ಪ್ರಾಣಿ ಬಲಿ ಕುರಿತು ಡಾ. ಅರುಣ್ ಜೋಳದಕೂಡ್ಲಿಗಿ ಹಾಗೂ ರೂಪಾ ಹಾಸನ್ ಅವರು ಮಂಡಿಸಿರುವ ಚರ್ಚೆಗೆ ಕೊಟ್ಟೂರಿನ ಡಾ. ಸತೀಶ್ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಸದ್ಯ ಸಹಾಯಕ ಪ್ರಾಧ್ಯಾಪಕರಾಗಿರುವ ಸತೀಶ್ ಪಾಟೀಲ್ ಹಿಂದೆ ಮಾಧ್ಯಮ ಕ್ಷೇತ್ರದಲ್ಲೂ ಕೆಲಸ ನಿರ್ವಹಿಸಿದವರು. ಚರ್ಚೆ ಮುಂದುವರೆಯುತ್ತದೆ.-ಸಂಪಾದಕೀಯ
೩-೪ ವರ್ಷಗಳ ಹಿಂದೆ ಈಟಿವಿ ನ್ಯೂಸ್ ನಲ್ಲಿ ಬುಲೆಟಿನ್ ಪ್ರಡ್ಯೂಸರ್ ಆಗಿ ನಾನು ಕೆಲಸ ಮಾಡುತ್ತಿದ್ದೆ. ಒಮ್ಮೆ ಗುಲ್ಬರ್ಗ ಜಿಲ್ಲೆಯ ಹಳ್ಳಿಯೊಂದರಲ್ಲಿ ಸ್ತ್ರೀ ದೇವತೆಯ ಜಾತ್ರೆ ನಡೆದ ಸುದ್ದಿ ಬಂತು. ಆ ಜಾತ್ರೆಯಲ್ಲಿ ನೂರಾರು ಕುರಿ ಹಾಗೂ ಕೋಣಗಳನ್ನು ಬಲಿ ನೀಡಲಾಗಿತ್ತು. ಪ್ರಾಣಿ ಬಲಿ ನೀಡುವಾಗ ಸುತ್ತಲಿನ ಕೆಲವರು ಕೂಗುತ್ತಿದ್ದರೆ, ಇನ್ನು ಕೆಲವರು ಕೈ ಮುಗಿದು ನಿಂತಿದ್ದು ಕಾಣುತ್ತಿತ್ತು. ಆ ಪರಿಸರದಲ್ಲಿ ರಕ್ತದೋಕುಳಿ ಹರಿದಾಡಿತ್ತು.. ಮೌಢ್ಯತೆಯ ಪರಾಕಾಷ್ಠತೆಯಾಗಿರುವ ಈ ಭೀಕರ ಘಟನೆ ಡೆಸ್ಕ್ ನಲ್ಲಿ ಚರ್ಚೆಗೆ ಕಾರಣವಾಯಿತು. ಜಾತ್ರೆಯಲ್ಲಿ ನಡೆದ ಭೀಕರ ಸನ್ನಿವೇಶ ವಿರೋಧಿಸಿ ಹೆಡ್ ಲೈನ್ ರೆಡಿ ಮಾಡಲು ನನಗೆ ಸೂಚಿಸಲಾಯಿತು. ಆದರೆ, ಅದಕ್ಕೆ ನಾನು ವಿರೋಧ ವ್ಯಕ್ತಪಡಿಸಿದೆ. ನನ್ನ ವಿರೋಧದ ನಡುವೆಯೂ ಆ ಘಟನೆ ಹೆಡ್ ಲೈನ್ ಆಗಿ ಈಟಿವಿ ನ್ಯೂಸ್ ನಲ್ಲಿ ಪ್ರಸಾರವಾಯಿತು.
ಜಾತ್ರೆಯಲ್ಲಿ ನಡೆಯುವ ಪ್ರಾಣಿ ಬಲಿ ವಿರೋಧಿಸಿ ಸಾಮಾನ್ಯವಾಗಿ ಎಲ್ಲ ನ್ಯೂಸ್ ಚಾನೆಲ್ಗಳಲ್ಲೂ ಸುದ್ದಿ ಪ್ರಸಾರವಾಗುತ್ತವೆ. ಪತ್ರಿಕೆಗಳು ಸಾಕಷ್ಟು ಬಾರಿ ಇಂತಹ ಸುದ್ದಿ ನೀಡಿವೆ. ಅಂದು ನ್ಯೂಸ್ ಮುಗಿದ ಬಳಿಕ ನನ್ನ ವಿರೋಧಕ್ಕೆ ಡೆಸ್ಕ್ ನಲ್ಲಿ ಕಾರಣ ಕೇಳಲಾಯಿತು. ಇಂತಹ ಆಚರಣೆಗಳ ಬಗ್ಗೆ ಮಾಧ್ಯಮಗಳು ವರ್ತಿಸುವ ರೀತಿಗೆ ನಾನು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ಏಕೆಂದರೆ ಒಂದೆಡೆ ಪ್ರಾಣಿ ಬಲಿ ವಿರೋಧಿಸಿ ನ್ಯೂಸ್ ಮಾಡುವ ಮಾಧ್ಯಗಳು ಇನ್ನೊಂದೆಡೆ ಸವಿರುಚಿ, ಅಡುಗೆ ಮನೆ ಮುಂತಾದ ಕಾರ್ಯಕ್ರಮಗಳಲ್ಲಿ ಚಿಕನ್ ಬಿರಿಯಾನಿ, ಮಟನ್ ಫ್ರೈ ಮಾಡುವ ಬಗ್ಗೆ ಕಾರ್ಯಕ್ರಮ ಪ್ರಸಾರ ಮಾಡುತ್ತವೆ. ಕಾರ್ಯಕ್ರಮ ಮಾಡುವವರು ಕೂಡ ಪ್ರಾಣಿಯನ್ನು ಕೊಂದು ಈ ಕಾರ್ಯಕ್ರಮ ನಡೆಸುತ್ತಿದ್ದೇವೆ ಎನ್ನುವ ಪ್ರಜ್ಞೆಯಿಲ್ಲದೆ ಸಂಭ್ರಮದಿಂದ ವರ್ತಿಸುತ್ತಿರುತ್ತಾರೆ. ಪತ್ರಿಕೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಪತ್ರಿಕೆಗಳ ಮುಖಪುಟದಲ್ಲಿ ಪ್ರಾಣಿ ಬಲಿ ವಿರೋಧಿಸಿದರೆ, ಪುರವಣಿಗಳಲ್ಲಿ ಚಿಕನ್, ಮಟನ್ ಮಾಡುವ ವಿಧಾನದ ಬಗ್ಗೆ ಪುಟಗಟ್ಟಲೆ ವಿವರ ಇರುತ್ತದೆ.
ಸಿಟಿಯಲ್ಲಿ ಬದುಕುವ ನಾಗರಿಕರು ಎನಿಸಿಕೊಂಡವರು ಹಳ್ಳಿಗಳಲ್ಲಿ ಬದುಕುವ ಜನರನ್ನು ಹಾಗೂ ಅವರ ಆಚರಣೆಗಳನ್ನು ಅನಾಗರಿಕ, ಭೀಕರ ಎಂದು ಬಿಂಬಿಸುವ ಪ್ರಯತ್ನವಿದು.. ರೂಪ ಹಾಸನ್ ಕೂಡ ಇಂತಹುದೇ ಅಭಿಪ್ರಾಯ ಹೊಂದಿದ್ದಾರೆ. ಖಾಸಗಿಯಾಗಿ ನಡೆಯುವ ಪ್ರಾಣಿ ಬಲಿಯನ್ನು ಒಪ್ಪುವ ಅವರು, ಸಾಮೂಹಿಕ ಹಾಗೂ ಸಾರ್ವಜನಿಕ ಪ್ರಾಣಿಬಲಿಯಲ್ಲಿ ಹಿಂಸೆಯ ವೈಭವೀಕರಣವಾಗುತ್ತದೆ ಎಂದು ಪ್ರತಿಪಾದಿಸುತ್ತಾರೆ. ರೂಪ ಹಾಸನರ ಇಂತಹ ಸಮರ್ಥನೆಗೆ ಮಾಧ್ಯಮಗಳು ಕೂಡ ಹೊಣೆ ಹೋರಬೇಕು. ಏಕೆಂದರೆ ಜಾತ್ರೆಗಳಲ್ಲಿ ನಡೆಯುವ ಪ್ರಾಣಿಬಲಿ ಆಚರಣೆ ಅಲ್ಲಿದ್ದವರಿಗೆ ಭಕ್ತಿಯ ಸಂಗತಿಯಾಗಿರುತ್ತದೆ. ಆದರೆ, ಅದು ಡೆಸ್ಕ್‌ಗೆ ಬರುತ್ತಿದ್ದ ಹಾಗೆ ನಾಗರಿಕರ ಮನಸ್ಥಿತಿಗೆ ಸಿಲುಕಿ ಭೀಕರವಾಗಿ ಗೋಚರಿಸುತ್ತದೆ. ಡೆಸ್ಕ್‌ನಲ್ಲಿ ಕೂತಿರುವ ರೂಪ ಹಾಸನ್ ಅವರಂತಹ ನಾಗರಿಕರು, ತಮ್ಮದಲ್ಲದ ಬದುಕನ್ನು ಒಪ್ಪಲು ಸಿದ್ದರಿಲ್ಲ. ಹೀಗಾಗಿಯೇ ಜಾತ್ರೆಯ ಸಂದರ್ಭದಲ್ಲಿ ಭಕ್ತಿಯಿಂದ ಕೂಡಿದ ಪ್ರಾಣಿ ಬಲಿ ಆಚರಣೆ ಡೆಸ್ಕ್‌ನಲ್ಲಿ ಭೀಕರ ರೂಪ ಪಡೆದು ಮತ್ತೆ ಜನಸಾಮಾನ್ಯರಿಗೆ ಮೌಢ್ಯತೆಯ ಸುದ್ಧಿಯಾಗಿ ಪ್ರಸಾರವಾಗುತ್ತದೆ.
ಕೆಲ ವಾರಗಳ ಹಿಂದೆ ಜನಶ್ರೀ ಚಾನೆಲ್ನಲ್ಲಿ ಪುನಿತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಭೇಟಿ ನೀಡುವ ನಾನ್ ವೆಜ್ ಹೋಟೆಲ್ ಬಗ್ಗೆ ನ್ಯೂಸ್ ಮಾಡಲಾಯಿತು. ಆ ಹೋಟೆಲ್ ನಲ್ಲಿ ಮಾಡುವ ಮಟನ್ ಹಾಗೂ ಮುದ್ದೆಯ ರುಚಿಯ ಬಗ್ಗೆ ಅಲ್ಲಿನ ಗ್ರಾಹಕರಿಂದ ಮಾಹಿತಿ ಪಡೆಯಲಾಯಿತು. ಇಡೀ ಸುದ್ದಿಯುದ್ದಕ್ಕೂ ಅದೊಂದು ಅತ್ಯುತ್ತಮ ಹೋಟೆಲ್ ಎನ್ನುವಂತೆ ಬಿಂಬಿಸಲಾಯಿತು. ಇಲ್ಲಿ ಕೂಡ ಪ್ರತಿ ದಿನ ಸಾಮೂಹಿಕವಾಗಿ ಕುರಿ ಹಾಗೂ ಕೋಳಿಗಳನ್ನು ಬಲಿಕೊಡಲಾಗುತ್ತದೆ ಎಂಬುದನ್ನು ಮರೆಯಬಾರದು. ಖಾಸಗಿಯಾಗಿ ನಡೆಯುವ ಪ್ರಾಣಿ ಬಲಿ ನಮ್ಮ ಕಣ್ಣಿಗೆ ಕಾಣುವುದಿಲ್ಲ ಎಂದಾಕ್ಷಣ ಅದು ಹಿಂಸೆಯ ವೈಭವೀಕರಣವಲ್ಲವೆ...
ಪ್ರಾಣಿಬಲಿ ನೀಡಬೇಕೆ ಅಥವಾ ಬೇಡವೇ ಎನ್ನುವುದಕ್ಕಿಂತ ಮುಖ್ಯವಾಗಿ ನಾವು ಯೋಚಿಸಬೇಕಿರುವುದು ತಮ್ಮ ವಾದಗಳನ್ನು ಮಂಡಿಸುತ್ತಿರುವವರ ಉದ್ದೇಶಗಳೇನು ಎನ್ನುವುದನ್ನು ಅರಿಯಬೇಕಿದೆ. ಏಕೆಂದರೆ ಪ್ರಾಣಿಬಲಿಯನ್ನು ಸಮರ್ಥಿಸುತ್ತಿರುವ ಅರುಣ್ ಜೋಳದ ಕೂಡ್ಲಿಗಿಯವರು ಆ ಮೂಲಕ ಜನಸಮುದಾಯದ ಆಚರಣೆ ಹಾಗೂ ಅವರ ಸಾಂಸ್ಕೃತಿಕ ಅನನ್ಯತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಾಣಿಬಲಿಯನ್ನು ಸರಳೀಕರಿಸದೆ ಅದರ ಹಿಂದಿರುವ ಸಮುದಾಯದ ಬದುಕುವ ಚೈತನ್ಯದ ಕುರಿತು ಆಲೋಚಿಸುತ್ತಿದ್ದಾರೆ. ಆದರೆ ರೂಪಾ ಹಾಸನ್ ಅವರ ವಾದದ ಹಿಂದೆ ಇರುವ ಉದ್ದೇಶವೇ ಬೇರೆ.. ತಾವು ಬದುಕುತ್ತಿರುವ ರೀತಿ ನೀತಿಗೆ ಸಾರ್ವಜನಿಕ ಪ್ರಾಣಿಬಲಿ ಎಂಬುದು ಅಸಹ್ಯ ಹಾಗೂ ಭೀಕರವಾಗಿ ಕಾಣುತ್ತಿರುವುದರಿಂದ ಅದನ್ನು ವಿರೋಧಿಸುತ್ತಿದ್ದಾರೆ. ಅದಕ್ಕವರು ಸಂವಿಧಾನದ ಸಮರ್ಥನೆಯನ್ನು ನೀಡುತ್ತಿದ್ದಾರೆ. ಆ ಮೂಲಕ ಹಳ್ಳಿಯ ಜನತೆ ಹಾಗೂ ಸಾಮಾನ್ಯ ಜನರು ತಮ್ಮ ಮೌಢ್ಯತೆಯನ್ನು ತೊರೆದು ಭಾರತದ ಸಂವಿಧಾನವನ್ನು ಒಪ್ಪಿಕೊಂಡು ನಾಗರಿಕರಾಬೇಕೆಂದು ಒತ್ತಾಯಿಸುತ್ತಿದ್ದಾರೆ.. ಸಾಮಾನ್ಯರು ತಮ್ಮ ಮೌಢ್ಯತೆಯನ್ನು ತೊರೆದು ಇನ್ನಷ್ಟು ಸತ್ಪ್ರಜೆಗಳಾಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ.. ಆದರೆ ನಾಗರಿಕರಾಗಬೇಕಾದಾಗ ಅವರು ಯಾವುದನ್ನು ಹಾಗೂ ಯಾರನ್ನು ಅನುಸರಿಸಬೇಕೆಂಬುದು ಪ್ರಶ್ನೆ.. ಈ ಪ್ರಶ್ನೆಯನ್ನು ಅರ್ಥಪೂರ್ಣವಾಗಿ ಕೇಳಿಕೊಂಡರೆ ನಮ್ಮ ಸಂವಿಧಾನದಲ್ಲಿ ಇನ್ನಷ್ಟು ತಿದ್ದುಪಡಿಗಳಾಗಬಹುದು..
- ಡಾ. ಸತೀಶ್ ಪಾಟೀಲ್,
ಸಹಾಯಕ ಪ್ರಾಧ್ಯಾಪಕರು,
ಕೊಟ್ಟೂರು.
ಬಳ್ಳಾರಿ ಜಿಲ್ಲೆ
发表评论