರ್ತರಾದ ವಿಶ್ವಖ್ಯಾತಿಯ ಪತ್ರಕರ್ತರು, ಅಂಕಣಕೋರರು ಈ ಹೊಸ ಸಾಹಸದಲ್ಲಿದ್ದಾರೆ ಎಂಬುದೂ ಸಹ ಅಧಿಕೃತ ಸುದ್ದಿ.

ಲೇಟೆಸ್ಟ್ ಆಗಿ ತಮ್ಮ ವೆಬ್ ಸೈಟ್‌ನಲ್ಲಿ ಹೊಸ ವರ್ಷದ ಶುಭಾಶಯ ಹೇಳೋ ಬದಲಿಗೆ ಕೇಳ್ರಪ್ಪೋ ಕೇಳಿ.... ಎಂದು ಭಟ್ಟರು ಬರೆದುಕೊಂಡಿದ್ದಾರೆ. ಮುಂದಕ್ಕೆ ಏನೇನೂ ಇಲ್ಲ. ಅವರು ಹೇಳೋದನ್ನು ಕೇಳೋದಕ್ಕೆ ಕಾದು ಕುಳಿತಿರುವ ಅಭಿಮಾನಿ ಸಮೂಹ ಇದನ್ನು ಓದಿ ಇನ್ನಷ್ಟು ಚಡಪಡಿಸುತ್ತಿರಬಹುದು.

ಮತ್ತೆ ಮತ್ತೆ ವಿಶ್ವೇಶ್ವರ ಭಟ್ಟರ ಕುರಿತ ಪೋಸ್ಟ್‌ಗಳು ಬರುತ್ತಿರುವುದಕ್ಕೆ ಕ್ಷಮೆ ಇರಲಿ. ಹೇಗೆ ಕರ್ನಾಟಕದ ರಾಜಕಾರಣವನ್ನು ಎಚ್.ಡಿ.ದೇವೇಗೌಡರಿಂದ ಹೊರತುಪಡಿಸಿ ನೋಡಲಾಗುವುದಿಲ್ಲವೋ ಹಾಗೆ ಕರ್ನಾಟಕದ ಮಾಧ್ಯಮ ಲೋಕವನ್ನು ವಿಶ್ವೇಶ್ವರ ಭಟ್ಟರ ಹೊರತಾಗಿ ನೋಡುವುದು ಕಷ್ಟ.

ದೇವೇಗೌಡರು ಆಗಾಗ ಧೂಳಿನಿಂದ ಎದ್ದು ಬರುವುದು ಉಂಟು. ವಿಶ್ವೇಶ್ವರ ಭಟ್ಟರೂ ಸಹ ಧೂಳಿನಿಂದ ಎದ್ದು ಬರುವುದಕ್ಕೆ ಕಾದು ಕುಳಿತಿದ್ದಾರೆ. ಹೀಗೆ ಧೂಳಿನಿಂದ ಎದ್ದು ಬರುವಾಗ ಮೈಗೆ ಹತ್ತಿದ ಧೂಳನ್ನು ಕೊಡವಿಕೊಳ್ಳುವುದನ್ನು ಭಟ್ಟರು ಮರೆಯಬಾರದು ಎಂಬ ಸಣ್ಣ ಸಲಹೆಯೊಂದಿಗೆ ಅವರಿಗೆ ಶುಭ ಕೋರೋಣ.
0 komentar

Blog Archive