ಪ್ರಾಣಿ ಬಲಿ ನಿಷೇಧದ ಕುರಿತಾಗಿ ಪತ್ರಿಕೆಗಳಲ್ಲಿ ಮತ್ತೆ ಮತ್ತೆ ವರದಿಗಳು ಪ್ರಕಟವಾಗುತ್ತಿರುತ್ತವೆ, ಈ ವರದಿಗಳಲ್ಲಿ ಆ ವಿಷಯವನ್ನು ತುಂಬಾ ಸರಳೀಕರಿಸುತ್ತವೆ ಎಂಬುದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಯೋಜನಾ ಸಹಾಯಕ ಡಾ. ಅರುಣ್ ಜೋಳದಕೂಡ್ಲಿಗಿ ಅವರ ವಾದ. ಪ್ರಾಣಿಬಲಿ  ನಿಷೇಧ ಆಗಬೇಕು, ಆದರೆ ಆ ವಿಷಯವನ್ನು ತುಂಬಾ ಸರಳವಾಗಿ ನೋಡಲಾಗದು. ಹಾಗಾಗಿ ಪ್ರಾಣಿಬಲಿ ಕುರಿತು ಇನ್ನೊಂದು ಮಗ್ಗಲಲ್ಲಿ ಯೋಚಿಸಲು ಅನುವಾಗಬೇಕು ಎನ್ನುವ ಅರುಣ್ ಬರೆದ ಲೇಖನ ಇಲ್ಲಿದೆ. ಚರ್ಚೆಗೆ ಸ್ವಾಗತ. ಅರುಣ್ ಜೋಳದಕೂಡ್ಲಿಗಿ ಹೊಸ ತಲೆಮಾರಿನ ಜಾನಪದ ಸಂಶೋಧಕರು. ಅವರ ಬ್ಲಾಗ್ ಕನ್ನಡ ಜಾನಪದ.
-ಸಂಪಾದಕೀಯ

ಪ್ರಜಾವಾಣಿಯಲ್ಲಿ ಜುಲೈ ೬ ರ ಸಂಗತ ಬರಹ (ರೂಪ ಹಾಸನ) ಜುಲೈ ೧೩ ರ ವಾಚಕರವಾಣಿ (ಎಸ್.ತಾರಾನಾಥರ ಪತ್ರ) ಗಳನ್ನು ನೋಡಿದೆ. ಇಂತಹ ಬರಹ ಪತ್ರಿಕಾ ವರದಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುತ್ತದೆ. ಇಲ್ಲಿ ಪ್ರಾಣಿಬಲಿ ನಿಷೇಧದಬಗ್ಗೆ ಕಾಳಜಿ ವ್ಯಕ್ತವಾಗಿದೆ. ಅಂತೆಯೇ ಇಬ್ಬರೂ ಪ್ರಾಣಿಬಲಿಯನ್ನು ಮೌಢ್ಯ, ಇಂತಹ ಅನಾಗರಿಕ ಆಚರಣೆಯನ್ನು ನಾಗರಿಕರೊಬ್ಬರು ಸರಿಪಡಿಸುವ ಜವಾಬ್ದಾರಿಯಂತೆ ಹೇಳಿದ್ದಾರೆ. ಈ ಎರಡೂ ಬರಹಗಳು ಪ್ರಾಣಿ ಬಲಿಯನ್ನು ಸರಳವಾಗಿ ಗ್ರಹಿಸಿದಂತೆ ಕಾಣುತ್ತದೆ.  ಹೀಗೆ ವಿಚಾರ ಮಂಡಿಸುವುದು ಸುಲಭ, ಆದರೆ ಅದರ ಸಂಕೀರ್ಣ ಸ್ವರೂಪವನ್ನು ಅರ್ಥ ಮಾಡಿಕೊಂಡು ನಿಷೇಧದ ಬಗ್ಗೆ ಮಾತನಾಡುವುದು ಒಳಿತು.

ಪ್ರಾಣಿಬಲಿ ಆಚರಣೆ ನಿಷೇಧ ಆಗಬೇಕೆನ್ನುವುದು ಎಲ್ಲರ ಸದಾಶಯ. ಆದರೆ ಅದನ್ನು ಕಾನೂನಿನ ಮೂಲಕ ಹೊರಗಿನಿಂದ ನಿಯಂತ್ರಿಸಲು ಎಂದಿಗೂ ಸಾದ್ಯವಾಗದು. ಬದಲಾಗಿ ಮೊದಲು ಪ್ರಾಣಿಬಲಿ ಕುರಿತ ಚಾರಿತ್ರಿಕ ಹಿನ್ನೆಲೆಯನ್ನು ಅರಿತು, ಬುಡಮಟ್ಟದಿಂದ ಕೆಲ ಸಾಮಾಜಿಕ ಬದಲಾವಣೆಗಳಿಗೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕು. ಹಾಗಾದಲ್ಲಿ ನಿಧಾನಕ್ಕೆ ಜನರ ಒಳಗೇ ಪ್ರಾಣಿಬಲಿ ನಿಷೇಧದ ಭಾವನೆ ಬರುವಂತೆ ಮಾಡುವ ಅಗತ್ಯವಿದೆ.

ಪ್ರಾಣಿಬಲಿ  ದಮನಿತ ಮುದಾಯಗಳು ಕಟ್ಟಿಕೊಂಡ ಪ್ರತಿಸಂಸ್ಕೃತಿ. ಮೇಲ್ವರ್ಗ, ಮೇಲ್ಜಾತಿ ಸಮುದಾಯಗಳು ತಮ್ಮ ಆಚರಣೆ ಪರಂಪರೆಯನ್ನು ಶ್ರೇಷ್ಠ ಎಂದೂ, ಕೆಳಜಾತಿಗಳ ಆಚರಣೆ ಮತ್ತು ಬದುಕಿನ ರೀತಿಯನ್ನು ಕನಿಷ್ಠ ಎಂದೂ  ಬಾವಿಸುತ್ತವೆ. ಹಾಗಾಗಿ ಪ್ರಾಣಿಬಲಿ ಅನಾಗರಿಕ ಆಚರಣೆಯಂತೆ ಕಾಣುತ್ತದೆ.  ತಳಸಮುದಾಯಗಳು ಮೇಲ್ವರ್ಗ ಕಟ್ಟಿದ ಪಾವಿತ್ರ್ಯದ ನಾಶ ಮಾಡಲು, ಕೀಳೆಂದು ನಿರಾಕರಿಸದ್ದನ್ನು ಈ ಸಮುದಾಯಗಳು ತಮ್ಮ ಸಂಸ್ಕೃತಿಯ ಭಾಗವನ್ನಾಗಿಸಿಕೊಂಡಿರುತ್ತವೆ. (ನೋಡಿ: ರಹಮತ್ ತರೀಕೆರೆ ಅವರ ಪ್ರತಿಸಂಸ್ಕೃತಿ ಪುಸ್ತಕ) ಹಾಗಾಗಿ ಪ್ರಾಣಿಬಲಿ ನಿಷೇಧದ ಆತಂಕ ಏಕಕಾಲದಲ್ಲಿ ದಮನಿತ ಸಮುದಾಯಗಳ ಸಂಸ್ಕೃತಿಯ ನಿರಾಕರಣೆಯೂ ಆಗಿರುತ್ತದೆ.

ಪ್ರಾಣಿ ಬಲಿ ನಿಷೇಧ, ಕೊನೆಗೆ ಮಾಂಸಾಹಾರ ನಿಷೇಧದ ಕಡೆ ವಾಲುತ್ತದೆ. ಅಥವಾ ಮಾಂಸಾಹಾರ ನಿಷೇದದ ಬಗೆಗೆ ಒಲವಿರುವವರು ಸಹ ಪ್ರಾಣಿಬಲಿ ನಿಷೇಧವಾಗಬೇಕೆಂದು ಹೇಳುತ್ತಿರುತ್ತಾರೆ. ಇದು ಮಾಂಸ ಉಣ್ಣುವವರ ಆಹಾರದ ಹಕ್ಕಿನ ಪ್ರಶ್ನೆ. ಹಾಗಾಗಿ ಇಡೀ ಪ್ರಾಣಿ ಬಲಿ ಕುರಿತ ವಿಷಯವನ್ನು ತಿಳಿಯುವಲ್ಲಿಯೇ ತೊಡಕಿದೆ. ಪ್ರಾಣಿಬಲಿಯನ್ನು ಮೌಡ್ಯ ಎಂದು ಕರೆಯಲಾಗುತ್ತದೆ. ಆದರೆ ದೇವರನ್ನು ನಿರಾಕರಿಸಲಾಗದ ಯಾವುದೇ ಆಚರಣೆ ಕೂಡ ಮೂಡನಂಬಿಕೆ ಅಥವಾ ಮೌಡ್ಯ. ಮಠಾಧೀಶರುಗಳ ತುಲಾಬಾರ, ಬ್ರಾಹ್ಮಣರ ವ್ರತಾಚರಣೆ, ಕ್ರೈಸ್ತರ ಯೇಸು ಪ್ರಾರ್ಥನೆ, ಮುಸ್ಲೀಮರ ನಮಾಜು, ಹಿಂದುಗಳ ದೈವಾರಾಧನೆ ಈ ಎಲ್ಲವೂ ಮೌಡ್ಯವಲ್ಲದೆ ಮತ್ತೇನು? ಮೌಡ್ಯದ ನಿಷೇಧವಾಗಬೇಕೆಂದು ನಾವು ಭಾವಿಸುವುದಾದರೆ ಇವೆಲ್ಲವುಗಳ ನಿಷೇಧಕ್ಕೂ ನಾವು ಒತ್ತಾಯಿಸುವ ಅಗತ್ಯವಿದೆ.

ಪ್ರಾಣಿಬಲಿ ಆಚರಣೆಯನ್ನು ಕೇವಲ ಮೌಡ್ಯ ಎಂದು ಮಾತ್ರ ವಿವರಿಸಲಾಗುತ್ತಿದೆ. ಆದರೆ ಪ್ರಾಣಿಬಲಿಗೆ ಕೇವಲ ಮೌಡ್ಯವಲ್ಲದ ಮತ್ತೊಂದು ಆಯಾಮವಿದೆ. ಅದು ತಳಸಮುದಾಯ ಪ್ರಾಣಿ ಬಲಿಯಿಂದಾಗಿ ಬದುಕಿಗೆ ಪಡೆಯಬಹುದಾದ ಚೈತನ್ಯದ ಸಂಗತಿ.  ಇಡೀ ಪ್ರಾಣಿ ಬಲಿ ಆಚರಣೆಯನ್ನು ತುಂಬಾ ಸೂಕ್ಷ್ಮವಾಗಿ ಅವಲೋಕಿಸಿದಾಗ ಮಾತ್ರ ಇದು ಕಾಣುತ್ತದೆ. ಸಾಮಾನ್ಯವಾಗಿ ಹಳ್ಳಿಗಳ ಜಾತಿ  ಸಮೀಕರಣದ ರಚನೆಯ ಒಳಗೇ ಪ್ರಾಣಿಬಲಿಗೆ ಒಂದು ವಿಚಿತ್ರ ರೀತಿಯ ಸಂಬಂಧವಿದೆ. ಇಂತಹ ಸಮೀಕರಣದ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳದ ಯಾರಿಗಾದರೂ, ಇದು ಅನಾಗರಿಕವಾದುದು ಎಂದು ಅನ್ನಿಸದೇ ಇರದು. ಪ್ರಾಣಿಬಲಿಗೂ ಮುನ್ನ ಮೊಚ್ಚು, ಕಂದೀಲು ಹಿಡಿದು ಕುಣಿಯುವಿಕೆ ಇರುತ್ತದೆ, ಈ ಕುಣಿತದಲ್ಲಿ ತಳಸಮುದಾಯಗಳು ರೋಷಾವೇಷ ತಂದುಕೊಂಡು ಕುಣಿಯುತ್ತಾರೆ. ಆಗ ಅಕ್ಷರಶಃ ಮಾನಸಿಕವಾಗಿ ಅವರುಗಳು ಒಂದು ಬಗೆಯ ಬಿಡುಗಡೆ ಪಡೆಯುತ್ತಾರೆ ಅನ್ನಿಸುತ್ತದೆ.

ಪ್ರಾಣಿಬಲಿಗಳು ನಡೆಯುವುದು ಬಹುಪಾಲು ಹಳ್ಳಿಗಳಲ್ಲಿ. ಅಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಪ್ರಾಣಿ ಬಲಿ ಮಾಡುವುದು ದಲಿತರು, ಮತ್ತು ಕೆಳವರ್ಗದ, ಹಿಂದುಳಿದ ಜನರು. ಈ ಜನರು ಪ್ರಾಣಿಬಲಿ ಆಚರಣೆ ಮಾಡುತ್ತಾ ಬಂದಿರುವುದಕ್ಕೆ ದೊಡ್ಡ ಚರಿತ್ರೆ ಇದೆ. ಇಂತಹುದನ್ನು ಒಂದು ಯಕಶ್ಚಿತ್ ಕಾನೂನು ನಿಲ್ಲಿಸಿಬಿಡುವಷ್ಟು ಸರಳವೆ?  ಪ್ರಾಣಿಬಲಿಯನ್ನು ವಿರೋಧಿಸುವವರಲ್ಲಿ ಬಹುಪಾಲು ಜನ ಮೇಲ್ವರ್ಗದವರು. ಮುಖ್ಯವಾಗಿ ಇದರಲ್ಲಿ ಮಾಂಸಾಹಾರ ಸೇವಿಸದವರ ಸಂಖ್ಯೆ ಹೆಚ್ಚು. ಅದರಲ್ಲಿ ಕೆಲವರು ಸುಶಿಕ್ಷಿತರು. ಇವರುಗಳು ಪ್ರಾಣಿಬಲಿ ಎನ್ನುವುದು ಅನಾಗರಿಕ ವರ್ತನೆ, ಈ ವರ್ತನೆಯ ಕಾರಣಕ್ಕೆ  ಹಳ್ಳಿಗರನ್ನು ಅನಾಗರಿಕರೆಂದೂ ಸಮೀಕರಿಸಿ ಸುಖ ಪಡುವ ವರ್ಗದವರು ಇದ್ದಾರೆ. ಇಂಥವರು ಪ್ರಾಣಿಬಲಿಯನ್ನು ವಿರೋಧಿಸುವ ಕಾರಣಕ್ಕೆ ತಮ್ಮನ್ನು ತಾವು ನಾಗರಿಕರೆಂದು ಕರೆದುಕೊಂಡು ಖುಷಿಪಡುವ ಮನಸ್ಥಿತಿಯವರು.

ನಾವು ಸಾಮಾಜಿಕ ಬದಲಾವಣೆಯನ್ನು ನಗರಗಳ ಕಣ್ಣೋಟದಿಂದ ನೋಡುತ್ತಿರುತ್ತೇವೆ. ಆದರೆ ಹಳ್ಳಿಗಳ ಕಣ್ಣೋಟದಿಂದ ಸಾಮಾಜಿಕ ಬದಲಾವಣೆಯನ್ನು, ಜಾತಿ ಪದ್ದತಿಯನ್ನು ನೋಡಲು ಸಾದ್ಯವಾದರೆ ಪ್ರಾಣಿಬಲಿ ಆಚರಣೆಯ ಮತ್ತೊಂದು ಮುಖ ಹೊಳೆಯುತ್ತದೆ. ಈಗಲೂ ಲಕ್ಷಾಂತರ ಹಳ್ಳಿಗಳ ದಲಿತರು, ಕೆಳಜಾತಿಗಳು ಮೇಲ್ವರ್ಗದಿಂದ ಶೋಷಣೆಗೆ ಒಳಗಾಗಿವೆ. ಈ ಶೋಷಣೆಯ ರೂಪಗಳು ಈಗ ಬದಲಾಗಿವೆ. ಹಾಗಾಗಿ ಈಗಲೂ ದಲಿತರು, ಕೆಳಜಾತಿಗಳು ಮೇಲ್ವರ್ಗದ ಮೇಲಿನ ಮನಸ್ಸಿನಲ್ಲಿ ಹುದುಗಿಟ್ಟುಕೊಂಡ ಸೇಡನ್ನು ಪ್ರಾಣಿಬಲಿ ಮೂಲಕ ತೀರಿಸಿಕೊಂಡು ಮಾನಸಿಕವಾಗಿ ಹಗುರಾಗುವ ಬಗ್ಗೆ ನಾವು ಆಲೋಚನೆ ಮಾಡಬೇಕಾಗಿದೆ. ಆ ನಂತರ ತಮ್ಮ ಕೀಳರಿಮೆಗಳನ್ನು ಕಳೆದುಕೊಂಡು ಬದುಕಲು ಹೊಸ ಚೈತನ್ಯವನ್ನು ಪಡೆಯುತ್ತಾರೆ. ಹಾಗಾಗಿ ಪ್ರಾಣಿಬಲಿ ಬಗ್ಗೆ ಚಕಾರವೆತ್ತುವ ನಾವುಗಳು ಮೇಲ್ಜಾತಿಗಳು ಕೆಳಜಾತಿಗಳ ಮೇಲೆ ಮಾಡುವ ಶೋಷಣೆಗಳ ಬಗ್ಗೆ ಮೊದಲು ಚಕಾರವೆತ್ತಬೇಕಾಗಿದೆ.

ಹಾಗಾಗಿ ನಾವು ಪ್ರಾಣಿಬಲಿ ನಿಷೇಧದ ಬಗ್ಗೆ ಮಾತನಾಡುವ ನಾವುಗಳು, ಈ ಬಗೆಯ ಮೇಲ್ವರ್ಗದ ಶೋಷಣೆಯ ಕಾರಣಕ್ಕೆ ಹಳ್ಳಿಗಳ ಮತ್ತು ಗ್ರಾಮೀಣ ಭಾಗದಲ್ಲಿ ಕೆಳವರ್ಗದ ಜಾತಿಗಳು, ದಲಿತರು ಪಡುವ ಶೋಷಣೆಯನ್ನು, ಆ ಶೋಷಣೆಯ ಕಾರಣಕ್ಕೆ ಅವರುಗಳು ಬೆಳೆಸಿಕೊಳ್ಳುವ ಕೀಳಿರಿಮೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿ ಸರಕಾರವಾಗಲಿ, ಸುಶಿಕ್ಷಿತ ವರ್ಗವಾಗಲಿ ಏನು ಮಾಡಿದೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ.  ಪ್ರಾಣಿಬಲಿ ಬಗ್ಗೆ ಪುಂಕಾನುಪುಂಕವಾಗಿ ಬರೆದು ಪ್ರಾಣಿದಯೆಯನ್ನು ತೋರುವ ಬರಹಗಾರರು ಇದನ್ನೇಕೆ ನೋಡಲು ಸಾದ್ಯವಾಗುತ್ತಿಲ್ಲ? ಸುಶಿಕ್ಷಿತರಾದವರಿಗೆ ಪ್ರಾಣಿ ಬಲಿ ಹಿಂಸೆಯಂತೆ ಕಾಣುತ್ತದೆನ್ನುವುದಾದರೆ, ಪ್ರಾಣಿಬಲಿ ಕೊಡುವ ಸಮುದಾಯಗಳಲ್ಲಿ ಅದನ್ನು ಹಿಂಸೆಯನ್ನಾಗಿ ಕಾಣುವ ಶಿಕ್ಷಣವನ್ನಾಗಲಿ, ಸಾಮಾಜಿಕ ಪ್ರಜ್ಞೆಯನ್ನಾಗಲಿ, ಆರ್ಥಿಕ ಬದಲಾವಣೆಯ ಪರ್ಯಾಯವನ್ನಾಗಲಿ ಎಷ್ಟರಮಟ್ಟಿಗೆ ಕೊಡಲಾಗಿದೆ ಎಂದು ಯೋಚಿಸುವ ಅಗತ್ಯವಿದೆ. ನಾನಿಲ್ಲಿ ಪ್ರಾಣಿಬಲಿಯನ್ನು ಬೆಂಬಲಿಸುತ್ತಿಲ್ಲ, ಬದಲಾಗಿ ಬಹುಸಂಸ್ಕೃತಿಯ ದೇಶದಲ್ಲಿ ಬದುಕುತ್ತಿರುವ ನಾವುಗಳು, ಅದನ್ನು ಕಾನೂನು ಗ್ರಹಿಸಿದಂತೆ ಸರಳವಾಗಿ ಗ್ರಹಿಸುವುದು ಕಷ್ಟ ಎಂದು ಮಾತ್ರ ಹೇಳಲು ಇಚ್ಚಿಸುತ್ತೇನೆ.
-ಡಾ. ಅರುಣ್ ಜೋಳದ ಕೂಡ್ಲಿಗಿ
ವಿಳಾಸ: ಯೋಜನಾ ಸಹಾಯಕ, ದರ್ಪಣ ಕಟ್ಟಡ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ.

ಕೊನೆಮಾತು: ನಿನ್ನೆ ಬರೆದ ಹಾಗೆಯೇ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಸಮಯ ನ್ಯೂಸ್ ಚಾನಲ್‌ನ ಮುಖ್ಯಸ್ಥರಾಗಿ ರಾತ್ರಿ ೮ ಗಂಟೆಯ ಸುಮಾರಿಗೆ ಅಧಿಕಾರ ಸ್ವೀಕರಿಸಿದ್ದಾರೆ. ಸಂಪಾದಕೀಯ ಓದುಗರೆಲ್ಲರ ಪರವಾಗಿ ಜಿ.ಎನ್.ಮೋಹನ್‌ರಿಗೆ ಶುಭಾಶಯ ಹಾಗು ಅಭಿನಂದನೆಗಳು. ಚಾನಲ್ ಜನಮುಖಿಯಾಗಿರಲಿ ಎಂಬುದು ನಮ್ಮ ಏಕೈಕ ಅಪೇಕ್ಷೆ.
0 komentar

Blog Archive