ನಾಳೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅಕ್ರಮ ಗಣಿಗಾರಿಕೆ ಕುರಿತ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ದಿನ. ವರದಿಯ ಪ್ರಮುಖ ಅಂಶಗಳು ಸೋರಿಕೆಯಾಗಿ, ಮಾಧ್ಯಮಗಳಲ್ಲಿ ಪ್ರಕಟ/ಪ್ರಸಾರವಾದ ನಂತರ ಎದ್ದಿರುವ ವಿವಾದದ ಬಿರುಗಾಳಿ ಇನ್ನೂ ತಣ್ಣಗಾಗಿಲ್ಲ. ಸಂತೋಷ್ ಹೆಗಡೆಯವರ ಕೆನ್ನೆ ಮೇಲೆ ಹರಿದ ಕಣ್ಣೀರಿನಿಂದಾದ ತೇವ ಇನ್ನೂ ಆರಿದಂತಿಲ್ಲ. ಸೋರಿಕೆಯಾಗಿದ್ದರಿಂದಾಗಿ ವರದಿಗೆ ಮಹತ್ವವೇ ಇಲ್ಲ ಎಂದ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಧನಂಜಯ ಕುಮಾರ್ ಬಾಯಿಂದ ಮಂತ್ರಕ್ಕಿಂತ ಹೆಚ್ಚಾಗಿ ಸಿಡಿಯುತ್ತಿರುವ ಉಗುಳಿನ ಧಾರೆಯೂ ನಿಂತಿಲ್ಲ.

ಅತ್ತ ಆಯನೂರು ಮಂಜುನಾಥ್ ಎಂಬ ಬಿಜೆಪಿ ಮುಖಂಡ ಹೊಸ ವಾದವೊಂದನ್ನು ಮಂಡಿಸಿದ್ದಾರೆ. ವಾದಕ್ಕೆ ಆತ ಬಳಸಿರುವ ತರ್ಕವೂ ಅತ್ಯಂತ ಸಮರ್ಥವಾಗಿದೆ. ದೂರವಾಣಿ ಕದ್ದಾಲಿಕೆಯಿಂದ ವರದಿ ಸೋರಿಕೆಯಾಗಿದೆ ಎಂದು ಹೇಳುವುದಾದರೆ ದೂರವಾಣಿ ಮೂಲಕ ವರದಿಯ ಪ್ರಮುಖ ಅಂಶಗಳನ್ನು ಚರ್ಚಿಸಲಾಗುತ್ತಿತ್ತೆ? ಅಥವಾ ವರದಿಯ ಮಾಹಿತಿಯನ್ನು ಯಾರಿಗೆ ಒದಗಿಸಲಾಗುತ್ತಿತ್ತು?

ಧನಂಜಯ ಕುಮಾರ್, ಆಯನೂರು ಮಂಜುನಾಥ್ ಮತ್ತು ಹಲವು ಬಿಜೆಪಿ ಮುಖಂಡರು ಒಂದೇ ಸಮನೆ ಪ್ರಶ್ನೆಗಳನ್ನು ಸುರಿಸುತ್ತಿದ್ದಾರೆ. ದೂರವಾಣಿ ಕದ್ದಾಲಿಕೆ ಆಗುತ್ತಿದೆ ಎಂಬ ಅನುಮಾನ ಮೂಡಿದ ತಕ್ಷಣ ಸಂತೋಷ ಹೆಗಡೆಯವರು ಯಾಕೆ ದೂರು ನೀಡಲಿಲ್ಲ? ಯಾಕೆ ತನಿಖೆ ನಡೆಸಲಿಲ್ಲ? ಇಷ್ಟು ತಡವಾಗಿ ಇದನ್ನು ಪ್ರಸ್ತಾಪ ಮಾಡಿದ್ದೇಕೆ? ತಮ್ಮನ್ನು ಡೀಲ್ ಮಾಡಲೆತ್ನಿಸಿದ ಧನಂಜಯ ಕುಮಾರ್ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲಿಲ್ಲ? ಯಾಕೆ ಇಷ್ಟು ತಡವಾಗಿ ಈ ಮಹತ್ವದ ಅಂಶವನ್ನು ಪ್ರಸ್ತಾಪಿಸುತ್ತಿದ್ದಾರೆ?

ಸಂತೋಷ್ ಹೆಗಡೆಯವರ ನೈತಿಕ ಚಾರಿತ್ರ್ಯದ ಬಗ್ಗೆ ಬಹುತೇಕ ಎಲ್ಲರಿಗೂ ಗೌರವವಿದೆ. ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದ ಪ್ರಾಮಾಣಿಕ ನ್ಯಾಯಾಧೀಶರು ಅವರು. ಆದರೆ ಇತ್ತೀಚಿನ ದಿನಗಳಲ್ಲಿ ಒಂದರ ಮೇಲೊಂದರಂತೆ ಯಡವಟ್ಟುಗಳನ್ನೇಕೆ ಮಾಡಿಕೊಂಡು ಬಂದರು?

ವರದಿ ಸೋರಿಕೆಯಾದ ನಂತರ ಕಣ್ಣೀರಿಟ್ಟ ಸಂತೋಷ್ ಹೆಗಡೆಯವರು ಸೋರಿಕೆಗೆ ತಾನೇ ಹೊಣೆ ಹೊರುವುದಾಗಿ ಹೇಳಿದರು. ತನ್ನ ಕಚೇರಿಯಲ್ಲಿರುವ ಅಧಿಕಾರಿಗಳು ಪ್ರಾಮಾಣಿಕರು. ಅವರಿಂದ ಮಾಹಿತಿ ಸೋರಿಕೆಯಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಹಾಗಿದ್ದರೆ ಸೋರಿಕೆಯಾಗಿದ್ದು ಹೇಗೆ?

ಕೆಲವು ಪತ್ರಕರ್ತರೊಂದಿಗೆ ಸಂತೋಷ್ ಹೆಗಡೆಯವರು ಹೊಂದಿರುವ ಅಗತ್ಯಕ್ಕಿಂತ ಹೆಚ್ಚಿನ ಆತ್ಮೀಯ ಸಂಬಂಧವೇ ಈ ಸೋರಿಕೆಗೆ ಕಾರಣವಾಗಿರಬಹುದೇ? ಟೈಮ್ಸ್ ನೌ ವಾಹಿನಿಯಲ್ಲಿ ಸೋರಿಕೆಯಾದ ವರದಿ ಪ್ರಸಾರವಾಗುವುದಕ್ಕೆ ಮುನ್ನವೇ ಪ್ರಜಾವಾಣಿಯ ಜುಲೈ ೧೮ರ ಪತ್ರಿಕೆಯಲ್ಲಿ ವರದಿ ತರಲಿದೆಯೇ ಬಿರುಗಾಳಿ? ಎಂಬ ಶೀರ್ಷಿಕೆಯಲ್ಲಿ ಮುಖಪುಟದ ಸುದ್ದಿಯೊಂದು ಪ್ರಕಟವಾಗಿತ್ತು. ಲೋಕಾಯುಕ್ತರ ವರದಿ ಎಲ್ಲ ಪಕ್ಷಗಳಿಗೂ ಕಹಿ ತರಲಿದೆ ಎಂಬ ಮುನ್ಸೂಚನೆಯನ್ನೂ ವರದಿಯಲ್ಲಿ ನೀಡಲಾಗಿತ್ತು. ವರದಿಯನ್ನು ಗಮನಿಸಿದರೆ ಲೋಕಾಯುಕ್ತರೇ ಇಂಥದ್ದೊಂದು ಸುದ್ದಿಯನ್ನು ಬ್ರೀಫ್ ಮಾಡಿರುವ ಸಾಧ್ಯತೆಗಳು ಕಾಣಿಸುತ್ತದೆ. ಇಂಥ ಹಲವಾರು ಸುದ್ದಿಗಳು ಆಗಾಗ ಪ್ರಕಟವಾಗುತ್ತಲೇ ಇರುತ್ತವೆ. ಲೀಕಾಯಣದ ಪ್ರಹಸನಗಳೆಲ್ಲ ನಡೆದ ನಂತರವೂ ಜುಲೈ ೨೪ರ ಪ್ರಜಾವಾಣಿಯಲ್ಲಿ ಬಯಲಾಗಲಿದೆ ಬೇಲೆಕೇರಿ ರಹಸ್ಯ ಎಂಬ ಶೀರ್ಷಿಕೆಯ ಮತ್ತೊಂದು ಅಗ್ರ ಸುದ್ದಿ ಪ್ರಕಟವಾಯಿತು. ಅಂತಿಮ ವರದಿಯಲ್ಲಿ ಬೇಲೆಕೇರಿ ಹಗರಣದ ರೂವಾರಿಗಳ ಹೆಸರೂ ಇದೆ ಎಂಬುದನ್ನು ಈ ಸುದ್ದಿಯಲ್ಲಿ ಖಚಿತವಾಗಿ ಹೇಳಲಾಗಿದೆ. ಇದೂ ಸಹ ಲೋಕಾಯುಕ್ತರ ಸಹಕಾರದಿಂದಲೇ ಪ್ರಕಟವಾಗಿರಬಹುದಾದ ಸುದ್ದಿ. ಸಂತೋಷ್ ಹೆಗಡೆಯವರ ಪುಣ್ಯ, ಈ ಸುದ್ದಿಯ ಜತೆ ಸೋರಿಕೆಯಾದ ಲೋಕಾಯುಕ್ತ ವರದಿ-ಭಾಗ ೨ ಎಂಬ ಉಪಶೀರ್ಷಿಕೆ ಇರಲಿಲ್ಲ!

ಸಂತೋಷ್ ಹೆಗಡೆಯವರು ತಮ್ಮ ಬಳಿಗೆ ಬರುವ ಪತ್ರಕರ್ತರಿಗೆ ಖಾಲಿ ಕೈಯಲ್ಲಿ ಕಳುಹಿಸುವುದು ಅಪರೂಪ. ಅಲ್ಲಿಗೆ ಹೋದ ಪತ್ರಕರ್ತರು ಒಂದಿಲ್ಲೊಂದು ಸುದ್ದಿಯನ್ನು ಹಿಡಿದು ತರುತ್ತಾರೆ. ಅದರಲ್ಲೂ ಅವರ ಆತ್ಮೀಯ ಬಳಗದ ಪತ್ರಕರ್ತರಿಗಂತೂ ಅವರು ಸುದ್ದಿಯ ಕಣಜ. ಬಹುತೇಕ ಸುದ್ದಿಗಳು ಆಫ್ ದಿ ರೆಕಾರ್ಡ್! ಲೋಕಾಯುಕ್ತ ಮೂಲಗಳು ಹೇಳಿವೆ, ಗೊತ್ತಾಗಿದೆ, ನಂಬಲಾಗಿದೆ, ಹೇಳಲಾಗಿದೆ ಎಂಬ ಒಕ್ಕಣೆಯ ಸುದ್ದಿಗಳು ಕಳೆದ ಎರಡು ವರ್ಷಗಳಿಂದ ಕೋಲಾಹಲವನ್ನು ಮೂಡಿಸುತ್ತಲೇ ಬಂದಿವೆ. ಇವುಗಳಿಂದ ಲೋಕಾಯುಕ್ತರು ಏನೇನು ಮಾಡುತ್ತಿದ್ದಾರೆ ಎಂಬ ಮಾಹಿತಿ ಪತ್ರಿಕಾ ಓದುಗರಿಗೆ ತಲುಪುತ್ತಲೇ ಇತ್ತು. ಆದರೆ ಕಾನ್ಫಿಡೆನ್ಷಿಯಲ್ ಆಗಿರಬೇಕಾಗಿದ್ದ ಅತ್ಯಂತ ಮಹತ್ವದ ವರದಿಯ ಅಂಶಗಳನ್ನು ಸುದ್ದಿದಾಹದ ಚಾನಲ್ ಒಂದು ನೇರವಾಗಿ ಬಿತ್ತರಿಸುವುದರೊಂದಿಗೆ ಹೆಗಡೆಯವರೇ ಪೇಚಿಗೆ ಸಿಲುಕುವಂತಾಯಿತು. ಯಾರನ್ನು ದೂರಿ ಏನು ಪ್ರಯೋಜನ?

ಧನಂಜಯ ಕುಮಾರ್ ಡೀಲ್ ಮಾಡಲು ಬಂದಿದ್ದ ಎಕ್ಸ್‌ಕ್ಲೂಸಿವ್ ಸುದ್ದಿ ಕನ್ನಡಪ್ರಭದಲ್ಲಿ ಮೊದಲು ಪ್ರಕಟವಾದ ನಂತರ, ಸಂತೋಷ್ ಹೆಗಡೆಯವರು ಅದನ್ನು ನಿಜ ಎಂದರು. ಪತ್ರಕರ್ತರ ಜತೆ ಸಂತೋಷ್ ಹೆಗಡೆ ಹೊಂದಿರುವ ವಿಶೇಷ ಸಂಬಂಧಕ್ಕೆ ಇವೆಲ್ಲವೂ ತಾಜಾ ಉದಾಹರಣೆಗಳು. ಹಾಗಂತ ಇದೆಲ್ಲವನ್ನು ತಪ್ಪು ಎಂದೇನು ಹೇಳುತ್ತಿಲ್ಲ. ಆದರೆ ಇಂಥ ಅತಿ ಆತ್ಮೀಯತೆಯೇ ‘ವರದಿ ಸೋರಿಕೆ ವಿವಾದಕ್ಕೆ ಕಾರಣವಾಗಿರಬಹುದೇ? ವರದಿ ಸೋರಿಕೆಗೆ ಫೋನ್ ಕದ್ದಾಲಿಕೆಯ ವಿವಾದವನ್ನು ಪೋಣಿಸುವ ಮೂಲಕ ಹೆಗಡೆಯವರು ತಮ್ಮನ್ನು ಸಮರ್ಥಿಸಿಕೊಳ್ಳಲು ಮುಂದಾದರೆ? ಹಿಟ್ ಅಂಡ್ ರನ್ ಮಾಡಲು ಬಿಡುವುದಿಲ್ಲ ಎಂದು ಲೋಕಾಯುಕ್ತರ ವಿರುದ್ಧವೇ ಘರ್ಜಿಸುತ್ತಿರುವ ಯಡಿಯೂರಪ್ಪನವರಿಗೆ ಅನಾಯಾಸವಾಗಿ ಒಂದು ಅಸ್ತ್ರ ಒದಗಿಸಲಾಯಿತೆ?

ಈವರೆಗೆ ಕಂಡ ಮುಖ್ಯಮಂತ್ರಿಗಳ ಪೈಕಿ ಡ್ಯಾಮೇಜ್ ಕಂಟ್ರೋಲ್ ವ್ಯವಸ್ಥೆಯನ್ನು ಗರಿಷ್ಠ ಮಟ್ಟಕ್ಕೆ ಬೆಳೆಸಿಕೊಂಡವರು ಬಿ.ಎಸ್.ಯಡಿಯೂರಪ್ಪ. ಯಾವುದಕ್ಕೆ ಯಾವುದು ಮದ್ದು ಎಂಬುದು ಅವರಿಗೆ ಚೆನ್ನಾಗಿಯೇ ಗೊತ್ತಿದೆ. ವರದಿ ಸಲ್ಲಿಕೆಯಾಗುವುದಕ್ಕೂ ಮುನ್ನವೇ ಅವರು ಬಾಣ ಬಿಟ್ಟಿದ್ದಾರೆ, ಅದು ಸರಿಯಾದ ಜಾಗಕ್ಕೇ ನಾಟಿಕೊಂಡಿದೆ. ಲೋಕಾಯುಕ್ತರಿಗೆ ಕೆಲ ಪತ್ರಕರ್ತರ ಜತೆ ಆತ್ಮೀಯ ಸಂಬಂಧವಿರಬಹುದು. ಆದರೆ ಯಡಿಯೂರಪ್ಪನವರಿಗೆ ಪತ್ರಕರ್ತರನ್ನು ಸಂಭಾಳಿಸಿ ಗೊತ್ತು, ಪತ್ರಕರ್ತರಿಗೆ ಬೇಕಾದನ್ನು ಒದಗಿಸಿ ಒಲಿಸಿಕೊಂಡು ಗೊತ್ತು. ತಮಗೆ ತಿರುಗಿ ಬಿದ್ದ ಪತ್ರಕರ್ತರನ್ನು ಮನೆಗೆ ಕಳುಹಿಸುವುದೂ ಗೊತ್ತು. (ಅದಕ್ಕೆ ತಕ್ಕ ತಿರುಗೇಟನ್ನು ಅವರೇ ಈಗ ತಿನ್ನುತ್ತಿದ್ದಾರೆ, ಅದು ಬೇರೆ ವಿಷಯ.) ಈವರೆಗಿನ ಮುಖ್ಯಮಂತ್ರಿಗಳ ಪೈಕಿ ಮೀಡಿಯಾ ಮ್ಯಾನೇಜ್‌ಮೆಂಟನ್ನು ಅತ್ಯಂತ ಯಶಸ್ವಿಯಾಗಿ, ಪರಿಣಾಮಕಾರಿಯಾಗಿ ನಡೆಸಿದವರು ಯಡಿಯೂರಪ್ಪ. ಈ ಚಾಕಚಕ್ಯತೆಯಿಂದಾಗಿಯೇ ಸಂತೋಷ್ ಹೆಗಡೆ ಕಣ್ಣೀರು ಹಾಕುವಂತಾಯಿತಾ?

ಯಡಿಯೂರಪ್ಪ ಮಾತನಾಡುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿ. ಅವರು ಅಕ್ರಮ ಗಣಿಗಾರಿಕೆ ವರದಿಗಿಂತ ಟೆಲಿಫೋನ್ ಕದ್ದಾಲಿಕೆಯ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದಾರೆ. ಈ ಬಗ್ಗೆ ಪ್ರಧಾನಿಗೊಂದು ಪತ್ರವನ್ನೂ ಬರೆದಿದ್ದಾರೆ. ತನಿಖಾ ಸಮಿತಿಯ ಸದಸ್ಯರಾಗಿ ಯಾರ‍್ಯಾರು ಇರಬೇಕು ಎಂಬುದರ ಕುರಿತೂ ಅವರೇ ನಿರ್ಧಾರ ಕೈಗೊಂಡಿದ್ದಾರೆ. ಟೆಲಿಫೋನ್ ಕದ್ದಾಲಿಕೆಯ ಹಗರಣದಲ್ಲಿ ತಾನು ಸಿಕ್ಕಿಬೀಳಲಾರೆ ಎಂಬ ಅದಮ್ಯ ವಿಶ್ವಾಸ ಅವರಿಗಿದ್ದಂತಿದೆ. ಒಂದು ವೇಳೆ ಸಿಕ್ಕಿಬಿದ್ದರೂ ಜತೆಯಲ್ಲೇ ಹಲವು ಮಾಜಿ ಮುಖ್ಯಮಂತ್ರಿಗಳನ್ನು ಸೇರಿಸಿಯೇ ಹಳ್ಳಕ್ಕೆ ಬೀಳಲು ಅವರು ತಯಾರಾಗಿರುವಂತಿದೆ.

ಇನ್ನು ಯಡಿಯೂರಪ್ಪ ಅವರಿಗೆ ಉಳಿದಿರುವುದು ಲೋಕಾಯುಕ್ತ ವರದಿಯನ್ನು ಎದುರಿಸುವ ಸಂಕಷ್ಟವೊಂದೇ. ಇದಕ್ಕಾಗಿ ಅವರಿಗೆ ಕಾನೂನು ತಜ್ಞರ ದಂಡೇ ನೆರವಾಗುತ್ತಿದೆ. ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಯಾವ ಯಾವ ಸಂದರ್ಭದಲ್ಲಿ ಲೋಕಾಯುಕ್ತ ವರದಿಗಳನ್ನು ಅಂಗೀಕರಿಸಲಾಗಿದೆ, ತಿರಸ್ಕರಿಸಲಾಗಿದೆ ಎಂಬುದರ ಪಟ್ಟಿಯೇ ಸಿದ್ಧವಾಗುತ್ತದೆ. ವರದಿಯ ಪರಿಶೀಲನೆಗೊಂದು ಸಮಿತಿ ರಚನೆ, ಅದಕ್ಕೆ ಒಂದಷ್ಟು ತಿಂಗಳ ಕಾಲಾವಧಿ, ನಂತರ ಅದರ ವಿಸ್ತರಣೆ.... ಹೀಗೆ ಇದನ್ನು ಹೇಗೆ ಎಳೆದಾಡಬಹುದೆಂಬುದು ಯಡಿಯೂರಪ್ಪನವರಿಗೆ ಚೆನ್ನಾಗಿ ಗೊತ್ತಿದೆ.

ಬಿಜೆಪಿ ಹೈಕಮಾಂಡ್ ಆಡಿಸುವ ಪುಂಗಿಯೂ ಯಡಿಯೂರಪ್ಪ ಬಳಿ ಇದೆ. ಸಂದರ್ಭ ಬಂದಾಗೆಲ್ಲ ಅವರು ಲಿಂಗಾಯತ ಕಾರ್ಡ್, ಮಠಾಧೀಶರ ಕಾರ್ಡ್‌ಗಳನ್ನು ಬಳಸುತ್ತ ಬಂದಿದ್ದಾರೆ. ನಿತಿನ್ ಗಡ್ಕರಿಗೆ ಬರೆದಿರುವ ಪತ್ರ ಯಡಿಯೂರಪ್ಪ ಹಾಕಿರುವ ಪರೋಕ್ಷ ಧಮಕಿ. ತಾವೇ ತಾವಾಗಿ ರಾಜೀನಾಮೆ ಕೊಡುವುದಿಲ್ಲ ಎಂದು ಯಡಿಯೂರಪ್ಪ ಪತ್ರ ಬರೆದಿರಲಾರರು. ರಾಜೀನಾಮೆ ಕೊಡಿ ಎಂಬ ಸಂದೇಶಕ್ಕೇ ಇದು ಉತ್ತರವಾಗಿರಬಹುದು. ಯಡಿಯೂರಪ್ಪ ಪಕ್ಷದ ಹೈಕಮಾಂಡನ್ನು ಮೀರಿ ಬೆಳೆದಿರುವುದಕ್ಕೆ ಇದು ಸಾಕ್ಷಿ. ಒಂದು ವೇಳೆ ಈ ಬಾರಿಯಾದರೂ ಬಿಜೆಪಿ ಹೈಕಮಾಂಡ್ ಗಟ್ಟಿಯಾದ ನಿರ್ಧಾರ ಕೈಗೊಂಡು ಯಡಿಯೂರಪ್ಪ ಅವರನ್ನು ಬದಲಿಸಿದರೆ ರಾಜ್ಯ ರಾಜಕಾರಣದ ಬಹುದೊಡ್ಡ ಪವಾಡ!

ಯಡಿಯೂರಪ್ಪನವರು ಹಿಂದೆ ತಮ್ಮನ್ನು ಕಾಡಿಸಿದ ರೆಡ್ಡಿ ಸೋದರರಿಂದ ಹಿಡಿದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರವರೆಗೆ ತಮ್ಮ ರಾಜಕೀಯ ಎದುರಾಳಿಗಳಿಗೆ, ತಿರುಗಿ ಬಿದ್ದವರಿಗೆ, ಯುದ್ಧ ಹೂಡಿದವರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಹೊಸ ಸೇರ್ಪಡೆ ಸಂತೋಷ್ ಹೆಗಡೆ. ಮಾಧ್ಯಮ ಪ್ರತಿನಿಧಿಗಳ ಜತೆಗಿನ ಅತಿಯಾದ ಸಲುಗೆಯಿಂದ ಹೆಗಡೆ ತಾವೇ ಟ್ರಾಪ್ ಆದರಾ?
0 komentar

Blog Archive